ಮಗನ ಸಿನಿಮಾ ಹುಚ್ಚಿಗೆ ತಾಯಿಯ ಬೆವರಿನ ಹಣದ ಬಂಡವಾಳ! ‘ಮಾರಿಗೆ ದಾರಿ’ಗೆ ಪ್ರೇಕ್ಷಕರೇ ಆಸರೆ!

ಇದು ಕೇವಲ ಸಿನಿಮಾದ ಕಥೆಯಲ್ಲ; ಒಬ್ಬ ತಾಯಿಯ ತ್ಯಾಗ, ಮಗನ ಮೇಲಿನ ಮಮತೆ ಮತ್ತು ಆಕೆಯ ಜೀವನಪೂರ್ತಿ ಪರಿಶ್ರಮದ ಕಥೆ.

ರಾಧಾ ಎಂಬ ತಾಯಿ ಜೀವನಪೂರ್ತಿ ಬೇರೆಯವರ ಮನೆಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ಬೆವರು ಸುರಿಸಿ ದುಡಿದು ಮೂವರು ಮಕ್ಕಳನ್ನು ಸಾಕಿ ಬೆಳೆಸಿದ್ದಾರೆ. ಹಿರಿಯ ಮಗನಿಗೆ ಸಿನಿಮಾದ ಮೇಲೆ ಪ್ರೀತಿಗಿಂತಲೂ ಸಿನಿಮಾ ಹುಚ್ಚು. ನಟನಾಗಬೇಕು, ಹೀರೋ ಆಗಬೇಕು, ಸ್ವಂತ ಸಿನಿಮಾ ಮಾಡಬೇಕು ಎಂಬುದು ಆತನ ಆಸೆ. ಆದರೆ ಆತನಿಗೆ ಅಭಿನಯದ ಗಂಧಗಾಳಿಯೂ ಇಲ್ಲ ಎಂಬುದು ಸ್ವತಃ ತಾಯಿಯ ಮಾತು!

ಆದರೂ ಮಗನ ಆಸೆಗೆ ತಾಯಿ ಅಡ್ಡಿಯಾಗಲಿಲ್ಲ. ಜೀವನಪೂರ್ತಿ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನೇ ಮಗನ ಸಿನಿಮಾ ಕನಸು ನನಸಾಗಲಿ ಎಂಬ ಉದ್ದೇಶದಿಂದ ನಿರ್ಮಾಣಕ್ಕೆ ನೀಡಿದ್ದಾರೆ. ಜೊತೆಗೆ ಮೈಮೇಲಿದ್ದ ಒಡವೆಗಳನ್ನು ಕೊಟ್ಟಿದ್ದಾರಂತೆ.ಹೀಗೆ ತಾಯಿಯ ಬೆವರಿನ ಹಣದಿಂದ ನಿರ್ಮಾಣಗೊಂಡ ಚಿತ್ರವೇ ‘ಮಾರಿಗೆ ದಾರಿ’.

ಸಿನಿಮಾ ಪೂರ್ಣಗೊಂಡ ಬಳಿಕ ಮಗ ತಾಯಿಗೆ ಟ್ರೇಲರ್ ತೋರಿಸಿದಾಗ ಅದನ್ನು ಕಂಡು ಆಕೆ ಕ್ಷಣಕಾಲ ಮೂಕರಾಗುತ್ತಾರೆ. ಮಗನಿಗೆ ಅಭಿನಯದ ಅನುಭವವೇ ಇಲ್ಲದಿದ್ದರೂ ಸಿನಿಮಾ ಮಾಡುವ ಹಠಕ್ಕೆ ಬಿದ್ದು ತನ್ನ ಕಷ್ಟದ ಹಣವನ್ನೆಲ್ಲಾ ಹೂಡಿರುವುದನ್ನು ಕಂಡ ತಾಯಿಯ ಮನಸ್ಸಿನಲ್ಲಿ ಮೂಡಿದ ಭಾವನೆಗಳು ನಿಜಕ್ಕೂ ಹೃದಯಸ್ಪರ್ಶಿ.

ಒಬ್ಬ ಪತ್ರಕರ್ತನಾಗಿ ಈ ತಾಯಿಯ ನಿಷ್ಕಲ್ಮಶ ಪ್ರೀತಿ ಮತ್ತು ತ್ಯಾಗ ನನ್ನ ಮನಸ್ಸನ್ನು ಮುಟ್ಟಿದೆ. ಇದು ಯಾವುದೇ ಸಿನಿಮಾ ಪ್ರಚಾರದ ಗಿಮಿಕ್ ಅಲ್ಲ. ಆ ತಾಯಿಯ ಬೆವರಿನ ಹಣಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಸಿಗಬೇಕು ಎಂಬ ಮಾನವೀಯ ಮನವಿ.

ಪ್ರಿಯ ಕನ್ನಡ ಪ್ರೇಕ್ಷಕರೇ, ‘ಮಾರಿಗೆ ದಾರಿ’ ಚಿತ್ರಕ್ಕೆ ಒಂದು ಅವಕಾಶ ನೀಡಿ. ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡಿ. ಚಿತ್ರದ ಕಲಾವಿದರು ಮತ್ತು ತಂತ್ರಜ್ಞರನ್ನು ಪ್ರೋತ್ಸಾಹಿಸಿ.

ಮಗನ ಸಿನಿಮಾ ಹುಚ್ಚಿಗೆ ಬಂಡವಾಳ ಹೂಡಿದ ತಾಯಿಯ ತ್ಯಾಗಕ್ಕೆ ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಿಜವಾದ ಗೌರವ.

ಮಗನಿಗೆ ಸಿನಿಮಾ ಹುಚ್ಚು… ತಾಯಿಗೆ ಮಗನ ಸಂತೋಷವೇ ಬದುಕಿನ ಕನಸು! ‘ಮಾರಿಗೆ ದಾರಿ’ಗೆ ಪ್ರೇಕ್ಷಕರೇ ದಾರಿ ತೋರಿಸಲಿ!

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor