ಸಿನಿಮಾ ಪ್ರೀತಿಗೆ ಮತ್ತೊಂದು ಸಾಕ್ಷಿ; ಹೊಸ ಕನಸಿನೊಂದಿಗೆ ರಮೇಶ್ ರೆಡ್ಡಿ ರವರ ಜನ್ಮದಿನದಂದು ಘೋಷಣೆ , ಜನವರಿಯಲ್ಲಿ ‘ಪ್ರೊಡಕ್ಷನ್ ನಂಬರ್ 9’ ಶುಭಾರಂಭ!

ರಮೇಶ್ ರೆಡ್ಡಿ ಅವರು ದೀಪಾವಳಿ ಹಬ್ಬದಂದು ಹೊಸ ವಸಂತಕ್ಕೆ ಕಾಲಿಡಲಿದ್ದಾರೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಹಾಗೂ ಹೊಸ ಚಿತ್ರದ ನಿರ್ಮಾಣಕ್ಕೆ ಅಭಿನಂದನೆಗಳನ್ನು ಸೂಚಿಸುತ್ತೇವೆ.
‘ನಾತಿಚರಾಮಿ’, ‘ಪಡ್ಡೆಹುಲಿ’, ‘ಗಾಳಿಪಟ 2’, ‘45’ ಚಿತ್ರಗಳ ನಿರ್ಮಾಪಕರಿಂದ ಮತ್ತೊಂದು ಹೊಸ ಪ್ರಯತ್ನ; ಸೂರಜ್ ಪ್ರೊಡಕ್ಷನ್ಸ್‌ನ ಒಂಬತ್ತನೇ ಸಿನಿಮಾ 2027ರ ಜನವರಿಯಲ್ಲಿ ಸೆಟ್ಟೇರಲಿದೆ.
ಒಂದೊಂದು ಸಿನಿಮಾದ ಹಿಂದೆಯೂ ಒಂದೊಂದು ಕನಸಿರುತ್ತದೆ. ಆ ಕನಸುಗಳಿಗೆ ವಿಭಿನ್ನ ಕಥೆಗಳ ಸ್ಪರ್ಶ ನೀಡಿ, ಪ್ರೇಕ್ಷಕರ ಮುಂದೆ ಹೊಸ ಅನುಭವಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಇದೀಗ ಮತ್ತೊಂದು ಸಿನಿಮಾ ಸಾಹಸಕ್ಕೆ ಕೈಹಾಕಿದ್ದಾರೆ. ಈ ಬಾರಿ ಅವರ ನಿರ್ಮಾಣ ಸಂಸ್ಥೆ ಸೂರಜ್ ಪ್ರೊಡಕ್ಷನ್ಸ್‌ನಿಂದ ಬರಲಿರುವುದು ‘ಪ್ರೊಡಕ್ಷನ್ ನಂಬರ್ 9’. ವಿಶೇಷವೆಂದರೆ, ಈ ಹೊಸ ಚಿತ್ರದ ಘೋಷಣೆ ನಿರ್ಮಾಪಕರ ಹುಟ್ಟುಹಬ್ಬದ ಸಂಭ್ರಮದ ಜತೆಗೆ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಹೊರಬಂದಿದೆ.

2027ರ ಜನವರಿಯಲ್ಲಿ ಮುಹೂರ್ತ ಆಚರಿಸಿಕೊಳ್ಳಲಿರುವ ಈ ಚಿತ್ರದ ಕುರಿತು ವಿಶೇಷ ಟೀಸರ್ ಕೂಡ ಬಿಡುಗಡೆಯಾಗಿದೆ. ಯಾವುದೇ ದೊಡ್ಡ ಸುಳಿವು ನೀಡದೆ, ಚಿತ್ರದ ಶೀರ್ಷಿಕೆ ಮತ್ತು ಘೋಷಣೆಯ ಮೂಲಕವೇ ಕುತೂಹಲ ಮೂಡಿಸಿರುವ ಟೀಸರ್, ಸೂರಜ್ ಪ್ರೊಡಕ್ಷನ್ಸ್‌ನ ಮುಂದಿನ ಸಿನಿಮಾ ಹೇಗಿರಬಹುದು ಎಂಬ ಪ್ರಶ್ನೆಯನ್ನು ಸಿನಿಪ್ರಿಯರಲ್ಲಿ ಹುಟ್ಟುಹಾಕಿದೆ.

ಕಥೆಗಳ ಆಯ್ಕೆಯಲ್ಲಿ ವಿಭಿನ್ನತೆ, ನಿರ್ಮಾಣದಲ್ಲಿ ಹೊಸತನ, ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳ ನಿರ್ಮಾಪಕರೆಂದು ಗುರುತಿಸಿಕೊಂಡಿರುವ ರಮೇಶ್ ರೆಡ್ಡಿ, ಕೇವಲ ವಾಣಿಜ್ಯ ಲೆಕ್ಕಾಚಾರಕ್ಕೆ ಸೀಮಿತವಾಗದೆ ವಿಭಿನ್ನ ಕಥೆಗಳಿಗೆ ಬೆಂಬಲ ನೀಡುತ್ತಾ ಬಂದವರು. ರಾಷ್ಟ್ರ ಪ್ರಶಸ್ತಿ ಗೌರವ ಪಡೆದ ‘ನಾತಿಚರಾಮಿ’, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ‘ಗಾಳಿಪಟ 2’ ಸೇರಿದಂತೆ ಹಲವು ಚಿತ್ರಗಳ ಮೂಲಕ ತಮ್ಮ ನಿರ್ಮಾಣದ ಅಭಿರುಚಿಯನ್ನು ಸಾಬೀತುಪಡಿಸಿದ್ದಾರೆ.
ಇತ್ತೀಚೆಗೆ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ ‘45’ ಚಿತ್ರವನ್ನು ಬಹು ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ರಮೇಶ್ ರೆಡ್ಡಿರವರು, ಇದೀಗ ಒಂಬತ್ತನೇ ನಿರ್ಮಾಣದತ್ತ ಹೆಜ್ಜೆ ಇಟ್ಟಿದ್ದಾರೆ.

ಒಂದೇ ಮಾದರಿಯ ಸಿನಿಮಾಗಳಿಗೆ ಅಂಟಿಕೊಳ್ಳದೆ, ವಿಭಿನ್ನ ಪ್ರಯತ್ನಗಳಿಗೆ ಅವಕಾಶ ಕಲ್ಪಿಸುವ ಅವರ ನಿರ್ಮಾಣ ಪಯಣದಲ್ಲಿ ‘ಪ್ರೊಡಕ್ಷನ್ ನಂಬರ್ 9’ ಮತ್ತೊಂದು ಹೊಸ ಅಧ್ಯಾಯವಾಗುವ ನಿರೀಕ್ಷೆಯಿದೆ.
ಯಾರು ನಿರ್ದೇಶಕರು? ಯಾರಿಗೆ ನಾಯಕನ ಪಟ್ಟ? ಎಂಬುದು ನಿಗೂಢವಾಗಿದೆ.
ಸದ್ಯಕ್ಕೆ ಚಿತ್ರದ ಶೀರ್ಷಿಕೆಯನ್ನು ‘ಪ್ರೊಡಕ್ಷನ್ ನಂಬರ್ 9’ ಎಂದೇ ಘೋಷಿಸಲಾಗಿದೆ. ನಿರ್ದೇಶಕರ ಹೆಸರು, ನಾಯಕ-ನಾಯಕಿ, ತಾರಾಗಣ, ತಾಂತ್ರಿಕ ಬಳಗ ಹಾಗೂ ಕಥೆಯ ಕುರಿತಂತೆ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಈ ಎಲ್ಲ ವಿವರಗಳನ್ನು ಹಂತ ಹಂತವಾಗಿ ಪ್ರಕಟಿಸುವ ಯೋಜನೆಯಲ್ಲಿದೆ.
ಹೀಗಾಗಿ ಈ ಚಿತ್ರದ ಹಿಂದಿರುವ ಕಥೆ ಯಾವುದು? ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಲಿದೆಯೇ ಅಥವಾ ಜನಪ್ರಿಯ ತಾರೆಯರ ತಂಡವೇ ಒಂದಾಗಲಿದೆಯೇ? ಎಂಬ ಪ್ರಶ್ನೆಗಳು ಈಗಿನಿಂದಲೇ ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿವೆ.

ಹುಟ್ಟುಹಬ್ಬದ ಉಡುಗೊರೆಯಾಗಿ ಅಭಿಮಾನಿಗಳಿಗೆ ಹೊಸ ಭರವಸೆ ನೀಡಿ, ತಮ್ಮ ಹುಟ್ಟುಹಬ್ಬದ ವಿಶೇಷ ದಿನದಂದು ಹೊಸ ಚಿತ್ರದ ಘೋಷಣೆ ಮಾಡುವ ಮೂಲಕ ರಮೇಶ್ ರೆಡ್ಡಿ ಅವರು ತಮ್ಮ ಸಂಭ್ರಮವನ್ನು ಚಿತ್ರರಂಗದ ಸ್ನೇಹಿತರು, ಅಭಿಮಾನಿಗಳು ಹಾಗೂ ಸಿನಿಪ್ರಿಯರೊಂದಿಗೆ ಹಂಚಿಕೊಂಡಿದ್ದಾರೆ.
ತಮ್ಮ ಸಂಸ್ಥೆಗೆ ಸದಾ ಪ್ರೀತಿ ಮತ್ತು ಪ್ರೋತ್ಸಾಹ ನೀಡುತ್ತಿರುವ ಎಲ್ಲರ ಆಶೀರ್ವಾದ ಹೊಸ ಪ್ರಯತ್ನಕ್ಕೂ ಇರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ದೀಪಾವಳಿಯ ಬೆಳಕಿನೊಂದಿಗೆ ಪ್ರಕಟವಾದ ‘ಪ್ರೊಡಕ್ಷನ್ ನಂಬರ್ 9’ ಹೊಸ ವರ್ಷದ ಆರಂಭದಲ್ಲೇ ಸಿನಿಮಾ ಲೋಕಕ್ಕೆ ಕಾಲಿಡಲು ಸಜ್ಜಾಗಿದೆ.
ಹೃದಯವಂತ, ಕ್ರಿಯಾಶೀಲ ಸಹೃದಯಿ, ನಿರ್ಮಾಪಕ ಶ್ರೀ ರಮೇಶ್ ರೆಡ್ಡಿ ಅವರಿಗೆ ದೇವರು ಅವರ ಕನಸುಗಳನ್ನು ನನಸಾಗಿಸಲಿ, ಆಯಸ್ಸು, ಆರೋಗ್ಯ, ಐಶ್ವರ್ಯ, ನೆಮ್ಮದಿ ಹಾಗೂ ಕೀರ್ತಿಯನ್ನು ತಂದು ಕೊಡಲಿ ಎಂದು ಈ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor