ತಾರಾ ಅನುರಾಧಾ ಬೆಂಬಲದೊಂದಿಗೆ ಗಮನ ಸೆಳೆದ ‘ರಾಶಿ’ ಟ್ರೇಲರ್!
ಆದಿತ್ಯ ಶಶಿಕುಮಾರ್ ಅಭಿನಯದ ಕೌಟುಂಬಿಕ ಕಥಾಹಂದರದ ಚಿತ್ರಕ್ಕೆ ನವೆಂಬರ್ 13ರಂದು ತೆರೆ ಭಾಗ್ಯ
ನಟ ಆದಿತ್ಯ ಶಶಿಕುಮಾರ್ ನಾಯಕನಾಗಿ ಅಭಿನಯಿಸಿರುವ ‘ರಾಶಿ’ ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಹಿರಿಯ ನಟಿ ತಾರಾ ಅನುರಾಧಾ ಹಾಗೂ ಹಿರಿಯ ನಟ ಶಶಿಕುಮಾರ್ ಚಿತ್ರದ ತಂಡಕ್ಕೆ ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಡಿ ಬೀಟ್ಸ್‌ನ ಶೈಲಜಾ ನಾಗ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.

ಅಖಿಲೇಶ್ ನಿರ್ಮಾಣದ ಈ ಚಿತ್ರಕ್ಕೆ ವಿಜಯ್ ಪಾಳೇಗಾರ್ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಂಗೀತಪ್ರಿಯರ ಗಮನ ಸೆಳೆದಿವೆ. ತಾಯಿ-ಮಗನ ಬಾಂಧವ್ಯ, ಪ್ರೀತಿ ಹಾಗೂ ಕೌಟುಂಬಿಕ ಭಾವನೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ.

ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ಶಿವು ಎಂಬ ಮುಗ್ಧ ಹಳ್ಳಿಯ ಯುವಕನಾಗಿ ಕಾಣಿಸಿಕೊಂಡರೆ, ಸಮೀಕ್ಷಾ ರಾಧ್ಯಾ ಎಂಬ ಕಾಲೇಜು ವಿದ್ಯಾರ್ಥಿನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಾಯಿಯ ಮೇಲಿನ ಪ್ರೀತಿ ಮತ್ತು ಪ್ರೇಮದ ನಡುವಿನ ಭಾವನಾತ್ಮಕ ಸಂಘರ್ಷ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ತಮ್ಮ ತಂದೆ ಶಶಿಕುಮಾರ್ ಅವರ ಸಾಧನೆ ತನಗೆ ಸದಾ ಪ್ರೇರಣೆ ಎಂದು ಹೇಳಿಕೊಂಡ ಆದಿತ್ಯ, ಚಿತ್ರರಂಗದಲ್ಲಿ ಸ್ವಂತ ಗುರುತನ್ನು ಮೂಡಿಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದರು. ಇನ್ನು ನಿರ್ದೇಶಕ ವಿಜಯ್ ಪಾಳೇಗಾರ್, ತಾಯಿ-ಮಗನ ಸಂಬಂಧದ ಸೂಕ್ಷ್ಮ ಭಾವನೆಗಳನ್ನು ತೆರೆಗೆ ತರುವ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.
ಟ್ರೇಲರ್ ವೀಕ್ಷಿಸಿದ ಹಿರಿಯ ನಟ ಶಶಿಕುಮಾರ್, ಚಿತ್ರದ ಗ್ರಾಮೀಣ ಸೊಗಡು, ಹಾಸ್ಯ ಹಾಗೂ ಕೌಟುಂಬಿಕ ಸನ್ನಿವೇಶಗಳನ್ನು ಮೆಚ್ಚಿಕೊಂಡು, ಕನ್ನಡ ಪ್ರೇಕ್ಷಕರು ಚಿತ್ರಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ನಟಿ ವೀಣಾ ಸುಂದರ್, ತಬಲಾ ನಾಣಿ, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್ ಗೊಬ್ಬರಗಾಲ, ಉಗ್ರಂ ರವಿ, ಭಜರಂಗಿ ಪ್ರಸನ್ನ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಟುಂಬದ ಬಾಂಧವ್ಯ ಮತ್ತು ಪ್ರೀತಿಯ ಭಾವನಾತ್ಮಕ ಕಥೆಯೊಂದಿಗೆ ‘ರಾಶಿ’ ನವೆಂಬರ್ 13ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.









