ಸ್ಯಾಂಡಲ್‌ ವುಡ್‌ ಪರದೆಗೆ ಅಣ್ಣ ತಮ್ಮಂದಿರ ಮೋಡಿ!

ಪ್ರಣಾಮ್‌ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಎಂಟ್ರಿಯಾಗ್ತಿದ್ದಾರೆ ಪ್ರಜ್ವಲ್

ಶ್ರೀರಸ್ತು ಚಿತ್ರಕ್ಕೆ ಪ್ರಜ್ವಲ್‌ ದೇವರಾಜ್ ಪ್ರವೇಶ ಮಾಡಿದ್ದಾರೆ. ಈಗಾಗಲೇ ಪ್ರಣಾಮ್‌ ದೇವರಾಜ್‌ ನಾಯಕ ಎನ್ನುವ ಕಾರಣದಿಂದಲೇ ಸಾಕಷ್ಟು ದೊಡ್ಡ ಸದ್ದಿನೊಂದಿಗೆ ಸುದ್ದಿ ಮಾಡಿದ ಶೀರ್ಷಿಕೆ ಶ್ರೀರಸ್ತು. ಇದೀಗ ತಮ್ಮ ನಾಯಕನಾಗಿರುವ ಚಿತ್ರದಲ್ಲೇ ಅಣ್ಣ ಡೈನಾಮಿಕ್‌ ಪ್ರಿನ್ಸ್‌ ಕೂಡ ಎಂಟ್ರಿ ಕೊಡುತ್ತಿರುವುದು ಅಧಿಕೃತಗೊಂಡಿದೆ.


ಕನ್ನಡ ಚಿತ್ರರಂಗದಲ್ಲಿ ಸಹೋದರರು ಸಕ್ಸಸ್‌ ಹೀರೋಗಳಾಗಿರುವುದನ್ನು ನೋಡಿದ್ದೇವೆ. ಆದರೆ ಪ್ರಣಮ್‌ ಮತ್ತು ಪ್ರಜ್ವಲ್ ಒಂದೇ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಪ್ರಥಮ. ಅದೇ ಕಾರಣದಿಂದಲೇ ಶ್ರೀರಸ್ತು ದೊಡ್ಡ ಕುತೂಹಲವನ್ನೇ ಸೃಷ್ಟಿಸಿದೆ.
ಶುಕ್ರವಾರ ಪ್ರಜ್ವಲ್‌ ದೇವರಾಜ್‌ ಜನ್ಮದಿನದ ಪ್ರಯುಕ್ತ ಶ್ರೀರಸ್ತು ಚಿತ್ರತಂಡ ಶುಭ ಕೋರುವ ಪೋಸ್ಟರ್‌ ಮತ್ತು ವಿಡಿಯೋ ಬಿಡುಗಡೆಗೊಳಿಸಿತ್ತು. ವಿಶೇಷ ಏನೆಂದರೆ ಪ್ರಣಮ್‌ ಜತೆಗೆ ಬರ್ತ್‌ ಡೇ ಬಾಯ್ ಪ್ರಜ್ವಲ್‌ ಕೂಡ ಇದ್ದ ದೃಶ್ಯಗಳು ಅಭಿಮಾನಿಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಪ್ರೇಮ ಚಿತ್ರ ಈಗ ಕೌಟುಂಬಿಕ ಚಿತ್ರ!

ಆರಂಭದಲ್ಲಿ ಶ್ರೀರಸ್ತು ಒಂದು ಲವ್‌ ಸ್ಟೋರಿ ಎಂದಷ್ಟೇ ಸುದ್ದಿಯಾಗಿತ್ತು. ಚಿತ್ರದಲ್ಲಿ ಪ್ರಣಮ್‌ಗೆ ಜೋಡಿ ಸಂಜನಾ ಆನಂದ್‌ ಎನ್ನುವುದಷ್ಟೇ ತಿಳಿದು ಬಂದಿತ್ತು. ಆದರೆ ಇದೀಗ ಪ್ರಜ್ವಲ್‌ ಕೂಡ ಸೇರಿಕೊಂಡಿದ್ದಾರೆ. ಚಿತ್ರಕ್ಕೂ ಒಂದು ಕೌಟುಂಬಿಕ ಕಳೆ ಬಂದಿದೆ. ಪ್ರೇಮದ ಜೊತೆಗೆ ಕೌಟುಂಬಿಕ ಪ್ರೀತಿಯನ್ನು ತೋರಿಸುವಂಥ ಒಂದು ವಿಭಿನ್ನ ಚಿತ್ರವಾಗಿ ಶ್ರೀರಸ್ತು ಮೂಡಿ ಬರಲಿದೆ ಎಂದು ನಿರ್ದೇಶಕ ಶಂಕರ್‌ ರೆಡ್ಡಿ ತಿಳಿಸಿದ್ದಾರೆ. ಹಾಗಂತ ಪ್ರಜ್ವಲ್‌ ತಮ್ಮನಿಗೆ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಪ್ರಧಾನ ಪಾತ್ರವಾಗಿ ಗಮನ ಸೆಳೆಯಲಿದ್ದಾರೆ ಎಂದು ಶಂಕರ್‌ ರೆಡ್ಡಿ ಭರವಸೆ ನೀಡುತ್ತಾರೆ.

ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ತೆರೆ ಕಾಣಲಿದೆ. ಹೀಗಾಗಿ ದೊಡ್ಡ ಕ್ಯಾನ್ವಾಸ್ ನಲ್ಲಿಯೇ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಖ್ಯಾತ ಕಲಾವಿದರಾದ ಸುಮನ್‌, ಆಮನಿ, ಚೈತ್ರಾರೈ, ರವಿ ಶಿವತೇಜ, ಜೋಶ್‌ ರವಿ, ರವಿ ಪ್ರಕಾಶ್‌ ಹೀಗೆ ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಕಲಾವಿದರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಹರ ಕ್ರಿಯೇಶನ್ಸ್‌ ಬ್ಯಾನರ್‌ ನಲ್ಲಿ ಹರಗೌಡ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ನಿರ್ಮಿಸುತ್ತಿದ್ದಾರೆ. ಪುಷ್ಪ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳ ಸಹಾಯಕ ಛಾಯಾಗ್ರಾಹಕ ಬಾಲಸರಸ್ವತಿ ಈ ಚಿತ್ರದ ಕ್ಯಾಮರಾಮ್ಯಾನ್.‌ ಕೃಷ್ಣ ಮಾಯ ಕಲಾನಿರ್ದೇಶನವಿದ್ದು ಶ್ರೀ ವರ್ಕಲ ಸಂಕಲನ ನಿರ್ವಹಣೆ ಮಾಡುತ್ತಿದ್ದಾರೆ. ಕನ್ನಡದ ಪಾಲಿಗೆ ಇದು ಇಂಡಸ್ಟ್ರಿ ತಿರುಗಿ ನೋಡುವಂತಹ ಚಿತ್ರವಾಗುವ ಬಗ್ಗೆ ಯಾವುದೇ ಸಂದೇಹವಿಲ್ಲ.

ಇದುವೇ ಈ ವರ್ಷದ ಮ್ಯೂಸಿಕಲ್‌ ಬ್ಲಾಕ್‌ ಬಸ್ಟರ್‌ !?

ಶ್ರೀರಸ್ತು ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಹೊರಗೆ ಬಂದಿರುವುದು ಒಂದು ವಿಡಿಯೋ ತುಣುಕು ಮಾತ್ರ. ಆದರೆ ಅದರ ಹಿನ್ನೆಲೆ ಸಂಗೀತವನ್ನು ಗಮನಿಸಿರುವ ಅಭಿಮಾನಿಗಳು ಹಾಡುಗಳ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಚಿತ್ರದ ಸಂಗೀತ ನಿರ್ದೇಶಕ ಶೇಖರ್‌ ಚಂದ್ರು ಎನ್ನುವ ಸತ್ಯವೂ ಅರಿವಾಗಿದೆ. ಹೀಗಾಗಿಯೇ ಹಾಡುಗಳು ಅದ್ಭುತವಾಗಿರುವ ನಿರೀಕ್ಷೆ ಸೃಷ್ಟಿಯಾಗಿದೆ. ಅಭಿಮಾನಿಗಳ ನಂಬಿಕೆ ಖಂಡಿತಾ ಸತ್ಯವಾಗಲಿದೆ ಎನ್ನುವ ಭರವಸೆಯನ್ನು ನಿರ್ದೇಶಕ ಶಂಕರ್‌ ರೆಡ್ಡಿ ಹೇಳಿದ್ದಾರೆ.

ಮತ್ತೆ ಸದ್ದು ಮಾಡಲಿದೆ ಯುವ ತಾರಾ ಸಂಗಮ

ಪ್ರಣಾಮ್‌ ಜತೆಗೆ ಪ್ರಜ್ವಲ್‌ ಇರುವುದು ಅಭಿಮಾನಿಗಳಿಗೆ ಎಷ್ಟು ಖುಷಿಯಾಗಿದೆಯೋ ಸಂಜನಾ ಆನಂದ್‌ ನಾಯಕಿಯಾಗಿರುವುದು ಕೌಟುಂಬಿಕ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದೆ. ಸಂಜನಾ ನಟನೆಯ ಈ ಹಿಂದಿನ ಚಿತ್ರದಲ್ಲಿ ಬ್ಯಾಂಗಲ್‌ ಬಂಗಾರಿ ಎನ್ನುವ ಹಾಡು ಜನಪ್ರಿಯತೆ ಪಟ್ಟ ಗಿಟ್ಟಿಸಿತ್ತು. ಮನೆಯ ಹಿರಿಯರಿಂದ ಹಿಡಿದು ಕಿರಿಯ ಮಕ್ಕಳ ತನಕ ಎಲ್ಲರೂ ಈ ಹಾಡಿಗೆ ಡಾನ್ಸ್‌ ಮಾಡಿದ್ದರು. ಇದೀಗ ಅದೇ ಸಂಜನಾ ಆನಂದ್‌ ಮರಳಿ ಬರುತ್ತಿದ್ದಾರೆ. ಈ ಬಾರಿ ಹಿಂದಿನ ದಾಖಲೆ ಮುರಿಯುವ ಹಾಡುಗಳಿರುತ್ತವೆ. ಈ ಮೂವರು ಸೇರಿ ಹೊಸ ಮೋಡಿ ಮಾಡುವ ನಿರೀಕ್ಷೆ ಎಲ್ಲರದ್ದೂ ಆಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor