ʻಹುಬ್ಬಳ್ಳಿ ಹಂಟರ್ಸ್ʼ ಚಿತ್ರದ ‘ಹುಬ್ಬಳ್ಳಿ ದ ಜಾದು..’ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿ ಪ್ರತಾಪ್ ಸಿಂಹ ಶುಭಹಾರೈಕೆ.

ಬೆಂಗಳೂರು: ಉತ್ತರ ಕರ್ನಾಟಕದ ವಿಶಿಷ್ಟ ಭಾಷಾ ಸೊಗಡು ಮತ್ತು ಹಾಸ್ಯದ ಹಿನ್ನೆಲೆಯನ್ನಿಟ್ಟುಕೊಂಡು ತಯಾರಾಗುತ್ತಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಬಹುನಿರೀಕ್ಷಿತ ‘ಹುಬ್ಬಳ್ಳಿ ದ ಜಾದು..’ ಲಿರಿಕಲ್ ವಿಡಿಯೋ ಹಾಡು ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಜನಪ್ರಿಯ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿರುವ ಈ ಇಂಪಾದ ಗೀತೆಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಪ್ರಸನ್ನ ಕೇಶವ ಕೆ.ಎಸ್. ಸಂಗೀತ ಸಂಯೋಜಿಸಿರುವ ಈ ಹಾಡಿಗೆ ತ್ರಿಲೋಕ್ ತ್ರಿವಿಕ್ರಮ ಅರ್ಥಪೂರ್ಣ ಸಾಹಿತ್ಯ ರಚಿಸಿದ್ದು, ಗಾಯಕ ವ್ಯಾಸರಾಜ್ ಸೋಸಲೆ ಧ್ವನಿ ನೀಡಿದ್ದಾರೆ.

ಹಾಡು ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, “ನಾನು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲದಿಂದಲೂ ಉತ್ತರ ಕರ್ನಾಟಕದ ಜನರ ಜೊತೆ ಒಡನಾಟ ಹೊಂದಿದ್ದೇನೆ. ಹಾಗಾಗಿ, ಅಲ್ಲಿನ ಭಾಷೆ, ಶೈಲಿ ಹಾಗೂ ಬೈಗುಳಗಳು ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತವೆ. ಅಲ್ಲಿನ ಬೈಗುಳಗಳಲ್ಲೂ ಒಂದು ರೀತಿಯ ಮುಗ್ಧತೆ ಹಾಗೂ ಅಕ್ಕರೆ ಇರುತ್ತದೆ. ಉತ್ತರ ಕರ್ನಾಟಕದ ಭಾಷೆ ನೇರವಾಗಿ ಮನಸ್ಸಿಗೆ ತಟ್ಟುವಂತಹ ಅಪರೂಪದ ಆಪ್ತತೆಯನ್ನು ಹೊಂದಿದೆ. ಈ ಚಿತ್ರದ ಮೂಲಕ ಆ ಭಾಷೆಯ ಸೊಗಡು ಇಡೀ ಕರ್ನಾಟಕದ ಜನರನ್ನು ತಲುಪಲಿ ಹಾಗೂ ಸಿನಿಮಾ ದೊಡ್ಡ ಯಶಸ್ಸು ಕಾಣಲಿ” ಎಂದು ಹಾರೈಸಿದರು.

ಚಿತ್ರದಲ್ಲಿ ‘ಪಾಂಡು ಅಣ್ಣ’ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಖ್ಯಾತ ನಟ ಪ್ರಮೋದ್ ಶೆಟ್ಟಿ ಚಿತ್ರದ ಭಾಷಾ ಪ್ರಯೋಗದ ಬಗ್ಗೆ ಮಾತನಾಡುತ್ತಾ, “ಇದು ಸಂಪೂರ್ಣ ಮನರಂಜನೆಯಿಂದ ಕೂಡಿದ, ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಸಿನಿಮಾ. ಆರಂಭದಲ್ಲಿ ಕಥೆ ಕೇಳಿದಾಗ, ಇಡೀ ಚಿತ್ರವನ್ನು ಉತ್ತರ ಕರ್ನಾಟಕ ಸ್ಲ್ಯಾಂಗ್‌ನಲ್ಲೇ ಮಾಡಬೇಕೇ ಅಥವಾ ಬೆಂಗಳೂರು ಕನ್ನಡವನ್ನೂ ಬೆರೆಸಬೇಕೇ ಎಂಬ ಬಗ್ಗೆ ನಿರ್ದೇಶಕ ಸಾಮರ್ಥ್ ಮತ್ತು ನಿರ್ಮಾಪಕರ ಜೊತೆ ಸಾಕಷ್ಟು ಚರ್ಚೆ ನಡೆಯಿತು.

ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಕೆಲವರಿಗಿತ್ತು. ಆದರೆ, ಹಿಂದೆ ಕರಾವಳಿ ಕನ್ನಡ ಕೇವಲ ಹಾಸ್ಯಕ್ಕೆ ಸೀಮಿತವಾಗಿದ್ದು, ಇಂದು ಅದೇ ಭಾಷೆಯ ಸಿನಿಮಾಗಳನ್ನು ಕನ್ನಡಿಗರು ಮುಗಿಬಿದ್ದು ನೋಡುತ್ತಿರುವುದನ್ನು ಉದಾಹರಣೆಯಾಗಿ ನೀಡಿ ಹಠ ಹಿಡಿದು ಪೂರ್ಣ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಶೈಲಿಯಲ್ಲೇ ಸಿನಿಮಾ ಮಾಡಲು ಒಪ್ಪಿಸಿದೆ. ಆ ಭಾಗದಲ್ಲಿ ಅದ್ಭುತ ಪ್ರತಿಭೆಗಳಿದ್ದು, ವಿವಿಧ ಪ್ರಾದೇಶಿಕ ಭಾಷೆಗಳು ಚಿತ್ರರಂಗಕ್ಕೆ ಬಂದಷ್ಟೂ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚುತ್ತದೆ” ಎಂದು ಚಿತ್ರೀಕರಣದ ದಿನಗಳನ್ನು ಮೆಲುಕು ಹಾಕಿದರು.

ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಸಂತೋಷ್ ಕುಮಾರ್ ಕೆ.ಸಿ. ನಿರ್ಮಿಸಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೋಳ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿರುವ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್ಸ್‌ ತಂಡವೊಂದು ಈ ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿದೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ನಮನ್ ಅರೋರ, ಚೇತನ್ ಮಾರಂಬೀಡ್, ಪವನ್ ಕೃಷ್ಣರಾವ್ ಕುಲಕರ್ಣಿ, ಸುಮಿತ್ ಸಂಕೋಜಿ, ಧನ್ಯಶ್ರೀ ಸುಜಿತ್, ದೀಪಕ್ ರಾವ್, ಶಿವು ಎನ್.ಜಿ., ವನು ಪಾಟೀಲ್, ಪವನ್ ಆನೆಗೇರಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಮೇಶ್ ಭಟ್, ವಿನಯ್ ದೊಡ್ಡಮನಿ ಸೇರಿದಂತೆ ದೊಡ್ಡ ತಾರಾಗಣವಿದೆ.

ಧಾರವಾಡ ಮತ್ತು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವರ್ ಹಾಗೂ ಚೇತನ್ ಮರಂಬೀದ್ ಸಂಭಾಷಣೆ ಹೆಣೆದಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಪ್ರಸನ್ನ ಕೇಶವ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಕೂಡ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸದ್ಯ ಮೊದಲ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರತಂಡ, ಶೀಘ್ರದಲ್ಲೇ ಟೀಸರ್ ಹಾಗೂ ಉಳಿದ ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಸಿನಿಮಾವು ಡಿಸೆಂಬರ್ 11ರಂದು ತೆರೆಕಾಣಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor