ಕ್ರಿಯೆಟಿವ್ ನಿರ್ದೇಶಕನ ಹೊಸ ಅಧ್ಯಾಯ ಶುರು, ಬಾಲಿವುಡ್ ಗೆ ಅಡಿಯಿಟ್ಟ ಆರ್ ಚಂದ್ರು.

ಬಾಲಿವುಡ್ ಗೆ ಅಡಿಯಿಟ್ಟ ಆರ್ ಚಂದ್ರು.ಆನಂದ್ ಪಂಡಿತ್ ಅವರ ಜೊತೆಗೂಡಿ ಅದ್ದೂರಿ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ .

ಮುಂಬೈನಲ್ಲಿ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಅನಾವರಣ . ‌‌

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಸೇರಿದಂತೆ ದೇಶದ ಸೂಪರ್ ಸ್ಟಾರ್ ಗಳು ನಟಿಸುತ್ತಿರುವ ಈ ಚಿತ್ರಕ್ಕೆ “ಒರಿಜಿನಲ್ ಮಾನ್ ಸ್ಟರ್”(OM) ಎಂದು ನಾಮಕರಣ.

ವಿನೂತನ ಪ್ರಯತ್ನಗಳಿಂದ ಹೆಸರಾಗಿರುವ ಕನ್ನಡದ ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು ಈಗ ಬಾಲಿವುಡ್ ಗೆ ನಿರ್ಮಾಪಕರಾಗಿ ಅಡಿಯಿಟ್ಟಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆನಂದ್ ಪಂಡಿತ್ ಅವರೊಡಗೂಡಿ ಹಿಂದಿ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತು ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿದ್ದು, ಹಿಂದಿ, ತಮಿಳು ಹಾಗೂ ಮಲಯಾಳಂ ನಲ್ಲೂ‌ ಸುಪ್ರಸಿದ್ದ ಸ್ಟಾರ್ ನಟರು ನಾಯಕರಾಗಿ ನಟಿಸುತ್ತಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ತಿಳಿಯಲಿದೆ.

ಎರಡೂವರೆ ವರ್ಷಗಳ ಹಿಂದೆ ಆರ್ ಚಂದ್ರು ನೂರಾರು ಕೋಟಿ ವೆಚ್ಚದಲ್ಲಿ ಆನಂದ್ ಪಂಡಿತ್ ಅವರೊಂದಿಗೆ ” ಕಬ್ಜ” ಎಂಬ ಸೂಪರ್ ‌ಹಿಟ್ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರ ಚಂದ್ರು ಅವರಿಗೆ ಹೆಸರು ಹಾಗೂ ಹಣ ಎರಡನ್ನು ತಂದುಕೊಟ್ಟಿತು. ಅದಲ್ಲದೆ ಪ್ರಪಂಚದಾದ್ಯಂತ ಈ ಚಿತ್ರ ಸುದ್ದಿ ಮಾಡಿತ್ತು. ಈ ಚಿತ್ರದ ನಂತರ ಆರ್ ಚಂದ್ರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ಆರ್ ಚಂದ್ರು ಅವರು “ಕಬ್ಜ” ನಂತರ ಈ ಅದ್ದೂರಿ ಚಿತ್ರದ ನಿರ್ಮಾಣಕ್ಕೆ ಸಿದ್ದತೆ ನಡೆಸಿಕೊಳ್ಳುತ್ತಿದ್ದರು.

ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು, ಕನ್ನಡದ ಜನಪ್ರಿಯ ನಟರಾದ ಶಿವರಾಜಕುಮಾರ್ ಅವರು ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ಈ ನೂತನ ಪ್ಯಾನ್ ಇಂಡಿಯಾ ಚಿತ್ರದ ಆರಂಭೋತ್ಸವನ್ನು ಬಾಲಿವುಡ್ ನ ಕೇಂದ್ರಸ್ಥಳವಾದ ಮುಂಬೈನಲ್ಲಿ ಅದ್ದೂರಿಯಾಗಿ ಮಾಡಿದ್ದಾರೆ. ಈ ನೂತನ ಚಿತ್ರಕ್ಕೆ “ಒರಿಜಿನಲ್ ಮಾನ್ ಸ್ಟರ್” ಎಂಬ ಯುನಿವರ್ಸಲ್ ಟೈಟಲ್ ಇಡಲಾಗಿದ್ದು, ಎಲ್ಲಾ ಭಾಷೆಗೂ ಈ ಶೀರ್ಷಿಕೆ ಹೊಂದಿಕೆಯಾಗುತ್ತದೆ. ಇದನ್ನು ಕಿರಿದಾಗಿ “OM” ಎಂದು ಸಹ ಕರೆಯಬಹುದು.‌

“OM” ಎಂದರೆ ಶಿವಣ್ಣ ಅಭಿನಯದ “ಓಂ” ಕೂಡ ನೆನಪಾಗುತ್ತದೆ. ಕನ್ನಡದಲ್ಲಿ ಶಿವರಾಜಕುಮಾರ್ ಹಾಗೂ ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿರುವ “ಒರಿಜಿನಲ್ ಮಾನ್ ಸ್ಟರ್” ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

ಯಶ್, ರಿಷಭ್ ಶೆಟ್ಟಿ, ಪ್ರಶಾಂತ್ ನೀಲ್ ಹಾಗೂ ಆರ್ ಚಂದ್ರು ಅವರಂತಹ ಕನ್ನಡಿಗರು ಪ್ರಸ್ತುತ ಕನ್ನಡದ ಸಿನಿಮಾಗಳನ್ನು ಇಡೀ ವಿಶ್ವವೇ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವ ವಿಷಯ.

ಸದ್ಯ ಆರ್ ಚಂದ್ರು ನಿರ್ಮಾಣದ, ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ನಟನೆಯ “ಫಾದರ್” ಚಿತ್ರ ಸಹ ಬಿಡುಗಡೆ ಹಂತದಲ್ಲಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್ ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಗುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor