ಸ್ಯಾಂಡಲ್‌ವುಡ್‌ನ ಸೈಂಟಿಫಿಕ್ ಥ್ರಿಲ್ಲರ್ ‘ಲಂಬೋದರ 2.0’ ಚಿತ್ರಕ್ಕೆ ಬಾಲಿವುಡ್ ನಿರ್ಮಾಪಕ ಮಹಾವೀರ್ ಜೈನ್ ಸಾಥ್;

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ ಸೈನ್ಸ್-ಫಿಕ್ಷನ್ ಸೋಶಿಯಲ್ ಥ್ರಿಲ್ಲರ್ ‘ಲಂಬೋದರ 2.0’ ಚಿತ್ರಕ್ಕೆ ಬಾಲಿವುಡ್‌ನ ಖ್ಯಾತ ನಿರ್ಮಾಪಕ ಮಹಾವೀರ್ ಜೈನ್ ಕೈಜೋಡಿಸಿದ್ದಾರೆ. ಸಂತೋಷ, ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್ ಕುರಿತಾದ ವಿಶಿಷ್ಟ ಕಥಾಹಂದರಕ್ಕೆ ಮನಸೋತಿರುವ ‘ಮಹಾವೀರ್ ಜೈನ್ ಫಿಲ್ಮ್ಸ್’, ಈ ಚಿತ್ರವನ್ನು ಕನ್ನಡದ ಜೊತೆಗೆ ಹಿಂದಿಯಲ್ಲೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಸ್ತುತಪಡಿಸಲು ಮುಂದಾಗಿದೆ.

ಸುನಿ ಅವರು ನಿರ್ಮಾಪಕ ಮಹಾವೀರ್ ಜೈನ್ ಅವರನ್ನು ಭೇಟಿಯಾಗಿ ಚಿತ್ರದ ಕಥೆ, ಮೇಕಿಂಗ್ ಹಾಗೂ ಪರಿಕಲ್ಪನೆಯನ್ನು ವಿವರಿಸಿದ ಬಳಿಕ ಈ ಮಹತ್ವದ ಸಹಯೋಗ ಏರ್ಪಟ್ಟಿದೆ. ಚಿತ್ರದ ವಿನೂತನ ಕಥಾಹಂದರ ಹಾಗೂ ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಹ್ಯೂಮನಾಯ್ಡ್ ರೊಬೊಟ್ ಪಾತ್ರ ನಿರ್ವಹಿಸಿರುವುದನ್ನು ಕಂಡು ಪ್ರಭಾವಿತರಾದ ಜೈನ್, ಕರ್ನಾಟಕದ ಗಡಿ ದಾಟಿ ದೇಶದ ಎಲ್ಲಾ ಪ್ರೇಕ್ಷಕರನ್ನು ತಲುಪಲು ಚಿತ್ರವನ್ನು ಹಿಂದಿಯಲ್ಲೂ ಬಿಡುಗಡೆ ಮಾಡುವಂತೆ ಸಲಹೆ ನೀಡಿದ್ದರು.

ಸಿನಿಮಾದ ಬಗ್ಗೆ ನಿರ್ದೇಶಕ ಸುನಿ ಮಾತು
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, “ಮಾನವ ಜೀವನದ ಮೇಲೆ ತಂತ್ರಜ್ಞಾನ ಬೀರುತ್ತಿರುವ ಪ್ರಭಾವ, ಕೃತಕ ಬುದ್ಧಿಮತ್ತೆ ಹಾಗೂ ಸಂತೋಷದ ಹುಡುಕಾಟದ ಕುರಿತು ನಾವು ಹೈ-ಕಾನ್ಸೆಪ್ಟ್ ಸೈನ್ಸ್-ಫಿಕ್ಷನ್ ಸಿನಿಮಾವನ್ನು ರೂಪಿಸಿದ್ದೇವೆ. ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿರುವ ‘ಜಿಯಾ’ (JIA) ಎಂಬ ನೈಜ ಹ್ಯೂಮನಾಯ್ಡ್ ರೊಬೊಟ್ ಭಾರತೀಯ ಚಿತ್ರರಂಗದಲ್ಲೇ ಮೊದಲ ಪ್ರಯತ್ನವೆನ್ನಬಹುದು. ಮಹಾವೀರ್ ಜೈನ್ ಅವರು ಈ ಕಥೆಯನ್ನು ಅಪಾರವಾಗಿ ಮೆಚ್ಚಿಕೊಂಡು, ಹಿಂದಿಯಲ್ಲೂ ಬಿಡುಗಡೆ ಮಾಡಲು ಪ್ರೋತ್ಸಾಹಿಸಿದರು. ನಮ್ಮ ಚಿತ್ರವನ್ನು ಮಹಾವೀರ್ ಜೈನ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವುದು ಇಡೀ ತಂಡಕ್ಕೆ ಹೆಮ್ಮೆಯ ವಿಷಯ” ಎಂದಿದ್ದಾರೆ.

ಕನ್ನಡ ಚಿತ್ರರಂಗದ ಮಹತ್ವಾಕಾಂಕ್ಷೆಯ ಪ್ರಯೋಗ
ಚಿತ್ರವನ್ನು ಪ್ರಸ್ತುತಪಡಿಸುತ್ತಿರುವ ಬಗ್ಗೆ ಸಂತಸ ಹಂಚಿಕೊಂಡ ಬಾಲಿವುಡ್ ನಿರ್ಮಾಪಕ ಮಹಾವೀರ್ ಜೈನ್, “‘ಲಂಬೋದರ 2.0’ ಚಿತ್ರವು ಸಂತೋಷ ಮತ್ತು ಕೃತಕ ಬುದ್ಧಿಮತ್ತೆಯನ್ನು ಕಟ್ಟಿಕೊಟ್ಟಿರುವ ಶೈಲಿಗೆ ನಾನು ಸಂಪೂರ್ಣ ಮಾರುಹೋಗಿದ್ದೇನೆ. ಕನ್ನಡ ಚಿತ್ರರಂಗ ಇಂತಹ ಮಹತ್ವಾಕಾಂಕ್ಷೆಯ ಪ್ರಯೋಗಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ. ಆಧುನಿಕ ತಂತ್ರಜ್ಞಾನದಿಂದ ನಾವು ನಿಜವಾಗಿಯೂ ಹೆಚ್ಚು ಸಂತೋಷವಾಗುತ್ತಿದ್ದೇವೆಯೇ ಅಥವಾ ನಮ್ಮ ಸ್ವಂತ ಸಂತೋಷದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಿದ್ದೇವೆಯೇ? ಎಂಬ ಗಂಭೀರ ಪ್ರಶ್ನೆಯನ್ನು ಈ ಚಿತ್ರ ಎತ್ತುತ್ತದೆ. ದೇಶಾದ್ಯಂತ ಇರುವ ಪ್ರೇಕ್ಷಕರನ್ನು ತಲುಪಲು ಈ ಸಿನಿಮಾ ಸಂಪೂರ್ಣ ಅರ್ಹವಾಗಿದೆ” ಎಂದು ಪ್ರಶಂಸಿಸಿದ್ದಾರೆ.

ಏನಿದು ‘ಲಂಬೋದರ 2.0’?
‘ಲಂಬೋದರ 2.0’ ಮಾನವನ ಭಾವನೆಗಳು ಮತ್ತು ನಡವಳಿಕೆಯನ್ನು ಪತ್ತೆಹಚ್ಚಿ ನಿಯಂತ್ರಿಸುವ, ಅಪಾರ ಬಹುಮಾನಗಳ ಭರವಸೆ ನೀಡುವ ತಂತ್ರಜ್ಞಾನ-ಆಧಾರಿತ ‘ಸಂತೋಷದ ಸವಾಲೊಂದನ್ನು’ (Happiness Challenge) ಅನ್ವೇಷಿಸುವ ಕಥೆಯಾಗಿದೆ. ವಿಜ್ಞಾನ, ಸಸ್ಪೆನ್ಸ್ ಮತ್ತು ಹಾಸ್ಯವನ್ನು ಮೇಳೈಸಿರುವ ಈ ಚಿತ್ರವು ಇಂದಿನ ಡಿಜಿಟಲ್ ವ್ಯಸನ, ಸಾಮಾಜಿಕ ಜಾಲತಾಣಗಳ ಮನ್ನಣೆ (validation), ವ್ಯಕ್ತಿಯ ಸ್ವತಂತ್ರ ಇಚ್ಛಾಶಕ್ತಿ ಹಾಗೂ ಎಐ ಪ್ರಭಾವವನ್ನು ತೆರೆದಿಡಲಿದೆ. ಬೆಂಗಳೂರು ಮೂಲದ ‘ಮಚಾನಿ ರೊಬೊಟಿಕ್ಸ್’ ಅಭಿವೃದ್ಧಿಪಡಿಸಿದ ನೈಜ ಹ್ಯೂಮನಾಯ್ಡ್ ರೊಬೊಟ್ ‘ಜಿಯಾ’ ಈ ಚಿತ್ರದ ಕೇಂದ್ರಬಿಂದುವಾಗಿದೆ.

ತಾರಾಗಣ ಮತ್ತು ತಾಂತ್ರಿಕ ಬಳಗ:
ನಾಯಕ ನಟನಾಗಿ ಬೆಳ್ಳಿಪರದೆಯಲ್ಲಿ ಮೊದಲ ಹೆಜ್ಜೆಯಿಡುತ್ತಿರುವ ಅನಿಲ್ ಶೆಟ್ಟಿ ಅವರು ಚಿತ್ರಕ್ಕೆ ಕಥೆ ಬರೆದು ಸ್ವತಃ ನಿರ್ಮಾಣವನ್ನೂ ಮಾಡಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಕುನಾಲ್ ಕಪೂರ್, ಸಾಚಿ ಬಿಂದ್ರಾ, ಮೇಘನಾ ಗಾಂವ್ಕರ್ ಮತ್ತು ಮ್ಯಾಕ್ ಡಿಸೋಜಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಹಾಗೂ ವೀರ್ ಸಮರ್ಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಈ ಹಿಂದೆ ಬಾಲಿವುಡ್‌ನಲ್ಲಿ ‘ಉಂಚಾಯಿ’, ‘ರಾಮ್ ಸೇತು’, ‘ಗುಡ್ ಲಕ್ ಜೆರ್ರಿ’ ಮತ್ತು ‘ಬಿನ್ನಿ ಅಂಡ್ ಫ್ಯಾಮಿಲಿ’ಯಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಮಹಾವೀರ್ ಜೈನ್ ಫಿಲ್ಮ್ಸ್, ಸದ್ಯ ಸೂರಜ್ ಬರ್ಜಾತ್ಯಾ ನಿರ್ದೇಶನದ ‘ಯೇ ಪ್ರೇಮ್ ಮೋಲ್ ಲಿಯಾ’, ಕಾರ್ತಿಕ್ ಆರ್ಯನ್ ಅಭಿನಯದ ‘ನಾಗ್‌ಜಿಲ್ಲಾ’ ಮುಂತಾದ ಬೃಹತ್ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಇದೀಗ ‘ಲಂಬೋದರ 2.0’ ಮೂಲಕ ಕನ್ನಡ ಚಿತ್ರರಂಗಕ್ಕೂ ಹೆಜ್ಜೆಯಿಟ್ಟಿದೆ.

‘ಮಾಸ್ ಪ್ರೊಡಕ್ಷನ್’ (MASS Production) ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ‘ಲಂಬೋದರ 2.0’ ಚಿತ್ರವು ಮಹಾವೀರ್ ಜೈನ್ ಫಿಲ್ಮ್ಸ್ ಅರ್ಪಣೆಯಲ್ಲಿ ನವೆಂಬರ್ 20ರಂದು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ದೇಶಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor