ಚಿತ್ರ ವಿಮರ್ಶೆ – ಗ್ರಾಮಾಯಣ ದೊಳಗೊಂದು ಪ್ರೇಮಾಯಣ
ಚಿತ್ರ – ಗ್ರಾಮಾಯಣ
ನಿರ್ಮಾಪಕರು – ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್ಟೈನ್ಸ್
ನಿರ್ದೇಶನ – ದೇವನೂರು ಚಂದ್ರು
ಛಾಯಾಗ್ರಹಣ – ಸಂತೋಷ್ ರೈ ಪಾತಜೆ
ಸಂಗೀತ – ಪೂರ್ಣಚಂದ್ರ ತೇಜಸ್ವಿ
Rating -3. 5/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು – ವಿನಯ್ ರಾಜಕುಮಾರ್, ಅಪರ್ಣ ಲೂಸ್ ಮಾದ ಯೋಗಿ, ಅಚ್ಚುತ್ ಕುಮಾರ್, ಅರುಣ್ ಸಾಗರ್, ಗೋಪಾಲ್ ಕೃಷ್ಣ ದೇಶಪಾಂಡೆ ಮುಂತಾದವರು.
ಹೆಸರೇ ಹೇಳುವಂತೆ ಇದೊಂದು ಅಪ್ಪಟ ಹಳ್ಳಿ ಸೊಗಡಿನ ಕಥೆ ಅದಕ್ಕಾಗಿ ಇದಕ್ಕೆ ಗ್ರಾಮಾಯಣ ಎಂಬ ಹೆಸರನ್ನು ಇಟ್ಟಿದ್ದಾರೆ.
ಒಂದು ಹಳ್ಳಿಯಲ್ಲಿ ನಡೆಯುವ ಜಾತಿ ರಾಜಕೀಯ, ರಾಜಕಾರಣದ ರಾಜಕೀಯ, ಅಲ್ಲಿನ ಸಮಸ್ಯೆಗಳು, ಅತಂತ್ರ ಕುತಂತ್ರಗಳನ್ನು ಚಿತ್ರದಲ್ಲಿ ಬಹಳ ಚೆನ್ನಾಗಿ ತೋರಿಸಿದ್ದಾರೆ.

ಅವನು ಸಿಕ್ಸ್ತ್ ಸೆನ್ಸ್ ಸೀನ ( ವಿನಯ್ ರಾಜಕುಮಾರ್ ) ಈ ಕಥೆಯ ನಾಯಕ. ಏನೇ ಆದರೂ ಹಳ್ಳಿ ಬಿಟ್ಟು ಸಿಟಿಗೆ ಹೋಗಲ್ಲ, ನಾನಿರುವ ಹಳ್ಳಿಯಲ್ಲೇ ಚೆನ್ನಾಗಿ ಬದುಕಿ ತೋರಿಸ್ಬೇಕು ಅನ್ನೋ ಹಟ.
ಒಂದು ಟ್ಯಾಕ್ಟರ್ ತಗೋಬೇಕು ಅನ್ನೋದು ಅವನ ಕನಸು.
ಹಳ್ಳಿ ಬಿಟ್ಟು ಸಿಟಿಗೆ ಹೋಗಿ ಬದುಕ್ಬೇಕು ಅನ್ನೋ ಅವನ ಸ್ನೇಹಿತರಿಗೆ ಸೀನ ಹೇಳೋದು ಹಳ್ಳಿಯಲ್ಲಿ ನಾಲ್ಕರು ಎಕರೆ ಜಮೀನು ಇಟ್ಕೊಂಡು, ಸಿಟಿಗೆ ಹೋಗಿ ಬಿಕಾರಿಗಳ ಹಾಗೇ ಸೀಟ್ ಮನೇಲಿ ಬದುಕಬೇಕಾ, ಇದ್ದ ಊರಲ್ಲೇ ದುಡಿದು ಏನಾದ್ರು ಸಾಧಿಸೋಣ ಎಂದು ಆಗಾಗ ಬುದ್ದಿ ಹೇಳುತ್ತಾನೆ.

ವಿನಯರಾಜಕುಮಾರ್ ಮೊಟ್ಟ ಮೊದಲ ಬಾರಿಗೆ ಹಳ್ಳಿ ಪಾತ್ರದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ.
ಅವರ ನಟನೆ, ಉಡುಗೆ ತೊಡುಗೆ, ಹವಾ ಭಾವ ಎಲ್ಲದರಲ್ಲೂ ಕೂಡ ಪರಿಶುದ್ಧ ಹಳ್ಳಿಗನಾಗಿ ಕಾಣಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ.
ಹಾಗೆ ನಾಯಕ ನಟಿ ಮೇಘ ಶೆಟ್ಟಿ ಕೂಡ ಹಳ್ಳಿಯಲ್ಲಿ ಒಬ್ಬ ಬಜಾರಿ ಪಾತ್ರದಲ್ಲಿ ಯಾರಿಗೂ ಹೆದರದ ಮತ್ತು ಒಬ್ಬ ಗಂಡು ಹುಡುಗನ ಹಾಗೆ ಹೊಲ ಊಳುವುದರಿಂದ ಹಿಡಿದು ಪ್ರತಿಯೊಂದು ಹಳ್ಳಿಯ ಕೆಲಸವನ್ನು ಮಾಡುವ ಪಾತ್ರದಲ್ಲಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.
ಅವಳ ಕೋಪ ಸಿಡುಕುತನ ಬಜಾರಿತನಕ್ಕೆ ಹಳ್ಳಿಯ ಹುಡುಗರು ಹೆದರಿ ಅವಳ ಹತ್ತಿರ ಯಾರೂ ಸುಳಿಯುವುದಿಲ್ಲ.
ಆದರೆ ಚಿತ್ರದ ನಾಯಕ ನಟ ಸೀನನಿಗೆ ಕುಸುಮಳ (ಮೇಘಶೆಟ್ಟಿ ) ಮೇಲೆ ಪ್ರೇಮಾಂಗುರವಾಗುತ್ತದೆ.

ವಿನಯ್ ರಾಜಕುಮಾರ್ ಮತ್ತು ಮೇಘ ಶೆಟ್ಟಿಯ ಜೋಡಿ ಚಿತ್ರದುದ್ದಕ್ಕೂ ಪ್ರೇಕ್ಷಕರ ಮನಸ್ಸನ್ನು ಸೂರೆ ಗೊಳ್ಳುತ್ತದೆ. ಹಾಗೂ ಇಬ್ಬರ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಇನ್ನೂ ಸೀನನ ತಾಯಿಯಾಗಿ ಎಲ್ಲರ ಪ್ರೀತಿಯ ದಿವಂಗತ ಅಪರ್ಣ ರವರು ಅಭಿನಯಿಸಿದ್ದಾರೆ. ಇವರು ಕೂಡ ಪರಿಪೂರ್ಣ ಹಳ್ಳಿ ಸೊಗಡಿನ, ಹಳ್ಳಿ ಭಾಷೆಯ, ಹಳ್ಳಿ ಉಡುಗೆ ತೊಡುಗೆಯೊಂದಿಗೆ ತುಂಬಾ ಚೆನ್ನಾಗಿ ಅಭಿನಯ ಮಾಡುವುದರ ಮೂಲಕ ಪ್ರೇಕ್ಷಕರ ಮನಸಿಗೆ ಬಹಳ ನೋವು ಮತ್ತು ಖುಷಿಯನ್ನು ನೀಡುತ್ತಾರೆ.

ಕನ್ನಡದ ಪ್ರೇಕ್ಷಕರಿಗೆ ಅಪರ್ಣ ರವರನ್ನು ಕಳೆದುಕೊಂಡಿದ್ದು ಬಹಳ ಮನಸ್ಸಿಗೆ ನೋವನ್ನು ನೀಡುತ್ತದೆ.
ಇನ್ನು ಚಿತ್ರದಲ್ಲಿ ಲೂಸ್ ಮಾದ ಯೋಗಿ ಕರಿಬೇಕು ಎನ್ನುವ ಪಾತ್ರದ ಮೂಲಕ ಕೇಬಲ್ ಆಪರೇಟರ್ ಆಗಿ ಈ ಚಿತ್ರದಲ್ಲಿ ಖಳನಾಟನಾಗಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಗೋಪಾಲ್ ಕೃಷ್ಣ ದೇಶಪಾಂಡೆ ಹಳ್ಳಿಯ ಅಮಾಯಕ ರೈತರನ್ನ ಯಾಮಾರಿಸುವುದು ಹಾಗೂ ಕರಿಬೇಕು ಮತ್ತು ಸೀನನ ನಡುವೆ ಜಗಳ ತಂದಿಡುವುದು ತನ್ನ ಎದುರು ನಿಂತವರನ್ನ ಸದ್ದಿಲ್ಲದೆ ಸಾಯಿಸಿ ಬೆಂಕಿಗೆ ಹಾಕುವಂತ ಪಾತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮತ್ತೊಬ್ಬ ನಟ ಅರುಣ್ ಸಾಗರ್ ನೀಟ್ ರವಿ ಎನ್ನುವ ಎಂ.ಎಲ್.ಎ. ಪಾತ್ರದಲ್ಲಿ ಚಿತ್ರದ ಭಾಗವಾಗಿದ್ದಾರೆ.
ಹಳ್ಳಿ, ಹಳ್ಳಿ ಯೊಳಗಿನ ಸೀನ, ಕರಿಬೇಕ್ಕು, ಕರಿ ಬೆಕ್ಕಿನ ಜೊತೆಗೆ ಹಳ್ಳಿಯಲ್ಲಿ ಮಸಲತ್ತು ಮಾಡುವ ಸ್ವಾಮಿ ಈ ಎಲ್ಲಕ್ಕೂ ಕಿಂಗ್ ಪಿನ್ ಈ ನೀಟ್ ರವಿ.

ಈ ಎಲ್ಲ ಪಾತ್ರಗಳನ್ನು ನಿರ್ದೇಶಕ ದೇವನೂರು ಚಂದ್ರು ಬಹಳ ಚೆನ್ನಾಗಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಮತ್ತು ಪಾತ್ರಗಳ ನಿರ್ವಹಣೆ ಮತ್ತು ಕಥಾ ಸಾರಾಂಶವನ್ನು ಬಹಳ ಚನ್ನಾಗಿ ಬರೆದಿದ್ದಾರೆ.
ಚಿತ್ರಕಥೆ, ನಿರ್ದೇಶನ, ಸಾಹಿತ್ಯ, ಸಂಭಾಷಣೆ, ಸಂಗೀತ, ಛಾಯಾಗ್ರಹಣ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಆದರೆ ಮೂಲ ಕಥೆಯಲ್ಲಿ ಸ್ವಲ್ಪ ಇನ್ನು ಚೆನ್ನಾಗಿ ಕೆಲಸ ಮಾಡಬಹುದಿತ್ತೇನೋ ಅಂತ ಅನಿಸುತ್ತದೆ.
ಕಥೆಯ ಕೊನೆಯಲ್ಲಿ ಒಂದು ಸರಿಯಾದ ಗಟ್ಟಿಯಾದ ವಿಷಯ ಬೇಕಿತ್ತು ಅಂತ ಅನ್ನಿಸುವುದಂತೂ ನಿಜ.
ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಜೀವ ತುಂಬುವಲ್ಲಿ ಯಶಸ್ವಿಯಾಗಿದೆ.
ಕಥೆಯ ಜೊತೆ ಜೊತೆಗೆ ಒಂದಷ್ಟು ಜಾನಪದ ಗೀತೆಗಳು ಹಿನ್ನೆಲೆ ಸಂಗೀತವಾಗಿ ಬಳಸಿಕೊಂಡಿರುವುದು ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಛಾಯಾಗ್ರಾಹಕ ಸಂತೋಷ್ ರೈ ಪಾತಜೆ ಹಳ್ಳಿಯ ತೊಗಡಿನ ಸುಂದರ ಪರಿಸರಗಳನ್ನು ಕಣ್ಣಿಗೆ ತಂಪಾಗುವಂತೆ ಕಟ್ಟಿಕೊಟ್ಟಿದ್ದಾರೆ.
ಡಿಫ್ರೆಂಟ್ ಡ್ಯಾನಿ, ಚೇತನ್ ಡಿಸೋಜಾ, ಅರ್ಜುನ್ ರಾಜ್ ರವರ ಸಾಹಸ ದೃಶ್ಯ ಹಳ್ಳಿ ಸೊಗಡಿಗೆ ತಕ್ಕಂತೆ ಸಂಯೋಜಿಸಲಾಗಿದೆ.
ಹಾಗೆಯೇ ಮುರಳಿ ಮಾಸ್ಟರ್ ಮತ್ತು ಧನಂಜಯ ರವರ ನೃತ್ಯ ನಿರ್ದೇಶನ ಕೂಡ ಮನ ಸೆಳೆಯುವಂತಿದೆ.
ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್ಟೈನ್ಸ್ ಸಹಯೋಗದಲ್ಲಿ ಚಿತ್ರ ಅದ್ದೂರಿಯಾಗಿ ಮೂಡಿ ಬಂದಿದೆ.
ಒಟ್ಟಿನಲ್ಲಿ ಬಹಳ ವರ್ಷಗಳ ನಂತರ ಹಳ್ಳಿ ಸೊಗಡಿನ ಶುದ್ಧ ಕನ್ನಡದ ಚಿತ್ರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಕುಳಿತು ಸವಿಯಬಹುದು.









