ಅರಮನೆ ಆವರಣದಲ್ಲಿ ‘ಒಂದೇ ಒಂದು’ ಹಾಡಿನೊಂದಿಗೆ ರಂಗೇರಿದ ‘ಬೃಂದಾವಿಹಾರಿ’ ಸಂಭ್ರಮ

ಅರಮನೆ ಆವರಣದಲ್ಲಿ ‘ಬೃಂದಾವಿಹಾರಿ’ಯ ‘ಒಂದೇ ಒಂದು’ ಹಾಡಿನ ಅನಾವರಣಅಕ್ಟೋಬರ್ 16ರಂದು ದಸರಾ ಸಂಭ್ರಮದಲ್ಲಿ ಗಣೇಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ತೆರೆಗೆಬೆಂಗಳೂರು: ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಹಾಗೂ ಶ್ರೀನಿವಾಸರಾಜು ನಿರ್ದೇಶನದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರದ ಐದನೇ ಹಾಡು ‘ಒಂದೇ ಒಂದು’ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಅನಾವರಣಗೊಂಡಿತು.

ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರ ಪತ್ನಿ ಪದ್ಮ ಮಂಜುನಾಥ್ ಹಾಡನ್ನು ಬಿಡುಗಡೆ ಮಾಡಿದರು.ಸಮೃದ್ಧಿ ಮಂಜುನಾಥ್ ನಿರ್ಮಾಣದ ಈ ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದು, ಕವಿರತ್ನ ಡಾ. ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಖ್ಯಾತ ಗಾಯಕಿ ಕೆ.ಎಸ್. ಚಿತ್ರ ಹಾಗೂ ಜಸ್ಕರಣ್ ಸಿಂಗ್ ಅವರ ಕಂಠದಲ್ಲಿ ‘ಒಂದೇ ಒಂದು’ ಹಾಡು ಮೂಡಿಬಂದಿದ್ದು, ಗಣೇಶ್ ಹಾಗೂ ದೇವಿಕಾ ಭಟ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಈಗಾಗಲೇ ಚಿತ್ರದ ನಾಲ್ಕು ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ ಬಿಡುಗಡೆಯಾಗಿರುವ ಐದನೇ ಹಾಡು ‘ಒಂದೇ ಒಂದು’ ಕೂಡ ಸಂಗೀತಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಆನಂದ್ ಆಡಿಯೋ ಮೂಲಕ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಳಿಕ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸರಾಜು ಮತ್ತೊಮ್ಮೆ ಜೊತೆಯಾಗಿದ್ದು, ಈ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಿದೆ. ಕುಟುಂಬ ಸಮೇತ ಕುಳಿತು ನೋಡುವಂತಹ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಗಣೇಶ್, ಉತ್ತಮ ಸಾಹಿತ್ಯ ಸಿಕ್ಕಾಗ ಕಲಾವಿದರ ಕೆಲಸ ಮತ್ತಷ್ಟು ಸುಲಭವಾಗುತ್ತದೆ ಎಂದು ಹೇಳಿ, ಹಾಡಿಗೆ ಸಾಹಿತ್ಯ ನೀಡಿದ ಡಾ. ವಿ. ನಾಗೇಂದ್ರಪ್ರಸಾದ್, ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್, ಗಾಯಕ ಜಸ್ಕರಣ್ ಸಿಂಗ್, ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರಿಗೆ ಧನ್ಯವಾದ ಅರ್ಪಿಸಿದರು.“ನಾನು ಮಾಡುವ ಪ್ರತಿಯೊಂದು ಕೆಲಸವನ್ನೂ ಪ್ರೀತಿಯಿಂದ ಮಾಡುತ್ತೇನೆ. ಅದು ತೆರೆಯ ಮೇಲೆ ಚೆನ್ನಾಗಿ ಕಾಣಲು ಪ್ರೇಕ್ಷಕರು ನನ್ನ ಮೇಲಿಟ್ಟಿರುವ ಪ್ರೀತಿಯೂ ಕಾರಣ. ಇದೇ ಪ್ರೀತಿ ಮುಂದೆಯೂ ಇರಲಿ.

ಅಕ್ಟೋಬರ್ 16ರಂದು ‘ಬೃಂದಾವಿಹಾರಿ’ ನಿಮ್ಮ ಮುಂದೆ ಬರಲಿದೆ. ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ” ಎಂದು ಗಣೇಶ್ ಮನವಿ ಮಾಡಿದರು.ನಿರ್ಮಾಪಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕ್ರಿಕೆಟ್ ಮೂಲಕ ಆರಂಭವಾದ ತಮ್ಮ ಹಾಗೂ ಗಣೇಶ್ ಅವರ ಸ್ನೇಹದ ಬಗ್ಗೆ ಮೆಲುಕು ಹಾಕಿದರು. ತಮ್ಮನ್ನು ಚಿತ್ರರಂಗಕ್ಕೆ ಕರೆತಂದವರೇ ಗಣೇಶ್ ಎಂದು ಹೇಳಿದ ಅವರು, ಇದೀಗ ತಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ಗಣೇಶ್ ನಾಯಕರಾಗಿರುವುದು ಸಂತಸ ತಂದಿದೆ ಎಂದರು.“‘ಬೃಂದಾವಿಹಾರಿ’ ಒಂದು ಉತ್ತಮ ಕೌಟುಂಬಿಕ ಚಿತ್ರ. ಚಿತ್ರದ ಪ್ರತಿಯೊಂದು ಹಾಡೂ ವಿಶೇಷವಾಗಿದೆ. ನಮ್ಮ ಸಮೃದ್ಧಿ ಸಂಸ್ಥೆಗೆ 15 ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ‘ಒಂದೇ ಒಂದು’ ಹಾಡು ಬಿಡುಗಡೆಯಾಗಿರುವುದು ಮತ್ತಷ್ಟು ಸಂತಸ ತಂದಿದೆ. ಈ ಹಾಡನ್ನು ನಮ್ಮ ಸಂಸ್ಥೆಯ ಎಲ್ಲರಿಗೂ ಅರ್ಪಿಸುತ್ತೇನೆ. ಅಕ್ಟೋಬರ್ 16ರಂದು ದಸರಾ ಹಬ್ಬದ ಸಂದರ್ಭದಲ್ಲಿ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕುಟುಂಬ ಸಮೇತರಾಗಿ ಚಿತ್ರ ವೀಕ್ಷಿಸಿ” ಎಂದು ಸಮೃದ್ಧಿ ಮಂಜುನಾಥ್ ಹೇಳಿದರು.ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ, ಈಗಾಗಲೇ ಬಿಡುಗಡೆಯಾಗಿರುವ ನಾಲ್ಕು ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಐದನೇ ಹಾಡಾಗಿ ‘ಒಂದೇ ಒಂದು’ ಹೊರಬಂದಿದೆ ಎಂದರು.“ಈ ಹಾಡಿನ ಸಾಹಿತ್ಯ ಬರೆಯಲು ನಾಗೇಂದ್ರಪ್ರಸಾದ್ ಅವರು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ಮಹಿಳೆಯರು ತಮ್ಮನ್ನು ಪ್ರೀತಿಸುವ ಪತಿಯ ಬಳಿ ಸಾಮಾನ್ಯವಾಗಿ ಕೇಳುವ ‘ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ?’ ಎಂಬ ಪ್ರಶ್ನೆಗೆ ಉತ್ತರದ ರೂಪದಲ್ಲಿ ಈ ಹಾಡು ಮೂಡಿಬಂದಿದೆ. ಚಿತ್ರದ ಎಲ್ಲಾ ಏಳು ಹಾಡುಗಳಿಗೂ ನಾಗೇಂದ್ರಪ್ರಸಾದ್ ಅವರೇ ಸಾಹಿತ್ಯ ಬರೆದಿದ್ದು, ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ” ಎಂದು ನಿರ್ದೇಶಕರು ವಿವರಿಸಿದರು.ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಎಲ್ಲಾ ಹಾಡುಗಳ ಸಾಹಿತ್ಯದಲ್ಲೂ ದ್ವಿರುಕ್ತಿ ಪದಗಳ ಬಳಕೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಗೀತರಚನೆಕಾರ ಡಾ. ವಿ. ನಾಗೇಂದ್ರಪ್ರಸಾದ್ ತಿಳಿಸಿದರು. ‘ರಾಮ ರಾಮ’, ‘ರಾಧೆ ರಾಧೆ’ ಸೇರಿದಂತೆ ವಿಭಿನ್ನ ರೀತಿಯ ದ್ವಿರುಕ್ತಿ ಪದಗಳ ಮೂಲಕ ಹಾಡುಗಳನ್ನು ರೂಪಿಸಲಾಗಿದೆ. ‘ಒಂದೇ ಒಂದು’ ಹಾಡನ್ನು ತೆರೆಯ ಮೇಲೆ ನೋಡಿದ ಬಳಿಕ ತಮಗೆ ತುಂಬಾ ಸಂತೋಷವಾಗಿದೆ ಎಂದರು.ನಾಯಕಿ ದೇವಿಕಾ ಭಟ್ ಮಾತನಾಡಿ, ‘ಬೃಂದಾವಿಹಾರಿ’ ಉತ್ತಮವಾಗಿ ಮೂಡಿಬಂದಿದ್ದು, ಚಿತ್ರದ ಹಾಡುಗಳೂ ಮನಸೆಳೆಯುತ್ತಿವೆ. ಇದು ತಮ್ಮ ಮೊದಲ ಚಿತ್ರವಾಗಿದ್ದು, ಎಲ್ಲರ ಪ್ರೋತ್ಸಾಹ ಬಯಸುವುದಾಗಿ ಹೇಳಿದರು.ಇನ್ನು ಹಾಡು ಬಿಡುಗಡೆ ಸಂದರ್ಭದಲ್ಲಿ ಜಸ್ಕರಣ್ ಸಿಂಗ್ ಅವರು ‘ಒಂದೇ ಒಂದು’ ಹಾಡಿನ ಕೆಲವು ಸಾಲುಗಳನ್ನು ಹಾಡಿ ನೆರೆದಿದ್ದ ಅಭಿಮಾನಿಗಳು ಹಾಗೂ ಚಿತ್ರತಂಡದ ಸದಸ್ಯರನ್ನು ರಂಜಿಸಿದರು.ಒಟ್ಟು ಏಳು ಹಾಡುಗಳನ್ನು ಒಳಗೊಂಡಿರುವ ‘ಬೃಂದಾವಿಹಾರಿ’ ಚಿತ್ರ ಅಕ್ಟೋಬರ್ 16ರಂದು ನಾಡಹಬ್ಬ ದಸರಾ ಸಂಭ್ರಮದ ಸಂದರ್ಭದಲ್ಲಿ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor