ರಾಶಿ ಚಿತ್ರ ವಿಮರ್ಶೆ – ಪ್ರೀತಿಯ ಹಿಂದೆ ಕುಟುಂಬದ ಜವಾಬ್ದಾರಿಯ ಪಾಠ, ಕ್ಲೈಮ್ಯಾಕ್ಸ್ನಲ್ಲಿ ನಿರ್ದೇಶಕರ ಅನಿರೀಕ್ಷಿತ ಆಟ.
ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ
‘ರಾಶಿ’ – ಪ್ರೀತಿಯ ಹಿಂದೆ ಕುಟುಂಬದ ಜವಾಬ್ದಾರಿಯ ಪಾಠ; ಕ್ಲೈಮ್ಯಾಕ್ಸ್ನಲ್ಲಿ ನಿರ್ದೇಶಕರ ಅನಿರೀಕ್ಷಿತ ಆಟ!
ರೇಟಿಂಗ್: ⭐⭐⭐ / 5
ಕಥೆ ಮತ್ತು ನಿರ್ಮಾಪಕರು – ಅಖಿಲೇಶ್ ಎಂ. ಮಹಾಲಿಂಗಯ್ಯ
ನಿರ್ದೇಶನ – ವಿಜಯ್ ಪಾಳೇಗಾರ್
ಛಾಯಾಗ್ರಹಣ (DOP) – ನವೀನ್ ಸೂರ್ಯ
ಸಂಗೀತ ನಿರ್ದೇಶನ – ವಿಜಯ್ ಪಾಳೇಗಾರ್
ಸಂಕಲನ (Editing) – ಕೆ.ಎಂ. ಪ್ರಕಾಶ್
ಕಲಾವಿದರು –
ಆದಿತ್ಯ ಶಶಿಕುಮಾರ್, ಸಮೀಕ್ಷಾ, ರಮೇಶ್ ಇಂದಿರಾ, ತಬಲಾ ನಾಣಿ, ವೀಣಾ ಸುಂದರ್, ಸಂಗೀತಾ ಅನಿಲ್, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್ ಗೋಬ್ರಗಾಲ, ಕರಿಸುಬ್ಬು, ಭಜರಂಗಿ ಪ್ರಸನ್ನ, ಉಗ್ರಂ ರವಿ,
ವರ್ಧನ್ ತೀರ್ಥಹಳ್ಳಿ, ಪ್ರವೀಣ್ ಕುಮಾರ್ ತಿಮ್ಮಯ್ಯ ಮುಂತಾದವರು.

ಕೆಲವು ಪ್ರೇಮಕಥೆಗಳು ಕಾಲೇಜಿನ ಕ್ಯಾಂಪಸ್ನಲ್ಲಿ ಆರಂಭವಾಗಿ ಪ್ರೀತಿಯಲ್ಲೇ ಮುಕ್ತಾಯವಾಗುತ್ತವೆ. ಇನ್ನು ಕೆಲವು ಪ್ರೇಮಕಥೆಗಳು ಎರಡು ಕುಟುಂಬಗಳ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗುತ್ತವೆ. ಆದರೆ ‘ರಾಶಿ’ ಚಿತ್ರ ಪ್ರೀತಿಯ ಜೊತೆಗೆ ತಾಯಿಯ ತ್ಯಾಗ, ತಂದೆಯ ಬೇಜವಾಬ್ದಾರಿತನ, ಮಗನ ಜವಾಬ್ದಾರಿ ಹಾಗೂ ರಾಜಕೀಯ ಮಹತ್ವಾಕಾಂಕ್ಷೆಯನ್ನೂ ಬೆಸೆದು ವಿಭಿನ್ನ ಕಥೆ ಹೇಳಲು ಪ್ರಯತ್ನಿಸಿದೆ.
ಜಾತಿಗಿಂತ ಪ್ರೀತಿ ದೊಡ್ಡದು ಎನ್ನುವ ರಾಜಕಾರಣಿ,
ತನ್ನ ಕ್ಷೇತ್ರದಲ್ಲಿ ಯಾವುದೇ ಜಾತಿಯ ಯುವಕ-ಯುವತಿ ಪ್ರೀತಿಸಿದರೂ ಅವರ ಪರ ನಿಂತು, ಎರಡೂ ಕುಟುಂಬಗಳಿಗೆ ಬುದ್ಧಿ ಹೇಳಿ ಮದುವೆ ಮಾಡಿಸುವ ರಾಜಕಾರಣಿ. ಆತನ ಪ್ರಕಾರ ಜಾತಿ ಎಂಬುದಕ್ಕಿಂತ ಗಂಡು ಮತ್ತು ಹೆಣ್ಣು ಎಂಬ ಎರಡು ಜಾತಿಗಳಷ್ಟೇ ಇರುವುದು. ಹುಡುಗನಿಗೆ ಕೆಲಸವಿಲ್ಲದಿದ್ದರೆ ಕೆಲಸ ಕೊಡಿಸಿ, ಇಬ್ಬರೂ ನೆಮ್ಮದಿಯಿಂದ ಬದುಕುವಂತೆ ಮಾಡುವ ವಿಶಾಲ ಮನೋಭಾವ ಆತನದು. ಆದರೆ ಇದೇ ವ್ಯಕ್ತಿಯ ಮಗಳು ಪ್ರೀತಿಯ ಬಲೆಯಲ್ಲಿ ಬಿದ್ದಾಗ ಆತನ ನಿಲುವು ಏನಾಗಬಹುದು? ಎಂಬ ಕುತೂಹಲವೇ ಚಿತ್ರದ ಕಥೆಗೆ ಪ್ರಮುಖ ತಿರುವು ನೀಡುತ್ತದೆ.

ಕಥಾ ನಾಯಕಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುತ್ತಾಳೆ. ಅದೇ ಕಾಲೇಜಿಗೆ ಹಳ್ಳಿಯಿಂದ ವಿದ್ಯಾಭ್ಯಾಸಕ್ಕಾಗಿ ಬಂದಿರುವ ಕಥಾನಾಯಕ ಶಿವರಾಜ್ ಹಿರಿಯ ವಿದ್ಯಾರ್ಥಿಗಳ ರ್ಯಾಗಿಂಗ್ಗೆ ಸಿಲುಕುತ್ತಾನೆ. ಆ ಸಂದರ್ಭದಲ್ಲಿ ಆತನನ್ನು ರಕ್ಷಿಸಲು ನಾಯಕಿ, ‘ನಾನು ಇವನನ್ನು ಪ್ರೀತಿಸುತ್ತಿದ್ದೇನೆ’ ಎಂದು ಹೇಳಿ ಪರಿಸ್ಥಿತಿಯನ್ನು ನಿಭಾಯಿಸುತ್ತಾಳೆ. ಆದರೆ ಪರಿಚಯವೇ ಇಲ್ಲದ ಇವರಿಬ್ಬರ ನಡುವೆ ಈ ಸುಳ್ಳು ಮಾತು ನಿಧಾನವಾಗಿ ಪ್ರೀತಿಯ ಕಿಡಿ ಹೊತ್ತಿಸುತ್ತದೆ.
ಆದರೆ ನಾಯಕಿಗೆ ಇದು ಕೇವಲ ಸಹಾಯ ಮಾಡುವ ಉದ್ದೇಶದಿಂದ ಹೇಳಿದ ಮಾತು. ಶಿವರಾಜ್ಗೆ ಮಾತ್ರ ಅದೇ ನಿಜವಾದ ಪ್ರೀತಿಯಾಗಿ ಬದಲಾಗುತ್ತದೆ. ಆಕೆಯ ಹಿಂದೆ ಬೀಳುವ ಆತ, ಓದು ಮತ್ತು ಭವಿಷ್ಯವನ್ನೇ ಮರೆತು ಪ್ರೀತಿಯಲ್ಲೇ ಮುಳುಗುತ್ತಾನೆ. ಒಂದು ಹಂತದಲ್ಲಿ ಆತನ ಪ್ರೀತಿಯ ಕಾಟದಿಂದ ಬೇಸತ್ತು ನಾಯಕಿ ದೂರವಾಗಲು ಪ್ರಯತ್ನಿಸುತ್ತಾಳೆ.

ತಾಯಿಯ ಕನಸು, ತಂದೆಯ ಕುಡಿತ, ಮಗನ ಜವಾಬ್ದಾರಿ!
ಚಿತ್ರದ ಮತ್ತೊಂದು ಪ್ರಮುಖ ಭಾಗ ಶಿವರಾಜ್ನ ಕುಟುಂಬದ ಸನ್ನಿವೇಶಗಳು. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ತಾಯಿ, ಮಗನನ್ನು ಒಳ್ಳೆಯ ಅಧಿಕಾರಿಯನ್ನಾಗಿ ಮಾಡಬೇಕು, ಮಗಳ ಮದುವೆ ಮಾಡಬೇಕು ಎಂಬ ಕನಸು ಕಾಣುತ್ತಿರುತ್ತಾಳೆ. ಆದರೆ ತಂದೆ ಮಾತ್ರ ಕುಡಿತದ ದಾಸನಾಗಿ ಕುಟುಂಬದ ಜವಾಬ್ದಾರಿಯಿಂದ ದೂರ ಉಳಿದಿರುತ್ತಾನೆ.
ಇಂತಹ ಪರಿಸ್ಥಿತಿಯಲ್ಲಿ ಓದುವುದಕ್ಕಾಗಿ ನಗರಕ್ಕೆ ಬಂದ ಮಗ ಪ್ರೀತಿಯ ಹಿಂದೆ ಬಿದ್ದು ತನ್ನ ಗುರಿಯನ್ನೇ ಮರೆತಿರುವುದು ತಾಯಿಯ ನೋವಿಗೆ ಕಾರಣವಾಗುತ್ತದೆ. ಅಪ್ಪನ ಆರೋಗ್ಯ ಗಂಭೀರವಾಗಿದೆ ಎಂಬ ಅಕ್ಕನ ಫೋನ್ ಕರೆ ಕೇಳಿ ಊರಿಗೆ ಬರುವ ಶಿವರಾಜ್ಗೆ ಅಪ್ಪ ಕುಡಿದು ತುರಾಡುತ್ತಿರುವ ನಿಜವಾದ ಸ್ಥಿತಿ ಕಂಡು ಮತ್ತಷ್ಟು ಆಕ್ರೋಶ ಬರುತ್ತದೆ.
ಮನೆಯಲ್ಲಾಗುವ ಜಗಳ, ತಾಯಿಯ ಆಕ್ರೋಶ, ಮಗನ ಅಸಹಾಯಕತೆ ಹಾಗೂ ಕುಡಿತದ ಚಟದಿಂದ ಕುಟುಂಬಕ್ಕೆ ಆಗಿರುವ ನೋವುಗಳು ಚಿತ್ರದ ಭಾವನಾತ್ಮಕ ಘಟ್ಟಗಳಲ್ಲಿ ಪ್ರಮುಖವಾಗುತ್ತವೆ. ತಂದೆಯ ಮೇಲಿನ ಸಿಟ್ಟಿನಲ್ಲಿ ಶಿವರಾಜ್ ಆಡುವ ಕಠಿಣ ಮಾತುಗಳು ತಾಯಿ ಮತ್ತು ತಂದೆ ಇಬ್ಬರಿಗೂ ಅಘಾತ ವಾಗುತ್ತದೆ. ನೀನು ಸತ್ತರೂ ನಿನಗೆ ಬೆಂಕಿ ಇಡಲು ಬರುವುದಿಲ್ಲ ಎಂದು ಹೋರಾಡುತ್ತಾನೆ.ಕೊನೆಗೆ ತಾನು ಓದಿ ಒಳ್ಳೆಯ ಕೆಲಸಕ್ಕೆ ಸೇರಿ ಕುಟುಂಬವನ್ನು ನೋಡಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ.

ಇದೇ ಸಂದರ್ಭದಲ್ಲಿ ಇಷ್ಟು ದಿನ ಪ್ರೀತಿಯನ್ನು ನಿರಾಕರಿಸುತ್ತಿದ್ದ ನಾಯಕಿಯೇ ಶಿವರಾಜ್ನನ್ನು ಹುಡುಕಿಕೊಂಡು ಆತನ ಊರಿಗೆ ಬರುತ್ತಾಳೆ. ಅಲ್ಲಿಂದ ಕಥೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ.
ಇಲ್ಲಿಂದಲೇ ಶುರುವಾಗುತ್ತದೆ ಅಸಲಿ ಸಂಘರ್ಷ!
ಶಿವರಾಜ್ ಪ್ರೀತಿಸುತ್ತಿರುವ ಹುಡುಗಿ ಬೇರಾರೂ ಅಲ್ಲ, ಆರಂಭದಲ್ಲಿ ಜಾತಿ-ಮತ ನೋಡದೆ ಪ್ರೇಮ ವಿವಾಹಗಳಿಗೆ ಬೆಂಬಲ ನೀಡುತ್ತಿದ್ದ ರಾಜಕಾರಣಿಯ ( ರಮೇಶ್ ಇಂದಿರಾ )ಮಗಳು ಎಂಬ ಸತ್ಯ ಹೊರಬೀಳುತ್ತದೆ.
ಆದರೆ ಕೆಲಸವಿಲ್ಲದ ಸಾಮಾನ್ಯ ಹಳ್ಳಿಯ ಹುಡುಗನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಕೊಡಲು ಆ ರಾಜಕಾರಣಿ ಒಪ್ಪುತ್ತಾನೆಯೇ? ಮತ್ತೊಂದೆಡೆ ತನ್ನ ರಾಜಕೀಯ ಭವಿಷ್ಯಕ್ಕಾಗಿ ಎಂಎಲ್ಎ ಟಿಕೆಟ್ ಪಡೆಯುವ ಕನಸು ಕಾಣುತ್ತಿರುವ ಆತ, ತನ್ನ ಸ್ನೇಹಿತನ ಎಂಎಲ್ಎ ಮಗನಿಗೆ ಮಗಳನ್ನು ಕೊಟ್ಟು ಮದುವೆ ಮಾಡಬೇಕೆಂಬ ಲೆಕ್ಕಾಚಾರದಲ್ಲಿರುತ್ತಾನೆ.
ಇಲ್ಲಿಂದ ಪ್ರೇಮಿಗಳ ನಡುವಿನ ಹೋರಾಟ, ಪೋಷಕರ ವಿರೋಧ, ರಾಜಕೀಯ ಲೆಕ್ಕಾಚಾರ ಮತ್ತು ಕುಟುಂಬದ ಭಾವನೆಗಳು ಮುಖಾಮುಖಿಯಾಗುತ್ತವೆ.
ಇಲ್ಲಿಯವರೆಗೆ ಸಾಗಿದ ಕಥೆಯನ್ನು ನೋಡಿದ ಪ್ರೇಕ್ಷಕ ಮುಂದೇನಾಗಬಹುದು ಎಂದು ಸುಲಭವಾಗಿ ಊಹಿಸಬಹುದು ಎಂದುಕೊಂಡರೆ ಅದು ತಪ್ಪು. ನಿರ್ದೇಶಕರು ಕ್ಲೈಮ್ಯಾಕ್ಸ್ನಲ್ಲಿ ಬೇರೆಯದೇ ತಿರುವು ನೀಡಲು ಪ್ರಯತ್ನಿಸಿದ್ದಾರೆ.
ಚಿತ್ರದ ಹಾಡುಗಳು ಚೆನ್ನಾಗಿ ಮೂಡಿ ಬಂದಿದೆ ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಸಾತ್ ನೀಡಿದೆ, ಹಾಗೆ ಛಾಯಾಗ್ರಹಣ ಕೂಡ ಸುಂದರ ಪರಿಸರಗಳಲ್ಲಿ ತುಂಬಾ ಚೆನ್ನಾಗಿ ಚಿತ್ರಿತವಾಗಿದೆ.
ಒಟ್ಟಿನಲ್ಲಿ ಇದು ಕೇವಲ ಹುಡುಗ-ಹುಡುಗಿಯ ಪ್ರೇಮಕಥೆಯಲ್ಲ; ತಾಯಿ, ಮಗ, ತಂದೆ ಮತ್ತು ಕುಟುಂಬದ ನಡುವಿನ ಭಾವನಾತ್ಮಕ ಸಂಬಂಧಗಳನ್ನು ಒಳಗೊಂಡ ಕೌಟುಂಬಿಕ ಪ್ರೇಮಕಥೆ.

ಕನ್ನಡದ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತಂದೆಯ ಕಲಾ ಪರಂಪರೆಯನ್ನು ಮುಂದುವರಿಸುವ ಆಸೆಯೊಂದಿಗೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆದಿತ್ಯಗೆ ಇದು ಮತ್ತೊಂದು ಅವಕಾಶ.
ಆದರೆ ಅಭಿನಯದ ವಿಚಾರದಲ್ಲಿ ಅವರು ಇನ್ನಷ್ಟು ಪಳಗಬೇಕಿದೆ. ಭಾವನೆಗಳನ್ನು ಅಭಿವ್ಯಕ್ತಿಸುವ ರೀತಿ, ದೇಹಭಾಷೆ ಮತ್ತು ಸಂಭಾಷಣೆ ಹೇಳುವ ಶೈಲಿಯಲ್ಲಿ ಇನ್ನೂ ಹೆಚ್ಚಿನ ತರಬೇತಿ ಹಾಗೂ ಸುಧಾರಣೆ ಅಗತ್ಯವಿದೆ. ತಂದೆಯಂತೆ ಪ್ರಭಾವಶಾಲಿ ವ್ಯಕ್ತಿತ್ವವನ್ನು ಪರದೆಯ ಮೇಲೆ ಮೂಡಿಸಲು ಸದ್ಯಕ್ಕೆ ಸಾಕಷ್ಟು ಪರಿಶ್ರಮ ಬೇಕಿದೆ. ಈ ಅಂಶಗಳ ಕಡೆಗೆ ಗಮನಹರಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ನಟನಾಗಿ ಬೆಳೆಯುವ ಅವಕಾಶ ಖಂಡಿತ ಇದೆ.

ತಬಲಾ ನಾಣಿ ಮತ್ತು ವೀಣಾ ಸುಂದರ್ ಚಿತ್ರದ ಪ್ರಮುಖ ಆಕರ್ಷಣೆ. ವಿಶೇಷವಾಗಿ ಕುಟುಂಬದ ಜವಾಬ್ದಾರಿಯನ್ನು ಒಬ್ಬ ಮಹಿಳೆ ಹೇಗೆ ಒಂಟಿಯಾಗಿ ನಿಭಾಯಿಸುತ್ತಾಳೆ, ತನ್ನ ಮಕ್ಕಳ ಭವಿಷ್ಯಕ್ಕಾಗಿ ಎಷ್ಟೆಲ್ಲಾ ಕಷ್ಟಗಳನ್ನು ಸಹಿಸುತ್ತಾಳೆ ಎಂಬುದನ್ನು ವೀಣಾ ಸುಂದರ್ ಅವರ ಪಾತ್ರದ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ತಬಲಾ ನಾಣಿ ತಮ್ಮ ಪಾತ್ರದ ಮೂಲಕ ಚಿತ್ರದ ಭಾವನಾತ್ಮಕತೆಗೆ ಮತ್ತಷ್ಟು ಬಲ ತುಂಬಿದ್ದಾರೆ.
ನಿರ್ದೇಶನ ಮತ್ತು ತಾಂತ್ರಿಕ ವಿಭಾಗ
ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಇಂದಿನ ಯುವಪೀಳಿಗೆಗೆ ಹೇಳಬೇಕಾದ ಹಲವು ವಿಚಾರಗಳನ್ನು ಒಳಗೊಂಡಿದೆ. ಪ್ರೀತಿ ಎಂದರೆ ಕೇವಲ ಆಕರ್ಷಣೆಯಲ್ಲ, ಜೀವನದಲ್ಲಿ ಗುರಿ, ಜವಾಬ್ದಾರಿ ಮತ್ತು ಕುಟುಂಬದ ಭವಿಷ್ಯವೂ ಅಷ್ಟೇ ಮುಖ್ಯ ಎಂಬ ಅಂಶವನ್ನು ಕಥೆ ಹೇಳುತ್ತದೆ.
ಕಾಲೇಜು ಜೀವನ, ಹೊಸ ವಿದ್ಯಾರ್ಥಿಗಳ ಮೇಲೆ ನಡೆಯುವ ರ್ಯಾಗಿಂಗ್, ಹಿರಿಯ ವಿದ್ಯಾರ್ಥಿಗಳ ದರ್ಪ, ಪ್ರೀತಿ-ಪ್ರೇಮ, ಮುನಿಸು ಹಾಗೂ ಕುಟುಂಬದ ಸಂಘರ್ಷಗಳನ್ನು ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ.

ಆದರೆ ಒಳ್ಳೆಯ ಕಥೆಯಿದ್ದರೂ ಅದನ್ನು ಪರಿಣಾಮಕಾರಿಯಾಗಿ ನಿರೂಪಿಸುವಲ್ಲಿ ನಿರ್ದೇಶಕರು ಅಲ್ಲಲ್ಲಿ ಎಡವಿದ್ದಾರೆ. ಕೆಲವು ದೃಶ್ಯಗಳ ಜೋಡಣೆ ಸಮರ್ಪಕವಾಗಿಲ್ಲ. ಸಂಕಲನದಲ್ಲಿ ಇನ್ನಷ್ಟು ಎಚ್ಚರ ವಹಿಸಬೇಕಿತ್ತು. ಕೆಲವೆಡೆ ದೃಶ್ಯಗಳ ನಿರಂತರತೆ ತಪ್ಪಿರುವುದು ಗಮನಕ್ಕೆ ಬರುತ್ತದೆ. ಕಥೆಯ ವೇಗವೂ ಕೆಲವು ಭಾಗಗಳಲ್ಲಿ ಕುಂಠಿತವಾಗುತ್ತದೆ.
ಕಥೆಯಲ್ಲಿರುವ ಭಾವನಾತ್ಮಕ ಅಂಶಗಳಿಗೆ ಇನ್ನಷ್ಟು ಆಳ ನೀಡಿ, ಕೆಲವು ಅನಗತ್ಯ ದೃಶ್ಯಗಳನ್ನು ಕಡಿತಗೊಳಿಸಿ, ನಿರೂಪಣೆಯನ್ನು ಬಿಗಿಗೊಳಿಸಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು.

ಪ್ರೀತಿಯ ಹೆಸರಿನಲ್ಲಿ ವಿದ್ಯಾಭ್ಯಾಸ ಮತ್ತು ಭವಿಷ್ಯವನ್ನು ಮರೆಯಬಾರದು, ಹೆತ್ತವರ ತ್ಯಾಗವನ್ನು ಅರ್ಥಮಾಡಿಕೊಳ್ಳಬೇಕು, ಕುಟುಂಬದ ಜವಾಬ್ದಾರಿಯಿಂದ ದೂರ ಸರಿಯಬಾರದು ಎಂಬ ಸಂದೇಶವನ್ನು ‘ರಾಶಿ’ ನೀಡಲು ಪ್ರಯತ್ನಿಸಿದೆ.
ನಿರ್ಮಾಪಕ ಅಖಿಲೇಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುವುದರ ಜೊತೆಗೆ ಚಿತ್ರಕ್ಕೆ ಕಥೆಯನ್ನು ನೀಡಿದ್ದಾರೆ. ಪ್ರೇಕ್ಷಕ ಪ್ರಭುಗಳು ಚಿತ್ರವನ್ನು ನೋಡಿ ಗೆಲುವಿನ ಕಡೆಗೆ ನಿರ್ಮಾಪಕರನ್ನು ಕೊಂಡೋಯುವ ಪ್ರಯತ್ನ ಮಾಡಬೇಕಿದೆ.
ಕಥೆಯಲ್ಲಿ ಹೊಸತನವಿದೆ, ಒಳ್ಳೆಯ ಕಥಾವಸ್ತು, ಮನಮುಟ್ಟುವ ಕೌಟುಂಬಿಕ ಭಾವನೆಗಳು, ಕೆಲವು ಗಮನಾರ್ಹ ಅಭಿನಯಗಳು ಹಾಗೂ ಊಹೆಗೆ ಸಿಗದ ಕ್ಲೈಮ್ಯಾಕ್ಸ್ಗಾಗಿ ಒಮ್ಮೆ ನೋಡಬಹುದಾದ ಚಿತ್ರ ‘ರಾಶಿ’.










