ಹುಲಿ ಬೀರ ಚಿತ್ರ ವಿಮರ್ಶೆ- ಮಾಸು ಕ್ಲಾಸಿನ ಇಮೇಜಿನಲ್ಲಿ ಮಣ್ಣಿನ ಸೊಗಡಿನ ಹುಲಿಬೀರ
ಚಿತ್ರ – ಹುಲಿಬೀರ
ನಿರ್ಮಾಪಕರು – ದಾವಲ್ ಸಾಬ್ ಹುಣಸಿಮರದ್, ಅಶೋಕ್ ತುರುವೇಕೆರೆ, ಸುಜಾತ ಗಿರೀಶ್
ನಿರ್ದೇಶನ – ಮಲ್ಲಿಕಾರ್ಜುನ ಮುತ್ತಲಗಿ
ಸಂಗೀತ – ವೀರ ಸಮರ್ಥ್
ಛಾಯಾಗ್ರಾಹಣ – ಸನಾತನ ಹಂಚಿನ್
Rating -3 /5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐ / 5
ಕಲಾವಿದರು – ಅರ್ಜುನ್, ವನು ಪಾಟೀಲ್, ರಂಗಾಯಣ ರಘು, ಚೈತ್ರ ತೋಟದ್, ರಾಜೇಂದ್ರ ಕಾರಂತ್ ಸುನಂದ ಹೊಸಪೇಟೆ ಮುಂತಾದವರು.
ಮಣ್ಣಿನ ಸೊಗಡಿನ ಕಥೆಗೆ ಮಾಸ್ ಸ್ಪರ್ಶ – ‘ಹುಲಿಬೀರನ ಕಮಾಲ್
ಗ್ರಾಮೀಣ ಬದುಕು, ಅಲ್ಲಿನ ಜನರ ಮನಸ್ಥಿತಿ, ಸಂಬಂಧಗಳ ಬೆಸುಗೆ, ಊರಿನ ಸಮಸ್ಯೆಗಳು ಹಾಗೂ ಯುವಕರ ಕನಸುಗಳನ್ನು ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿರುವ ಚಿತ್ರ ‘ಹುಲಿಬೀರ’.

ಉತ್ತರ ಕರ್ನಾಟಕದ ನೆಲದ ಸೊಗಡನ್ನು ಕಥೆಯ ಪ್ರಮುಖ ಭಾಗವಾಗಿಸಿಕೊಂಡಿರುವ ಸಿನಿಮಾ, ಮನರಂಜನೆಯ ಜೊತೆಗೆ ಗ್ರಾಮೀಣ ಬದುಕಿನ ಹಲವು ಮುಖಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ. ನಾಯಕ ಬೀರನ ಸುತ್ತ ನಡೆಯುವ ಘಟನೆಗಳ ಮೂಲಕ ಕಥೆ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತದೆ.
ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈಗಾಗಲೇ ಆಟೋ, ಮದರಂಗಿ, ಎನ್ನುವ ಚಿತ್ರಗಳನ್ನು ನಿರ್ದೇಶನ ಮಾಡಿರುವ ಅಂತ ಮಲ್ಲಿಕಾರ್ಜುನ ಮುತ್ತಲಾಗಿ ಈ ಬಾರಿ ಹಳ್ಳಿಗಾಡಿನಲ್ಲಿ ನಡೆಯುವಂತ ಇವತ್ತಿನ ಪರಿಸ್ಥಿತಿಯನ್ನು ಒಳಗೊಂಡಂತೆ ಚಿತ್ರಕ್ಕೆ ಕಥೆಯನ್ನ ಎಣೆದಿದ್ದಾರೆ.
ಗ್ರಾಮೀಣ ಬದುಕಿನ ಕಥೆಯನ್ನು ಕೇವಲ ಹಳ್ಳಿಯ ಹಿನ್ನೆಲೆಯಲ್ಲೇ ಸೀಮಿತಗೊಳಿಸದೆ, ಕುಟುಂಬ, ಪ್ರೀತಿ, ಯುವಕರ ಬದುಕು, ಊರಿನ ಅಭಿವೃದ್ಧಿ ಮತ್ತು ಸಂಘರ್ಷಗಳೊಂದಿಗೆ ಬೆರೆಸಿರುವುದು ನಿರ್ದೇಶನದ ಪ್ರಮುಖ ಅಂಶ.
ಆದರೆ ಕಥೆಯನ್ನು ಇನ್ನಷ್ಟು ಬಿಗಿಯಾಗಿ ಕಟ್ಟಿಕೊಡಬಹುದಿತ್ತು ಎನ್ನಿಸುವ ಕೆಲವು ಭಾಗಗಳಿವೆ. ವಿಶೇಷವಾಗಿ ಮೊದಲಾರ್ಧದಲ್ಲಿ ವೇಗ ಸ್ವಲ್ಪ ಹೆಚ್ಚಿದ್ದರೆ ಸಿನಿಮಾ ಇನ್ನಷ್ಟು ಪರಿಣಾಮಕಾರಿಯಾಗಬಹುದಿತ್ತು.

ಶಿಕ್ಷಣದ ವಿಷಯದಲ್ಲಿ ಹೆಚ್ಚಿನ ಸಾಧನೆ ಮಾಡದಿದ್ದರೂ ಬದುಕಿನ ಅನುಭವದಿಂದ ಸಾಕಷ್ಟು ಕಲಿತಿರುವ ಯುವಕ ಬೀರ. ತನ್ನ ಕುಟುಂಬ ಹಾಗೂ ಊರಿನ ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಆತ, ಎದುರಾಗುವ ಸಮಸ್ಯೆಗಳಿಂದ ಹಿಂದೆ ಸರಿಯುವುದಿಲ್ಲ.
ಉದ್ಯೋಗಕ್ಕಾಗಿ ಯುವಕರು ನಗರಗಳತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲಿ, ‘ನಮ್ಮ ಊರನ್ನು ಬಿಟ್ಟು ಹೋಗುವುದೇ ಪರಿಹಾರವೇ? ನಮ್ಮ ಊರಿನ ಅಭಿವೃದ್ಧಿಗೆ ನಾವು ಏನು ಮಾಡಬೇಕು?’ ಎನ್ನುವ ಪ್ರಶ್ನೆಯನ್ನೂ ಸಿನಿಮಾ ಪ್ರೇಕ್ಷಕರ ಮುಂದಿಡುತ್ತದೆ.
ಈ ವಿಚಾರವನ್ನು ಕೇವಲ ಸಂದೇಶವಾಗಿ ಹೇಳದೆ, ಪ್ರೀತಿ, ಕುಟುಂಬ, ಹಾಸ್ಯ, ಸಂಘರ್ಷ ಮತ್ತು ಆಕ್ಷನ್ ಅಂಶಗಳೊಂದಿಗೆ ಕಥೆಯನ್ನು ಕಟ್ಟುವ ಪ್ರಯತ್ನ ನಿರ್ದೇಶಕರಿಂದ ನಡೆದಿದೆ.
ಅಂಜನ್‌ಗೆ ಬೀರನ ಪಾತ್ರ ಹೊಸ ಆಯಾಮ
ನಾಯಕನಾಗಿ ಕಾಣಿಸಿಕೊಂಡಿರುವ ರೂರಲ್ ಸ್ಟಾರ್ ಅಂಜನ್, ಬೀರನ ಪಾತ್ರಕ್ಕೆ ಅಗತ್ಯವಿರುವ ಗ್ರಾಮೀಣ ನೇಟಿವಿಟಿಯನ್ನು ತರುವಲ್ಲಿ ಗಮನ ಸೆಳೆಯುತ್ತಾರೆ.
ಅವರ ಮಾತಿನ ಶೈಲಿ, ಬಾಡಿ ಲ್ಯಾಂಗ್ವೇಜ್ , ಆಕ್ಷನ್ ದೃಶ್ಯಗಳು ಹಾಗೂ ಭಾವನಾತ್ಮಕ ಸನ್ನಿವೇಶಗಳಲ್ಲಿನ ಅಭಿನಯ ಚಿತ್ರಕ್ಕೆ ಪೂರಕವಾಗಿದೆ. ಹಾಗೂ ಅವರ ಪಾತ್ರ ಕಥೆಗೆ ಪುಷ್ಟಿ ನೀಡುವಂತಿದೆ.

ಇತ್ತೀಚಿನ ದಿನಗಳಲ್ಲಿ ರಂಗಾಯಣ ರಘು ಇದ್ದಾರೆ ಅಂದ್ರೆ ಆ ಚಿತ್ರಕ್ಕೆ ಒಂದು ಕಳೆ ಬಂದಂತೆ, ಯಾವುದೇ ಪಾತ್ರವನ್ನು ಕೊಟ್ಟರು ರಂಗಾಯಣ ರಘು ಲೀಲಾಜಾಲವಾಗಿ ಅಭಿನಯಿಸಿ ಆ ಪಾತ್ರಕ್ಕೆ ಒಂದು ತೂಕವನ್ನು ತಂದು ಕೊಡ್ತಾರೆ. ಈ ಚಿತ್ರದಲ್ಲೂ ಕೂಡ ರಂಗಾಯಣ ರಘು ಎಲ್ಲರ ಗಮನ ಸೆಳೆಯುತ್ತಾರೆ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ರಂಗಾಯಣ ರಘು ಅವರ ಪಾತ್ರವೂ ಪ್ರಮುಖವಾಗಿದೆ. ಹಾಸ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳ ನಡುವೆ ಅವರ ಅಭಿನಯ ಸಹಜವಾಗಿ ಸಾಗುತ್ತದೆ. ಹಾಗೂ ಕಥಾನಾಯಕನೊಂದಿಗೆ ಅವರ ಸಂಬಂಧವನ್ನು ಕಟ್ಟಿಕೊಟ್ಟಿರುವ ರೀತಿ ಚಿತ್ರಕ್ಕೆ ಮತ್ತೊಂದು ಭಾವನಾತ್ಮಕ ಆಯಾಮ ನೀಡುತ್ತದೆ.
ನಾಯಕಿಯರಾಗಿ ಚೈತ್ರಾ ತೊಟದ್ ಹಾಗೂ ವಾನು ಪಾಟೀಲ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಗ್ರಾಮೀಣ ನೇಟಿವಿಟಿಯೇ ಚಿತ್ರದ ಪ್ರಮುಖ ಅಂಶ
‘ಹುಲಿಬೀರ’ ಚಿತ್ರದ ದೊಡ್ಡ ಶಕ್ತಿ ಅದರ ಗ್ರಾಮೀಣ ವಾತಾವರಣ.
ಬಾದಾಮಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನೈಸರ್ಗಿಕ ಸೌಂದರ್ಯವನ್ನು ಕ್ಯಾಮೆರಾ ಚೆನ್ನಾಗಿ ಸೆರೆಹಿಡಿದಿದೆ. ಊರಿನ ಮನೆಗಳು, ಜನಜೀವನ, ಭಾಷೆ ಮತ್ತು ಅಲ್ಲಿನ ಸಂಸ್ಕೃತಿ ಸಿನಿಮಾದಲ್ಲಿ ನೈಜತೆಯನ್ನು ಹೆಚ್ಚಿಸುತ್ತವೆ.
ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಬಳಸಿರುವುದು ಚಿತ್ರದ ನೇಟಿವಿಟಿಗೆ ಪ್ಲಸ್ ಪಾಯಿಂಟ್. ಆದರೆ ಕೆಲವು ಸಂಭಾಷಣೆಗಳು ಎಲ್ಲ ಪ್ರೇಕ್ಷಕರಿಗೂ ಸುಲಭವಾಗಿ ಅರ್ಥವಾಗದಿರುವ ಸಾಧ್ಯತೆಯೂ ಇದೆ.
ವೀರ್ ಸಮರ್ಥ್ ಅವರ ಸಂಗೀತಕ್ಕೆ ಗ್ರಾಮೀಣ ಸ್ಪರ್ಶವಿದೆ. ಕಥೆಯ ವಾತಾವರಣಕ್ಕೆ ಹೊಂದಿಕೊಳ್ಳುವ ಹಾಡುಗಳು ಸಿನಿಮಾದ ಓಟಕ್ಕೆ ಪೂರಕವಾಗಿವೆ.
ಧರ್ಮ ವಿಶ್ ಅವರ ಹಿನ್ನೆಲೆ ಸಂಗೀತ ವಿಶೇಷವಾಗಿ ಆಕ್ಷನ್ ಹಾಗೂ ಭಾವನಾತ್ಮಕ ಸನ್ನಿವೇಶಗಳಿಗೆ ತೂಕ ನೀಡುತ್ತದೆ. ಚಿತ್ರದಲ್ಲಿ ದೇವರಾಧನೆ, ಆವಾಹನೆಯ ದೃಶ್ಯಗಳು ಚಿತ್ರಕ್ಕೆ ಪುಷ್ಟಿ ನೀಡಿದೆ.
ನಿರ್ದೇಶಕರು ಮೊದಲಾರ್ಧದಲ್ಲಿ ಪಾತ್ರಗಳು ಮತ್ತು ಪರಿಸರವನ್ನು ಪರಿಚಯಿಸುವುದಕ್ಕೆ ಹೆಚ್ಚಿನ ಸಮಯ ನೀಡಲಾಗಿದೆ. ಹೀಗಾಗಿ ಕೆಲವೆಡೆ ಸಿನಿಮಾ ನಿಧಾನಗತಿಯಲ್ಲಿ ಸಾಗುತ್ತದೆ.
ಆದರೆ ದ್ವಿತೀಯಾರ್ಧದಲ್ಲಿ ಕಥೆ ವೇಗ ಪಡೆದುಕೊಳ್ಳುತ್ತದೆ. ಹಲವು ಘಟನೆಗಳು ಒಂದಕ್ಕೊಂದು ಜೋಡಣೆಯಾಗುತ್ತಾ ಹೋಗುತ್ತವೆ. ಕ್ಲೈಮ್ಯಾಕ್ಸ್ ಕಡೆಗೆ ಸಾಗುತ್ತಿದ್ದಂತೆ ಸಿನಿಮಾದ ಕಥೆ ಮತ್ತಷ್ಟು ಗಟ್ಟಿಯಾಗುತ್ತದೆ.
ಎಂ.ಪಿ. ಫಿಲಂಸ್ ಮುನೀಂದ್ರರವರ ಹಂಚಿಕೆಯಲ್ಲಿ ಕರ್ನಾಟಕದಾದ್ಯಂತ ಚಿತ್ರ ಚಿತ್ರಮಂದಿರಗಳಲ್ಲಿ ತೆರೆಕೊಂಡಿದೆ.
ಕೊನೆಯದಾಗಿ ಹೇಳಬೇಕೆಂದರೆ ‘ಹುಲಿಬೀರ’ ದೊಡ್ಡ ನಗರಗಳ ಕಥೆಗಿಂತ ಮಣ್ಣಿನ ವಾಸನೆಯಿರುವ ಕಥೆಯನ್ನು ಹೇಳಲು ಪ್ರಯತ್ನಿಸಿರುವ ಸಿನಿಮಾ.
ಗ್ರಾಮೀಣ ಬದುಕಿನ ನೇಟಿವಿಟಿ, ಉತ್ತರ ಕರ್ನಾಟಕದ ಭಾಷೆ, ಕುಟುಂಬದ ಭಾವನೆಗಳು, ನಾಯಕನ ಮಾಸ್ ಇಮೇಜ್ ಮತ್ತು ಆಕ್ಷನ್ ಅಂಶಗಳು ಸಿನಿಮಾದ ಪ್ರಮುಖ ಆಕರ್ಷಣೆಗಳು.
ಕೆಲವು ಕಡೆ ಕಥೆಯ ವೇಗ ನಿಧಾನವಾದರೂ, ದ್ವಿತೀಯಾರ್ಧದಲ್ಲಿ ಬರುವ ತಿರುವುಗಳು ಹಾಗೂ ಕ್ಲೈಮ್ಯಾಕ್ಸ್ ಚಿತ್ರದ ಓಟಕ್ಕೆ ಮತ್ತಷ್ಟು ಬಲ ನೀಡುತ್ತವೆ.
ಗ್ರಾಮೀಣ ಸೊಗಡಿನ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಹುಲಿಬೀರ’ ಒಂದು ವಿಭಿನ್ನ ಅನುಭವ ನೀಡವುದರಲ್ಲಿ ಸಂಶಯವಿಲ್ಲ.







