ಹ್ಯಾಕರ್ ಗಳ ಲೋಕದಲ್ಲಿನ ‘ಲಂಬೋದರ 2.0’ನಲ್ಲಿ ಸಿಂಪಲ್ ಸುನಿ ಹೊಸ ಆಟ!!

ಚಿತ್ರ – ಲಂಬೋದರ 2.0
ನಿರ್ಮಾಣ ಸಂಸ್ಥೆ – ಮಹಾವೀರ್ ಜೈನ್ ಫಿಲ್ಮ್ಸ್
ನಿರ್ಮಾಪಕರು – ಅನಿಲ್ ಶೆಟ್ಟಿ
ನಿರ್ದೇಶನ – ಸಿಂಪಲ್ ಸುನಿ
ಸಂಗೀತ – ವೀರ್ ಸಮರ್ಥ್
ಛಾಯಾಗ್ರಹಣ – ಸಂತೋಷ್ ರೈ ಪಾತಾಜೆ
ಸಂಕಲನ – ವಿನಯ್ ಕುಮಾರ್

ಕಲಾವಿದರು –
ನಾಯಕ – ಅನಿಲ್ ಶೆಟ್ಟಿ (ಅವ್ಯಕ್ತ)
ನಾಯಕಿ – ಸಾಚಿ ಬಿಂದ್ರಾ
ಪ್ರಮುಖ ಪಾತ್ರ – ಕುನಾಲ್ ಕಪೂರ್
ಇತರ ಕಲಾವಿದರು – ಮೇಘನಾ ಗಾಂವ್ಕರ್, ಮಾಳವಿಕ ಅವಿನಾಶ್, ಮ್ಯಾಕ್ ಡಿಸೋಜಾ

ಇಂದಿನ ಜಗತ್ತಿನಲ್ಲಿ ಕಳ್ಳತನವೆಂದರೆ ಮನೆಗೆ ನುಗ್ಗಿ ಆಭರಣ, ಹಣ ದೋಚುವುದಷ್ಟೇ ಅಲ್ಲ. ಕಳ್ಳನೊಬ್ಬ ಎಲ್ಲೋ ಕುಳಿತುಕೊಂಡು, ನಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ನಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ನಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ನಮ್ಮ ಅರಿವಿಗೇ ಬಾರದಂತೆ ನಮ್ಮ ಬದುಕಿನ ಮೇಲೆಯೇ ಹಿಡಿತ ಸಾಧಿಸಬಹುದು.

ಇಂತಹ ಅಪಾಯಕಾರಿ ಡಿಜಿಟಲ್ ಜಗತ್ತಿನ ಕರಾಳ ಮುಖವನ್ನು ಮನರಂಜನೆಯೊಂದಿಗೆ ತೆರೆದಿಡುವ ಪ್ರಯತ್ನವೇ ನಿರ್ದೇಶಕ ಸಿಂಪಲ್ ಸುನಿ ಅವರ ‘ಲಂಬೋದರ 2.0’.
ಕ್ಷಣಕ್ಷಣಕ್ಕೂ ಬದಲಾಗುವ ತಂತ್ರಜ್ಞಾನ. ಹ್ಯಾಕಿಂಗ್, ಪ್ರೀತಿ, ವಂಚನೆ ಹಾಗೂ ಮಾನವೀಯ ಭಾವನೆಗಳನ್ನು ಒಂದೇ ಕಥೆಯೊಳಗೆ ಬೆಸೆದಿರುವ ಈ ಚಿತ್ರ ಪ್ರೇಕ್ಷಕರಿಗೆ ಕುತೂಹಲದ ಜೊತೆಗೆ ಒಂದಷ್ಟು ಎಚ್ಚರಿಕೆಯನ್ನೂ ನೀಡುತ್ತದೆ.

ವಿಭಿನ್ನ ಶೀರ್ಷಿಕೆಗಳ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ನಿರ್ದೇಶಕ ಸಿಂಪಲ್ ಸುನಿ ಈ ಬಾರಿ ಕೃತಕ ಬುದ್ಧಿಮತ್ತೆ, ಹ್ಯಾಕಿಂಗ್, ಆನ್‌ಲೈನ್ ವಂಚನೆ ಮತ್ತು ಮನುಷ್ಯನ ಭಾವನೆಗಳನ್ನು ಕಥೆಯ ಪ್ರಮುಖ ಭಾಗವಾಗಿಸಿಕೊಂಡಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಬದುಕು ಎಷ್ಟು ಸುಲಭವಾಗುತ್ತಿದೆಯೋ, ಅಷ್ಟೇ ಸಂಕೀರ್ಣವೂ ಆಗುತ್ತಿದೆ ಎನ್ನುವ ವಿಚಾರವನ್ನು ಮನರಂಜನೆಯ ಮೂಲಕ ತೆರೆದಿಡಲು ಪ್ರಯತ್ನಿಸಿದ್ದಾರೆ.

ಇದು ನಿರ್ದೇಶಕ ಸುನಿಯ ವಿಭಿನ್ನ ಪ್ರಯೋಗ,
ಸಾಮಾನ್ಯ ಕಮರ್ಷಿಯಲ್ ಸಿನಿಮಾಗಳ ಸೂತ್ರಕ್ಕೆ ಅಂಟಿಕೊಳ್ಳದೆ ಹೊಸ ವಿಷಯವನ್ನು ಆಯ್ಕೆ ಮಾಡಿಕೊಂಡು ಮನರಂಜನೆಯ ಜೊತೆಗೆ ಕಮರ್ಷಿಯಲ್ ಆಗಿ ಕಥೆ ಹೇಳಿರುವುದು ನಿರ್ದೇಶಕರ ವಿಶೇಷತೆ.

ಅವ್ಯಕ್ತ ಅಲಿಯಾಸ್ ಎವಿ (ಅನಿಲ್ ಶೆಟ್ಟಿ) ಒಬ್ಬ ಚಾಣಾಕ್ಷ ಹ್ಯಾಕರ್. ಹಣದ ಹಿಂದೆ ಓಡುವುದಕ್ಕಿಂತ ತನ್ನದೇ ಆದ ವಿಚಿತ್ರ ರೀತಿಯಲ್ಲಿ ಬದುಕುವ ಈತನಿಗೆ, ಪ್ರತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ಹಣ ಇದ್ದರೂ ಕೇವಲ 1180 ರೂಪಾಯಿಗಳನ್ನು ಕದಿಯುವ ಅಭ್ಯಾಸ. ಅದರ ಮೂಲಕ ಅವರನ್ನು ಎಚ್ಚರಿಸಿ ಬೇರೆ ಹ್ಯಾಕರ್ ಗಳಿಂದ ಕಾಪಾಡುತ್ತಾನೆ.

ಆದರೆ ಈತನೇ ಬಹುದೊಡ್ಡ ಡಿಜಿಟಲ್ ಸ್ಕ್ಯಾಮ್ ಒಳಗೆ ಸಿಲುಕಿ ಕೊಳ್ಳುತ್ತಾನೆ. ಈತನ ಬದುಕಿನಲ್ಲಿ ಹ್ಯಾಪಿನೆಸ್ ಬ್ಯಾಂಡ್ ಒಂದು ಪ್ರವೇಶಿಸಿದ ನಂತರ ಎಲ್ಲವೂ ಬದಲಾಗುತ್ತದೆ.
ನೂರು ದಿನಗಳಲ್ಲಿ ಅತ್ಯಂತ ಸಂತೋಷವಾಗಿರುವ ವ್ಯಕ್ತಿಗೆ ನೂರು ಕೋಟಿ ರೂಪಾಯಿ ಬಹುಮಾನ ನೀಡುವ ಯೋಜನೆಯಾ ಕುತಂತ್ರ ಮೊದಲ ನೋಟಕ್ಕೆ ಆಕರ್ಷಕವಾಗಿ ಕಂಡರೂ, ಅದರ ಹಿಂದಿರುವ ಉದ್ದೇಶವೇನು? ಜನರ ಸಂತೋಷವನ್ನು ಅಳೆಯುವ ತಂತ್ರಜ್ಞಾನದ ಹಿಂದೆ ಯಾವ ರಹಸ್ಯ ಅಡಗಿದೆ? ಈ ಪ್ರಶ್ನೆಗಳೇ ಕಥೆಯನ್ನು ಮುಂದಕ್ಕೆ ಕೊಂಡೊಯ್ಯುತ್ತವೆ.

ಅವ್ಯಕ್ತನ ಪಾತ್ರದಲ್ಲಿ ಅನಿಲ್ ಶೆಟ್ಟಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಹಣದ ಆಸೆ, ಹ್ಯಾಕರ್‌ನ ಬುದ್ಧಿವಂತಿಕೆ, ಪ್ರೀತಿಯಲ್ಲಿನ ಮುಗ್ಧತೆ ಹಾಗೂ ಸತ್ಯ ತಿಳಿದ ನಂತರ ಎದುರಾಗುವ ಸವಾಲುಗಳನ್ನು ನಿಭಾಯಿಸುವ ಜವಾಬ್ದಾರಿ ಅವರ ಪಾತ್ರಕ್ಕಿದೆ.
ವಿಶೇಷವೆಂದರೆ ಅನಿಲ್ ಶೆಟ್ಟಿ ಕೇವಲ ನಾಯಕನಾಗಿ ಮಾತ್ರವಲ್ಲದೆ ಚಿತ್ರದ ನಿರ್ಮಾಣ ಮತ್ತು ಕಥಾರಚನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಇಂತಹ ವಿಭಿನ್ನ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವುದು ಮೆಚ್ಚುವಂತಹದ್ದು.ಆದರೆ ಅಭಿನಯದಲ್ಲಿ ಇನ್ನಷ್ಟು ಪಳಗಬೇಕಾಗಿದೆ. ಹಾಗೂ ಪಾತ್ರದೊಳಗೆ ಪರಕಾಯ ಮಾಡುವಂತಹ ಜಾಣ್ಮೆ ಬೇಕಾಗುತ್ತದೆ ಎನ್ನಬಹುದು

ನಾಯಕಿಯಾಗಿ ಸಾಚಿ ಬಿಂದ್ರಾ ಅವರ ಪಾತ್ರಕ್ಕೂ ಕಥೆಯಲ್ಲಿ ಮಹತ್ವವಿದೆ. ಕೇವಲ ನಾಯಕನ ಪ್ರೇಮದ ಗೊಂಬೆಯಾಗದೆ, ತಂದೆಯ ನಿಜವಾದ ಮುಖ ತಿಳಿದ ನಂತರ ಆಕೆ ಎದುರಿಸುವ ಭಾವನಾತ್ಮಕ ಸಂಘರ್ಷ ಕಥೆಗೆ ಮತ್ತೊಂದು ಆಯಾಮ ನೀಡುತ್ತದೆ.

ಇಲ್ಲಿ ತಂತ್ರಜ್ಞಾನವೇ ಚಿತ್ರದ ಮತ್ತೊಂದು ನಾಯಕ ಎನ್ನಬಹುದು.
ಚಿತ್ರದಲ್ಲಿನ ಹ್ಯೂಮನಾಯ್ಡ್ ರೋಬೋ ಜಿಯಾ ವಿಶೇಷ ಆಕರ್ಷಣೆ. ಬೆಂಗಳೂರಿನ ಮಚಾನಿ ರೊಬೋಟಿಕ್ಸ್ ಅಭಿವೃದ್ಧಿಪಡಿಸಿರುವ ನೈಜ ಹ್ಯೂಮನಾಯ್ಡ್ ರೋಬೋಟ್ ಚಿತ್ರದಲ್ಲಿ ಪಾತ್ರವಾಗಿ ಕಾಣಿಸಿಕೊಳ್ಳುವುದು ಕುತೂಹಲಕಾರಿ ಪ್ರಯೋಗ. ಇದರೊಂದಿಗೆ ಕೃತಕ ಬುದ್ಧಿಮತ್ತೆ, ಡಿಜಿಟಲ್ ನಿಯಂತ್ರಣ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆ ಚಿತ್ರಕ್ಕೆ ವೈಜ್ಞಾನಿಕ ಹಿನ್ನೆಲೆ ನೀಡಿದೆ.

ಮತ್ತೊಂದು ಚಿತ್ರದ ವಿಶೇಷವೇನೆಂದರೆ ಜಗತ್ತು ಯಾವಾಗ ಸಂಕಷ್ಟದಲ್ಲಿ, ಅಧರ್ಮದಲ್ಲಿ ಸಿಲುಕಿಕೊಳ್ಳುತ್ತೋ, ಆಗ ಧರ್ಮ ಸಂಸ್ಥಾಪನೆಗಾಗಿ ಮತ್ತು ಮನುಕುಲದ ಉದ್ಧಾರಕ್ಕಾಗಿ ಮತ್ತೆ ಮತ್ತೆ ಜನ್ಮ ಎತ್ತಿ ಬರುತ್ತೇನೆ ಅಂತ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಸಾರಿರುವಂತೆ, ಇಲ್ಲಿ ಶ್ರೀ ಕೃಷ್ಣ ಕೂಡ ಅವತರಿಸಿದ್ದಾನೆ. AI ತಂತ್ರಜ್ಞಾನದ ಮೂಲಕವೇ ಶ್ರೀಕೃಷ್ಣನನ್ನು ಸೃಷ್ಟಿಸಲಾಗಿದೆ ನಿರ್ದೇಶಕರು ಧಾರ್ಮಿಕವಾಗಿ ಕೂಡ ಇಂದಿನ ತಂತ್ರಜ್ಞಾನದ ಮೋಸದ ಜಾಲವನ್ನು ಭೇದಿಸಲು ಶ್ರೀ ಕೃಷ್ಣನ ತಂತ್ರವನ್ನ ಉಪಯೋಗಿಸಿಕೊಂಡಿದ್ದಾರೆ. ಶ್ರೀ ಕೃಷ್ಣನನ್ನು ಸೃಷ್ಟಿಸಿರುವುದು ಚಿತ್ರದ ಮತ್ತೊಂದು ಆಕರ್ಷಣೆ.

ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರಕ್ಕೆ ತಾಂತ್ರಿಕ ಮೆರುಗು ನೀಡಿದೆ. ವೀರ್ ಸಮರ್ಥ್ ಅವರ ಸಂಗೀತ ಕಥೆಯ ವಾತಾವರಣಕ್ಕೆ ಪೂರಕವಾಗಿದೆ. ವಿನಯ್ ಕುಮಾರ್ ಅವರ ಸಂಕಲನದಲ್ಲಿ ಇನ್ನಷ್ಟು ವೇಗ ಮತ್ತು ಬಿಗಿತವಿದ್ದಿದ್ದರೆ ಚಿತ್ರದ ಪರಿಣಾಮ ಹೆಚ್ಚಾಗುತ್ತಿತ್ತು.

ಚಿತ್ರದ ಖಳನಾಯಕನ ಪಾತ್ರದಲ್ಲಿ ಕುನಾಲ್ ಕಪೂರ್ ಗಮನ ಸೆಳೆಯುತ್ತಾರೆ. ಸಾಮಾನ್ಯ ಸಿನಿಮಾಗಳಲ್ಲಿ ಕಾಣುವ ಸಾಂಪ್ರದಾಯಿಕ ವಿಲನ್‌ಗಳಂತೆ ಕೈಯಲ್ಲಿ ಆಯುಧ ಹಿಡಿದು ಬೆದರಿಸುವ ವ್ಯಕ್ತಿ ಈತನಲ್ಲ. ಬದಲಿಗೆ ಬುದ್ಧಿವಂತಿಕೆ, ತಂತ್ರಜ್ಞಾನ ಮತ್ತು ಹಣದ ಬಲದಿಂದ ಇಡೀ ಜಗತ್ತನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಯಸುವ ಅಪಾಯಕಾರಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಇಂದು ಮನುಷ್ಯನ ಸಂತೋಷವನ್ನು ನಿರ್ಧರಿಸುವುದು ಆತನ ಮನಸ್ಸೋ ಅಥವಾ ಮೊಬೈಲ್ ಪರದೆಯ ಮೇಲಿನ ಲೈಕ್ಸ್ ಮತ್ತು ನೋಟಿಫಿಕೇಷನ್‌ಗಳೋ ಎಂಬ ಪ್ರಶ್ನೆಯನ್ನು ‘ಲಂಬೋದರ 2.0’ ನಮ್ಮ ಮುಂದಿಡುತ್ತದೆ.
ಎಲ್ಲರಿಗೂ ಇಷ್ಟವಾಗುವ ಪರಿಪೂರ್ಣ ಮನರಂಜನೆಯ ಸಿನಿಮಾ ಎನ್ನುವುದಕ್ಕಿಂತ, ಹೊಸ ವಿಷಯವನ್ನು ಹೇಳಲು ಪ್ರಯತ್ನಿಸಿರುವ ವಿಭಿನ್ನ ಪ್ರಯೋಗ ಎನ್ನುವುದು ಸೂಕ್ತ. ಕಥೆಯಲ್ಲಿನ ಹೊಸತನ ಮತ್ತು ತಂತ್ರಜ್ಞಾನದ ಕುತೂಹಲಕ್ಕಾಗಿ ಸಿನಿಮಾ ನೋಡಬಹುದು.
ಕೆಲವು ಲೋಪಗಳನ್ನು ಬದಿಗಿಟ್ಟರೆ, ಸಿಂಪಲ್ ಸುನಿಯ ಈ ಪ್ರಯತ್ನಕ್ಕೆ ಮೆಚ್ಚುಗೆ ಸಲ್ಲಿಸಬಹುದು.
ತಂತ್ರಜ್ಞಾನ ಮನುಷ್ಯನ ಕೈಯಲ್ಲಿರಬೇಕೇ ಹೊರತು, ಮನುಷ್ಯನೇ ತಂತ್ರಜ್ಞಾನದ ಕೈಗೊಂಬೆಯಾಗಬಾರದು ಎಂಬ ಎಚ್ಚರಿಕೆಯೇ ‘ಲಂಬೋದರ 2.0’ ಚಿತ್ರದ ಮುಖ್ಯ ಆಶಯ.


Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor