ವಿದೂಷಕ’ ನಿಗಾಗಿ ಆರು ವರ್ಷಗಳ ಶ್ರಮ ನವೆಂಬರ್ 20ಕ್ಕೆ ತೆರೆಗೆ!
ಯಶವಂತ್ ಬಿಜೂರ್ ನಿರ್ದೇಶನದ ಕಾಮಿಡಿ ಕ್ರೈಮ್ ಥ್ರಿಲ್ಲರ್‌ಗೆ ಕೆ.ಎಂ. ಚೈತನ್ಯ ಮೆಚ್ಚುಗೆ
ವರ್ಷಗಳ ಕನಸು, ಸತತ ಪರಿಶ್ರಮ ಮತ್ತು ಸಿನಿಮಾ ಮೇಲಿನ ಪ್ರೀತಿಯ ಫಲವಾಗಿ ಮೂಡಿಬಂದಿರುವ ಚಿತ್ರ ‘ವಿದೂಷಕ’. ಯಶ್ ಬಿಜೂರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಯಶವಂತ್ ಬಿಜೂರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.

ನಿರ್ದೇಶಕ ಕೆ.ಎಂ. ಚೈತನ್ಯ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಿನಿಮಾ ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ನಟನೆ ಹಾಗೂ ಡಬ್ಬಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಯಶವಂತ್ ಬಿಜೂರ್, ಸಿನಿಮಾ ನಿರ್ದೇಶನದ ಕನಸನ್ನು ‘ವಿದೂಷಕ’ ನ ಮೂಲಕ ನನಸಾಗಿಸಿಕೊಂಡಿದ್ದಾರೆ. ಸುಮಾರು ಮೂರು ವರ್ಷಗಳ ಪರಿಶ್ರಮದಲ್ಲಿ ಸಿದ್ಧಗೊಂಡಿರುವ ಈ ಚಿತ್ರ ಕಾಮಿಡಿ ಆಧಾರಿತ ಕ್ರೈಮ್ ಥ್ರಿಲ್ಲರ್ ಆಗಿದೆ. ನಾಯಕನಿಗೆ ಇರುವ ‘ಗೈನೊಫೋಬಿಯಾ’ ಎಂಬ ಭಯದ ಸುತ್ತ ಕಥೆ ಸಾಗಲಿದ್ದು, ನೈಜ ಘಟನೆಯೊಂದರಿಂದ ಪ್ರೇರಣೆ ಪಡೆದು ಚಿತ್ರಕಥೆ ರೂಪಿಸಲಾಗಿದೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೆ.ಎಂ. ಚೈತನ್ಯ, ಯಶವಂತ್ ಅವರ ಹಲವು ವರ್ಷಗಳ ಚಿತ್ರರಂಗದ ಅನುಭವ ಹಾಗೂ ಸಿನಿಮಾ ನಿರ್ಮಿಸಿ ನಿರ್ದೇಶಿಸಿರುವ ಪ್ರಯತ್ನವನ್ನು ಶ್ಲಾಘಿಸಿದರು.
ನಾಯಕ ರವಿ ಸಾಲಿಯಾನ್ ಚಿತ್ರದ ಅವಕಾಶ ಹಾಗೂ ತಂಡದ ಸಹಕಾರಕ್ಕೆ ಧನ್ಯವಾದ ತಿಳಿಸಿದರೆ, ನಾಯಕಿ ಅಮೃತಾ ಉಪಾರ್ ಪತ್ರಕರ್ತೆಯಾಗಿ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡಿದ ಬಳಿಕ ‘ವಿದೂಷಕ’ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಸಂತಸ ಹಂಚಿಕೊಂಡರು.

ಛಾಯಾಗ್ರಾಹಕ ಪರಮೇಶ್ವರ್, ನಟರಾದ ಹೆದ್ದೂರು ಮಂಜುನಾಥ್ ಶೆಟ್ಟಿ, ನಿಪುಣ್, ಸುಹಾಸ್ ಅತ್ರೇಯಸ್, ಸಂಕಲನಕಾರ ನಾಗೇಂದ್ರ ಅರಸ್ ಹಾಗೂ ಭುವಿ ಮ್ಯೂಸಿಕ್‌ನ ವಿಜಯ್ ರೈ ಸೇರಿದಂತೆ ಚಿತ್ರತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಾಸ್ಯ ಮತ್ತು ಕ್ರೈಮ್ ಥ್ರಿಲ್ಲರ್ ಅಂಶಗಳೊಂದಿಗೆ ಕುತೂಹಲ ಮೂಡಿಸಿರುವ ‘ವಿದೂಷಕ’ ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ರಂಜಿಸಲಿದೆ ಎಂಬುದಕ್ಕೆ ನವೆಂಬರ್ 20ರಂದು ಉತ್ತರ ಸಿಗಲಿದೆ.










