ಅರ್ಜುನ್ ಜನ್ಯ ಅವರಿಂದ ಅನಾವರಣವಾಯಿತು ‘ಮಹಾಕವಿ’ ಚಿತ್ರದ ಹಾಡುಗಳು .

ಇದು ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ 25 ನೇ ಚಿತ್ರ
.
ಬೆಳಗಾವಿಯ ಪ್ರಭು ಯತ್ನಟ್ಟಿಯವರು ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಮಹಾಕವಿ’ ಕನ್ನಡ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಚಿತ್ರದ ಹಾಡುಗಳನ್ನು ಅನಾವರಣ ಮಾಡಿದರು. ಶಮಿತಾ ಮಲ್ನಾಡ್ “ಮಹಾಕವಿ” ಚಿತ್ರಕ್ಕೆ ‌ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಶೋರ್ ಹಾಗೂ ಅನುಷಾ ರೈ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಹಾಡುಗಳ ಬಿಡುಗಡೆ ನಂತರ ಅತಿಥಿಗಳು ಹಾಗೂ ಗಣ್ಯರು ಚಿತ್ರದ ಕುರಿತು ಮಾತನಾಡಿದರು.

ನಾನು ಇಲ್ಲಿ ಮುಖ್ಯ ಅತಿಥಿಯಾಗಿ ಬಂದಿಲ್ಲ. ಬರಗೂರು ರಾಮಚಂದ್ರಪ್ಪ ಅವರ ಅಭಿಮಾನಿಯಾಗಿ ಬಂದಿದ್ದೇನೆ. ಅವರ ಬಾಯಲ್ಲಿ ಕನ್ನಡ ಕೇಳುವುದಕ್ಕೆ ಬಹಳ ಖುಷಿಯಾಗುತ್ತದೆ . ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ ಎಂದು ಅರ್ಜುನ್ ಜನ್ಯ ತಿಳಿಸಿದರು.
‘ಮಹಾಕವಿ’ಯು ಬರಗೂರರ ನಿರ್ದೇಶನದ ಇಪ್ಪತ್ತೈದನೇ ಚಿತ್ರ ಎನ್ನುವುದು ಒಂದು ವಿಶೇಷ. ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ ಎಲ್ಲರನ್ನು ಸ್ವಾಗತಿಸಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು, ‘ಮಹಾಕವಿ’ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ. ಹತ್ತನೇ ಶತಮಾನದ ಅಧಿಕೃತಗೆ ಧಕ್ಕೆ ಬಾರದ ಹಾಗೆ ಈ ಚಿತ್ರವನ್ನು ನಿರ್ದೇಶಿಸುವುದು ಅಷ್ಟು ಸುಲಭವಾಗಿರಲಿಲ್ಲ ಎಂದರು.

ಹಿನ್ನೆಲೆ ಗಾಯಕಿಯಾಗಿದ್ದ ನನ್ನನ್ನು 2015 ರಲ್ಲಿ “ಬೆಕ್ಕು” ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯನ್ನಾಗಿ ಮಾಡಿದರು. ಆನಂತರ ಅವರ ನಿರ್ದೇಶನದ ಎಲ್ಲಾ ಚಿತ್ರಗಳಿಗೂ ನಾನೇ ಸಂಗೀತ ಸಂಯೋಜನೆ ಮಾಡಿರುವುದು ಹೆಮ್ಮೆಯ ವಿಚಾರ. ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಅರ್ಜುನ್ ಜನ್ಯ ಅವರಿಗೆ ಧನ್ಯವಾದ ಎಂದರು ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್.

“ಮಹಾಕವಿ”, ಆದಿಕವಿ ಪಂಪನ ಕುರಿತಾದ ಚಿತ್ರ. ಇಂತಹ ಚಿತ್ರದಲ್ಲಿ ಅಭಿನಯಿಸಿರುವುದು ಬಹಳ ಹೆಮ್ಮೆ. ಇನ್ನೂ, ವಿಲನ್ ಪಾತ್ರಗಳಲ್ಲಿ ಹೆಚ್ಚು ಅಭಿನಯಿಸುವವರಿಗೆ ಹಾಡುಗಳು ಸಿಗುವುದು ಕಡಿಮೆ. ಆದರೆ ನನಗೆ ಈ ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರ ಸಿಕ್ಕಿದೆ. ಹಾಡುಗಳೂ ಸಿಕ್ಕಿದೆ ಎಂದರು ನಟ ಕಿಶೋರ್.

ಚಿತ್ರದಲ್ಲಿ ನಾಯಕಿ ಅನುಷಾ ರೈ, ಚಿತ್ರದಲ್ಲಿ ನಟಿಸಿರುವ ಸುಂದರರಾಜ್, ಪ್ರಮೀಳಾ ಜೋಷಾಯ್, ರಾಜಪ್ಪ ದಳವಾಯಿ ಮುಂತಾದವರು “ಮಹಾಕವಿ” ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕ ಪ್ರಭು ಯತ್ನಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. “ಮಹಾಕವಿ” ಚಿತ್ರ ಹಾಲಿವುಡ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಸದ್ಯದಲ್ಲೇ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor