ಸರ್ಚ್ ಚಿತ್ರಕ್ಕೆ ಕ್ಯಾಮೆರಾ ಆನ್ ಮಾಡಿದ ಶ್ರೀನಗರ ಕಿಟ್ಟಿ! ಒಂದೇ ರಾತ್ರಿಯಲ್ಲಿ ನಡೆಯುವ ಕಥೆ… ಹುಡುಕಾಟದ ಹಿಂದೆ ಅಡಗಿದೆ ಸಸ್ಪೆನ್ಸ್!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ಕಥೆಯ ‘ಸರ್ಚ್’ ಸಿನಿಮಾ ಸದ್ದು ಮಾಡೋಕೆ ಸಜ್ಜಾಗಿದೆ.
ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್, ಗ್ಯಾಪ್ ಬಳಿಕ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಿಗೆ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
ನಾಗರಬಾವಿ ಮುದ್ದಿನಪಾಳ್ಯದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಖ್ಯಾತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಕ್ಲ್ಯಾಪ್ ಮಾಡಿದರೆ, ನಟ ಶ್ರೀನಗರ ಕಿಟ್ಟಿ ಕ್ಯಾಮೆರಾ ಆನ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.


‘ಸರ್ಚ್’ನಲ್ಲಿ ಪಂಕಜ್ ಪಾತ್ರವೇ ವಿಶೇಷ.
ಒಂದೇ ವಿಷಯವನ್ನು ತಲೆಯಲ್ಲಿಟ್ಟುಕೊಂಡು ಅದನ್ನು ಹುಡುಕುತ್ತಾ ಸಾಗುವ ವಿಭಿನ್ನ ವ್ಯಕ್ತಿಯ ಪಾತ್ರದಲ್ಲಿ ಪಂಕಜ್ ಕಾಣಿಸಿಕೊಳ್ಳುತ್ತಿದ್ದಾರೆ.
ಕಥೆಯೇ ಈ ಸಿನಿಮಾ ಒಪ್ಪಿಕೊಳ್ಳಲು ಪ್ರಮುಖ ಕಾರಣ ಎಂದಿರುವ ಪಂಕಜ್, ಈ ಹಿಂದೆ ಮಾಡಿರದಂತಹ ಪಾತ್ರ ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ.
ಇನ್ನು ‘ದಿಗ್ಗಜರು’ ಸಿನಿಮಾ ಕಾಲದಿಂದಲೇ ಚಿತ್ರರಂಗದ ಜೊತೆ ಗುರುತಿಸಿಕೊಂಡಿರುವ ವೈ.ಬಿ. ರಮೇಶ್ ಕೋಟೆ, ‘ಸರ್ಚ್’ ಮೂಲಕ ನಿರ್ದೇಶಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ.


ಅಚ್ಚರಿಯ ವಿಚಾರ ಏನೆಂದರೆ…
ಕಥೆ ನಡೆಯುವುದು ಒಂದೇ ರಾತ್ರಿ!
ಆದರೆ ಆ ಒಂದು ರಾತ್ರಿಯ ಕಥೆಯನ್ನು ಬರೋಬ್ಬರಿ 25 ರಾತ್ರಿಗಳಲ್ಲಿ ಚಿತ್ರೀಕರಿಸುವ ಪ್ಲಾನ್ ಚಿತ್ರತಂಡದ್ದು.
ಹುಬ್ಬಳ್ಳಿ ಭಾಷೆಯಲ್ಲಿ ಮೂಡಿಬರಬೇಕಿದ್ದ ಕಥೆ, ಇದೀಗ ಬೆಂಗಳೂರಿನ ಹಿನ್ನೆಲೆಗೆ ಶಿಫ್ಟ್ ಆಗಿದೆ. ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬದಲಾಗಿರುವ ಕಾರಣ, ಬೆಂಗಳೂರಿನಲ್ಲೇ ಅದೇ ರೀತಿಯ ಸರ್ಕಲ್ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲು ಚಿತ್ರತಂಡ ಮುಂದಾಗಿದೆ.


ಇಲ್ಲಿ ಶುರುವಾಗುತ್ತೆ ನಿಜವಾದ ‘ಸರ್ಚ್’!
ನಾಯಕನ ಕಣ್ಣಮುಂದೆಯೇ ಒಬ್ಬ ಹುಡುಗಿ ಮಿಸ್ ಆಗುತ್ತಾಳೆ.
ಅವಳ ಹುಡುಕಾಟ ಒಂದು ಕಡೆ…
ಮತ್ತೊಂದೆಡೆ ಸಾಫ್ಟ್‌ವೇರ್ ಹುಡುಗನ ಲಗೇಜ್ ಮತ್ತು ಲ್ಯಾಪ್‌ಟಾಪ್‌ಗಾಗಿ ಮತ್ತೊಂದು ಹುಡುಕಾಟ!
ಈ ಎರಡು ಹುಡುಕಾಟಗಳು ಎಲ್ಲಿಗೆ ಕರೆದೊಯ್ಯುತ್ತವೆ?
ಯಾರ ಹುಡುಕಾಟದ ಹಿಂದೆ ಯಾವ ರಹಸ್ಯ ಅಡಗಿದೆ?
ಇದೇ ಚಿತ್ರದ ಕುತೂಹಲ!
ಪಂಕಜ್‌ಗೆ ನಾಯಕಿಯಾಗಿ ಧಾಮಿನಿ ನಟಿಸುತ್ತಿದ್ದಾರೆ. ಉದಯ ವಾಹಿನಿಯ ‘ಮಾಂಗಲ್ಯ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಧಾಮಿನಿಗೆ ಇದು ಪ್ರಮುಖ ಅವಕಾಶ.


ಇನ್ನು ಕೃತ್ತಿಕಾ ಗೌಡ ಚಿತ್ರದ ಮತ್ತೊಂದು ಪ್ರಧಾನ ಪಾತ್ರದಲ್ಲಿದ್ದಾರೆ. ಸಿನಿಮಾದ ಪ್ರತಿಯೊಂದು ಪಾತ್ರವೂ ತಮ್ಮ ಪಾತ್ರದ ಸುತ್ತ ಸುತ್ತುತ್ತದೆ ಎಂಬ ಸುಳಿವು ನೀಡಿರುವ ಕೃತ್ತಿಕಾ, ಆ ರಹಸ್ಯ ಏನು ಅನ್ನೋದನ್ನು ತಿಳಿಯಲು ಸಿನಿಮಾ ನೋಡಬೇಕು ಎಂದಿದ್ದಾರೆ.
ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಸುಭಾನ್ ನಟಿಸುತ್ತಿದ್ದು, ಸಹನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ.
ಮುಹೂರ್ತದಲ್ಲಿ ಕ್ಯಾಮೆರಾ ಆನ್ ಮಾಡಿದ ಶ್ರೀನಗರ ಕಿಟ್ಟಿ, ಎಸ್. ನಾರಾಯಣ್ ತಮ್ಮ ಗುರುಗಳು, ಪಂಕಜ್ ಅವರ ಗುರುಗಳ ಪುತ್ರ ಎಂಬ ಆತ್ಮೀಯ ಮಾತುಗಳೊಂದಿಗೆ ಚಿತ್ರತಂಡಕ್ಕೆ ಶುಭ ಕೋರಿದರು.


ಯುವ ನಿರ್ಮಾಪಕ ಯೋಗೇಶ್ ಎನ್. ‘ಸರ್ಚ್’ಗೆ ಬಂಡವಾಳ ಹೂಡುತ್ತಿದ್ದಾರೆ. ಕಥೆ ಕೇಳಿದಾಗ ಮಲಯಾಳಂ ಸಿನಿಮಾ ಫೀಲ್ ನೀಡಿದ್ದರಿಂದಲೇ ನಿರ್ಮಾಣಕ್ಕೆ ಮುಂದಾದೆ ಎಂದಿದ್ದಾರೆ.
ಅಶೋಕ್ ಕೆ. ರಾಜ್ ಛಾಯಾಗ್ರಹಣ, ಶ್ರೀ ಅಂಜನ್ ಸಂಗೀತ ‘ಸರ್ಚ್’ ಚಿತ್ರಕ್ಕಿದೆ.
ಈ ಕುತೂಹಲದ ‘ಸರ್ಚ್’ಗೆ ಸೆಪ್ಟೆಂಬರ್ 15ರಿಂದ ಚಿತ್ರೀಕರಣ ಆರಂಭವಾಗಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor