ಚಿತ್ರ ವಿಮರ್ಶೆ – “ಮ್ಯಾಂಗೋ ಪಚ್ಚ” ಡ್ರಗ್ ನಿಶೆಯಲ್ಲಿ ಮುಳುಗೆದ್ದ ಸಾಂಸ್ಕೃತಿಕ ನಗರ.
ಚಿತ್ರ – ಮ್ಯಾಂಗೋ ಪಚ್ಚ
ನಿರ್ಮಾಪಕರು – ಕಾರ್ತಿಕ್ R.ಗೌಡ, ಪ್ರಿಯಾ ಸುದೀಪ್, ಯೋಗಿ G. ರಾಜ್
ನಿರ್ದೇಶನ – ವಿವೇಕ್ ಪ್ರಕಾಶ್
ಛಾಯಾಗ್ರಹಣ – ಶೇಖರ್ ಚಂದ್ರ
ಸಂಗೀತ – ಚರಣ್ ರಾಜ್
ಸಂಕಲನ – ಶರತ್ ವಸಿಷ್ಠ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ಸಂಚಿತ್ ಸಂಜೀವ್, ಕಾಜಲ್ ಕುಂದರ್, ಮಯೂರ್ ಪಟೇಲ್, ಭಾವನಾ ರಾಮಪ್ಪ, ಹರಿಣಿ, ಉಗ್ರಂ ಮಂಜು, ಪ್ರಶಾಂತ್ ಹಿರೇಮಠ್, ಜೈ ಗೋಪಿನಾಥ್, ಹಂಸ, ಸಿದ್ಧಾರ್ಥ್ ಮಾಧ್ಯಮಿಕ, ನಾರಾಯಣಸ್ವಾಮಿ, ಶ್ರೀಕಾಂತ್, ಮುಂತಾದವರು.
ಡ್ರಗ್ ನಿಶೆಯಲ್ಲಿ ಮುಳುಗೆದ್ದ
ಅರಮನೆ ನಗರ ಮೈಸೂರು
ಮ್ಯಾಂಗೋ ಪಚ್ಚ (Mango Pachcha) ಮಾಸ್ ಅಕ್ಷನ್, ಕ್ರೈಮ್, ಸೆಂಟಿಮೆಂಟ್ ಡ್ರಾಮಾ ಎನ್ನಬಹುದು.
ಮೊದಲ ಬಾರಿಗೆ ಕಿಚ್ಚ ಸುದೀಪ್ ಅಕ್ಕನ ಮಗ ಹೀರೋ ಆಗಿ ಸಂಚಿತ್ ಸಂಜೀವ್ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ,
ಸಂಚಿತ್ ಸಂಜೀವ್ ಅವರ ಸ್ಕ್ರೀನ್ ಪ್ರೆಸೆನ್ಸ್ ಬಹುತೇಕ ಸುದೀಪ್ ರನ್ನು ಹೋಲುತ್ತದೆ.
ಮೊದಲ ಬಾರಿಗೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಅಕ್ಷನ್ ಸೀನ್ ಗಳನ್ನು ಚನ್ನಾಗಿ ನಿಭಾಯಿಸಿದ್ದಾರೆ ಆದರೆ ಕೆಲವು ಸೀನ್ ಗಳಲ್ಲಿ ಇನ್ನೂ ಪಕ್ವತೆ ಬೇಕೆನಿಸುತ್ತದೆ.

ಅದು ಅರಮನೆ ನಗರ ಮೈಸೂರು, ಹೇಳಿ ಕೇಳಿ ರಾಜರು ಆಳಿದ ಮೈಸೂರು. ಮೈಸೂರಿನಲ್ಲಿ ಡ್ರಗ್ಸ್ ಮತ್ತು ಗಾಂಜದ ಕಮಟು ವಾಸನೆ ಇಡೀ ಚಿತ್ರ ಅವರಿಸಿಕೊಂಡಿದೆ.
ಮೈಸೂರಿನಲ್ಲಿ 2000 ದಿಂದ -2010ರ ಕಾಲಘಟ್ಟದಲ್ಲಿ ನಡೆವ ಗಾಂಜಾ, ಡ್ರಗ್ಸ್ ದಂಧೆ ಹಿನ್ನೆಲೆಯ ಕ್ರೈಂ ಡ್ರಾಮಾ ಮತ್ತು ತಾಯಿ ಸೆಂಟಿಮೆಂಟಿನ ಚಿತ್ರ ಇದಾಗಿದೆ.
ಮಧ್ಯಮ ವರ್ಗದ ಪ್ರಶಾಂತ ಗೆಳೆಯರ ಅಚ್ಚು ಮೆಚ್ಚಿನ ಪಚ್ಚನಾಗಿ ದುಡ್ಡಿಗಾಗಿ ಸಿನಿಮಾ ಪೈರಸಿ, ಬ್ಲೂ ಸಿನಿಮಾಗಳನ್ನು ಸಿಡಿಯ ಮುಖಾಂತರ ಕಾಳ ಸಂತೆಯಲ್ಲಿ ಮಾರಿ ಹಣ ಗಳಿಸುವ ಮೂಲಕ ಯುವಕರು ದಾರಿ ತಪ್ಪಲು ಮಾದರಿಯಾಗುತ್ತಾನೆ. ಇಂದು ಚಿತ್ರರಂಗ ಎದುರಿಸುತ್ತಿರುವ ಪೈರಸಿ ಪಿಶಾಚಿಯನ್ನು ಇಲ್ಲಿ ವೈಭವಿಕರಿಸಿದ್ದಾರೆ. ಚಿತ್ರದಲ್ಲಿ ಎಲ್ಲೂ ಇದು ತಪ್ಪು ಎನ್ನುವುದನ್ನು ನಿರ್ದೇಶಕರು ತೋರಿಸಿಲ್ಲ. ಇಲ್ಲಿವರೆಗೂ ಪಚ್ಚ ಆಗಿದ್ದ ಪ್ರಶಾಂತ ತಂದೆಯ ಮರಣದ ನಂತರ ಕಾಂದಾನಿಯ ಮತ್ತೊಂದು ಗಾಂಜಾ ಮಾರಾಟದ ಕಳ್ಳ ದಂಧೆಗೆ ಪ್ರಮೋಷನ್ ಆಗುವ ಮೂಲಕ ಮ್ಯಾಂಗೋ ಪಚ್ಚನಾಗಿ ಬದಲಾಗುತ್ತಾನೆ.
ಸಂಚಿತ್ ಸಂಜೀವ ನಾಯಕನಾಗಿ ಮಾಸ್ ಲುಕ್, ಫೈಟ್, ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದೆ. .ಆದರೆ ಇಲ್ಲಿ ಸಂಚಿತ್ ತನ್ನ ಮಾವ ಕಿಚ್ಚ ಸುದೀಪ್ ರನ್ನು ಮೈಮೇಲೆ ಎಳೆದುಕೊಂಡಿದ್ದಾನೆ ಎನ್ನ ಬಹುದು. ಮಾವನಂತೆ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ ಬೇಕಿರಲಿಲ್ಲ ಅನ್ನಿಸುತ್ತದೆ. ಮುಂದಿನ ದಿನಗಳಲ್ಲಿ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡರೆ ಉತ್ತಮ ಮತ್ತು ಕನ್ನಡ ಬೆಳ್ಳಿತೆರೆಗೆ ಒಬ್ಬ ಹೊಸ ನಾಯಕ ನಟ ಸಿಕ್ಕಂತಾಗುತ್ತದೆ.
ನಿರ್ದೇಶಕ ವಿವೇಕ್ ಚಿತ್ರದ ವೇಗವನ್ನು ಚನ್ನಾಗಿ ಕಾಯ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದ ಒಟ್ಟಾರೆ ಸಮಯವನ್ನು 1.35 ನಿಮಿಷ ಅಂದರೆ 95 ನಿಮಿಷದಲ್ಲಿ ಹೇಳಬೇಕಾದನ್ನು ಹೇಳಿ ಮುಗಿಸಿದ್ದಾರೆ.
ಕನ್ನಡದ ಹಲವಾರು ಸಿನಿಮಾಗಳಲ್ಲಿ ಈಗಾಗಲೇ ಡ್ರಗ್ಸ್, ಗಾಂಜಾ ದಂಧೆಯ ಕುರಿತು ಹಲವಾರು ಸಿನಿಮಾಗಳು ಬಂದಿವೆ. ಆದರೆ ಈ ಚಿತ್ರದ ವಿಶೇಷವೆಂದರೆ
ಮ್ಯಾಂಗೋ ಪಚ್ಚ ಚಿತ್ರದಲ್ಲಿ ನಾಯಕನೇ ದಂಧೆಯ ಕಿಂಗ್ ಪಿನ್. ಕಾನೂನು ಬಾಹಿರ ಚಟುವಟಿಕೆಯಲ್ಲಿ ಯಾವುದೇ ಕಥಾನಾಯಕ ಸಮರ್ಥಸಿಕೊಂಡರೆ ಅದು ಎಷ್ಟು ಸರಿ ಎನ್ನುವುದರ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು ಎನ್ನುವುದು
ಸಿನಿಮಾ ಪ್ರಿಯರ ಪ್ರೆಶ್ನೆ.
ಅಪ್ಪನ ಪಾಲುದಾರ ರಾಜಕಾರಣಿ ಮಹೇಂದ್ರನ ಕುತಂತ್ರದಿಂದ ಪಚ್ಚ ಮತ್ತು ಅವನ ಅಣ್ಣ (ಅಪ್ಪನ ಹಿರಿಯ ಹೆಂಡತಿಯ ಮಗ) ನಾಗಪ್ಪ (ಮಯೂರ್ ಪಟೇಲ್) ಗಾಂಜಾ ದಂಧೆಗೆ ಇಳಿಯುತ್ತಾರೆ. ಇಲ್ಲಿ ಅಪ್ಪಾ ಬಿಟ್ಟು ಹೋದ ಗಾಂಜಾ ದಂಧೆಯೇ ಇವರ ಆಸ್ತಿ, ಲೋಕರೂಡಿಯಂತೆ ದಾಯದಿಗಳ ಕಲಹ ಶುರುವಾಗುವುದೇ ಈ ಕಳ್ಳ ವ್ಯವಹಾರಕ್ಕಾಗಿ. ಅಣ್ಣ ನಾಗಪ್ಪನಾಗಿ ಮಯೂರ್ ಪಟೇಲ್ ಮೊದಲ ಬಾರಿಗೆ ವಿಲನ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ತಾಯಿಯ ಪಾತ್ರದಲ್ಲಿ ಹರಿಣಿ ಅಭಿನಯಿಸಿದ್ದಾರೆ. ಅರಿವಿಲ್ಲದೆ ಗಂಡ ಮಕ್ಕಳ ದಂದೆಯಲ್ಲಿ ಸಿಲುಕಿ ಜೈಲು ಸೇರಿ, ಜೈಲಿನಲ್ಲೇ ಪಚ್ಚನ ತಮ್ಮನಿಗೆ ಜನ್ಮ ನೀಡುವ ದೇವಕಿಯಾಗಿ ನಟಿಸಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.
ಇನ್ನೂ ಕಾಜಲ್ ಕುಂದರ್ ಕಥಾನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ನಾಯಕಿಗೆ ಎಲ್ಲಾ ಚಿತ್ರಗಳಂತೆ ಮರ ಸುತ್ತುವ, ಪ್ರೀತಿ ಪ್ರೇಮ ಪ್ರಾಣಯದಲ್ಲಿ ಮಿಂಚುವ ಅವಕಾಶಗಳು ತುಂಬಾ ಕಡಿಮೆ ಎನ್ನ ಬಹುದು. ಆದರೂ ಕಾಜಲ್ ಪಾತ್ರದ ಇತಿ ಮಿತಿಗೆ ಪ್ರಾಣ ತುಂಬಿದ್ದಾರೆ.
ನಟಿ ಭಾವನಾ ರವರು ಮೊದಲ ಬಾರಿಗೆ ಮೈ ಮೇಲೆ ಖಾಕಿ ಧರಿಸಿ ಖಡಕ್ ಪೊಲೀಸ್ ಅಧಿಕಾರಿಣಿಯಾಗಿ ಮಿಂಚಿದ್ದಾರೆ.
ಹಾಗೆಯೇ ಉಗ್ರಂ ಮಂಜು ದಾಯದಿಗಳ ಎರಡು ತಂಡದಲ್ಲಿ ಹಲ್ಲು ಕಿತ್ತ ಹಾವಿನಂತೆ ಮೌನವಾಗಿ ಬುಸುಗುಟ್ಟಿದ್ದಾರೆ.
ಸಂಚಿತ್, ಮಯೂರ್ ಪಟೇಲ್, ಹರಿಣಿ, ಉಗ್ರಂ ಮಂಜು, ಹಂಸ ಪ್ರತಾಪ್,
ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಕಲಾ ನಿರ್ದೇಶಕ ವಿಶ್ವಾಸ್ ಕಶ್ಯಪ್
2000ನೇ ಇಸವಿಯ ಅಂದಿನ ಮೈಸೂರನ್ನು, ಅಂದಿನ ಕಾರು ಬಾರುಗಳನ್ನು , ತೆರೆ ಮೇಲೆ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಚರಣ್ ರಾಜ್ ಹಿನ್ನಲೆ ಸಂಗೀತ ಚಿತ್ರಕ್ಕೆ ಜೀವ ತುಂಬಿದೆ.
DOP ಶೇಖರ್ ಚಂದ್ರ ಮೈಸೂರನ್ನು ಸುಂದರವಾಗಿ ಸೆರೆ ಹಿಡಿದಿದ್ದಾರೆ.
ಪಚ್ಚನ ಕತೆ ಈ ಸಿನಿಮಾದಲ್ಲಿ ಮುಗಿದಿಲ್ಲ, ಎರಡನೇ ಭಾಗ ಬರುತ್ತದೆ ಎಂಬ ಸುಳಿವನ್ನು ಚಿತ್ರದ ಕೊನೆಯಲ್ಲಿ ನೀಡಲಾಗಿದೆ.
ಸಿನಿಮಾ ಅವಧಿ ಕೇವಲ ಒಂದೂವರೆ ಗಂಟೆ ತೋರಿಸುವ ಬದಲು . ಇನ್ನಷ್ಟು ಸಮಯವನ್ನು ಕಥೆಯ ಒಳಗೆ ಮತ್ತು ಕಥೆ ಬರೆಯುವ ಮೊದಲು ತೆಗೆದುಕೊಂಡು ಕೆಲವು ಪಾತ್ರಗಳಿಗೆ ಇನ್ನೂ ಚೆನ್ನಾಗಿ ನ್ಯಾಯ ಒದಗಿಸಬಹುದಾಗಿತ್ತು. ಹಾಗೂ ನಾಯಕ, ನಾಯಕಿಯರ ಪ್ರೇಮದ ಸುತ್ತಾ ಒಂದಷ್ಟು ಅಂದ ಚಂದದ ಪ್ರಣಯವನ್ನು ಲೇಪಿಸಬಹುದಿತ್ತು.
ಒಟ್ಟಿನಲ್ಲಿ ಮ್ಯಾಂಗೋ ಪಚ್ಚ ಒಂದು ಪಕ್ಕ ಕಮರ್ಷಿಯಲ್, ಅಕ್ಷನ್ ಚಿತ್ರ ಒಂದೂವರೆ ಘಂಟೆಯ ಸಣ್ಣ ಚಿತ್ರ, ಚಿತ್ರ ನೋಡುವಾಗ ಸಮಯ ಹೋಗುವುದೇ ತಿಳಿಯುವುದಿಲ್ಲ. ಎಲ್ಲೂ ಬೋರ್ ಎನಿಸುವುದಿಲ್ಲ,
ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡಕ್ಕೆ ಹೊಸ ಕಲಾವಿಧರ ಅವಶ್ಯಕತೆ ತುಂಬಾ ಇದೆ. ಸಂಚಿತ್ ಒಬ್ಬ ಒಳೆಯ ನಟನಾಗಿ ನಿಲ್ಲಲಿ ಎನ್ನುವುದು ನಮ್ಮ ಆಶಯ.









