ತಲೆ ಹಿಡುಕರ ಕೈಗೆ ಸಿಲುಕಿದ ಹೆಣ್ಣು ಮಕ್ಕಳ ವೇಶ್ಯಾವಾಟಿಕೆಯ ಕರಾಳ ಬದುಕಿನ ಕಥೆ ಸಿಟಿ ಲೈಟ್ಸ್

ಚಿತ್ರ –   ಸಿಟಿ ಲೈಟ್ಸ್
ನಿರ್ಮಾಪಕರು –   ವಿಜಯ್ ಕುಮಾರ್, ವಿಕ್ರಂ ಆರ್ಯ
ನಿರ್ದೇಶನ – ದುನಿಯಾ ವಿಜಯ್
ಸಂಗೀತ –  ಚರಣ್ ರಾಜ್
ಛಾಯಾಗ್ರಾಹಣ – ಶಿವಸೇನ
ಸಂಕಲನ –  ದೀಪು S. ಕುಮಾರ್

Rating -3 /5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐  / 5

ಕಲಾವಿದರು –  ವಿನಯ್ ರಾಜಕುಮಾರ್, ಮೋನಿಷಾ ವಿಜಯ್ ಕುಮಾರ್, ಉಮಾಶ್ರೀ, B. M. ಗಿರಿರಾಜ್, ವಿನೋದ್ ಮಾಸ್ಟರ್, ಪುನೀತ್ ಕುಮಾರ್, ವೀರ ದೇವರಾಜ್, ವಸಂತ್ ಕೃಷ್ಣ ಮೂರ್ತಿ, ಮುಂತಾದವರು.

ಬೆಂಗಳೂರಿನ ಮೆಜೆಸ್ಟಿಕ್ ಕಲರ್ ಫುಲ್ ಬೆಳಕಿನ ಸಿಟಿ ಲೈಟ್ ಕೆಳಗಡೆ ಲೈಫ್ ಕಟ್ಟುಕೊಳ್ಳೋಕೆ ಬಂದ ಹೆಣ್ಣು ಮಕ್ಕಳ ಸೊಂಟದ ಲಾಡಿ ಬಿಚ್ಚೋ ಲಫಂಗ ನನ್ ಮಕ್ಕಳು ಒಂದು ಕಡೆಯಾದರೆ ಇಂಥ ಲುಚ್ಚಾ ಲೋಫರ್ಗಳಿಗೆ ಗಾಡ್ ಫಾದರ್ ಆಗಿರುವಂತಹ ದುಷ್ಟ ರಾಜಕಾರಣಿಗಳ ಅಟ್ಟಹಾಸ ಇನ್ನೊಂದು ಕಡೆ, ಯಾರೋ ಕಚಡ ನನ್ ಮಕ್ಳು ಮದುವೆ ಆಗ್ತೀನಿ ಪ್ರೀತಿ ಮಾಡ್ತೀನಿ ಅಂತ ಮೋಸ ಮಾಡಿ ಕೈ ಕೊಟ್ಟು ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ತಲೆ ಮಾಸಿದ, ತಲೆಹಿಡುಕರ ಕೈಗೆ ಸಿಲುಕಿ ಹೋದಂತಹ ಹೆಣ್ಣು ಮಕ್ಕಳ ವೇಶ್ಯಾವಾಟಿಕೆಯ ಕರಾಳ ಬದುಕಿನ ಕಥೆ ಸಿಟಿ ಲೈಟ್ಸ್

ದೇಶಾನ ಲೂಟಿ ಮಾಡಿ ಕೊಳ್ಳೆ ಹೊಡೆದು ಜನರ ದುಡ್ಡಲ್ಲಿ ಐಷಾರಾಮಿ ಜೀವನ ಮಾಡ್ತೀರಾ ನರಿ ರಾಜಕಾರಣಿಗಳು ತಿಂದು ಬಿಸಾಕಿರೋ ಎಂಜಲು ಮೂಳೆ ನೆಕ್ಕೊಂಡು  ಅಮಾಯಕರ ರಕ್ತ ಹರಿಸಿ ಮೆರೀತಿರೋ  ಚಿಲ್ಲೆರೆ ರೌಡಿಗಳ ಅಬ್ಬರವನ್ನು ಸಿಟಿ ಲೈಟ್ಸ್ ನಲ್ಲಿ ನೋಡಬಹುದು.

ದುನಿಯಾ ವಿಜಯ್ ನಿರ್ದೇಶನದಲ್ಲಿ  ಸಾಮಾಜಿಕ ಕಳಕಳಿಯ, ಮತ್ತು ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ಅನಿಷ್ಟ ದಂಧೆಗಳ ಬಗ್ಗೆ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
ಇಲ್ಲೂ ಕೂಡ ಬದುಕು ಅರಸಿ ಬರುವ ಹೆಣ್ಣುಮಕ್ಕಳು ಬೆಂಗಳೂರಿನ ಮೆಜೆಸ್ಟಿಕ್ ಸಿಟಿ ಲೈಟ್ ಕೆಳಗೆ ಹೇಗೆ ಕಳೆದು ಹೋಗುತ್ತಾರೆ ಎನ್ನುವುದನ್ನು  ನೇರವಾಗಿ, ಹಸಿ ಬಿಸಿಯಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.


ವಿಜಯ್ ಒಬ್ಬ ನಿರ್ದೇಶಕನಾಗಿ ತೆರೆಯ ಮೇಲೆ ಸೈ ಎನಿಸಿಕೊಂಡಿದ್ದಾರೆ.
ಆದರೆ ಕಥೆಯಲ್ಲಿ ಇನ್ನೂ ಒಂದಿಷ್ಟು ಹಿಡಿತ ಬೇಕಿತ್ತು ಅನ್ನಿಸುತ್ತೆ.
ಸಿನಿಮಾದಲ್ಲಿ ಎಲ್ಲವನ್ನೂ ಹೇಳಲು ಹೋದ ವಿಜಯ್ ರವರು ಎಲ್ಲೋ ಒಂದಿಷ್ಟು ಗೊಂದಲಕ್ಕೆ ಸಿಕ್ಕಿಕೊಂಡ್ರಾ ಅಂತ ಅನ್ಸುತ್ತೆ.

ವಿನಯ್ ರಾಜಕುಮಾರ್ ಇತ್ತೀಚಿಗೆ ಪಾತ್ರಗಳಿಂದ ಪಾತ್ರಗಳಿಗೆ ತಮ್ಮನ್ನು ತೊಡಗಿಸಿಕೊಂಡು ಅಭಿನಯದಲ್ಲಿ ಪಕ್ವವಾಗುತ್ತಿದ್ದಾರೆ. ಇಲ್ಲೂ ಕೂಡ ಪ್ರೇಕ್ಷಕರನ್ನು ತಮ್ಮ ಅಭಿನಯದ ಮೂಲಕ ಸೆಳೆಯುತ್ತಾರೆ, ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ.
ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದು ಇಲ್ಲಿನ ದಂಧೆಗಳ ಸುಳಿಗೆ ಸಿಲುಕುವ ಮತ್ತು ಸಿಲುಕಿದವರನ್ನು ಕಾಪಾಡುವ ಪಾತ್ರದಲ್ಲಿ ಮತ್ತೊಮ್ಮೆ ಪಕ್ಕಾ ಮಾಸ್ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ ವಿನಯ್.

ಇನ್ನು ಮೋನಿಷಾ ವಿಜಯಕುಮಾರ್ ಮೊದಲ ಬಾರಿಗೆ ಬೆಳ್ಳಿ ತೆರೆಯ ಮೇಲೆ ಪರಿಪೂರ್ಣ ವಾಗಿ ತಮ್ಮನ್ನು ತಾವು ಅಪ್ಪನ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ದುಷ್ಟ ಸಮಾಜದ ವೇಶ್ಯವಾಟಿಕೆ  ದಂಧೆಗೆ ಸಿಲುಕುವ ಅಮಾಯಕ ಹೆಣ್ಣುಮಗಳಾಗಿ ಪಾತ್ರ ನಿಭಾಯಿಸಿದ್ದಾರೆ.
ತಮ್ಮ ನಾನು ಅವನಲ್ಲಾ ಅವಳು ಅಂತ ತೃತೀಯ ಲಿಂಗಿಯಾಗಿ ಬದಲಾದಗ, ಅವಮಾನ ತಡೆಯದೇ ತಂದೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಬ್ಬಲಿಯಾದ ನಾಯಕಿ ತಮ್ಮನನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಿದ್ದಂತೆ ವೇಶ್ಯಾ ವಾಟಿಕೆಯ ಸಿಕ್ಕಿ ಬೀಳುತ್ತಾಳೆ. ಇದು ನಾಯಕಿಯ ಕಥೆಯಾದರೆ, ಇನ್ನು ನಾಯಕನ ಕಥೆಯೇ ಬೇರೆ ಈತ ಕೂಡ ತಂದೆ ತಾಯಿ ಇಲ್ಲದ ತಬ್ಬಲಿ. ಚಿಕ್ಕಂದಿನಿಂದ ಬೆಳೆದಿದ್ದು ಮಾವನ ಮನೆಯಲ್ಲಿ ಹಳ್ಳಿಯಲ್ಲಿ ಹೊಲದಲ್ಲಿ ಮೈಮುರಿದು ದುಡಿಯುವ ರೈತ.


ಮಾವನ ಮರಣದ ನಂತರ ಊರು ಬಿಟ್ಟು ದುಡಿಯಲು  ಬೆಂಗಳೂರು ಎಂಬ ಮಾಯನಗರಿಗೆ. ನಂತರ ರೌಡಿಯಿಜಂ, ರಾಜಕಾಣಿಗಳು, ಖಾಕಿ ವೇಷದಲ್ಲಿರುವ ಕ್ರಿಮಿನಲ್ ಪೊಲೀಸರು, ನೊಂದೂ ಮೋಸ ಹೋಗಿರುವ ಅಮಾಯಕ ಹೆಣ್ಣುಮಕ್ಕಳು, ಬದುಕು ನಡೆಸಲು ಹೊಟ್ಟೆ ಪಾಡಿಗಾಗಿ ಬಟ್ಟೆ ಬಿಚ್ಚಿ ಬೆತ್ತಲಾಗಿ ಮತ್ತೊಬ್ಬರ ಕಾಮದ ಹಸಿವು ನಿಗಿಸುವ ಅಬಲೆಯರು, ಎಲ್ಲರ ಪ್ರೀತಿಗಳಿಸಿ, ಎಲ್ಲರಿಗೂ ಸಹಾಯ ಮಾಡುತ್ತಾ, ಅವರೊಂದಿಗೆ ಬೆರೆತು ಹೋದ ಕಥಾ ನಾಯಕನಾಗಿ ಮೊದಲೇ ಹೇಳಿದಂತೆ ವಿನಯ್ ಪಾತ್ರಕ್ಕೆ ಪರಿಪೂರ್ಣ ವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.

ತುಂಬಾ ದಿನಗಳ ನಂತರ ಬೆಳ್ಳಿತೆರೆಯ ಮೇಲೆ ಹಿರಿಯ ನಟಿ ಉಮಾಶ್ರೀಯವರು ವಿಭಿನ್ನವಾದ ಪಾತ್ರದ ಮೂಲಕ ನೊಂದ ಹೆಣ್ಣುಮಕ್ಕಳ ಧ್ವನಿಯಾಗಿದ್ದಾರೆ. ಅಭಿನಯದಲ್ಲಿ ಉಮಾಶ್ರೀ ಯವರು ಅವರಿಗೆ ಅವರೇ ಸಾಟಿ ಎನ್ನಬಹುದು.

ಶಿವಣ್ಣ, ದುನಿಯಾ ವಿಜಯ್ ಆಪ್ತ ಭಂಟ ಪುನಿ ಕೂಡ ಚಿತ್ರದಲ್ಲಿ ಖಳನಾಟನಾಗಿ ತಮ್ಮ ಅಭಿನಯದ ಚತುರತೆಯನ್ನು ಲೀಲಾಜಾಲವಾಗಿ ತೋರಿಸಿದ್ದಾರೆ.

ಚಿತ್ರದ ಕಥೆಯ ಓಟಕ್ಕೆ ಸರಿಸಾಟಿಯಾಗಿ ಸಾಥ್ ನೀಡಿರುವುದು ಚರಣ್ ರಾಜ್ ರವರ ಸಂಗೀತ. ಹಿನ್ನೆಲೆ ಮತ್ತು ಮುನ್ನೆಲೆ ಯಲ್ಲೂ ಒಳ್ಳೆ ಸ್ಕೊರ್ ಮಾಡಿದ್ದಾರೆ. ಹಾಡುಗಳು ಚನ್ನಾಗಿ ಮೂಡಿಬಂದಿದೆ ಹಾಗೂ ಪ್ರತಿಯೊಂದು ದೃಶ್ಯಕ್ಕೂ ಜೀವ ನೀಡಿದ್ದಾರೆ ಎನ್ನಬಹುದು.

ಹಾಗೇ ಶಿವಸೇನ ರವರ ಛಾಯಾಗ್ರಾಹಣದ ಬಗ್ಗೆ ಹೇಳಲೇ ಬೇಕು, ನಿರ್ದೇಶಕ ವಿಜಯ್ ರವರ ಕಲ್ಪನೆಗೆ ಜೀವ ನೀಡುವಲ್ಲಿ ಜಯ ಸಾಧಿಸಿದ್ದಾರೆ. ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಟ್ಟಿನಲ್ಲಿ ಸಮಾಜದೊಳಗಿನ ಒಂದಷ್ಟು ಕಲ್ಮಶಗಳ ಜಗತ್ತನ್ನು ತೆರೆಯ ಮೇಲೆ ನೋಡಿ, ಎಚ್ಚರಿಕೆ ಯಿಂದ ಇರಬಹುದಾದ ಚಿತ್ರ ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor