ಕಿಡ್ನ್ಯಾಪ್ ಕಥೆಯಲ್ಲಿ ಪ್ರೀತಿ, ಹಾಸ್ಯ ಮತ್ತು ಬಿಗ್ಬಾಸ್ ಅನುಭವ!
ಚಿತ್ರ ವಿಮರ್ಶೆ – ರಿಲ್ಯಾಕ್ಸ್ ಆಗಿ
ರೇಟಿಂಗ್ — ⭐⭐⭐ / 5.
ನಿರ್ಮಾಣ- ಎ.ಎಂ.ಎಂ. ಕೃಷ್ಣ
ನಿರ್ದೇಶನ- ಶ್ರೀನಿವಾಸ ಸಿ. ಮಂಡ್ಯ
ಸಂಗೀತ -ಜಸ್ಸಿ ಗಿಫ್ಟ್
ಛಾಯಾಗ್ರಹಣ- ರಾಕೇಶ್ ಸಿ. ತಿಲಕ್
ಸಂಕಲನ – ಅರವಿಂದರಾಜ್ ಕಾರ್ಗಲ್
ಕಿಡ್ನ್ಯಾಪ್ ಕಥೆಯಲ್ಲಿ ಪ್ರೀತಿ, ಹಾಸ್ಯ ಮತ್ತು ಬಿಗ್ಬಾಸ್ ಅನುಭವ!
ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ

ಕಿಡ್ನ್ಯಾಪ್ ಎಂದಾಕ್ಷಣ ಭಯ, ಆತಂಕ, ಬೆದರಿಕೆ ನೆನಪಾಗುವುದು ಸಹಜ. ಆದರೆ ಒಬ್ಬ ನಾಯಕ ಮತ್ತು ನಾಯಕಿಯನ್ನು ಒಂದೇ ಮನೆಯಲ್ಲಿ ಕಿಡ್ನ್ಯಾಪ್ ಮಾಡಿ, ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಸುವ ಪ್ರಯತ್ನ ಮಾಡಿದರೆ ಹೇಗಿರಬಹುದು? ಇಂತಹ ವಿಭಿನ್ನ ಎಳೆಯೊಂದಿಗೆ ಹಾಸ್ಯ, ಪ್ರೀತಿ ಮತ್ತು ಸಸ್ಪೆನ್ಸ್ ಬೆರೆಸಿ ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರವೇ ಕೋಮಲ್ ಅಭಿನಯದ ‘ರಿಲ್ಯಾಕ್ಸ್ ಆಗಿ’.
ಚಿತ್ರದ ಕಥೆ ಆರಂಭವಾಗುವುದೇ ನಾಯಕ ಕೋಮಲ್ನ ಕಿಡ್ನ್ಯಾಪ್ನಿಂದ. ಒಂದು ಮನೆಯಲ್ಲಿ ಆತನನ್ನು ಅಪಹರಿಸಿ ಬಂಧಿಸಿಡಲಾಗುತ್ತದೆ. ಹತ್ತು ದಿನಗಳ ನಂತರ ನಾಯಕಿಯನ್ನೂ ಕಿಡ್ನ್ಯಾಪ್ ಮಾಡಿ ಅದೇ ಮನೆಗೆ ಕರೆತಂದು ಕೂಡಿಹಾಕಲಾಗುತ್ತದೆ.

ಆರಂಭದಲ್ಲಿ ಕೋಮಲ್ ತನ್ನನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂದು ನಾಯಕಿ ಭಾವಿಸಿ ಆತನೊಂದಿಗೆ ಜಗಳವಾಡುತ್ತಾಳೆ. ಆದರೆ ನಂತರ ಇಬ್ಬರೂ ಬೇರೆ ಬೇರೆ ಸಮಯದಲ್ಲಿ ಕಿಡ್ನ್ಯಾಪ್ ಆಗಿರುವುದು ತಿಳಿದುಬರುತ್ತದೆ. ಹಾಗಾದರೆ ಇವರಿಬ್ಬರನ್ನು ಅಪಹರಿಸಿದವರು ಯಾರು? ಯಾಕಾಗಿ ಅಪಹರಿಸಿದ್ದಾರೆ? ಒಂದೇ ಮನೆಯಲ್ಲಿ ಬಂಧಿಸಿಟ್ಟಿರುವ ಉದ್ದೇಶವೇನು? ಎಂಬ ಕುತೂಹಲದೊಂದಿಗೆ ಕಥೆ ಸಾಗುತ್ತದೆ.
ಇಲ್ಲಿ ನಾಯಕಿ ಸಾಮಾನ್ಯ ಹುಡುಗಿಯಲ್ಲ. ಸಾವಿರಾರು ಕೋಟಿ ಆಸ್ತಿಯ ಒಡತಿಯಾಗಿರುವ, ಪ್ರಭಾವಿ ಸಚಿವರ ಮಗಳು. ಆಕೆಯ ತಂದೆಯ ಕೈಯಲ್ಲಿ ರಾಜಕೀಯ ಅಧಿಕಾರ, ಪೊಲೀಸ್ ವ್ಯವಸ್ಥೆ ಸೇರಿದಂತೆ ಎಲ್ಲವೂ ಇರುವಂತಹ ಪ್ರಭಾವ. ತನ್ನ ಮಗಳು ಕಿಡ್ನ್ಯಾಪ್ ಆಗಿರುವ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ, ಮಗಳನ್ನು ಅಪಹರಿಸಿದವನನ್ನು ಸಾಯಿಸಿಯೇ ಬಿಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾನೆ. ಇಷ್ಟೆಲ್ಲಾ ಪ್ರಭಾವ ಮತ್ತು ಹಣವಿರುವ ಕುಟುಂಬದ ಮಗಳನ್ನು ಅಪಹರಿಸುವ ಧೈರ್ಯ ಮಾಡಿದವರು ಯಾರು ಎಂಬ ಪ್ರಶ್ನೆ ಮತ್ತಷ್ಟು ಕುತೂಹಲ ಮೂಡಿಸುತ್ತದೆ.
ಇನ್ನೊಂದೆಡೆ ನಾಯಕ ಕೋಮಲ್ ಬಳಿ ಹಣವಿಲ್ಲ, ಆಸ್ತಿಯಿಲ್ಲ, ಉದ್ಯೋಗವಿಲ್ಲ, ಸಂಪಾದನೆಯೂ ಇಲ್ಲ. ಒಟ್ಟಿನಲ್ಲಿ ನಾಯಕಿಯ ದೃಷ್ಟಿಯಲ್ಲಿ ಆತ ಒಬ್ಬ ಬಡವ. ಆದರೆ ಒಂದೇ ಮನೆಯಲ್ಲಿ ಇಬ್ಬರೂ ಬಂಧಿಯಾಗಿರುವಾಗ ನಾಯಕ ಆಕೆಯ ಮನವೊಲಿಸಲು ಮಾಡುವ ಪ್ರಯತ್ನಗಳು ಒಂದಷ್ಟು ಹಾಸ್ಯ ಸನ್ನಿವೇಶಗಳಿಗೆ ಕಾರಣವಾಗುತ್ತವೆ. ಕಾಫಿ, ಟೀ ಅಡುಗೆ ಮಾಡಿಕೊಡುವುದರಿಂದ ಹಿಡಿದು ಮನೆಕೆಲಸ, ಬಟ್ಟೆ ಒಗೆಯುವುದು, ಕೊನೆಗೆ ನಾಯಕಿಯ ಒಳ ಉಡುಪುಗಳನ್ನು ತೊಳೆಯುವವರೆಗೂ ಆತನ ಸೇವೆ ಸಾಗುತ್ತದೆ.
ಈ ಜಗಳ, ಕಿತ್ತಾಟಗಳ ನಡುವೆಯೇ ಇಬ್ಬರ ನಡುವೆ ಸ್ನೇಹ ಬೆಳೆದು, ಆ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗುತ್ತದೆ.
ಆದರೆ ಇವರಿಬ್ಬರ ಮೇಲೆ ಯಾರೋ ಒಬ್ಬರು ನಿರಂತರ ನಿಗಾ ಇಟ್ಟಿರುತ್ತಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವ ವ್ಯಕ್ತಿ ವಾಕಿಟಾಕಿ ಮೂಲಕ ಇವರೊಂದಿಗೆ ಮಾತನಾಡುತ್ತಿರುತ್ತಾನೆ. ಮನೆಯ ಸುತ್ತಲೂ ಕ್ಯಾಮೆರಾಗಳ ಕಣ್ಗಾವಲು. ಮನೆಯಿಂದ ಹೊರಗೆ ಹೋದರೂ ನಿರ್ದಿಷ್ಟ ಪ್ರದೇಶದ ಗಡಿ ದಾಟಲು ಸಾಧ್ಯವಾಗದಂತಹ ವ್ಯವಸ್ಥೆ. ಇದೆಲ್ಲವನ್ನೂ ನೋಡಿದಾಗ ಪ್ರೇಕ್ಷಕರಿಗೆ ಒಂದು ರೀತಿಯ ಬಿಗ್ಬಾಸ್ ರಿಯಾಲಿಟಿ ಶೋ ಅನುಭವವಾಗುತ್ತದೆ.
ದೊಡ್ಡಮನೆ ಎಲ್ಲಂದರಲ್ಲಿ ಓಡಾಡಬಹುದು ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಬಹುದು ಮನೆಯ ಸುತ್ತಮುತ್ತ ವರಾಂಡ ಎಲ್ಲಾ ಕಡೆ ಹೋರಾಡಬಹುದು ಆದರೂ ಕೂಡ ಅವರಿಬ್ಬರೂ ಅಲ್ಲಿಂದ ತಪ್ಪಿಸಿಕೊಳ್ಳುವಂತ ಪ್ರಯತ್ನ ಮಾಡಲ್ಲ
ಪ್ರತಿದಿನ ಹೊಸ ಬಟ್ಟೆಗಳು, ಊಟಕ್ಕೆ ಬೇಕಾದ ತರಕಾರಿ, ಹಣ್ಣುಗಳು ಎಲ್ಲವೂ ಇವರಿಗೆ ಸಿಗುತ್ತವೆ. ಆದರೆ ಅವು ಎಲ್ಲಿಂದ ಬರುತ್ತವೆ? ಯಾರು ತಂದುಕೊಡುತ್ತಾರೆ? ಎಂಬುದಕ್ಕೆ ಸ್ಪಷ್ಟತೆ ಸಿಗದಿರುವುದು ಅದಕ್ಕಾಗಿಯೇ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಲಿಕೆ ಮಾಡಿದ್ದು
ಕೋಮಲ್ ಹಾಸ್ಯಕ್ಕೆ ಪ್ರತ್ಯೇಕ ಅಭಿಮಾನಿ ಬಳಗ!
ಕೋಮಲ್ ಎಂದಾಕ್ಷಣ ನೆನಪಾಗುವುದು ಅವರ ವಿಶಿಷ್ಟ ಬಾಡಿ ಲ್ಯಾಂಗ್ವೇಜ್, ಮುಖಭಾವ, ಡೈಲಾಗ್ ಡೆಲಿವರಿ ಮತ್ತು ಸಹಜ ಹಾಸ್ಯಪ್ರಜ್ಞೆ. ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದು, ನಂತರ ನಾಯಕನಾಗಿ ಬೆಳೆದಿರುವ ಅನುಭವಿ ನಟ ಅವರು. ಈ ಚಿತ್ರದಲ್ಲಿಯೂ ತಮ್ಮದೇ ಶೈಲಿಯ ಹಾಸ್ಯ, ಪಂಚಿಂಗ್ ಡೈಲಾಗ್ಗಳು ಹಾಗೂ ಒಂದಷ್ಟು ಡಬಲ್ ಮೀನಿಂಗ್ ಸಂಭಾಷಣೆಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಕೆಲವು ದೃಶ್ಯಗಳಲ್ಲಿ ಅವರ ಅಭಿನಯ ಮತ್ತು ಹಾವಭಾವಗಳು ನಗು ತರಿಸುತ್ತವೆ. ಕೋಮಲ್ ಅಭಿಮಾನಿಗಳಿಗೆ ಇಷ್ಟವಾಗುವಂತಹ ಪಂಚಿಂಗ್ ಡೈಲಾಗ್ಗಳೂ ಚಿತ್ರದಲ್ಲಿವೆ.
ಆದರೆ ಕಾಲ ಬದಲಾಗಿದೆ. ಇಂದಿನ ಯುವಪ್ರೇಕ್ಷಕರ ಅಭಿರುಚಿ, ಮನಸ್ಥಿತಿ ಮತ್ತು ಹಾಸ್ಯದ ನಿರೀಕ್ಷೆಗಳು ಬದಲಾಗಿವೆ. ಒಬ್ಬ ಅನುಭವಿ ನಟನಾಗಿ ಕೋಮಲ್ ತಮ್ಮ ಹಿಂದಿನ ಜನಪ್ರಿಯತೆಯ ಜೊತೆಗೆ ಇಂದಿನ ಕಾಲಘಟ್ಟಕ್ಕೆ ಹೊಂದುವಂತಹ ವಿಭಿನ್ನ ಪಾತ್ರಗಳು ಮತ್ತು ಅಭಿನಯದ ಹೊಸ ಆಯಾಮಗಳತ್ತ ಗಮನ ಹರಿಸಬೇಕಿದೆ ಎಂಬ ಭಾವನೆ ಮೂಡುತ್ತದೆ.
ಸಸ್ಪೆನ್ಸ್ ಇದೆ, ಆದರೆ ನಿರೂಪಣೆಯಲ್ಲಿ ಇನ್ನಷ್ಟು ಹಿಡಿತ ಬೇಕಿತ್ತು! ಇವರಿಬ್ಬರನ್ನು ಕಿಡ್ನ್ಯಾಪ್ ಮಾಡಿದ ವ್ಯಕ್ತಿ ಯಾರು? ಯಾಕೆ ಒಂದೇ ಮನೆಯಲ್ಲಿ ಇರಿಸಿದ್ದಾರೆ? ಇವರಿಬ್ಬರ ನಡುವೆ ಪ್ರೀತಿ ಹುಟ್ಟುವಂತೆ ಮಾಡುತ್ತಿರುವುದರ ಹಿಂದಿನ ಉದ್ದೇಶವೇನು? ಇಬ್ಬರೂ ಒಂದಾದರೆ ಅಪಹರಣಕಾರನಿಗೆ ಸಿಗುವ ಲಾಭವೇನು? ಎಂಬ ಪ್ರಶ್ನೆಗಳೇ ಚಿತ್ರದ ಪ್ರಮುಖ ಕುತೂಹಲದ ಅಂಶಗಳು. ವಿಶೇಷವಾಗಿ ನಾಯಕಿಯ ಬಳಿ ಅಪಾರ ಹಣ, ಆಸ್ತಿ, ಅಧಿಕಾರವಿದ್ದರೂ ಏನೂ ಇಲ್ಲದ ನಾಯಕನನ್ನೇ ಆಕೆ ಪ್ರೀತಿಸುತ್ತಾಳೆಯೇ ಎಂಬ ಅಂಶವೂ ಕಥೆಗೆ ಮತ್ತೊಂದು ಆಯಾಮ ನೀಡುತ್ತದೆ.
ಆಂಧ್ರ ಮೂಲದ ನಿರ್ಮಾಪಕರು ಎ. ಎಂ. ಎಂ. ಕೃಷ್ಣ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಪೊಲೀಸ್ ಕಮಿಷನರ್ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅವರ ಮಗನಾಗಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ವಿನೋದ್ ಪ್ರಭಾಕರ್ ಅವರ ಪಾತ್ರವೇ ಚಿತ್ರದ ಪ್ರಮುಖ ಸಸ್ಪೆನ್ಸ್ ಅಂಶಗಳಲ್ಲಿ ಒಂದಾಗಿದೆ. ಅವರ ಪಾತ್ರದ ಹಿಂದಿನ ಉದ್ದೇಶ ಮತ್ತು ಕಥೆಯಲ್ಲಿನ ಸಂಬಂಧ ಪ್ರೇಕ್ಷಕರಿಗೆ ಕುತೂಹಲ ಮೂಡಿಸುತ್ತದೆ.
ಚಿತ್ರದ ಕಥಾಹಂದರದಲ್ಲಿ ಒಂದು ಒಳ್ಳೆಯ ಎಳೆಯಿದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಗೆ ತರುವ ಅವಕಾಶವಿತ್ತು. ಕೆಲವು ದೃಶ್ಯಗಳು, ಸಂಭಾಷಣೆಗಳು ಮತ್ತು ಕಲಾವಿದರ ಅಭಿನಯಕ್ಕೆ ನಿರ್ದೇಶಕ ಶ್ರೀನಿವಾಸ ಮಂಡ್ಯ ಹೆಚ್ಚಿನ ಗಮನ ನೀಡಬಹುದಿತ್ತು. ಕಥೆಯಲ್ಲಿರುವ ಸಸ್ಪೆನ್ಸ್ ಮತ್ತು ಪ್ರೇಮಕಥೆಯ ನಡುವಿನ ಸಮತೋಲನವನ್ನು ಇನ್ನಷ್ಟು ಚೆನ್ನಾಗಿ ಕಾಯ್ದುಕೊಂಡಿದ್ದರೆ ಚಿತ್ರ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು. ಕೆಲವು ಸನ್ನಿವೇಶಗಳಲ್ಲಿ ತಾರ್ಕಿಕತೆ ಮತ್ತು ನಿರೂಪಣೆಯ ವೇಗದ ಕಡೆಗೆ ನಿರ್ದೇಶಕ ಶ್ರೀನಿವಾಸ ಇನ್ನಷ್ಟು ಹೋಂವರ್ಕ್ ಮಾಡುವ ಅಗತ್ಯವಿತ್ತು.
ಒಬ್ಬರ ಬಳಿ ಸಾವಿರಾರು ಕೋಟಿ ಆಸ್ತಿ ಇರಬಹುದು. ಅಧಿಕಾರ, ಅಂತಸ್ತು, ಐಷಾರಾಮಿ ಬದುಕು ಎಲ್ಲವೂ ಇರಬಹುದು. ಮತ್ತೊಬ್ಬನ ಬಳಿ ಇವೆಲ್ಲವೂ ಇಲ್ಲದಿರಬಹುದು. ಆದರೆ ನಿಜವಾದ ಪ್ರೀತಿಗೆ ಹಣ, ಆಸ್ತಿ, ಅಂತಸ್ತು ಮುಖ್ಯವಲ್ಲ; ಪ್ರಾಮಾಣಿಕ ಮನಸ್ಸು, ವಿಶ್ವಾಸ ಮತ್ತು ಪರಸ್ಪರ ಪ್ರೀತಿ ಮುಖ್ಯ ಎಂಬ ಸಂದೇಶವನ್ನು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ.
ಒಟ್ಟಿನಲ್ಲಿ ‘ರಿಲ್ಯಾಕ್ಸ್ ಆಗಿ’ ವಿಭಿನ್ನ ಕಥೆಯ ಎಳೆಯೊಂದಿಗೆ ಹಾಸ್ಯ, ಪ್ರೀತಿ ಮತ್ತು ಸಸ್ಪೆನ್ಸ್ ಬೆರೆಸಿರುವ ಪ್ರಯತ್ನ. ಕಥೆಯ ಸಾರಾಂಶ ಚೆನ್ನಾಗಿದ್ದರೂ ಅದನ್ನು ನಿರೂಪಿಸಿರುವ ರೀತಿಯಲ್ಲಿ ಇನ್ನಷ್ಟು ಹಿಡಿತ ಮತ್ತು ಹೊಸತನ ಇರಬೇಕಿತ್ತು. ಆದರೂ ಕೋಮಲ್ ಅವರ ಹಾಸ್ಯ ಹಾಗೂ ಒಂದಷ್ಟು ಕುತೂಹಲಕಾರಿ ಸನ್ನಿವೇಶಗಳಿಗಾಗಿ ಚಿತ್ರವನ್ನು ನೋಡಬಹುದು. ಪ್ರೇಕ್ಷಕರು ಮನರಂಜನೆ ಮತ್ತು ಹಾಸ್ಯವನ್ನು ನಿರೀಕ್ಷಿಸಿ ಚಿತ್ರಮಂದಿರಕ್ಕೆ ಹೋಗಬಹುದು.









