ಸ್ಪಾರ್ಕ್ ಚಿತ್ರ ವಿಮರ್ಶೆ – ಬ್ಯಾಂಕ್ ದಿವಾಳಿಯ ಸುತ್ತ ಬಾವ ಭಾಮೈದನ ಜಿದ್ದಾಜಿದ್ದಿಯ ಸ್ಪಾರ್ಕ್

ಚಿತ್ರ –  ಸ್ಪಾರ್ಕ್
ನಿರ್ಮಾಪಕರು –   ಗರಿಮಾ ಅವಿನಾಶ್
ನಿರ್ದೇಶನ –  ಮಹಾಂತೇಶ್ ಅಂದ್ರ ಹಾಳ
ಸಂಗೀತ –  ಸಚಿನ್ ಬಸ್ರೂರ್
ಛಾಯಾಗ್ರಾಹಣ – ಸ್ವಾಮಿ ಜೆ. ಗೌಡ

Rating – 3 /5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐  / 5

ಕಲಾವಿದರು – ನೆನಪಿರಲಿ ಪ್ರೇಮ್, ನಿರಂಜನ್, ಭಾವನಾ ಮೆನನ್, ರಚನಾ ಇಂದರ್, ರಮೇಶ್ ಇಂದಿರಾ, ನೆ.ಲ.ನರೇಂದ್ರಬಾಬು, ಬಲ ರಾಜವಾಡಿ, ಧರ್ಮಣ್ಣ ಕಡೂರು, ಅಭಯ್ ವಸಿಷ್ಠ, ಹಾಗೂ ಮಹಾಂತೇಶ್ ಹೀರೇಮಠ್,  ಮುಂತಾದವರು.

ಪೊಲೀಸು ಮೀಡಿಯಾ ಕರೀ ಕೋಟು, ಖಾದಿ. ಸಂವಿಧಾನದ ಈ ನಾಲ್ಕು ಅಂಗಗಳು ಒಂದಕ್ಕೊಂದು ಆಗಾಗ ಪೈಪೋಟಿ, ಚಾಲೆಂಜು, ಖಡಕ್ ಡೈಲಾಗ್ ಗಳು ಇರುವಂತಹ ಹಲವಾರು ಸಿನಿಮಾಗಳು ಬಂದಿದೆ.ಈಗ ಅದೇ ನಿಟ್ಟಿನಲ್ಲಿ ನಮ್ಮುಂದೆ ಬಂದಿರೋದು ಸ್ಪಾರ್ಕ್ ಚಿತ್ರ.

ಸಮಾಜದಲ್ಲಿ ಹೊತ್ತಿಕೊಂಡ ಕಿಡಿ ಒಂದರ ಸುತ್ತ ಕಥೆ ಸಾಗುತ್ತದೆ. ಆ ಕಿಡಿಗೆ ಪೂರಕವಾಗಿ ಕೋ ಆಪರೇಟಿವ್ ಬ್ಯಾಂಕ್ ಗಳ ದಿವಾಳಿ.
ಅದೆಷ್ಟೋ ಜನ ಶ್ರೀಸಾಮಾನ್ಯರ ಕಷ್ಟಪಟ್ಟ ಹಣ ಬ್ಯಾಂಕಿನಲ್ಲಿಟ್ಟರೆ, ಆ ಬ್ಯಾಂಕುಗಳು ರಾತ್ರೋ ರಾತ್ರಿ ದಿವಾಳಿ ಯಾದರೆ ಅಮಾಯಕ ಜನರ ಜೀವವೇ ಹೋದಂತೆ.

ಇದೇ ರೀತಿ ಕಾರಣವಿಲ್ಲದೆ ನಾಲ್ಕಾರು ಬ್ಯಾಂಕುಗಳು ದಿವಾಳಿಯಾಗುತ್ತವೆ. ದಿವಾಳಿಯಾದ ಬ್ಯಾಂಕಿನಲ್ಲಿಟ್ಟಿದ್ದ ಹಣ ಏನಾಯ್ತು..?  ಬ್ಯಾಂಕಿನ ಮ್ಯಾನೇಜರ್ ಇತರೆ ಅಧಿಕಾರಿಗಳು ಕೆಲವರು ಕಣ್ಮರೆ, ಇನ್ನು ಕೆಲವರು ಆತ್ಮಹತ್ಯೆ, ಇನ್ನು ಕೆಲವರು ಜೈಲು ಪಾಲು. ಹಾಗಾದರೆ ಯಾರನ್ನು ಹಣ ಕೇಳುವುದು ಎಂದು ಗೊತ್ತಾಗದೆ ಬ್ಯಾಂಕಿನ ಮುಂದೆ ಕಂಗಾಲಾಗಿ ಕಣ್ಣೀರಿಡುತ್ತಾ ಗೋಳಾಡುವ ಜನ, ಅವರನ್ನು ನೂಕಾಡುತ್ತ, ಕಿರೀಚಡುತ್ತಾ ನಿಯಂತ್ರಿಸುವ ಪೊಲೀಸರು, ಇದನ್ನೇ ರೋಚಕವಾಗಿ ಚಿತ್ರೀಕರಿಸಿ, TRP ಗಾಗಿ ಒಂದಷ್ಟು ಪಂಚಿಂಗ್ ಹೆಡ್ ಲೈನ್ ಗಳನ್ನು ಕೊಟ್ಟು ಬಿತ್ತರಿಸುವಲ್ಲಿ ಪೈಪೋಟಿಗೆ ಬಿದ್ದ ಮಾಧ್ಯಮಗಳು.

ನಗರದಲ್ಲಿ ಈಗಾಗಲೇ ನಾಲ್ಕಾರು ಬ್ಯಾಂಕುಗಳು ದಿವಾಳಿಯಾಗಿದೆ ಹಣ ಕಳೆದುಕೊಂಡ ಜನ ನಿತ್ಯ ಗೋಳಾಡುತ್ತಿದ್ದಾರೆ ಈ ಕೇಸೂ ಎಲ್ಲಿಗೆ ಬಂತು, ಏನಾಯ್ತು ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಪೊಲೀಸರು ಉತ್ತರಿಸಲಾಗದೆ ಅದರಲ್ಲೂ ಪೊಲೀಸ್ ಅಧಿಕಾರಿ S.P. ರಂಜಿತ್ ಕುಮಾರ್ ( ಲವ್ಲಿ ಸ್ಟಾರ್ ಪ್ರೇಮ್) ಮಾಧ್ಯಮಗಳ ಮೇಲೆ ಹರಿ ಹಾಯುತ್ತಾರೆ.
ಸಮಾಜಕ್ಕೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಇಲಾಖೆ ಮತ್ತು ಅನ್ಯಾಯವನ್ನು ಸಮಾಜದ ಮುಂದೆ ಬಿಚ್ಚಿಡುವ ಮಾಧ್ಯಮ ಈ ಎರಡರ ಒಂದಕ್ಕೊಂದು ತಿಕ್ಕಾಟಕ್ಕೆ ಅಲ್ಲೊಂದು ಸ್ಪಾರ್ಕ್ ಹೊತ್ತಿಕೊಳ್ಳುತ್ತದೆ.

ಆ ಕಿಡಿಯೇ ಚಿತ್ರದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಸಾಗುತ್ತದೆ.


ಸೂಪರ್ ಡೆಂಟ್ ಆಫ್ ಪೊಲೀಸ್ ಅಧಿಕಾರಿಯಾಗಿ ನೆನಪಿರಲಿ ಪ್ರೇಮ್ ಹೊಸ ಗೆಟಪ್ ನೊಂದಿಗೆ, ಹೊಸ ಪಾತ್ರದೊಂದಿಗೆ, ಖಳನಟ ನಂತೆ
ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ.
ಮುದ್ದಾದ ನಾಯಕಿಯರ ಕಾಲ ಗೆಜ್ಜೆ ಸದ್ದಿಗೆ ಸರಿಯಾಗಿ ಹೆಜ್ಜೆ ಹಾಕಿ ಕುಣಿಯುತ್ತಿದ್ದ,  ಲವರ್ ಬಾಯ್ ಆಗಿ ಜನ ಮಾನಸದಲ್ಲಿ  ನೆನಪಿನಲ್ಲಿ ಉಳಿದಿರುವ ನೆನಪಿರಲಿ ಪ್ರೇಮ್ ಇಲ್ಲಿ ಒಬ್ಬ ಖಡಕ್ ಪೊಲೀಸ್ ಅಧಿಕಾರಿ. ಯಾವುದೇ ಕೇಸ್ ಆಗಲಿ ನಿರ್ಭಯವಾಗಿ ತನ್ನ ಎದೆಗಾರಿಕೆಯಿಂದ ನಿಭಾಯಿಸಬಲ್ಲಂತ, ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿ ಪ್ರೇಮ್ ಅಭಿನಯಿಸಿದ್ದಾರೆ.
ಚಿತ್ರದ ದೊಡ್ಡ ಹೈಲೈಟ್.
ಅಂದ್ರೆ ಲವ್ಲಿ ಸ್ಟಾರ್ ಪ್ರೇಮ್ ಅಭಿನಯ, ಅವರ ಗೆಟಪ್, ಅವರ ಡೈಲಾಗ್ ಡೆಲಿವರಿ, ಅವರ ಲುಕ್ಕು, ಆಕ್ಟಿಂಗ್ ಪರ್ಫಾರ್ಮೆನ್ಸ್,  ಎಲ್ಲವೂ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಇಲ್ಲಿಂದ ಪ್ರೇಮ್ ಹೊಸ ಅಧ್ಯಾಯ ಶುರು ಅಂತ ಹೇಳಬಹುದು.

ಈಗಾಗಲೇ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಗೆ ಪರಿಚಿತವಾಗಿರುವ ನಿರಂಜನ್ ಸುಧೀಂದ್ರ ಈ ಚಿತ್ರದಲ್ಲಿ ಒಬ್ಬ ಮಾಧ್ಯಮ ಪ್ರತಿನಿಧಿಯಾಗಿ,  ಪರಿಪೂರ್ಣ ಆಕ್ಷನ್ ಮತ್ತು ರೋಮ್ಯಾಂಟಿಕ್ ಹೀರೋ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರಂಜನ್ ಆಕ್ಷನ್, ಡಾನ್ಸ್, ರೋಮ್ಯಾನ್ಸ್, ಆಕ್ಟಿಂಗ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ನಿರಂಜನ್ ಪಾತ್ರವನ್ನು ನಿಭಾಯಿಸುವಲ್ಲಿ ನೀಲಾಜಾಲವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಕನ್ನಡದಲ್ಲಿ ಒಬ್ಬ ಸ್ಟಾರ್ ನಟನಾಗಿ ಉಳಿಯುವ ಎಲ್ಲ ಲಕ್ಷಣಗಳು ನಿರಂಜನ್ ನಲ್ಲಿ ಕಾಣುತ್ತಿದೆ.

ಬಹಳ ದಿನಗಳ ನಂತರ ಭಾವನಾ ಮೆನನ್ ( ಜಾಕಿ ಭಾವನಾ ) ಒಬ್ಬ ಲಾಯರಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಈ ಚಿತ್ರದ ಆಶ್ಚರ್ಯಕರ ಬಿಗ್ ಟ್ವಿಸ್ಟ್ ಆಗುವಂತ ಪಾತ್ರವನ್ನು ನಿಭಾಯಿಸಿದ್ದಾರೆ.

ಬ್ಯಾಂಕುಗಳ ದಿವಾಳಿಯ ಹಿಂದೆ ಬಿದ್ದ ಪೊಲೀಸ್ ಅಧಿಕಾರಿ ರಂಜಿತ್ ಕುಮಾರ್ ( ಲವ್ಲಿ ಸ್ಟಾರ್ ಪ್ರೇಮ್ ) ಮತ್ತು ಮಾಧ್ಯಮ ಪ್ರತಿನಿಧಿ ಅಭಿರಾಮ್ ( ನಿರಂಜನ್ ) ಇಬ್ಬರ ನಡುವೆ ಯಾರು ಮೊದಲು ಈ ಕೇಸನ್ನು ಬಗೆಹರಿಸುತ್ತಾರೆ ಎಂಬ  ಪೈಪೋಟಿಯ ಮಧ್ಯೆ ಪೊಲೀಸ್ ಅಧಿಕಾರಿಯ ತಂಗಿ (ರಚನಾ ಇಂದರ್ ) ಮತ್ತು ನಾಯಕ ಅಭಿರಾಮ್ ಜೊತೆ ಪ್ರೇಮ ಅರಳಿ ಘಮಘಮಿಸುತ್ತದೆ.
ಇದರಿಂದಾಗಿ ಪೊಲೀಸ್ ಅಧಿಕಾರಿ ಮತ್ತು ಪತ್ರಕರ್ತ ನ ಮಧ್ಯೆ ಪರ್ಸನಲ್ ಮತ್ತು ಪ್ರೊಫೆಶನ್ ಜಿದ್ದಾಜಿದ್ದಿ ಹೆಚ್ಚಾಗುತ್ತದೆ.

ರಚನಾ ಇಂದರ್ ಪೊಲೀಸ್ ಅಧಿಕಾರಿಯ ತಂಗಿಯಾಗಿ, ಒಬ್ಬ ಮೆಡಿಕಲ್ ಸ್ಟೂಡೆಂಟ್ ಆಗಿ, ಮಾಧ್ಯಮ ಪ್ರತಿನಿಧಿಯ ಪ್ರೇಮಿಯಾಗಿ, ಗ್ಲಾಮರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ರಚನಾ ಇಲ್ಲೂ ಕೂಡ ಲವಲವಿಕೆಯಿಂದ ಅಸನ್ಮುಖಿಯಾಗಿ ತೆರೆ ಮೇಲೆ ಮಿಂಚಿದ್ದಾರೆ.

ಧರ್ಮಣ್ಣ ಕಡೂರ್ ಥಮ್ ನೈಲ್ ಯೂಟ್ಯೂಬರ್ ಆಗಿ ಚಿತ್ರದಲ್ಲಿ ಹಾಸ್ಯದ ಕೊರತೆಯನ್ನು ನೀಗಿಸಿದ್ದಾರೆ.

ನಟ ರಾಜಕಾರಣಿ ನೆ.ಲ. ನರೇಂದ್ರಬಾಬು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ. ಇಲ್ಲೂ ಕೂಡ ಒಬ್ಬ ಪ್ರಾಮಾಣಿಕ ರಾಜಕಾರಣಿಯಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹಾಗೆ ರಮೇಶ್ ಇಂದಿರಾ ಕೂಡ ಒಬ್ಬ ರಾಜಕೀಯ ಗೇಮ್ ಚೇಂಜರಾಗಿ ಕಾಣಿಸಿಕೊಂಡಿದ್ದಾರೆ.

ನಾಲ್ಕಾರು ಬ್ಯಾಂಕುಗಳ ದಿವಾಳಿಯ  ಅಸಲಿ ಕಥೆ ಏನು, ? ಆ ಬ್ಯಾಂಕಿನ ಹಣ ಹೋಗಿದ್ದಾದರೂ ಎಲ್ಲಿಗೆ, ? ಇದರ ಹಿಂದೆ ಯಾರ ಕೈವಾಡವಿದೆ, ? ಈ ಒಂದು ದಂದೆ ಶುರುವಾಗಿದ್ದು ಹೇಗೆ. ಎನ್ನುವ ಖದೀಮರ ಜಾಡನ್ನು ಹಿಡಿದು ಹೋರಾಡುವ “ಭಾವ – ಭಾಮೈದನ” ಕಥೆ ರೋಚಕವಾಗಿದೆ.

ಚಿತ್ರದ ಕ್ಲೈಮ್ಯಾಕ್ಸ್ ನಿಗೂಢವಾದ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅನ್ನು ನಿರ್ದೇಶಕ ಮಹಾಂತೇಶ ಹಂದ್ರಾಲ್
ನೀಡಿದ್ದಾರೆ.
ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ನೈಜ ಕಥೆಗಳ ಸುತ್ತ ಕಥೆಯನ್ನು ಹೆಣೆದು, ಬ್ಯಾಂಕುಗಳ ಮೋಸ, ವಂಚನೆ,? ದಿವಾಳಿತನದ ಬಗ್ಗೆ ಜನರಿಗೆ ಎಚ್ಚರಿಸುವಂತಹ ಕಥೆಯನ್ನ ತೆರೆ ಮೇಲೆ ಸ್ಪಾರ್ಕ್  ಚಿತ್ರವಾಗಿ ನಿರೂಪಿಸಿದ್ದಾರೆ ನಿರ್ದೇಶಕ ಮಹಾಂತೇಶ್ ಹಂದ್ರಾಲ್

ನಿರ್ದೇಶಕರಿಗೆ ಒಂದಷ್ಟು ದೃಶ್ಯಗಳ ಮೇಲೆ ಗಂಭೀರವಾದ ಹಿಡಿತ ಇದ್ದಿದ್ದರೆ ಚಿತ್ರ ಇನ್ನೂ ಸೊಗಸಾಗಿ ಮೂಡಿ ಬರುತ್ತಿತ್ತು. ಕಥೆ ಹೊಸದೇನಲ್ಲ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಇಂಥ ವಿಷಯಗಳನ್ನು ನೋಡಬಹುದು. ಆದರೆ ನಿರೂಪಣೆಯ ಶೈಲಿ ವಿಭಿನ್ನವಾಗಿದೆ.

ಚಿತ್ರದಲ್ಲಿ ರಘು ನಿಡುವಳ್ಳಿ ಅವರ ಸಂಭಾಷಣೆಯಲ್ಲಿ ಯಾವುದೇ ದ್ವಂದ್ವ ಮತ್ತು ಅಸಭ್ಯ ಡೈಲಾಗ್ ಗಳು ಇಲ್ಲದಿರುವುದು ಮೆಚ್ಚುವಂಥದ್ದು.

ಸಚ್ಚಿನ್ ಬಸ್ರೂರ್ ಸಂಗೀತದಲ್ಲಿ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕಥೆಗೆ ಸಾಥ್ ನೀಡಿದೆ.
ಸ್ವಾಮಿ ಜೆ.ಗೌಡ ಅವರ ಛಾಯಾಗ್ರಹಣ ಚಿತ್ರಕ್ಕೆ ಅಚ್ಚುಕಟ್ಟಾದ ಸೊಗಸಾದ ಫ್ರೇಮನ್ನು ಕಟ್ಟಿಕೊಟ್ಟಿದೆ.

ನಿರ್ಮಾಪಕರಾದ  ಗರಿಮಾ ಅವಿನಾಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಹಾಗೂ ತಮ್ಮ ಮಗನಾದ ಎನ್ ಆರ್ ಐ ಮೂಲದ ಅಭಯ್ ವಸಿಷ್ಠರನ್ನು ಖಳನಟನನ್ನಾಗಿ ಬೆಳ್ಳಿ ತೆರೆಗೆ ಪರಿಚಯಿಸಿದ್ದಾರೆ.
ಅಭಯ್ ವಸಿಷ್ಠ ಒಬ್ಬ ಕಳನಟನಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಒಟ್ಟಿನಲ್ಲಿ ಒಂದು ಮಾಸ್, ಎಂಟರ್ಟೈನ್ಮೆಂಟ್ ಸಸ್ಪೆನ್ಸ್ ಸಾಮಾಜಿಕ ಕಳಕಳಿಯ ಚಿತ್ರ “ಸ್ಪಾರ್ಕ್”  ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor