‘ಎಕ್ಕಾ’ ಚಿತ್ರದ ಜನಪ್ರಿಯ ಹಾಡಿನ ಸಾಲು ಈಗ ಸಿನಿಮಾ ಶೀರ್ಷಿಕೆ: ‘ಬ್ಯಾಂಗಲ್ ಬಂಗಾರಿ’ಗೆ ಅದ್ಧೂರಿ ಚಾಲನೆ.
ಯುವ ರಾಜಕುಮಾರ್ ಅಭಿನಯದ ‘ಎಕ್ಕಾ’ ಚಿತ್ರದ ಜನಪ್ರಿಯ ಗೀತೆ ‘ಬ್ಯಾಂಗಲ್ ಬಂಗಾರಿ’ ಇದೀಗ ಬೆಳ್ಳಿತೆರೆಯ ಹೊಸ ಚಿತ್ರದ ಹೆಸರಾಗಿದೆ.
ಶಂಕರ್ ರಾಮ್ ರೆಡ್ಡಿ ನಿರ್ಮಾಣದಲ್ಲಿ, ಮರಡಿಹಳ್ಳಿ ಚಂದ್ರ ನಾಗ್ ನಿರ್ದೇಶನದ ಈ ನೂತನ ಚಿತ್ರಕ್ಕೆ ‘ಬ್ಯಾಂಗಲ್ ಬಂಗಾರಿ’ ಎಂದು ಶೀರ್ಷಿಕೆ ಇಡಲಾಗಿದ್ದು, ಇತ್ತೀಚೆಗೆ ಬೆಂಗಳೂರಿನ ನಂದಿನಿ ಬಡಾವಣೆಯ ಬಲಮುರಿ ಪ್ರಸಿದ್ಧಿ ಶ್ರೀವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.

‘ಮುಂಗಾರು ಮಳೆ’ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿಸಿದರೆ, ಶಾಸಕ ಗೋಪಾಲಯ್ಯ ಅವರು ಕ್ಯಾಮೆರಾಗೆ ಚಾಲನೆ ನೀಡಿದರು. ಚಿತ್ರತಂಡಕ್ಕೆ ಶುಭ ಹಾರೈಸಿದ ಗಣ್ಯರು, ಸಿನಿಮಾ ಯಶಸ್ವಿಯಾಗಲಿ ಎಂದು ಆಶಿಸಿದರು.‘ಬ್ಯಾಂಗಲ್ ಬಂಗಾರಿ’ ಪ್ರೇಮಕಥೆಯ ಹಿನ್ನೆಲೆಯಲ್ಲಿ ಸಾಗುವ ಕ್ರೈಮ್ ಅಂಶಗಳನ್ನೂ ಒಳಗೊಂಡಿರುವ ಚಿತ್ರ.
ಸುನೀಲ್ ಶಶಿಧರ್ ಹಾಗೂ ಪ್ರಕೃತಿ ರಾಜೇಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ರವಿ ಕಾಳೆ, ಸಂಪತ್ ಮೈತ್ರೇಯ ಸೇರಿದಂತೆ ಹಲವು ಹಿರಿಯ ಹಾಗೂ ಪ್ರತಿಭಾವಂತ ಕಲಾವಿದರು ತಾರಾಬಳಗದಲ್ಲಿದ್ದಾರೆ.

ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ನಿರ್ದೇಶಕ ಮರಡಿಹಳ್ಳಿ ಚಂದ್ರ ನಾಗ್ ಅವರೇ ರಚಿಸಿದ್ದಾರೆ. ಸಂಭಾಷಣೆಯನ್ನು ‘ಫುಲ್ ಮೀಲ್ಸ್’ ಚಿತ್ರದ ನಿರ್ದೇಶಕ ಎನ್. ವಿನಾಯಕ ಬರೆಯುತ್ತಿದ್ದಾರೆ. ಟಾಪ್ ಸ್ಟಾರ್ ರೇಣು ಸಂಗೀತ ನಿರ್ದೇಶನ ಮಾಡುತ್ತಿದ್ದು, ಸತೀಶ್ ಕೆ ಛಾಯಾಗ್ರಹಣ ಹಾಗೂ ಗಿರೀಶ್ ಕುಮಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕೆ. ಕಲ್ಯಾಣ್, ಲೋಕೇಶ್ ಕೃಷ್ಣ ಹಾಗೂ ಟಾಪ್ ಸ್ಟಾರ್ ರೇಣು ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ.

ವಿಜಯ್ ಪ್ರಕಾಶ್, ಕೈಲಾಶ್ ಖೇರ್, ಜಸ್ಕರಣ್ ಸಿಂಗ್ ಹಾಗೂ ಅನುರಾಧಾ ಭಟ್ ಸೇರಿದಂತೆ ಖ್ಯಾತ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಲಿದ್ದಾರೆ.
ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು, ನಂತರ ಸಕಲೇಶಪುರದಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ತಮ್ಮ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಮರಡಿಹಳ್ಳಿ ಚಂದ್ರ ನಾಗ್, “ಅನಂತ ಚತುರ್ದಶಿಯ ಶುಭದಿನದಂದು ‘ಬ್ಯಾಂಗಲ್ ಬಂಗಾರಿ’ಗೆ ಚಾಲನೆ ದೊರೆತಿದೆ. ಪ್ರೀತಿ ಮತ್ತು ಕ್ರೈಮ್ ಎರಡನ್ನೂ ಒಳಗೊಂಡ ಕಥೆ ಇದಾಗಿದೆ. ಕಥೆ ಹಾಗೂ ಚಿತ್ರಕಥೆಯನ್ನು ನಾನೇ ಬರೆದಿದ್ದೇನೆ. ಶಂಕರ್ ರಾಮ್ ರೆಡ್ಡಿ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ,” ಎಂದು ತಿಳಿಸಿದರು.

ನಾಯಕ ಸುನೀಲ್ ಶಶಿಧರ್ ಅವರಿಗೆ ‘ಬ್ಯಾಂಗಲ್ ಬಂಗಾರಿ’ ನಾಯಕನಾಗಿ ಎರಡನೇ ಸಿನಿಮಾ. ಚಿತ್ರದಲ್ಲಿ ಅವರು AI ಎಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಆಡಿಶನ್ ಮೂಲಕ ಈ ಪಾತ್ರಕ್ಕೆ ಆಯ್ಕೆಯಾಗಿದ್ದೇನೆ. ಪಾತ್ರಕ್ಕೆ ಬೇಕಾದ ನಟನೆ ತರಬೇತಿಯನ್ನು ಪಡೆದುಕೊಂಡಿದ್ದೇನೆ,” ಎಂದು ಅವರು ಹೇಳಿದರು.
ನಾಯಕಿ ಪ್ರಕೃತಿ ರಾಜೇಂದ್ರ ಅವರ ಪಾತ್ರದ ಹೆಸರು ಕಾವ್ಯ. ನಿರ್ದೇಶಕರು ಪಾತ್ರದ ಬಗ್ಗೆ ವಿವರಿಸಿದಾಗಲೇ ಪಾತ್ರ ಇಷ್ಟವಾಯಿತು ಎಂದಿರುವ ಅವರು, ತಾವು ಮೂಲತಃ ನೃತ್ಯಗಾರ್ತಿಯಾಗಿದ್ದು, ಈ ಚಿತ್ರದಲ್ಲೂ ನೃತ್ಯಕ್ಕೆ ಅವಕಾಶವಿದೆ ಎಂದು ಸಂತಸ ಹಂಚಿಕೊಂಡರು.
ನಿರ್ದೇಶಕರು ಹೇಳಿದ ಕಥೆ ಇಷ್ಟವಾದ ಕಾರಣ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದಾಗಿ ನಿರ್ಮಾಪಕ ಶಂಕರ್ ರಾಮ್ ರೆಡ್ಡಿ ತಿಳಿಸಿದರು.

ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರಿಗೆ ಅವರು ಧನ್ಯವಾದ ಅರ್ಪಿಸಿದರು.
ಮುಹೂರ್ತದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಟಾಪ್ ಸ್ಟಾರ್ ರೇಣು, ಛಾಯಾಗ್ರಾಹಕ ಸತೀಶ್, ನಟ ಸಂಪತ್ ಮೈತ್ರೇಯ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.
ಜನಪ್ರಿಯ ಗೀತೆಯ ಸಾಲಿನಿಂದ ಶೀರ್ಷಿಕೆ ಪಡೆದುಕೊಂಡಿರುವ ‘ಬ್ಯಾಂಗಲ್ ಬಂಗಾರಿ’, ಪ್ರೀತಿ–ಕ್ರೈಮ್ ಕಥಾಹಂದರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.







