ಸುಷ್ಮಾ ವೀರ್ ಸಾರಥ್ಯದಲ್ಲಿ “ವೀರ ರಂಗ ಸಂಭ್ರಮ K5”
ಮೊದಲ ಗೀತೆಯಾಗಿ ಡಾ||ಚಂದ್ರಶೇಖರ್ ಕಂಬಾರರ “ಮಾಯಾದ ಮನದ ಭಾರ” ಹಾಡು ಬಿಡುಗಡೆ .
ನಟಿ, ನಿರ್ಮಾಪಕಿ, ನಿರ್ದೇಶಕಿ ಸುಷ್ಮಾ ವೀರ್ ಈಗ ರಂಗಗೀತೆ ಪರಂಪರೆಗೆ ಹೊಸಲೇಪನ ಕೊಡಲು ಮುಂದಾಗಿದ್ದಾರೆ. ಇತ್ತೀಚೆಗೆ ತಮ್ಮ ವೀರ ಕಥಾಕರ ಎಂಬ ಸಂಸ್ಥೆ ಮೂಲಕ “ವೀರ ರಂಗ ಸಂಭ್ರಮ K5” ಎಂಬ ಸಮಾರಂಭ ಆಯೋಜನೆ ಮಾಡಿದ್ದರು. ಈ ಸಮಾರಂಭದಲ್ಲಿ ಡಾ||ಚಂದ್ರಶೇಖರ್ ಕಂಬಾರರ “ಮಾಯಾದ ಮನದ ಭಾರ” ಹಾಡನ್ನು ಬಿಡುಗಡೆ ಮಾಡಲಾಯಿತು. ವರನಟ ಡಾ||ರಾಜಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು ಹಾಗೂ ಅಳಿಯ ಎಸ್ ಎ ಗೋವಿಂದರಾಜು ಈ ಹಾಡನ್ನು ಅನಾವರಣ ಮಾಡಿದರು.

ನಿರ್ದೇಶಕ ಪಿ.ಶೇಷಾದ್ರಿ, ನಟ ಸುಚೇಂದ್ರ ಪ್ರಸಾದ್, ಡಾ||ಸಿ.ಸೋಮಶೇಖರ್, ನಟ ಸುಂದರರಾಜ್, ಕೊಂಡಜ್ಜಿ ಮೋಹನ್, ಪ್ರಕಾಶ್ ರಾಘವಾಚಾರ್ ಹಾಗೂ ಡಾ||ಚಂದ್ರಶೇಖರ್ ಕಂಬಾರ ಅವರ ಪುತ್ರಿ ಜಯಶ್ರೀ ಸೇರಿದಂತೆ ಅನೇಕ ಗಣ್ಯರು ಹಾಗೂ ಗುಬ್ಬಿ ವೀರಣ್ಣ ಅವರ ಕುಟುಂಬದ ಅನೇಕ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನ ಬಳಸಿಕೊಂಡಿರುವ ರಂಗಗೀತೆ ಇದ್ದಾಗಿದೆ. ಹಾಡಿನ ಲೋಕಾರ್ಪಣೆಯ ನಂತರ ಅತಿಥಿಗಳು ಹಾಗೂ ಸುಷ್ಮಾ ವೀರ್ ಮಾತನಾಡಿದರು.

ಸುಷ್ಮಾ, ನಾವು ಎತ್ತಿ ಆಡಿಸಿದ ಮಗು. ನಮ್ಮ ಕುಟುಂಬಕ್ಕೂ ಅವರ ಕುಟುಂಬಕ್ಕೂ ನಾಲ್ಕು ತಲೆಮಾರುಗಳ ನಂಟಿದೆ. ಸುಷ್ಮಾ ಈಗ ಹೊಸಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಡಾ||ರಾಜಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು ಹಾರೈಸಿದರು.
ಸುಷ್ಮಾ ಅವರಿಗೆ ಹೇಗೆ ಬಂತು ಈ ಅಭಿನಯ. ತಾತಾ ಅವರಿಂದ? ತಾಯಿ ಅವರಿಂದ? ಅಲ್ಲ. ಅವರ ಪರಿಶ್ರಮದಿಂದ ಈ ಅಭಿನಯ ಬಂದಿದೆ. ಧ್ವನಿ ಮಾತ್ರ ಅವರ ಕುಟುಂಬದಿಂದ ಬಂದಿರಬಹುದು. ಸುಷ್ಮಾ ಸಕಲಕಲಾವಲ್ಲಭೆ. ಈಗ ವೀರ ರಂಗ ಸಂಭ್ರಮದ ಮೂಲಕ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದರು ನಿರ್ದೇಶಕ ಪಿ.ಶೇಷಾದ್ರಿ.

ಸುಷ್ಮಾ ಅವರನ್ನು ನಾನು ಅಮ್ಮು ಅಂತಲೇ ಕರೆಯುವುದು. ನಾವೆಲ್ಲಾ ಮಾಡಬೇಕಾದ ಕೆಲಸವನ್ನು ಸುಷ್ಮಾ ಮಾಡಿ ನಮ್ಮಗೆಲ್ಲಾ ಮಾದರಿಯಾಗಿದ್ದಾರೆ. ಕಾಲಗರ್ಭದಲ್ಲಿ ಕಳೆದು ಹೋಗುತ್ತಿದ್ದ ಈ ಹಾಡುಗಳನ್ನು ಸ್ಮೃತಿಗರ್ಭದಲ್ಲಿರುವಂತೆ ಮಾಡಿದ್ದಾರೆ ಎಂದು ನಟ ಸುಚೇಂದ್ರ ಪ್ರಸಾದ್ ತಿಳಿಸಿದರು.
ಸುಷ್ಮಾ ಅವರ ಧ್ವನಿ ಕೇಳುತ್ತಿದ್ದರೆ, ಉಷಾ ಉತ್ತಪ್ಪ ಅವರ ಧ್ವನಿ ಕೇಳಿದ ಹಾಗೆ ಆಗುತ್ತದೆ. ಅವರ ಕಂಠದಿಂದ ಮತ್ತಷ್ಟು ಗೀತೆಗಳು ಬರಲಿ ಎಂದು ಡಾ|| ಸಿ.ಸೋಮಶೇಖರ್ ಅವರು ಹೇಳಿದರು.
ಸುಷ್ಮಾ ನನ್ನ ಮಗಳು ಇದ್ದ ಹಾಗೆ. ಬಾಲ್ಯದಿಂದಲೂ ನೋಡಿದ ಮಗು. ಅವರ ಈ ಬೆಳವಣಿಗೆ ನನಗೆ ಸಂತೋಷ ತಂದಿದೆ ಎಂದರು ನಟ ಸುಂದರರಾಜ್.
ನಮ್ಮ ವೀರ ಕಥಾಕರ ಸಂಸ್ಥೆಯಿಂದ “ವೀರ ಸಂಭ್ರಮ K5” ಎಂಬ ಸಮಾರಂಭ ಆಯೋಜಿಸಿದ್ದೇವೆ. ಇದು ರಂಗಗೀತೆಗಳ ಹೊಸ ಅಲೆ ಅನಾವರಣ. ಈಗಿನ ಯುವಜನತೆಗೆ ರಂಗಗೀತೆಗಳನ್ನು ಪರಿಚಯಿಸುವುದೇ “ವೀರ ಸಂಭ್ರಮ”ದ ಮೂಲ ಉದ್ದೇಶ. ಇನ್ನೂ, K5 ಅಂದರೆ, ಕರ್ನಾಟಕ, ಕನ್ನಡ, ಕಾರಂತ, ಕಾರ್ನಾಡ್ ಹಾಗೂ ಕಂಬಾರ ಎಂದು. ಶಿವರಾಮ ಕಾರಂತ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ್ ಕಂಬಾರರ ಹಾಡುಗಳನ್ನು ಜನರಿಗೆ ತಲುಪಿಸುವ, ವಿಶೇಷವಾಗಿ ಯುವಜನತೆಗೆ ಮಟ್ಟಿಸುವ ಉದ್ದೇಶ. ಮುಂದಿನ ದಿನಗಳಲ್ಲಿ ಈ ಮೂವರು ದಿಗ್ಗಜರ ಕುರಿತು ದೊಡ್ದ ಸಮಾರಂಭ ಮಾಡುವ ಯೋಜನೆ ಕೂಡ ಇದೆ. ಇಂದು “ವೀರ ಸಂಭ್ರಮ”ದ ಮೊದಲ ಗೀತೆಯಾಗಿ ಡಾ||ಚಂದ್ರಶೇಖರ್ ಕಂಬರರ ” ಮಾಯಾದ ಮನದ ಭಾರ” ಹಾಡನ್ನು ಬಿಡುಗಡೆ ಮಾಡಿದ್ದೇವೆ. ಜಂಕಾರ್ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಟಿ.ಎಸ್ ನಾಗಾಭರಣ ನಿರ್ದೇಶನದ “ನಾಗ ಮಂಡಲ” ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಮೂಲ ಸ್ವರ ಸಂಯೋಜನೆ ಮಾಡಿದ್ದು ಸಿ.ಅಶ್ವಥ್ ಅವರು. ಈಗ ಈ ಹಾಡನ್ನು ನಾನು ಹಾಡುವ ಪ್ರಯತ್ನ ಮಾಡಿದ್ದೇನೆ. ನಿರ್ದೇಶಕ ನಾಗಾಭರಣ ಅವರು ಕೂಡ ನನ್ನ ಗಾಯನದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ಸಂತೋಷವಾಗಿದೆ. ಮುಂದೆ ಕೂಡ ಅನೇಕ ರಂಗಗೀತೆಗಳು ನಮ್ಮ ಸಂಸ್ಥೆಯ ಮೂಲಕ ಲೋಕಾರ್ಪಣೆಯಾಗಲಿದೆ. ಸಮಾರಂಭಕ್ಕೆ ಆಗಮಿಸಿದ ಗಣ್ಯರಿಗೆ ಹಾಗೂ ಕುಟುಂಬ ಸದಸ್ಯರಿಗೆ ಧನ್ಯವಾದ ಎಂದರು ವೀರ ಕಥಾಕರ ಸಂಸ್ಥೆ ಸ್ಥಾಪಕಿ ಹಾಗೂ “ವೀರ ಸಂಭ್ರಮ K5” ಸಮಾರಂಭದ ಆಯೋಜಕಿ ಸುಷ್ಮಾ ವೀರ್. ತಮ್ಮದೇ ಕಂಠಸಿರಿಯಲ್ಲಿ ರಂಗಗೀತೆ ಹಾಡುವ ಮೂಲಕ ಸುಷ್ಮ ವೀರ್ ಸಮಾರಂಭಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಯುವ ಗಾಯಕಿಯರಾದ ಕಾವ್ಯ ಹಾಗೂ ಕವನ ಸಹ ಸುಷ್ಮಾ ಅವರ ಜೊತೆಗೆ ಗಾಯನಕ್ಕೆ ಜೊತೆಯಾದರು.
ಗುಬ್ಬಿ ವೀರಣ್ಣ ಅವರ ಕುಟುಂಬ ಕಂಚಿನ ಕಂಠಕ್ಕೆ ಹೆಸರುವಾಸಿ. ಅದೇ ಕಂಚಿನ ಕಂಠ ನಮ್ಮ ಸುಷ್ಮಾ ಅವರದು. ರಂಗಗೀತೆಗಳಿಗೆ ಹೇಳಿ ಮಾಡಿಸಿದ ಕಂಠ ಅವರದು ಎಂದು ಸಮಾರಂಭಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯರು ಒಕ್ಕೊರಲ ಅಭಿಪ್ರಾಯ ಪಟ್ಟು, ಸುಷ್ಮಾ ಅವರ ಗಾಯನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.








