‘ಕಲರ್ಸ್ ಕನ್ನಡ’ದಲ್ಲಿ ಜೂನ್ 8ರಿಂದ ಹೊಚ್ಚ ಹೊಸ ಕಥೆ ‘ಅಗ್ನಿಸಾಕ್ಷಿ’!

ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ ‘ಅಗ್ನಿಸಾಕ್ಷಿ’ ಶೀರ್ಷಿಕೆ ಈಗ ಮತ್ತೆ ಕನ್ನಡಿಗರ ಮನೆಮನ ಬೆಳಗಲು ಸಜ್ಜಾಗಿದೆ. ಕೌಟುಂಬಿಕ ಮನರಂಜನೆಯಲ್ಲಿ ಸದಾ ಮುಂಚೂಣಿಯಲ್ಲಿರುವ ‘ಕಲರ್ಸ್ ಕನ್ನಡ’ ವಾಹಿನಿಯು ಇದೇ ಜೂನ್ 8ರಿಂದ ಸಂಜೆ 7:00 ಗಂಟೆಯ ಪ್ರೈಮ್ ಟೈಮ್ ಸ್ಲಾಟ್‌ನಲ್ಲಿ ಹೊಚ್ಚ ಹೊಸ ಕಥಾಹಂದರ ಹೊಂದಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯನ್ನು ಹೊತ್ತು ತರುತ್ತಿದೆ.

ಇದು ಹಳೆಯ ಧಾರಾವಾಹಿಯ ಮುಂದುವರಿದ ಭಾಗವಲ್ಲ; ಬದಲಿಗೆ ಇಂದಿನ ತಲೆಮಾರಿನ ಯುವಮನಸ್ಸುಗಳ ಅಹಂಕಾರ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಹೈ-ವೋಲ್ಟೇಜ್ ಕಥೆಯಾಗಿದೆ.

“ಇಬ್ಬರು ಕಣ್ಣುಂದೆ ಬಂದ್ರೆ ಸಹಿಸೋಕಾಗಲ್ಲ, ಕಾಣದೇ ಹೋದ್ರೆ ಬದುಕೋಕೇ ಆಗಲ್ಲ!” ಎಂಬ ವಿಶಿಷ್ಟ ಪ್ರೇಮಬಂಧದ ಎಳೆ ಈ ಕಥೆಯಲ್ಲಿದೆ.

ಪಾತ್ರಗಳ ಪರಿಚಯ ಮತ್ತು ಹಿನ್ನೆಲೆ:
ಈ ಬಾರಿಯ ‘ಅಗ್ನಿಸಾಕ್ಷಿ’ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿತ್ವಗಳ ಎರಡು ಧ್ರುವಗಳ ನಡುವಿನ ಸಂಘರ್ಷ. ಪೋಸ್ಟರ್‌ಗಳಲ್ಲಿ ಅನಾವರಣಗೊಂಡಿರುವಂತೆ ಪಾತ್ರಗಳ ಧೀಮಂತಿಕೆ ಹೀಗಿದೆ:

  • ಅಗ್ನಿ (ನಾಯಕ): ಅವನು ಎಲ್ಲವನ್ನೂ ಧ್ವಂಸ ಮಾಡೋ ಬಿರುಗಾಳಿ ಅಷ್ಟೇ ಅಲ್ಲ, ತನ್ನ ಅಹಂಗೆ ಎದುರು ನಿಂತರೆ ‘ಅವನು ಎಲ್ಲವನ್ನೂ ಸುಟ್ಟು ಹಾಕೋ ಬೆಂಕಿ’ ಸಂಪತ್ತು ಮತ್ತು ವಿಪರೀತ ಗರ್ವದ ಹಿನ್ನೆಲೆಯುಳ್ಳ ಈ ಹಠಮಾರಿ ಉದ್ಯಮಿಯ ಪಾತ್ರಕ್ಕೆ ಗಾಯಕ ಹಾಗೂ ನಟ ಶಮಂತ್ ಬ್ರೋ ಗೌಡ ಜೀವ ತುಂಬಿದ್ದಾರೆ.
  • ಸಾಕ್ಷಿ (ನಾಯಕಿ): ಅವಳು ಎಲ್ಲವನ್ನೂ ತಂಪಾಗಿಸೋ ತಂಗಾಳಿ ಆದರೆ ಅನ್ಯಾಯದ ವಿರುದ್ಧ ನಿಲ್ಲುವಾಗ, ಕತ್ತಲ ಹಾದಿಗೆ ‘ಅವಳು ದಾರಿ ತೋರಿಸೋ ಬೆಳಕು’. ಎಷ್ಟೇ ಕಷ್ಟ ಬಂದರೂ ತನ್ನ ಆತ್ಮಗೌರವವನ್ನು ಬಿಟ್ಟುಕೊಡದ ಈ ಧೀಮಂತ ಯುವತಿಯ ಪಾತ್ರದಲ್ಲಿ ನಟಿ ವರ್ಷಿಣಿ ಗೌಡ ನಟಿಸುತ್ತಿದ್ದಾರೆ.
    ಹಸೆಮಣೆಯಲ್ಲಿ ಇವರಿಬ್ಬರ ಹಣೆಬರಹ ಹೇಗೆ ಒಂದಾಗಲಿದೆ, ಈ ಬೆಂಕಿ ಮತ್ತು ತಂಗಾಳಿಯ ನಡುವಿನ ಅಹಂ ಹಾಗೂ ಆದರ್ಶಗಳ ಹೋರಾಟ ಎತ್ತ ಸಾಗಲಿದೆ ಎನ್ನುವುದೇ ಇಡೀ ಸರಣಿಯ ಜೀವಾಳ.

ತಾಂತ್ರಿಕ ವರ್ಗ ಮತ್ತು ಪ್ರಸಾರದ ವಿವರ:
ಈ ಹಿಂದಿನ ಸೂಪರ್ ಹಿಟ್ ‘ಅಗ್ನಿಸಾಕ್ಷಿ ‘ ಧಾರಾವಾಹಿಯ ಬರಹಗಾರರಾದ ಹ್ಯಾರಿಸ್ ಅವರೇ ಈ ಕಥೆಯನ್ನು ಬರೆಯುತ್ತಿದ್ದಾರೆ.

ಇನ್ನು ಈ ಧಾರಾವಾಹಿಯು ಅತ್ಯುನ್ನತ ಮೇಕಿಂಗ್ ಹಾಗೂ ಶ್ರೀಮಂತ ದೃಶ್ಯವೈಭವದಿಂದ ಕೂಡಿರಲಿದೆ. ಬಾಂದವ್ಯಗಳ ಹೊಸ ಆಯಾಮವನ್ನು ಪರಿಚಯಿಸಲಿರುವ ‘ಅಗ್ನಿಸಾಕ್ಷಿ’ ಜೂನ್ 8 ರಿಂದ ಇದೇ ಸೋಮವಾರದಿಂದ ಪ್ರತಿ ಸಂಜೆ 7 ಗಂಟೆಗೆ ನಿಮ್ಮ ನೆಚ್ಚಿನ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೀಕ್ಷಕರು ಎಂದಿನಂತೆ ಈ ಹೊಸ ಪ್ರಯತ್ನಕ್ಕೂ ಪ್ರೀತಿ ಮತ್ತು ಬೆಂಬಲ ನೀಡಬೇಕಾಗಿ ವಿನಂತಿ.


ಪ್ರಶಾಂತ್ ಡಿ.ಪಿ ನಿರ್ದೇಶಿಸುತ್ತಿರುವ ಈ ಧಾರಾವಾಹಿಯ ಅಗ್ನಿ ಪಾತ್ರದಲ್ಲಿ ಶಮಂತ್ ಗೌಡ(ಬ್ರೋ ಗೌಡ), ಸಾಕ್ಷಿ ಪಾತ್ರದಲ್ಲಿ ವರ್ಷಿಣಿ ನಟಿಸುತ್ತಿದ್ದಾರೆ. ಅಕ್ಷತ, ಲೇಖನ, ಶ್ರೀಕಾಂತ್ ಮುಂತಾದವರ ತಾರಾಬಳಗವಿರುವ “ಅಗ್ನಿಸಾಕ್ಷಿ” ಧಾರಾವಾಹಿಯಲ್ಲಿ ಬಹಳ ದಿನಗಳ ನಂತರ ನಟ ಮಿಥುನ್ ತೇಜಸ್ವಿ ಅಭಿನಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor