‘ಕಾಮನ್ ಮ್ಯಾನ್’ ಟ್ರೈಲರ್‌ಗೆ ಮೆಚ್ಚುಗೆ: ಸೆಪ್ಟೆಂಬರ್ 25ರಂದು ತೆರೆಗೆ
ಸಾಮಾನ್ಯ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾದರೆ ಆಡಳಿತ ಹೇಗಿರಬಹುದು? ಜನರ ಬದುಕಿನಲ್ಲಿ ಯಾವ ಬದಲಾವಣೆ ತರಬಹುದು? ಅಧಿಕಾರದ ಹಾದಿಯಲ್ಲಿ ಆತ ಎದುರಿಸುವ ಸವಾಲುಗಳೇನು? ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿರುವ ‘ಕಾಮನ್ ಮ್ಯಾನ್’ ಸಿನಿಮಾ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ವಿಭಿನ್ನ ಕಥಾಹಂದರ ಹಾಗೂ ಕುತೂಹಲ ಮೂಡಿಸುವ ದೃಶ್ಯಗಳ ಮೂಲಕ ಗಮನ ಸೆಳೆಯುತ್ತಿದೆ. ವಿಶೇಷವಾಗಿ, ಸಾಮಾನ್ಯ ಪ್ರಜೆಯೊಬ್ಬ ವಿಧಾನಸೌಧದ ಮೇಲೆಯೇ ತನ್ನ ಹಕ್ಕು ಕೇಳುವ ಅಂಶ ಟ್ರೈಲರ್‌ನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
ಓಂ ಸಾಯಿ ಪ್ರಕಾಶ್ ನಿರ್ದೇಶನ
ಡಾ. ಎನ್. ನರಸಿಂಹ ಮೂರ್ತಿ ಕಥೆ ಬರೆದು, ಸುರಭಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ‘ಕಾಮನ್ ಮ್ಯಾನ್’ ಚಿತ್ರವನ್ನು ನಿರ್ಮಿಸಿದ್ದಾರೆ. ಸೆಂಟಿಮೆಂಟ್ ಪ್ರಧಾನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಇದು ಅವರ ನಿರ್ದೇಶನದ 106ನೇ ಚಿತ್ರ ಎಂಬುದು ವಿಶೇಷ.

‘ಕೆರೆಬೇಟೆ’ ಚಿತ್ರದ ಮೂಲಕ ಗಮನ ಸೆಳೆದಿರುವ ಗೌರಿಶಂಕರ್ ಚಿತ್ರದ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಅಭಿನಯಿಸಿದ್ದಾರೆ.
“ವಿಧಾನಸೌಧದ ಮೇಲೆ ನನಗೂ ಹಕ್ಕಿದೆ…”
ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ವಿ. ಮನೋಹರ್, ಚಿತ್ರದ ಕಥಾವಸ್ತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಭಿನ್ನ ಪಾತ್ರಗಳಲ್ಲಿ ಹಿರಿಯ ಕಲಾವಿದರು
ನಟ ಬಲ ರಾಜ್ ವಾಡಿ ನಾಯಕನ ತಂದೆಯ ಪಾತ್ರದ ಜೊತೆಗೆ ರಂಗಭೂಮಿ ಕಲಾವಿದನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರ ಅಳಿಯರೂ ಆಗಿರುವ ನಟ ಕಿರಣ್ ಚಿತ್ರದಲ್ಲಿ ಮುಖ್ಯಮಂತ್ರಿಯ ಪುತ್ರನ ಪಾತ್ರ ನಿರ್ವಹಿಸಿದ್ದಾರೆ.
ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಮೇಶ್ ಭಟ್, ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಸೇರಿದಂತೆ ಹಲವು ಹಿರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಸಿನಿಮಾ ಮಾಡಲು ಇಡೀ ತಂಡವೇ ಕಾರಣ”
ಚಿತ್ರದ ನಿರ್ಮಾಪಕ ಹಾಗೂ ಕಥೆಗಾರ ಡಾ. ಎನ್. ನರಸಿಂಹ ಮೂರ್ತಿ ಮಾತನಾಡಿ, ಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿಕೊಟ್ಟ ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.
ಸಂಗೀತ ನಿರ್ದೇಶಕ ವಿನಯ್ ಚಂದ್ರ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಅವರು ಹೇಳಿದರು. ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದು, ಸೆಪ್ಟೆಂಬರ್ 25ರಂದು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಚಿತ್ರದ ಹಿಂದಿರುವ ತಂಡದ ಶ್ರಮವನ್ನು ವಿವರಿಸಿದ ಅವರು, ತಮ್ಮ ಕುಟುಂಬದ ವಸಂತ, ಕಿರಣ್, ಸತೀಶ್ ಸೇರಿದಂತೆ ಹಲವರ ಬೆಂಬಲದಿಂದಲೇ ಈ ಸಾಹಸ ಸಾಧ್ಯವಾಯಿತು ಎಂದು ಹೇಳಿದರು.

“ಒಬ್ಬ ನಿರ್ಮಾಪಕರ ಹಿಂದೆ ಹಲವು ತಂತ್ರಜ್ಞರು ಹಾಗೂ ಕಲಾವಿದರ ಪರಿಶ್ರಮ ಇರುತ್ತದೆ. ಪ್ರೇಕ್ಷಕರು ನೀಡುವ ಟಿಕೆಟ್ ಹಣದ ಹಿಂದೆ ಹಲವರ ಬದುಕು ಅಡಗಿದೆ. ಆದ್ದರಿಂದ ಈ ಚಿತ್ರಕ್ಕೆ ಪ್ರೇಕ್ಷಕರು ಅವಕಾಶ ನೀಡಬೇಕು” ಎಂದು ಮನವಿ ಮಾಡಿದರು.
ಚಿತ್ರದ ಅಕೌಂಟೆಂಟ್ ಸರಳ ಅವರ ಸಕ್ರಿಯ ಸಹಕಾರವನ್ನೂ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ನಾಯಕಿ ಸೋನಾ ಲದ್ವಾಗೆ ಮೂರನೇ ಸಿನಿಮಾ
ಸೋನಾ ಲದ್ವಾ ಅವರಿಗೆ ‘ಕಾಮನ್ ಮ್ಯಾನ್’ ಮೂರನೇ ಚಿತ್ರವಾಗಿದ್ದು, ಅನುಭವೀ ಕಲಾವಿದರ ನಡುವೆ ಹೊಸಬರು ಎಂಬ ಭಾವನೆ ಮೂಡದಂತೆ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ನಿರ್ಮಾಪಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದಲ್ಲಿ ನಾಯಕ ಗೌರಿಶಂಕರ್ ಸೇರಿದಂತೆ ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.
“ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಆಸೆ ಇರುತ್ತದೆ”
ನಾಯಕ ಗೌರಿಶಂಕರ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲೂ ಒಂದಲ್ಲ ಒಂದು ಆಸೆ ಇರುತ್ತದೆ. ಅದೇ ರೀತಿ ಒಬ್ಬ ಸಾಮಾನ್ಯ ವ್ಯಕ್ತಿ ಮುಖ್ಯಮಂತ್ರಿಯಾದರೆ ಏನು ಮಾಡಬಹುದು, ಜನರಿಗಾಗಿ ಯಾವ ರೀತಿಯ ಬದಲಾವಣೆ ತರಬಹುದು ಎಂಬುದನ್ನು ‘ಕಾಮನ್ ಮ್ಯಾನ್’ ಮೂಲಕ ಹೇಳಲಾಗಿದೆ ಎಂದು ತಿಳಿಸಿದರು.
ಸಾಮಾನ್ಯ ವ್ಯಕ್ತಿಯ ಕನಸು, ಅಧಿಕಾರ ಸಿಕ್ಕಾಗ ಎದುರಾಗುವ ಸವಾಲುಗಳು ಹಾಗೂ ಸಮಾಜದ ಕುರಿತಾದ ಆತನ ದೃಷ್ಟಿಕೋನವನ್ನು ಸಿನಿಮಾ ಹೇಗೆ ಕಟ್ಟಿಕೊಟ್ಟಿದೆ ಎಂಬುದು ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ತಿಳಿಯಲಿದೆ.
ಹಲವು ಭಾಷೆಗಳಿಗೆ ಡಬ್ಬಿಂಗ್
‘ಕಾಮನ್ ಮ್ಯಾನ್’ ಚಿತ್ರ ಕನ್ನಡದ ಜೊತೆಗೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಿಗೂ ಡಬ್ ಮಾಡಲಾಗಿದೆ. ಕನ್ನಡದಲ್ಲಿ ಬಿಡುಗಡೆಯಾದ ನಂತರ ದೊರೆಯುವ ಪ್ರತಿಕ್ರಿಯೆಯನ್ನು ಗಮನಿಸಿ ಇತರ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹೊಂದಿದೆ.






