‘ಅಮೆರಿಕಾ ಅಮೆರಿಕಾ 2’ ಟ್ರೈಲರ್ ಬಿಡುಗಡೆ: ನಾಗತಿಹಳ್ಳಿ ಚಂದ್ರಶೇಖರ್ ರವರ ಹೊಸ ಪ್ರೇಮಕಥೆಗೆ ಡಾಲಿ ಧನಂಜಯ್ ಸಾಥ್.
ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ, ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಅಮೆರಿಕಾ ಅಮೆರಿಕಾ 2’ ಬಿಡುಗಡೆಗೆ ಸಜ್ಜಾಗಿದೆ. ನಿರೂಪ್ ಭಂಡಾರಿ, ಪೃಥ್ವಿ ಅಂಬರ್ ಹಾಗೂ ಶಾನ್ವಿ ಶ್ರೀವಾತ್ಸವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್ ಮೈಸೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ನಟ ಡಾಲಿ ಧನಂಜಯ್ ಟ್ರೈಲರ್ ಅನಾವರಣಗೊಳಿಸಿದರು.‘ಅಮೆರಿಕಾ ಅಮೆರಿಕಾ’, ‘ನನ್ನ ಪ್ರೀತಿಯ ಹುಡುಗಿ’, ‘ಅಮೃತಧಾರೆ’, ‘ಮಾತಾಡ್ ಮಾತಾಡ್ ಮಲ್ಲಿಗೆ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರ ಬಹು ನಿರೀಕ್ಷಿತ ಚಿತ್ರ ಇದಾಗಿದೆ.

‘ಅಮೆರಿಕಾ ಅಮೆರಿಕಾ 2’ ಸೀಕ್ವೆಲ್ ಅಲ್ಲ!‘ಅಮೆರಿಕಾ ಅಮೆರಿಕಾ 2’ ಎಂಬ ಶೀರ್ಷಿಕೆ ಇದ್ದರೂ ಇದು ಹಿಂದಿನ ‘ಅಮೆರಿಕಾ ಅಮೆರಿಕಾ’ ಚಿತ್ರದ ಮುಂದುವರಿದ ಭಾಗವಲ್ಲ. ನುಡಿ, ನಿನಾದ್ ಹಾಗೂ ನೀಲ್ ಎಂಬ ಮೂರು ಪಾತ್ರಗಳ ಭಾವನೆಗಳನ್ನು ಪ್ರತಿಬಿಂಬಿಸುವ ವಿಭಿನ್ನ ಕಥೆಯನ್ನು ಚಿತ್ರ ಹೊಂದಿದೆ.
ಮೈಸೂರಿನ ಸೊಗಡಿನೊಂದಿಗೆ ಆರಂಭವಾಗುವ ಕಥೆ ಅಮೆರಿಕಾವರೆಗೂ ಸಾಗಲಿದೆ.
ನಾಗತಿಹಳ್ಳಿ ಅವರೇ ಚಿತ್ರರಂಗದ ದೊಡ್ಡ ಬೇರು:
ಟ್ರೈಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್ ಮಾತನಾಡಿ, ಮೈಸೂರಿನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.“ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರರಂಗದ ದೊಡ್ಡ ಬೇರು. ಅಂದಿನಿಂದ ಇಂದಿನವರೆಗೂ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ನಾವಿಂದು ಇಲ್ಲಿ ನಿಂತಿದ್ದೇವೆ ಎಂದರೆ ಅವರಂತಹ ಹಿರಿಯರ ಕೊಡುಗೆ ಸಾಕಷ್ಟಿದೆ.”ಸಿನಿಮಾ ರಂಗದ ಪ್ರಸ್ತುತ ಸಂದರ್ಭದಲ್ಲಿ ಒಳ್ಳೆಯ ಫ್ಯಾಮಿಲಿ ಸ್ಟೋರಿಗಳ ಅಗತ್ಯವಿದೆ. ಆ ಕೊರತೆಯನ್ನು ಈ ಸಿನಿಮಾ ತುಂಬಲಿ ಹಾಗೂ ನಿರೂಪ್, ಪೃಥ್ವಿ ಮತ್ತು ಶಾನ್ವಿ ಅವರ ಕಾಂಬಿನೇಷನ್ ಮ್ಯಾಜಿಕ್ ಮಾಡಲಿ ಎಂದು ಧನಂಜಯ್ ಆಶಿಸಿದರು.

ಸಿನಿಮಾ ಮಾಡಲು ನೋವು ಶುರುವಾಗಿದೆ’ ಎಂದ ನಾಗತಿಹಳ್ಳಿಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮದೇ ಶೈಲಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದರು.“ಇನ್ನು 10-11 ದಿನಗಳಲ್ಲಿ ನನಗೆ ಹೆರಿಗೆ ಆಗುತ್ತಾ ಇದ್ದು, ಈಗಾಗಲೇ ನೋವು ಶುರುವಾಗಿದೆ. ಭಯ, ಆತಂಕ ಎರಡೂ ಇದೆ.
30 ವರ್ಷಗಳ ಸಿನಿಮಾ ಪಯಣದಲ್ಲಿ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಮಾಡಬೇಕೆಂಬ ಬೇಡಿಕೆ ಇತ್ತು. ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ. ಈಗ ಆ ಸಮಯ ಬಂದಿದೆ ಎಂದು ಹೇಳಿದರು.
ನಾನು ಯಾವಾಗಲೂ ಪ್ರೇಕ್ಷಕರು ನನಗಿಂತ ಹೆಚ್ಚು ಬುದ್ಧಿವಂತರು ಎಂದು ಭಾವಿಸಿ ಸಿನಿಮಾ ಮಾಡುತ್ತೇನೆ. ಕನ್ನಡ ಪ್ರೇಕ್ಷಕರ ಮೇಲೆ ಅಪಾರ ನಂಬಿಕೆ ಹಾಗೂ ಗೌರವವಿದೆ. ಒಬ್ಬ ಸಾಧಾರಣ ಮೇಷ್ಟ್ರಿಗೆ ಇಷ್ಟು ದೊಡ್ಡ ಗೌರವವನ್ನು ಕನ್ನಡಿಗರು ನೀಡಿದ್ದಾರೆ,” ಎಂದು ನಾಗತಿಹಳ್ಳಿ ಚಂದ್ರಶೇಖರ್ ಭಾವುಕರಾದರು.ತಮ್ಮ ಒಂದು ಸಂದೇಶಕ್ಕೆ ಬೆಲೆಕೊಟ್ಟು ಧನಂಜಯ್ ಕಾರ್ಯಕ್ರಮಕ್ಕೆ ಬಂದಿರುವುದಕ್ಕೂ ಅವರು ಧನ್ಯವಾದ ತಿಳಿಸಿದರು. ಪತ್ನಿ ಶೋಭಾ ಅವರು ಕಾದಂಬರಿ ಓದಿ ಸಿನಿಮಾ ಮಾಡುವಂತೆ ಸಲಹೆ ನೀಡಿದ ನಂತರ ಈ ಚಿತ್ರದ ಜರ್ನಿ ಆರಂಭವಾಯಿತು ಎಂದು ವಿವರಿಸಿದರು.

ಟ್ರೈಲರ್ ಹಾಗೂ ಸಿನಿಮಾಗೆ ನಕುಲ್ ಅಭ್ಯಂಕರ್ ಅದ್ಭುತ ಹಿನ್ನೆಲೆ ಸಂಗೀತ ನೀಡಿರುವುದಾಗಿ ತಿಳಿಸಿದ ನಿರ್ದೇಶಕರು, ಪ್ರೇಕ್ಷಕರು ಚಿತ್ರವನ್ನು ಥಿಯೇಟರ್‌ನಲ್ಲೇ ನೋಡಿ ಕಲೆಯ ಭವ್ಯತೆಯನ್ನು ಆನಂದಿಸಬೇಕು ಎಂದು ಮನವಿ ಮಾಡಿದರು.
ಚಿತ್ರದ ಬಿಡುಗಡೆಗೂ ಮೂರು ದಿನ ಮುಂಚಿತವಾಗಿ ಪ್ರೀಮಿಯರ್ ಶೋಗಳು ಆರಂಭವಾಗಲಿವೆ ಎಂದರು.ನಿರೂಪ್ ಭಂಡಾರಿ: ‘ಒಳ್ಳೆ ಸಿನಿಮಾವನ್ನು ಜನ ಯಾವತ್ತೂ ಸೋಲಿಸಿಲ್ಲ’ನಾಯಕ ನಿರೂಪ್ ಭಂಡಾರಿ ಅವರಿಗೆ ಈ ಟ್ರೈಲರ್ ಬಿಡುಗಡೆ ಮತ್ತಷ್ಟು ವಿಶೇಷವಾಗಿತ್ತು. ತಾವು ಓದಿ ಬೆಳೆದ ಮೈಸೂರಿನಲ್ಲೇ ತಮ್ಮ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಚಿತ್ರದಲ್ಲಿ ಮೈಸೂರು, ಅಮೆರಿಕಾ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರ ಛಾಪು ಪ್ರಮುಖವಾಗಿ ಕಾಣಿಸುತ್ತದೆ. ಹಳೆಯ ‘ಅಮೆರಿಕಾ ಅಮೆರಿಕಾ’ ಚಿತ್ರವನ್ನು ನೋಡಿದವರು ತಮ್ಮ ಮಕ್ಕಳೊಂದಿಗೆ ಬಂದು ಈ ಸಿನಿಮಾವನ್ನು ನೋಡಬೇಕು ಎಂದು ಮನವಿ ಮಾಡಿದರು.
ಶಾನ್ವಿಗೆ ವಿಭಿನ್ನ ಪಾತ್ರನಾಯಕಿ ಶಾನ್ವಿ ಶ್ರೀವಾತ್ಸವ್ ಮಾತನಾಡಿ, ತಮ್ಮ ವೃತ್ತಿಜೀವನದಲ್ಲೇ ಇಂತಹ ಪಾತ್ರವನ್ನು ಹಿಂದೆಂದೂ ಮಾಡಿಲ್ಲ ಎಂದು ಹೇಳಿದರು.ಈ ಸಿನಿಮಾ ಕೇವಲ ಗಂಡು-ಹೆಣ್ಣಿನ ಕಥೆಯಲ್ಲ. ಎಲ್ಲರಿಗೂ ಇಷ್ಟವಾಗುವಂತಹ ಸಿನಿಮಾ ಇದಾಗಿದ್ದು, ಮೈಸೂರಿನಿಂದ ಆರಂಭವಾಗಿ ಅಮೆರಿಕಾದವರೆಗೂ ಸಾಗುತ್ತದೆ ಎಂದರು.‘ಕನ್ನಡದ ಕೆಲವೇ ಪ್ರೇಮಕಾವ್ಯಗಳಲ್ಲಿ ಇದು ಅಗ್ರಗಣ್ಯ’ – ಪೃಥ್ವಿ ಅಂಬರ್ಮತ್ತೊಬ್ಬ ನಾಯಕ ಪೃಥ್ವಿ ಅಂಬರ್, ‘ಅಮೆರಿಕಾ ಅಮೆರಿಕಾ 2’ ಕನ್ನಡದ ಕೆಲವೇ ಪ್ರೇಮಕಾವ್ಯಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವ ಚಿತ್ರ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾತ್ರಗಳು ಅಮೆರಿಕಾ ಹಾಗೂ ಯುರೋಪ್‌ವರೆಗೂ ಪ್ರಯಾಣಿಸಿದರೂ, ಆ ಮೂವರ ಆತ್ಮ ಮೈಸೂರಿನಲ್ಲೇ ಇರುತ್ತದೆ. ಅದೇ ಈ ಸಿನಿಮಾದ ವಿಶೇಷತೆ ಎಂದರು. ಶಾನ್ವಿ ಶ್ರೀವಾತ್ಸವ್ ಅವರ ಅತ್ಯುತ್ತಮ ಅಭಿನಯ ಈ ಚಿತ್ರದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪೃಥ್ವಿ, ತಮ್ಮ ಜೀವನದಲ್ಲೇ ಇದು ವಿಶೇಷವಾದ ಚಿತ್ರ ಎಂದು ಹೇಳಿದರು.
ವಿತರಣೆ ಹಕ್ಕುಗಳನ್ನು ಕೆವಿಎನ್ ಸಂಸ್ಥೆ ಪಡೆದುಕೊಂಡಿದ್ದು, ಸಂಸ್ಥೆಯ ಪರವಾಗಿ ಸುಪ್ರೀತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೊ. ಕೃಷ್ಣೇಗೌಡ, ಹಿರಿಯ ನಟ ರಂಗಾಯಣ ರಘು, ನಟ ಮಂಡ್ಯ ರಮೇಶ್ ಹಾಗೂ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರದ ಕುರಿತು ಮಾತನಾಡಿದರು.ಚಿತ್ರಕ್ಕೆ ಮನೋಮೂರ್ತಿ ಸಂಗೀತ, ಎಸ್.ಕೆ. ರಾವ್ ಛಾಯಾಗ್ರಹಣ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನವಿದೆ.ಒಟ್ಟಿನಲ್ಲಿ, ನಾಗತಿಹಳ್ಳಿ ಚಂದ್ರಶೇಖರ್ ಅವರ ಪ್ರೇಮಕಥೆಯ ಶೈಲಿ, ಮೈಸೂರಿನ ಸೊಗಡು, ಅಮೆರಿಕಾದ ಹಿನ್ನೆಲೆ ಹಾಗೂ ನಿರೂಪ್–ಪೃಥ್ವಿ–ಶಾನ್ವಿ ಕಾಂಬಿನೇಷನ್‌ನಿಂದ ‘ಅಮೆರಿಕಾ ಅಮೆರಿಕಾ 2’ ಮೇಲೆ ಸಿನಿಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ.







