ಹೆಣ್ಣಿನ ಸುತ್ತ ‘ಮುಳ್ಳಿನ ಗುಲಾಬಿ’


ಬೆಂಗಳೂರು: ಹೆಣ್ಣುಮಕ್ಕಳು ಕೌಟುಂಬಿಕ ಬದುಕಿನಲ್ಲಿ ಎದುರಿಸುವ ಸಂಕಷ್ಟಗಳು ಹಾಗೂ ಅವುಗಳಿಂದ ಹೊರಬರುವ ಹೋರಾಟದ ಕಥಾಹಂದರ ಹೊಂದಿರುವ ‘ಮುಳ್ಳಿನ ಗುಲಾಬಿ’ ಚಿತ್ರಕ್ಕೆ ಸಿದ್ಧತೆ ಆರಂಭವಾಗಿದೆ.


ಆಶಾ ಗುರುಲಿಂಗಯ್ಯ ಅವರ ಇದೇ ಹೆಸರಿನ ಕಾದಂಬರಿ ಆಧರಿಸಿ ಸ್ಮೈಲ್ ಶಿವು ನಿರ್ದೇಶನ ಮಾಡುತ್ತಿದ್ದು, ಅಜಯ್ ಗೌಡ, ಆಶಾ ಗುರುಲಿಂಗಯ್ಯ, ಗಿರಿಜಾ ಲೋಕೇಶ್ ಹಾಗೂ ರೇಖಾದಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.


ಲೇಖಕಿ ಹಾಗೂ ನಾಯಕಿ ಆಶಾ ಗುರುಲಿಂಗಯ್ಯ ಮಾತನಾಡಿ, ಕಷ್ಟಪಡುತ್ತಿದ್ದ ಹೆಣ್ಣುಮಗಳೊಬ್ಬಳ ಬದುಕಿನಿಂದ ಸ್ಫೂರ್ತಿ ಪಡೆದು ಕಾದಂಬರಿ ರಚಿಸಿದ್ದಾಗಿ ತಿಳಿಸಿದರು. ಕಾದಂಬರಿ ಪ್ರಕಟವಾದಾಗ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕಥೆ ಸಿನಿಮಾ ಮೂಲಕ ಹೆಚ್ಚಿನ ಜನರನ್ನು ತಲುಪಲಿ ಎಂಬ ಉದ್ದೇಶದಿಂದ ಚಿತ್ರ ನಿರ್ಮಿಸಲಾಗುತ್ತಿದೆ ಎಂದರು.


ನಿರ್ದೇಶಕ ಸ್ಮೈಲ್ ಶಿವು ಮಾತನಾಡಿ, “ಹೆಣ್ಣು ಅತ್ತೆ ಮನೆಯಲ್ಲಿ ಎದುರಿಸುವ ಸಮಸ್ಯೆಗಳು ಹಾಗೂ ಅದರಿಂದ ಹೊರಬರುವ ಹೋರಾಟವನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಕಾದಂಬರಿಯ ಶೇ.80ರಷ್ಟು ಮೂಲ ಕಥೆಯನ್ನು ಉಳಿಸಿಕೊಂಡು ಚಿತ್ರಕಥೆ ರೂಪಿಸಲಾಗಿದೆ. ಬೆಂಗಳೂರು ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆಯಿದೆ. ಚಿತ್ರದಲ್ಲಿ ಎರಡು ಹಾಡುಗಳಿವೆ,” ಎಂದರು.


ಚಿತ್ರಕಥೆ ಬರೆದ ಎಂ.ಡಿ. ಕೌಶಿಕ್, ಹಿರಿಯ ನಟಿ ರೇಖಾದಾಸ್, ಅಪೂರ್ವ, ಮೈಸೂರು ರಮಾನಂದ್ ಹಾಗೂ ಛಾಯಾಗ್ರಾಹಕ ಪಿ.ವಿ.ಆರ್. ಸ್ವಾಮಿ ಮಾತನಾಡಿದರು. ನಿರ್ಮಾಪಕ ಅಜಯ್ ಗೌಡ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಲವರ್ ಬಾಯ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರಕ್ಕೆ ಶಿವಾನಂದ್ ಸಂಭಾಷಣೆ ಹಾಗೂ ಸಂಜೀವ್ ರೆಡ್ಡಿ ಸಂಕಲನವಿದೆ. ವಿಜಯೇಂದ್ರ ಹಾಗೂ ಲಯನ್ಸ್‌ನ ಸತ್ಯವತಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor