ಬಾಲಿವುಡ್ ಅಂಗಳಕ್ಕೆ ‘ರಿಯಲ್ ಮಾನ್‌ಸ್ಟರ್’ ಮತ್ತೆ ಆರ್.ಚಂದ್ರು–ಶಿವಣ್ಣ ಜೋಡಿ ರೆಡಿ!
ಬಾಲಿವುಡ್ ಅಂಗಳಕ್ಕೆ ‘ರಿಯಲ್ ಮಾನ್‌ಸ್ಟರ್’!
ಮತ್ತೆ ಆರ್. ಚಂದ್ರು–ಶಿವಣ್ಣ ಜೋಡಿ ರೆಡಿ!
ಬೆಂಗಳೂರು: ‘ಕಬ್ಜ’ ಚಿತ್ರದ ಬಳಿಕ ನಿರ್ದೇಶಕ ಆರ್. ಚಂದ್ರು ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತೊಮ್ಮೆ ಒಂದಾಗಿದ್ದಾರೆ.

ಆರ್‌ಸಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಒರಿಜಿನಲ್ ಮಾನ್‌ಸ್ಟರ್’ ಪ್ಯಾನ್ ಇಂಡಿಯಾ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಕೆಂಗೇರಿಯ ಮೋದಿ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು.
ಆನಂದ್ ಪಂಡಿತ್ ಅರ್ಪಿಸುವ ಈ ಚಿತ್ರವನ್ನು ಯಮುನಾ ಚಂದ್ರು ನಿರ್ಮಿಸುತ್ತಿದ್ದು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಸುನೀಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ತಾಜ್ ಮಹಲ್’, ‘ಚಾರ್ ಮಿನಾರ್’, ‘ಮೈಲಾರಿ’ ಹಾಗೂ ‘ಕಬ್ಜ’ದಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಆರ್. ಚಂದ್ರು, ಸುಮಾರು ಎರಡೂವರೆ ವರ್ಷಗಳ ಬಳಿಕ ‘ಒರಿಜಿನಲ್ ಮಾನ್‌ಸ್ಟರ್’ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ.
“ಶಿವರಾಜಕುಮಾರ್ ಅವರೊಂದಿಗೆ ‘ಮೈಲಾರಿ’ ಹಾಗೂ ‘ಕಬ್ಜ’ ಬಳಿಕ ಮತ್ತೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಇದು ಅದ್ದೂರಿ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಭಾರತದ ಜನಪ್ರಿಯ ನಟರು ತಾರಾಬಳಗದಲ್ಲಿರಲಿದ್ದಾರೆ” ಎಂದು ಆರ್. ಚಂದ್ರು ತಿಳಿಸಿದ್ದಾರೆ.

ಇನ್ನು ಚಿತ್ರದ ಬಗ್ಗೆ ಮಾತನಾಡಿದ ಶಿವರಾಜಕುಮಾರ್, “ಇದು ನಾನು ಈವರೆಗೂ ಮಾಡಿರದ ವಿಭಿನ್ನ ಪಾತ್ರ. ‘ಮಾನ್‌ಸ್ಟರ್’ ಎಂದರೆ ದೈತ್ಯ. ಆದರೆ ಈ ದೈತ್ಯನಲ್ಲೂ ಮತ್ತೊಂದು ಭಿನ್ನ ಆಯಾಮವಿದೆ. ಚಿತ್ರದ ಎಮೋಷನ್ ಅಂಶ ಪ್ರೇಕ್ಷಕರಿಗೆ ಇಷ್ಟವಾಗಲಿದೆ” ಎಂದರು.
ಎ.ಜೆ. ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

ಬೆಂಗಳೂರಿನ ಎಚ್‌ಎಂಟಿ ಮೈದಾನದಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದ್ದು, ಮೊದಲ ಹಂತದ ಚಿತ್ರೀಕರಣ ಅಲ್ಲಿಯೇ ನಡೆಯಲಿದೆ.
ಇದೇ ವೇಳೆ “ಆರ್. ಚಂದ್ರು ಅವರೊಂದಿಗೆ ‘ಮೈಲಾರಿ 2’ ಚಿತ್ರವನ್ನೂ ಮಾಡುತ್ತೇನೆ” ಎಂದು ಶಿವರಾಜಕುಮಾರ್ ಹೇಳಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.








