ಬ್ರಿಟೀಷರ ಕೋಟೆಯೊಳಗೆ ಬೃಂದಾವನದ ಮೀರಾ, ರಾಧಾ,ಮಾಧವರ ಪ್ರೇಮಕಥೆ
ಇಬ್ಬರು ಸುಂದರಿಯರ ನಡುವೆ ಕೊಳಲ ನುಡಿಸುವ ಮಾಧವ… ಹೊರಜಗತ್ತಿನ ಪರಿಚಯವೇ ಇಲ್ಲದೆ, ಕೋಟೆಯೊಳಗಿನ ಬೃಂದಾವನವೇ ತನ್ನ ಪ್ರಪಂಚವೆಂದು ಬದುಕುವ ಬೃಂದಾವಿಹಾರಿ! ಕೃಷ್ಣನ ಬಾಲ್ಯದ ತುಂಟಾಟಗಳನ್ನು ನೆನಪಿಸುವ ಮುಗ್ಧತೆ, ರಾಧೆಯ ಮೇಲಿನ ನಿಷ್ಕಲ್ಮಶ ಪ್ರೀತಿ, ಬಣ್ಣಬಣ್ಣದ ಹಾಡು, ಕುಣಿತ, ಅದ್ಧೂರಿ ದೃಶ್ಯಗಳು… ಇವೆಲ್ಲವನ್ನೂ ಹೊತ್ತು ತೆರೆಗೆ ಬಂದಿರುವ ಚಿತ್ರವೇ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬೃಂದಾವಿಹಾರಿ’.
ಪ್ರೇಮಕಥೆಯೊಂದನ್ನು ಸುಂದರವಾಗಿ ಕಟ್ಟಿಕೊಟ್ಟು, ಪ್ರೇಕ್ಷಕನನ್ನು ಭಾವನಾತ್ಮಕ ಲೋಕಕ್ಕೆ ಕರೆದೊಯ್ಯುವ ಚಿತ್ರ.

ಬ್ರಿಟಿಷರ ಆಳ್ವಿಕೆಯ ಕಾಲಘಟ್ಟ. ಬ್ರಿಟಿಷರೇ ನಿರ್ಮಿಸಿದ ಕೋಟೆಯೊಳಗಿರುವ ಒಂದು ಸುಂದರ ಊರು – ಬೃಂದಾವನ. ಕೋಟೆಯ ಹೊರಜಗತ್ತಿನ ಪರಿಚಯವೇ ಇಲ್ಲದ ಅನಾಥ ಬಾಲಕ ಮಾಧವ, ಅಜ್ಜಿ ಮತ್ತು ತಾತನ ಪ್ರೀತಿಯ ಆರೈಕೆಯಲ್ಲಿ ಬೆಳೆಯುತ್ತಾನೆ. ಬಾಲ್ಯದಲ್ಲಿಯೇ ಕೋಟೆಯಿಂದ ಹೊರಗೆ ಹೋಗಬಾರದು ಎಂಭ ತಾತ, ಅಜ್ಜಿಯರ ಮಾತಿಗೆ ಕಟ್ಟುಬಿದ್ದ ಮಾಧವ ಎಂದಿಗೂ ಕೋಟೆಯ ಹೊರಗೆ ಹೋಗುವುದಿಲ್ಲ ಎಂಬ ಹಠ ತೊಟ್ಟಿರುವ ಈ ಹುಡುಗನ ತುಂಟಾಟಗಳು, ಆಟಗಳು ಮತ್ತು ಮುಗ್ಧ ಸ್ವಭಾವ ನೋಡಿದಾಗ ಕೃಷ್ಣನ ಬಾಲಲೀಲೆಗಳು ನೆನಪಾಗುತ್ತವೆ.

ಹೀಗೆ ಬೆಳೆದು ದೊಡ್ಡವನಾದ ಮಾಧವನ ಬದುಕಿಗೆ ಅನಿರೀಕ್ಷಿತವಾಗಿ ಪ್ರವೇಶಿಸುವವಳು ರಾಧೆ. ಕೋಟೆಯ ಹೊರಗಿನಿಂದ ಬಂದ ಆಕೆಯ ಸೌಂದರ್ಯ, ಆಚಾರ-ವಿಚಾರ ಮತ್ತು ವ್ಯಕ್ತಿತ್ವಕ್ಕೆ ಮನಸೋಲುವ ಮಾಧವ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾನೆ. ಅಲ್ಲಿಂದ ಆರಂಭವಾಗುವ ಇವರ ಪ್ರೇಮ ಪಯಣ ಹಾಡು, ಕುಣಿತ, ಪ್ರಣಯದ ಸನ್ನಿವೇಶಗಳ ಮೂಲಕ ಸುಂದರವಾಗಿ ತೆರೆದುಕೊಳ್ಳುತ್ತದೆ.
ಬೃಂದಾವನದ ಹಿನ್ನೆಲೆ, ಮಾಧವನ ಕೃಷ್ಣನಂತಹ ವ್ಯಕ್ತಿತ್ವ ಹಾಗೂ ರಾಧೆಯೊಂದಿಗಿನ ಪ್ರೇಮದ ಸನ್ನಿವೇಶಗಳು ಪೌರಾಣಿಕ ರಾಧಾಕೃಷ್ಣರ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ.
ಇದರ ನಡುವೆ ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯ ಮತ್ತು ಸ್ಥಳೀಯರ ಬದುಕಿನ ಮೇಲಿನ ಅಧಿಕಾರದ ಅಟ್ಟಹಾಸವನ್ನೂ ನಿರ್ದೇಶಕರು ಕಥೆಯಲ್ಲಿ ನವಿರಾಗಿ ಬೆರೆಸಿದ್ದಾರೆ.

ಮಾಧವ ತನ್ನ ಗೆಳೆಯರೊಂದಿಗೆ ಗಿಲ್ಲಿ ದಾಂಡು ಆಡುವಾಗ ಬ್ರಿಟಿಷ್ ಅಧಿಕಾರಿ ಭಾರತೀಯರ ಆಟವನ್ನು ಹೀಯಾಳಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಮಾಧವ ನಮ್ಮ ಸಾಂಪ್ರದಾಯಿಕ ಕ್ರೀಡೆಯ ಮಹತ್ವವನ್ನು ವಿವರಿಸುತ್ತಾ, ಕ್ರಿಕೆಟ್ಗಿಂತಲೂ ಹಿಂದಿನ ಕಾಲದಿಂದಲೂ ನಮ್ಮಲ್ಲಿ ಗಿಲ್ಲಿ ದಾಂಡು ಇದೆ
ಗಿಲ್ಲಿ ದಾಂಡ್ ನಿಂದಲೇ ಕ್ರಿಕೆಟ್ ಹುಟ್ಟಿಕೊಂಡಿದ್ದು ಎಂದು ವಾದಿಸಿ, ಕ್ರಿಕೆಟ್ ಆಡಿ ಬ್ರಿಟಿಷರಿಗೆ ಮಣ್ಣುಮುಕ್ಕಿಸುವುದು
ಗಮನ ಸೆಳೆಯುತ್ತದೆ.
ಮತ್ತೊಂದೆಡೆ ರಾಧೆಯ ಮೇಲೆ ಕಣ್ಣಿಡುವ ಬ್ರಿಟಿಷ್ ಅಧಿಕಾರಿ ಆಕೆಯನ್ನು ಪಡೆಯುವ ಆಸೆಯಿಂದ ಹೊಂಚು ಹಾಕುತ್ತಾನೆ ಇದೇ ಸಂದರ್ಭದಲ್ಲೇ ರಾಧೆಯನ್ನ ಅಪಹರಿಸಿ ಕೋಟೆಯ ಹೊರಗಿನ ಜಗತ್ತಿಗೆ ಬಲವಂತವಾಗಿ ಎಳೆದುಕೊಂಡು ಹೋಗುತ್ತಾನೆ ರಾಧಾ ಮಾಧವರು ಇಬ್ಬರೂ ಬೇರೆ ಬೇರೆಯಾಗುವ ಆ ಸಂದರ್ಭ ಇಂಟರ್ವಲ್ಗೆ ರೋಚಕ ತಿರುವು ನೀಡುತ್ತದೆ.

ಚಿತ್ರದ ಮೊದಲಾರ್ಧ ಪ್ರೇಕ್ಷಕನಿಗೆ ಮಧುರವಾದ ಪ್ರೇಮಾನುಭವವನ್ನು ನೀಡುತ್ತದೆ. ಮಾಧವ ಮತ್ತು ರಾಧೆಯ ನಡುವಿನ ಪ್ರೀತಿ, ಬೃಂದಾವನದ ಸುಂದರ ಪರಿಸರ, ಹಾಡುಗಳು, ಹಾಸ್ಯ ಮತ್ತು ಬ್ರಿಟಿಷರೊಂದಿಗಿನ ಸಂಘರ್ಷಗಳು ಎಲ್ಲವೂ ಒಂದು ಸುಂದರ ಕಾಲಘಟ್ಟದ ಪ್ರೇಮಕಥೆಯ ಅನುಭವ ನೀಡುತ್ತವೆ.
ಆದರೆ ದ್ವಿತೀಯಾರ್ಧ ಆರಂಭವಾಗುತ್ತಿದ್ದಂತೆ ಚಿತ್ರದ ಕಥೆಯ ದಿಕ್ಕೇ ಬದಲಾಗುತ್ತದೆ. ಇಲ್ಲಿಂದಲೇ ಪ್ರೇಕ್ಷಕನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ರಾಧೆ ಕೊನೆಯದಾಗಿ ಮಾಧವನಿಗೆ, ತಾನು ಖಂಡಿತವಾಗಿಯೂ ಕಾರ್ತಿಕ ಹುಣ್ಣಿಮೆಯಂದು ಮರಳಿ ಬರುವುದಾಗಿ ಭರವಸೆ ನೀಡಿ ಹೋಗಿರುತ್ತಾಳೆ. ಆ ಮಾತನ್ನೇ ನಂಬಿರುವ ಮಾಧವ, ಬೃಂದಾವನದಲ್ಲಿ ಆ ದಿನಕ್ಕಾಗಿ ಕಾಯುತ್ತಾ ರಾಧೆಯ ನೆನಪಿನಲ್ಲೇ ಕೊರಗುತ್ತಿರುತ್ತಾನೆ.

ಈ ಸಂದರ್ಭದಲ್ಲಿ ಕಥೆಗೆ ಪ್ರವೇಶಿಸುವವಳು ಮೀರಾ.
ಮಾಧವನ ಪ್ರೀತಿ ಮತ್ತು ಸ್ನೇಹವನ್ನು ಪಡೆಯಲು ಶ್ರೀಮಂತರು, ಸಾಹುಕಾರರು, ರಾಜಮಹಾರಾಜರು ಹಣ ಮತ್ತು ಐಶ್ವರ್ಯವನ್ನು ಸುರಿಯಲು ಸಿದ್ಧರಾಗಿದ್ದರೂ, ಮೀರಾಳ ಮನಸ್ಸು ಸೆಳೆಯುವುದು ಮಾಧವನ ಮುಗ್ಧತೆ ಮತ್ತು ನಿಷ್ಕಳಂಕ ಪ್ರೀತಿ. ಅವಳು ಚಿಕ್ಕ ವಯಸ್ಸಿನಿಂದಲೇ ಮಾಡುವನನ್ನು ಪ್ರೀತಿಸುತ್ತಿರುತ್ತಾಳೆ.
ಆದರೆ ಮಾಧವನ ಮನಸ್ಸಿನಲ್ಲಿ ರಾಧೆಯೇ ತುಂಬಿರುವುದರಿಂದ ಮೀರಾಳ ಪ್ರೀತಿ, ಸೌಂದರ್ಯ ಯಾವುದೂ ಆತನ ಗಮನ ಸೆಳೆಯುವುದಿಲ್ಲ.

ಇಷ್ಟೆಲ್ಲ ಕುತೂಹಲದ ನಡುವೆ ಕಥೆ ಮತ್ತೊಂದು ಅಚ್ಚರಿಯ ತಿರುವು ಪಡೆದುಕೊಳ್ಳುತ್ತದೆ.
ಸುಂದರವಾದ,ಐತಿಹಾಸಿಕ ಪ್ರೇಮಕಥೆಯನ್ನು ಸವಿಯುತ್ತಿದ್ದ ಪ್ರೇಕ್ಷಕನಿಗೆ ದ್ವಿತೀಯಾರ್ಧದಲ್ಲಿ ಟಿವಿ ಚಾನೆಲ್ಗಳು, ರಿಯಾಲಿಟಿ ಶೋಗಳು, ಟಿಆರ್ಪಿ ಪೈಪೋಟಿ, ಚಾನೆಲ್ಗಳ ನಡುವಿನ ವೈಷಮ್ಯ, ಒಳಸಂಚು ಮತ್ತು ಮಸಲತ್ತುಗಳ ಲೋಕ ಪರಿಚಯವಾಗುತ್ತದೆ.
ಇಲ್ಲಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆಯ ಪ್ರಯೋಗ ವಿಭಿನ್ನವಾಗಿದೆ. ಆದರೆ ಮೊದಲಾರ್ಧದ ಪ್ರೇಮಕಥೆಯ ಗುಂಗಿನಲ್ಲಿರುವ ಪ್ರೇಕ್ಷಕನಿಗೆ ದ್ವಿತೀಯಾರ್ಧದ ಈ ಬದಲಾವಣೆಯನ್ನು ಒಪ್ಪಿಕೊಳ್ಳಲು ಕಿರಿ ಕಿರಿ ಯಾಗುತ್ತದೆ.

ಕಥೆಯ ತಿರುವುಗಳ ಹಿಂದಿನ ಕಾರಣಗಳು ಮತ್ತು ಘಟನೆಗಳ ನಡುವಿನ ಸಂಬಂಧವನ್ನು ಇನ್ನಷ್ಟು ಸ್ಪಷ್ಟವಾಗಿ ನಿರೂಪಿಸಿದ್ದರೆ ಚಿತ್ರಕಥೆಯ ಘನತೆ ಹೆಚ್ಚುತ್ತಿತ್ತು.
ಅಷ್ಟಕ್ಕೂ ಈ ಮಾಧವ ಯಾರು? ಬ್ರಿಟಿಷರ ಕಾಲದ ಬೃಂದಾವನದ ಕೋಟೆಯೊಳಗೆ ಆತನನ್ನು ಸೀಮಿತಗೊಳಿಸಿರುವುದರ ಹಿಂದಿನ ರಹಸ್ಯವೇನು? ರಾಧೆಯ ಕಥೆಯ ಹಿಂದಿರುವ ಸೂತ್ರಧಾರಿ ಯಾರು? ಮೀರಾ ಮತ್ತು ಮಾಧವನ ಪ್ರೀತಿಗೆ ಗೆಲುವು ಸಿಗುತ್ತದೆಯೇ? ಕಾರ್ತಿಕ ಹುಣ್ಣಿಮೆಯಂದು ರಾಧೆ ಮರಳಿ ಬರುತ್ತಾಳೆಯೇ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡಬೇಕು.
ಗಣೇಶ್ ಅಭಿನಯಕ್ಕೆ ಮೆಚ್ಚುಗೆ… ಲಕ್ಷ್ಮಿ ಅವರ ಉಪಸ್ಥಿತಿ ವಿಶೇಷ!

ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದಲ್ಲಿ ಮಾಧವನ ಪಾತ್ರಕ್ಕೆ ಹೊಂದುವಂತಹ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಗ್ಧತೆ, ಪ್ರೀತಿಯಲ್ಲಿನ ನಿಷ್ಠೆ, ತುಂಟಾಟ ಮತ್ತು ಭಾವನಾತ್ಮಕ ಸನ್ನಿವೇಶಗಳು ಪಾತ್ರಕ್ಕೆ ಜೀವ ತುಂಬಿವೆ. ವಿಶೇಷವಾಗಿ ಮೊದಲಾರ್ಧದಲ್ಲಿ ಅವರ ಅಭಿನಯ ಮತ್ತು ಪಾತ್ರದ ಸ್ವಭಾವ ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ.
ಚಿತ್ರದ ನಾಯಕಿಯರ ಸೌಂದರ್ಯ, ಅವರ ಉಡುಗೆ-ತೊಡುಗೆ, ಮೇಕಪ್ ಮತ್ತು ತೆರೆಯ ಮೇಲಿನ ಪ್ರಸ್ತುತಿಯನ್ನು ನಿರ್ದೇಶಕರು ಬಹಳ ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ.
ರಾಧೆ ಮತ್ತು ಮೀರಾ ಪಾತ್ರಗಳು ಕಥೆಗೆ ವಿಭಿನ್ನವಾದ ಪ್ರೇಮದ ಆಯಾಮಗಳನ್ನು ನೀಡುತ್ತವೆ.
ಹಾಸ್ಯದ ವಿಭಾಗದಲ್ಲಿ ಸಾಧುಕೋಕಿಲ, ಕುರಿ ಪ್ರತಾಪ್ ಮತ್ತು ಮಂಜು ಪಾವಗಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಉಳಿದ ಕಲಾವಿದರೂ ತಮ್ಮ ತಮ್ಮ ಪಾತ್ರಗಳಲ್ಲಿ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ.
ಬಹಳ ವರ್ಷಗಳ ನಂತರ ಹಿರಿಯ ನಟ ರಾಮ್ಕುಮಾರ್ ಅವರ ಉಪಸ್ಥಿತಿ ವಿಶೇಷವಾಗಿದೆ. ಹಿರಿಯ ನಟಿ ಲಕ್ಷ್ಮಿ ಅವರು ಗಣೇಶ್ಗೆ ಅಜ್ಜಿಯಾಗಿ ಅಭಿನಯಿಸಿರುವುದು ಚಿತ್ರದ ಮತ್ತೊಂದು ಆಕರ್ಷಣೆ. ಅವರ ಅನುಭವದ ಅಭಿನಯ ಪಾತ್ರಕ್ಕೆ ಭಾವನಾತ್ಮಕ ಸ್ಪರ್ಶ ನೀಡುತ್ತದೆ. ಹಿರಿಯ ನಟ ಅಶೋಕ್ ಕೂಡ ಮಾಧವನ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅದ್ದೂರಿ ನಿರ್ಮಾಣಕ್ಕೆ ತಕ್ಕಂತೆ ತಾಂತ್ರಿಕ ಶ್ರೀಮಂತಿಕೆ!
ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರು ಚಿತ್ರಕ್ಕಾಗಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಿರುವುದು ತೆರೆಯ ಮೇಲಿನ ಅದ್ದೂರಿತನದಲ್ಲಿ ಎದ್ದು ಕಾಣುತ್ತದೆ. ಬೃಂದಾವನದ ಪರಿಸರ, ಹಳ್ಳಿಯ ಸೊಬಗು, ಮೇಲುಕೋಟೆಯ ಸುಂದರ ತಾಣಗಳು ಮತ್ತು ವಿಶೇಷವಾಗಿ ನಿರ್ಮಿಸಿರುವ ಸೆಟ್ಗಳು ಚಿತ್ರಕ್ಕೆ ದೃಶ್ಯ ವೈಭವವನ್ನು ನೀಡಿವೆ.

ಚಿತ್ರದ ಹಾಡುಗಳು ಗಮನ ಸೆಳೆಯುತ್ತವೆ. ಸಂಗೀತ ನಿರ್ದೇಶಕರು ಮಧುರವಾದ ಹಾಡುಗಳನ್ನು ನೀಡಿರುವುದರ ಜೊತೆಗೆ ಹಿನ್ನೆಲೆ ಸಂಗೀತದ ಮೂಲಕ ಹಲವು ಸನ್ನಿವೇಶಗಳಿಗೆ ಶಕ್ತಿ ತುಂಬಿದ್ದಾರೆ. ಛಾಯಾಗ್ರಹಣವೂ ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್. ಪ್ರಕೃತಿಯ ಸೌಂದರ್ಯ ಮತ್ತು ಅದ್ದೂರಿ ಸೆಟ್ಗಳನ್ನು ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿಯಲಾಗಿದೆ.
ನಿರ್ದೇಶಕ ಶ್ರೀನಿವಾಸ ರಾಜು ಈ ಹಿಂದೆ ಇದೇ ಗಣೇಶ್ ಅವರೊಂದಿಗೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವನ್ನು ನೀಡಿದ್ದ ಅವರು, ಈ ಬಾರಿ ಸಮೃದ್ಧಿ ಮಂಜುನಾಥ್ ಅವರ ನಿರ್ಮಾಣದಲ್ಲಿ ವಿಭಿನ್ನ ಕಥಾವಸ್ತುವಿನೊಂದಿಗೆ ಬಂದಿದ್ದಾರೆ. ಮೊದಲಾರ್ಧದ ಪ್ರೇಮಕಥೆಯನ್ನು ಅವರು ಬಹಳ ಮುದ್ದಾಗಿ ನಿರೂಪಿಸಿದ್ದಾರೆ. ಆದರೆ ದ್ವಿತೀಯಾರ್ಧದಲ್ಲಿ ಕಥೆಯ ನಿರೂಪಣೆಯ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ್ದರೆ, ಪಾತ್ರಗಳು ಮತ್ತು ಘಟನೆಗಳ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸಿದ್ದರೆ ಚಿತ್ರ ಮತ್ತಷ್ಟು ಪರಿಣಾಮಕಾರಿಯಾಗುತ್ತಿತ್ತು.
ಒಟ್ಟಾರೆ ಹೇಳಬೇಕೆಂದರೆ ಬೃಂದಾವಿಹಾರಿ’ ಒಂದು ಕಡೆ ರಾಧಾ-ಮಾಧವರ ಮುಗ್ಧ ಪ್ರೇಮವನ್ನು ನೆನಪಿಸುವ ಸುಂದರ ಕಥೆ. ಮತ್ತೊಂದೆಡೆ ಅನಿರೀಕ್ಷಿತ ತಿರುವುಗಳ ಮೂಲಕ ವಿಭಿನ್ನ ಪ್ರಯೋಗ ಮಾಡಲು ಹೊರಟಿರುವ ಮನರಂಜನಾತ್ಮಕ ಚಿತ್ರ.
ಕುಟುಂಬ ಸಮೇತರಾಗಿ ಯಾವುದೇ ಮುಜುಗರವಿಲ್ಲದೆ ಕುಳಿತು ನೋಡಬಹುದಾದ ಒಂದು ಸುಂದರ ಕಮರ್ಷಿಯಲ್ ಪ್ರೇಮಕಥೆಯಾಗಿ ‘ಬೃಂದಾವಿಹಾರಿ’ ಗಮನ ಸೆಳೆಯುತ್ತದೆ.










