ಕೆಡಿ ಚಿತ್ರದಲ್ಲಿ ಕಾಲ ಭೈರವ ನಾದ ಕಿಚ್ಚ ಸುದೀಪ್

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ, ಜೋಗಿ ಪ್ರೇಮ್ ಅವರ ನಿರ್ದೇಶನದ ಕೆಡಿ ಚಿತ್ರ ಸಾಕಷ್ಟು ವಿವಾದಗಳನ್ನು ದಾಟಿ
ಕಡೆಗೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ಏಪ್ರಿಲ್ 30ರಂದು ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ,
ದ್ರುವ ಸರ್ಜಾ, ರೀಶ್ಮಾ ನಾಣಯ್ಯ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ನೀಡಲು ಹಾಗೂ ಚಿತ್ರದ
ಮತ್ತೊಂದು ಹಾಡಿನ ಬಿಡುಗಡೆಯ ಜತೆ ಸುದೀಪ್ ಅವರ ಜತೆ ವಿಶೇಷ ಸಂವಾದ ಕಾರ್ಯಕ್ರಮ ಸೋಮವಾರ ಸಂಜೆ ನೆರವೇರಿತು.


ನಿರ್ದೇಶಕ ಪ್ರೇಮ್, ನಾಯಕನಟ ದ್ರುವ ಸರ್ಜಾ, ನಾಯಕಿ ರೀಶ್ಮಾ ನಾಣಯ್ಯ ಭಾಗಿಯಾಗಿದ್ದ ವೇದಿಕೆಯಲ್ಲಿ ಕಾಲಭೈರವನ ಅವತಾರದಲ್ಲಿ ಕಾಣಿಸಿಕೊಂಡಿದ್ದ ಕಿಚ್ಚ ಸುದೀಪ್ ಮುಖ್ಯ ಆಕರ್ಷಣೆಯಾಗಿದ್ದರು.
ತುಂಬಾ ಸಮಯದವರೆಗೆ ಮಾತನಾಡಿದ ಕಿಚ್ಚ ಸುದೀಪ್ ಮಾಧ್ಯಮದವರ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡುತ್ತಾ ಹೋದರು.
ಕೆಡಿ ಚಿತ್ರದಲ್ಲಿ ತಮ್ಮ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. 150 ದಿನಗಳ ಕಾಲ ನಡೆದ
ಚಿತ್ರೀಕರಣದಲ್ಲಿ ನನ್ನದು ಮೂರು ದಿನದ ಕೆಲಸ ಮಾತ್ರ. ದ್ರುವ ನನ್ನ ಸೋದರನಿದ್ದಂತೆ, ಆತ ಒಂದು ದೊಡ್ಡ ಸಿನಿಮಾ ಮಾಡಿದಾಗ, ಅದರ ಭಾಗವಾಗಿ ನಿಲ್ಲಬೇಕೆಂದು ನಾನಿಲ್ಲಿಗೆ ಬಂದೆ. ನಾಯಕಿ ರೀಶ್ಮಾ ಕೂಡ ಉತ್ತಮ ನಟಿ ಎಂದು ನಾಯಕ, ನಾಯಕಿ ಇಬ್ಬರನ್ನೂ
ಮೆಚ್ಚಿಕೊಂಡರು. ನಂತರ ಚಿತ್ರೋದ್ಯಮ ಈಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿ, ಸದ್ಯ ಕನ್ನಡ ಚಿತ್ರರಂಗ ಅಳಿವಿನಂಚಿನಲ್ಲಿದೆ, ಮಾಧ್ಯಮಗಳು ಇಂತಹ ಚಿತ್ರಗಳು ಬಂದಾಗ ಸಪೋರ್ಟ್ ಮಾಡಬೇಕು ಎಂದೂ ಹೇಳಿದರು.
ಮಾತು ಮುಂದುವರೆಸಿದ ಸುದೀಪ್ ನಿರ್ದೇಶಕ ಪ್ರೇಮ್ ಒಬ್ಬ ಫ್ಯಾಷನೇಟ್ ಫಿಲಂ ಮೇಕರ್, ಆಗು ಹೋಗುಗಳ ಬಗ್ಗೆ ಒಂದೊಳ್ಳೇ ಸಿನಿಮಾ ಕೊಡಲು ಪ್ರಯತ್ನಿಸುತ್ತಾರೆ, ಅವರು ತೆಗೆದಿರುವ ಪ್ರತಿ ಫ್ರೇಮ್ ತುಂಬಾ ಇಷ್ಟವಾಯ್ತು. ಪ್ರೇಮ್ ನನಗೆ ಒಬ್ಬ ವ್ಯಕ್ತಿಯಾಗಿ ಇಷ್ಟ, ನಾವು ಇಷ್ಟಪಟ್ಟವರಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದ. ಅವರು ಎಲ್ಲಿರ‍್ತಾರೋ ಅಲ್ಲಿ ಎನರ್ಜಿ ಇರುತ್ತೆ, ಆಗ ನಮ್ಮ ಎನರ್ಜಿಯೂ ಜಾಸ್ತಿ ಆಗುತ್ತೆ ಎಂದರು. ನಂತರ ಹಾಡಿನ ವಿವಾದದ ಬಗ್ಗೆ ಮಾತನಾಡುತ್ತ ಪ್ರೇಮ್ ಈ ಹಿಂದೆ ಸಾಕಷ್ಟು ಸದಭಿರುಚಿಯ ಸಾಹಿತ್ಯ ಬರೆದು, ತಂದೆ, ತಾಯಿ, ಮಕ್ಕಳು ಒಂದಾಗುವಂತೆ ಮಾಡಿದ್ದುಂಟು, ಆದರೆ ಒಂದು ತಪ್ಪು ನಡೆದಿದೆ, ಅದನ್ನು ಸರಿಪಡಿಸಿಕೊಂಡಿದ್ದಾರೆ, ನಮ್ಮವರನ್ನು ನಾವು ಕಡೆಗಣಿಸದೆ ಕೈಹಿಡಿಯಬೇಕು ಎಂದು ಕಿವಿಮಾತು ಹೇಳಿದರು. ನಂತರ ಪೈರಸಿ ಕುರಿತಂತೆ ಮಾತನಾಡಿ ದ್ರುವ ಸರ್ಜಾ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ, ಅವರೇ ಪೈರಸಿ ಆಗದಂತೆ ನೋಡಿಕೊಳ್ಳುತ್ತಾರೆ, ಅದನ್ನೂ ಮೀರಿ ನಮಗೆ ಚಿತ್ರಮಂದಿರ ದೇವಾಲಯವಿದ್ದಂತೆ, ದೇವರನ್ನು ನೋಡಲು ದೇವಸ್ಥಾನಕ್ಕೆ ಬರಬೇಕು, ಹಾಗೇ ನಮ್ಮ ಮೇಲೆ ಪ್ರೀತಿಯಿರುವವರು ಥೇಟರಿಗೆ ಬಂದೇ ಬರುತ್ತಾರೆ ಎಂದು ಪ್ರೇಕ್ಷಕರ ಮೇಲೆ ನಂಬಿಕೆ ವ್ಯಕ್ತಪಡಿಸಿದರು,
ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿ ಸುದೀಪ್ ಅವರು ನನಗೆ ಬ್ರದರ್ ಥರ, ನನ್ನ ಬಗ್ಗೆ ಯಾವುದೇ ವಿವಾದ ಆಗಲಿ ಸದಾ ಬೆಂಬಲಕ್ಕೆ ನಿಲ್ತಾರೆ, ಈ ಸಿನಿಮಾದಲ್ಲಿ ಒಂದು ಪವರ್ ಫುಲ್ ಪಾತ್ರವಿದೆ ನೀವು ಮಾಡಬೇಕು ಎಂದು ಅವರನ್ನು ಕೇಳಿದಾಗ ಒಂದೇ ಮಾತಿಗೆ ಆಯ್ತು ಬರ‍್ತೀನಿ ಅಂದರು, ಚಿತ್ರದಲ್ಲಿ ಅವರು ಕಾಲಭೈರವನಾಗಿ ಅಬ್ಬರಿಸಿದ್ದಾರೆ. ಅವರ ಪಾತ್ರ ತುಂಬಾ ವೈಲೆಂಟ್ ಆಗಿದೆ, ಅದು ಎಷ್ಟು ಪವರ್ ಫುಲ್ ಅಂತ ನೀವೆಲ್ಲ ಸಿನಿಮಾ ನೋಡಿದಾಗ ಗೊತ್ತಾಗುತ್ತೆ ಎಂದರು.
ನಂತರ ಚಿತ್ರದ ನಾಯಕ ದ್ರುವ ಸರ್ಜಾ, ನಾಯಕಿ ರೀಶ್ಮಾ ನಾಣಯ್ಯ ತಮ್ಮ ಪಾತ್ರಗಳ ಕುರಿತಂತೆ ಹಾಗೂ ಸುದೀಪ್ ಅವರು ಕೆಡಿ ಚಿತ್ರದ ಭಾಗವಾಗಿರುವ ಕುರಿತಂತೆ ಮಾತನಾಡಿದರು. ಜತೆಗೆ ಸಂಜಯದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಇವರೆಲ್ಲ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor