ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

ಬೆಂಗಳೂರು: ದೇಶಾದ್ಯಂತ ದೊಡ್ಡ ಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’, ಇದೀಗ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸಜ್ಜಾಗಿದೆ. ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅರ್ಪಿಸುತ್ತಿರುವ, ನವ ನಿರ್ದೇಶಕ ಕೀರ್ತನ್ ನಾಡಗೌಡ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ‘418’ ಚಿತ್ರದ ಕನ್ನಡ, ಹಿಂದಿ ಆವೃತ್ತಿಯ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಬಂಡವಾಳ ಹೂಡಿರುವ ಈ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ಕನ್ನಡತಿ ಚೈತ್ರಾ ಆಚಾರ್, ಸೂರ್ಯ ರಾಜ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ ಮತ್ತು ಶಶಾಂಕ್ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

“ಆ ಮನೆಯೊಳಗೆ ಒಂದು ಹಕ್ಕಿಯೂ ಕಾಲಿಟ್ಟಿಲ್ಲ” ಎಂಬ ವಾಚ್‌ಮನ್‌ನ ಬೆಚ್ಚಿಬೀಳಿಸುವ ಸಂಭಾಷಣೆಯೊಂದಿಗೆ ಟ್ರೇಲರ್ ಆರಂಭವಾಗಲಿದ್ದು, ಆರಂಭದಲ್ಲೇ ಯಾವುದೋ ಅದೃಶ್ಯ ಶಕ್ತಿಯ ಭೀಕರ ಉಪಸ್ಥಿತಿಯ ಸುಳಿವು ನೀಡುತ್ತದೆ. ವಾಸ್ತವ ಮತ್ತು ಭ್ರಮೆಗಳ ನಡುವೆ ಸಿಲುಕಿ ಒದ್ದಾಡುವ 18 ವರ್ಷದ ವಿವೇಕ್ ಎಂಬ ಯುವಕನ ಸುತ್ತ ಕಥೆಯ ಎಳೆ ತೆರೆದುಕೊಳ್ಳುತ್ತದೆ. ಸ್ಥಳೀಯರ ಪ್ರಬಲ ವಿರೋಧದ ನಡುವೆಯೂ ಬರೋಬ್ಬರಿ 15 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ VIMS ಕಟ್ಟಡವನ್ನು ಮರುಪ್ರವೇಶಿಸಿದಾಗ ನಿಗೂಢತೆ ಇನ್ನಷ್ಟು ಗಾಢವಾಗುತ್ತದೆ. ಅಲ್ಲಿನ ‘ರೂಮ್ ನಂ. 418’ ಅಡಗಿಸಿಕೊಂಡಿರುವ ಆ ಭಯಾನಕ ರಹಸ್ಯವೇನು ಎಂಬ ಕುತೂಹಲದ ನಡುವೆ, ದೇವಿಕಾ ಪಾತ್ರದ ಆಗಮನವಾಗುತ್ತಿದ್ದಂತೆ ನೈಜ ನಡುಕ ಶುರುವಾಗುತ್ತದೆ.

ಟ್ರೇಲರ್‌ನ ಮೊದಲಾರ್ಧವು ವಾಸ್ತವ ಮತ್ತು ಕಲ್ಪನೆಗಳ ನಡುವಿನ ಸೈಕಲಾಜಿಕಲ್ ಥ್ರಿಲ್ಲರ್‌ನಂತೆ ಭಾಸವಾದರೆ, ದ್ವಿತೀಯಾರ್ಧದಲ್ಲಿ ಸೂಪರ್‌ನ್ಯಾಚುರಲ್ ಹಾಗೂ ಹಾರರ್ ಅಂಶಗಳ ಭಯಾನಕ ಸಮ್ಮಿಶ್ರಣದೊಂದಿಗೆ ತೀವ್ರ ತಿರುವು ಪಡೆದುಕೊಳ್ಳುತ್ತದೆ. ಯಾವುದೇ ಅನಗತ್ಯ ಹಾಸ್ಯ ಅಥವಾ ಕಮರ್ಷಿಯಲ್ ಅಂಶಗಳಿಗೆ ಜಾಗ ನೀಡದೆ, ನಿರ್ದೇಶಕ ಕೀರ್ತನ್ ನಾಡಗೌಡ ಪ್ರತಿಯೊಂದು ಫ್ರೇಮ್‌ನಲ್ಲೂ ಪ್ರೇಕ್ಷಕರ ಎದೆಬಡಿತ ಹೆಚ್ಚಿಸುವಂತೆ ಕಥೆಯನ್ನು ಗಂಭೀರವಾಗಿ ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಚೈತ್ರಾ ಆಚಾರ್ ಅವರ ಆತಂಕಕಾರಿ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಅದ್ಭುತ ನಟನೆ ಟ್ರೇಲರ್‌ನ ಹೈಲೈಟ್ ಆಗಿದ್ದು, ಅವರ ಪಾತ್ರದ ಎಂಟ್ರಿ ಕಥೆಯ ಗತಿಯನ್ನೇ ಬದಲಿಸುವ ಸೂಚನೆ ನೀಡಿದೆ. ಉಳಿದಂತೆ ಸೂರ್ಯ ರಾಜ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ ಹಾಗೂ ಶಶಾಂಕ್ ಪಾಟೀಲ್ ಅವರ ಅಭಿನಯವೂ ಕಥೆಗೆ ಪೂರಕವಾಗಿ ಮೂಡಿಬಂದಿದೆ.

ಚಿತ್ರದ ತಾಂತ್ರಿಕ ಗುಣಮಟ್ಟ ಟ್ರೇಲರ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ದಿನೇಶ್ ದಿವಾಕರ್ ಅವರ ಛಾಯಾಗ್ರಹಣ ಆತಂಕಕಾರಿ ವಾತಾವರಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದರೆ, ವೆಂಕಿ ಜಿಜಿ ಅವರ ಹಿನ್ನೆಲೆ ಸಂಗೀತ ಪ್ರತಿ ಕ್ಷಣದಲ್ಲೂ ರೋಮಾಂಚನ ಉಂಟುಮಾಡುತ್ತದೆ. ಉಲ್ಲಾಸ್ ಹೈದೂರ್ ರೂಪಿಸಿರುವ ಕಲಾ ನಿರ್ದೇಶನ ಹಾಗೂ ಆ ನಿಗೂಢ ಕಟ್ಟಡದ ಸೆಟ್ ವಿನ್ಯಾಸವು ಕಥೆಯ ಮತ್ತೊಂದು ಪ್ರಮುಖ ಪಾತ್ರದಂತೆ ಕೆಲಸ ಮಾಡಿದ್ದು, ನಿರ್ಮಾಣ ಮೌಲ್ಯ ಅತ್ಯುನ್ನತ ಮಟ್ಟದಲ್ಲಿದೆ. ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 23 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಚಿತ್ರ ತೆರೆಕಾಣಲಿದ್ದು, ಬಿಡುಗಡೆಯಾಗಿರುವ ಟ್ರೇಲರ್ ಸಿನಿಪ್ರಿಯರಲ್ಲಿ ನಿರೀಕ್ಷೆಯನ್ನು ಮುಗಿಲೆತ್ತರಕ್ಕೇರಿಸಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor