ಐತಿಹಾಸಿಕ ಬಾದಾಮಿ ಗುಹೆಗಳಲ್ಲಿ “ಕರ್ಣಾಟಬಲಂ ಅಜೇಯಂ” ಚಿತ್ರದ ಅದ್ದೂರಿ ಚಿತ್ರೀಕರಣ.

ಸಹಸ್ರಾರು ನೃತ್ಯ ಕಲಾವಿದರೊಂದಿಗೆ ಕಲರ್ ಫುಲ್ ಹಾಡಿಗೆ ಹೆಜ್ಜೆ ಹಾಕಿದ
ಧ್ಯಾನ್ ಯೋಗೀಶ್ವರ್.

ಶಾಸಕ, ನಟ, ನಿರ್ಮಾಪಕ ಸಿ.ಪಿ ಯೋಗೀಶ್ವರ್ ಅವರ ಮಗ ಧ್ಯಾನ್ ಯೋಗೀಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ‘ಕರ್ಣಾಟಬಲಂ ಅಜೇಯಂ’ ಚಿತ್ರಕ್ಕೆ ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಚಿತ್ರತಂಡ ಚಿತ್ರೀಕರಣ ವೀಕ್ಷಣೆಗೆ ಮಾಧ್ಯಮದವರನ್ನು ಬಾದಾಮಿಗೆ ಆಹ್ವಾನಿಸಿತ್ತು.

ಬಾದಾಮಿಯ ಕೋಟೆಯಲ್ಲಿ ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣ ಭರದಿಂದ ಸಾಗಿತ್ತು. ಚಿತ್ರದ ನಾಯಕ ಧ್ಯಾನ್ ಸಹಸ್ರಾರು ಕಲಾವಿದರು ಹಾಗೂ ಸಹ ಕಲಾವಿದರೊಂದಿಗೆ ‘ಬಾದಾಮಿ ಸೀಮೆಯಿದು ಎಂತ ಸೊಬಗು …’ ಎಂಬ ಗೀತೆಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು. ಈ ಹಾಡಿನಲ್ಲಿ ಜನಪದ ಕಲೆಗಳಾದ ಯಕ್ಷಗಾನ, ನಂದಿ ಕೋಲು, ವೀರಗಾಸೆ ಕುಣಿತ ಸೇರಿದಂತೆ ಹಲವು ನೃತ್ಯತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ತ್ರಿಲೋಕ್ ತ್ರಿವಿಕ್ರಮ್ ಅವರ ಸಾಹಿತ್ಯದ ಈ ಗೀತೆಗೆ ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದರು. ಈ‌ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದೆ.

ವಿರಾಮದ ವೇಳೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಪಿ. ಯೋಗೀಶ್ವರ್, ‘ನಮ್ಮ, “ಕರ್ಣಾಟಬಲಂ ಅಜೇಯಂ” ಸಿನಿಮಾ ಚಿತ್ರೀಕರಣ ಪ್ರಾರಂಭಿಸಿ ತಿಂಗಳಾಗುತ್ತಾ ಬಂದಿದೆ. ನರಗುಂದ, ಬಾದಾಮಿಯ ಸುತ್ತಮುತ್ತ ನಿರಂತರ ಚಿತ್ರೀಕರಣ ಮಾಡುತ್ತಿದ್ದೇವೆ, ಇನ್ನೆರಡು ದಿನ ಚಿತ್ರೀಕರಣ ಮಾಡಿದರೆ ಬಾದಾಮಿ ಭಾಗದ ಚಿತ್ರೀಕರಣ ಮುಗಿಯುತ್ತದೆ. ಆನಂತರ ಹೊಸಪೇಟೆ, ಬೆಂಗಳೂರಿನಲ್ಲಿ ಒಂದೆರಡು ದಿನ ಚಿತ್ರೀಕರಣ ಮಾಡಿದರೆ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗುತ್ತದೆ.

ನಂತರ ಎರಡನೇ ಹಂತದಲ್ಲಿ ಹಳೆ ಮೈಸೂರು ಭಾಗದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಬಾದಾಮಿಯಿಂದ ಶುರುವಾಗುವ ಕಥೆ ಇಡೀ ಕರ್ನಾಟಕಕ್ಕೆ ಸಾಗುತ್ತದೆ. ಇದೊಂದು ಅಪ್ಪಟ ಕನ್ನಡತನದ, ನಮ್ಮ ಮಣ್ಣಿನ ಸಿನಿಮಾ.‌ ಈ ಮೂಲಕ ಇಂದಿನ ಯುವಕರಿಗೆ ಇತಿಹಾಸ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದಿನ ರೈತರ ಸಮಸ್ಯೆಗಳ ಜೊತೆಗೆ ಚಾಲುಕ್ಯರ ಕಾಲದ ಕಥೆಯನ್ನು ಇದರಲ್ಲಿ ಹೇಳಲಿದ್ದೇವೆ. ನಾಗಣ್ಣ ಅವರ ನಿರ್ದೇಶನ, ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಶೇಖರ್ ಚಂದ್ರು ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಹಿರಿಯರ ತಂಡ ಇದರಲ್ಲಿ ಕೆಲಸ ಮಾಡುತ್ತಿದೆ.

ನನ್ನ ಮಗ ಧ್ಯಾನ್ ಸಂಪೂರ್ಣ ತಯಾರಿ ಮಾಡಿಕೊಂಡು ಅಭಿನಯಕ್ಕಿಳಿದಿದ್ದಾನೆ. ನಾವು ಈ ಚಿತ್ರವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮಾಡುತ್ತಿದ್ದೇವೆ. ಮಹಾದಾಯಿ ಹೊರಾಟದ ಕಥೆ ಕೂಡ ಇದರಲ್ಲಿದ್ದು, ಇಡೀ ಕರ್ನಾಟಕದ ರೈತರ ಸಮಸ್ಯೆ ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಪುಲಕೇಶಿಯ ನಾಡಿನ ಜನ ಇಂದು ಏಕೆ ಗುಳೆ ಹೋಗುತ್ತಿದ್ದಾರೆ ಎಂಬ ಅಂಶದ ಮೇಲೆ ಕಥೆ ಸಾಗಲಿದ್ದು, ಸಂಪೂರ್ಣ ಕರ್ನಾಟಕ ನೀರಾವರಿ ಆಗಬೇಕು ಎಂಬುದು ನಮ್ಮ ಆಶಯ. “ಕರ್ಣಾಟಬಲಂ” ಚಾಲುಕ್ಯರ ಪುಲಕೇಶಿ ಸೈನ್ಯದ ಹೆಸರು. ಅದನ್ನೇ ನಾವು ಚಿತ್ರದ ಶೀರ್ಷಿಕೆಯಾಗಿ ಇಟ್ಟುಕೊಂಡಿದ್ದೇವೆ. ಬೇರೆ ಭಾಷೆಗಳಲ್ಲಿ ಬರುತ್ತಿರುವ ಐತಿಹಾಸಿಕ ಸಿನಿಮಾಗಳು ಕಾಲ್ಪನಿಕ ಕಥೆಯನ್ನು ಒಳಗೊಂಡಿರುತ್ತವೆ. ನಮ್ಮದು ನೈಜ ಘಟನೆ ಹಾಗೂ ಇಂದಿನ ಸಮಸ್ಯೆಯ ಬಗ್ಗೆ ಇರುವ ಕಥೆ. ನಾನು 25 ವರ್ಷದ ನಂತರ ಅಭಿನಯ ಮಾಡುತ್ತಿದ್ದು, ರೈತ ಹೋರಾಟಗಾರನ ಪಾತ್ರ ನಿರ್ವಹಿಸಿದ್ದೇನೆ.

ಮಗನ ಅಭಿನಯದ ಬಗ್ಗೆ ಮೆಚ್ಚುಗೆ ಆಗುತ್ತಿದೆ. ಈಗ ಚಿತ್ರೀಕರಣ ಮಾಡುತ್ತಿರುವ ಒಂದು ಗೀತೆಯನ್ನು ಆರು ದಿನ ಚಿತ್ರೀಕರಣ ಮಾಡುತ್ತಿದ್ದೇವೆ. ಈ ಹಾಡಿಗಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದು, ಇದು ಕನ್ನಡಕ್ಕೆ ಒಂದು ಹೆಮ್ಮೆಯ ಗೀತೆಯಾಗಲಿದೆ ಎಂಬ ವಿಶ್ವಾಸವಿದೆ. ಬಾದಾಮಿ ಮತ್ತು ಚಾಲುಕ್ಯ ಸಾಮ್ರಾಜ್ಯದ ಹಿರಿಮೆ ಎತ್ತಿ ಹಿಡಿಯುವ ಹಾಡು ಇದು. ಈಗಾಗಲೇ ನಮ್ಮ ಚಿತ್ರದ ಶೇಕಡಾ 35% ಭಾಗದ ಚಿತ್ರೀಕರಣ ಮುಗಿದಿದೆ’. ಮುಂಬರುವ ಸಂಕ್ರಾಂತಿ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರ ಹಾಗೂ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ನಾಗಣ್ಣ ಮಾತನಾಡಿ, ‘ಈ ಗೀತೆಯನ್ನು ಮೋಹನ್ ಮಾಸ್ಟರ್ ಅದ್ಭುತವಾಗಿ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಧ್ಯಾನ್ ಕೂಡ ತುಂಬಾ ಶ್ರಮದಿಂದ ಅಭಿನಯ ಮಾಡುತ್ತಿದ್ದಾರೆ. ಈ ಹಾಡನ್ನು ತ್ರಿಲೋಕ್ ತ್ರಿವಿಕ್ರಮ್ ಬರೆದಿದ್ದಾರೆ.

ನಮ್ಮದು ಅನುಭವಿಗಳಿರುವ ತಂಡ. ಇನ್ನೆರಡು ದಿನ ಇಲ್ಲಿದ್ದು ನಂತರ ಚನ್ನಪಟ್ಟಣ, ಬಾಗಲಕೋಟ, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕಡೆ ಚಿತ್ರೀಕರಣ ಮಾಡಲಿದ್ದೇವೆ. ಚಿತ್ರದಲ್ಲಿ ನಾಯಕನ ಹೆಸರು ವಾತಾಪಿ. ಇಂದಿನ ಈ ಹಾಡಿನ ಚಿತ್ರೀಕರಣದಲ್ಲಿ ಸುಮಾರು 1000ಕ್ಕೂ ಹೆಚ್ಚು ಜನ ತಂತ್ರಜ್ಞರು, ಕಲಾವಿದರು ಕೆಲಸ ಮಾಡುತ್ತಿದ್ದಾರೆ. ನಮ್ಮ ಸೊಗಡಿನ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಕಥೆ ಇಂದಿನ ಯುವಪೀಳಿಗೆ ಮತ್ತು ಆರನೇ ಶತಮಾನದ ಕಾಲಘಟ್ಟದಲ್ಲಿ ಸಾಗುತ್ತದೆ. ಐತಿಹಾಸಿಕ ಹಾಗೂ ಸಾಮಾಜಿಕ ಕಥೆ ಒಳಗೊಂಡ ಸಿನಿಮಾ ಇದಾಗಿದೆ’ ಎಂದು ಹೇಳಿದರು.
ನಾಯಕ ಧ್ಯಾನ್ ಯೋಗೀಶ್ವರ್ ಮಾತನಾಡಿ, ‘ಕಳೆದ 20 ದಿನಗಳಿಂದ ಬಾದಾಮಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಜನ ನೀಡುತ್ತಿರುವ ಪ್ರೀತಿಗೆ ತುಂಬಾ ಖುಷಿ ಆಗಿದೆ. ಚಿಕ್ಕ ವಯಸ್ಸಿನಿಂದ ನನಗೆ ನಟ ಆಗುವ ಆಸೆ. ಆದರೆ ತಂದೆಗೆ ಇಷ್ಟ ಇರಲಿಲ್ಲ. ನಾನು ಯಾವಾಗ ಎತ್ತರವಾಗಿ ಬೆಳೆದೆನೋ ಆಗ ತಂದೆಗೆ ನನ್ನ ಮೇಲೆ ಭರವಸೆ ಬಂತು. ಒಬ್ಬ ನಟನಾಗಿ ನಿಲ್ಲಬೇಕು ಎಂಬ ಆಸೆ ಇದೆ‌. ಕರ್ಣಾಟಬಲಂ ಅಜೇಯಂ ಚಿತ್ರ ಜನವರಿ 15 ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿದೆ’ ಎಂದರು.

ವೇದಿಕೆಯಲ್ಲಿ ಚಿತ್ರದ ನಾಯಕಿ ಮಣಿಕಾ ವಿಶ್ವಕರ್ಮ, ನಾಯಕನ ತಾಯಿ ಪಾತ್ರ ಮಾಡುತ್ತಿರುವ ಲಯ, ಛಾಯಾಗ್ರಾಹಕ ಶೇಖರ್ ಚಂದ್ರು, ನೃತ್ಯ ನಿರ್ದೇಶಕ ಮೋಹನ್ ಮಾಸ್ಟರ್, ಕಥಾ ಹಾಗೂ ಸಂಭಾಷಣೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಎಸ್. ರಮೇಶ್, ಗುರುರಾಜ್ ದೇಸಾಯಿ ಕಲಾವಿದರಾದ ಸಂಪತ್ ಮೈತ್ರೇಯ, ಮಾನಸಿ ಸುಧೀರ್, ಬಲ ರಾಜ್‌ವಾಡಿ, ಕಾರ್ಯಕಾರಿ ನಿರ್ಮಾಪಕ ಕೆ. ಪಿ. ಶ್ರೀಕಾಂತ್ ಮುಂತಾದವರು ಸಿನಿಮಾ ಬಗ್ಗೆ ಮಾತನಾಡಿದರು. ಸಹ ನಿರ್ದೇಶಕ ಸುರೇಶ್ ರಾಜ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor