ಜಗದ್ಗುರು ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳ ಜೀವನಾಧಾರಿತ ಸಿನಿಮಾ; 100ಕ್ಕೂ ಹೆಚ್ಚು ಸ್ವಾಮಿಗಳು ಹಾಗೂ 25 ಸಾವಿರ ಮಕ್ಕಳು ಚಿತ್ರದಲ್ಲಿ ಭಾಗಿ
ಇಟಗಿ ಶ್ರೀಗಳಿಂದ ‘ಶ್ರೀಅನ್ನದಾನೀಶ್ವರ ಮಹಾತ್ಮೆ’ ಟ್ರೇಲರ್ ಅನಾವರಣ
ಅಭಿಜಿತ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಶ್ರೀಅನ್ನದಾನೀಶ್ವರ ಮಹಾತ್ಮೆ’ ಚಿತ್ರದ ಟ್ರೇಲರ್ ಭಕ್ತಿಭಾವದ ವಾತಾವರಣದಲ್ಲಿ ಅನಾವರಣಗೊಂಡಿದೆ. ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪರಮಪೂಜ್ಯ ಇಟಗಿ ಶ್ರೀಗಳು ಟ್ರೇಲರ್ ಅನಾವರಣಗೊಳಿಸಿ, ಶ್ರೀ ಅನ್ನದಾನೀಶ್ವರ ಸ್ವಾಮಿಗಳ ಕುರಿತು ಭಕ್ತಿಪೂರ್ವಕವಾಗಿ ಮಾತನಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಮಮತಾ ಎನ್.ಎಸ್. ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಗೌರಿ ಎಲ್. ರಾಮೇಗೌಡ ನಿರ್ದೇಶನವಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಡೆದಾಡುವ ದೇವರು, ಪುಸ್ತಕದ ಜಗದ್ಗುರು ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳ ಜೀವನಚರಿತ್ರೆಯನ್ನು ಆಧರಿಸಿ ಚಿತ್ರವನ್ನು ರೂಪಿಸಲಾಗಿದೆ.
ಸಮಾರಂಭದಲ್ಲಿ ಪರಮಪೂಜ್ಯ ಅಂತಃಪುರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ‘ಜ್ಞಾನ ಮೇರುವಾಗಿ’ ಹಾಡನ್ನು ಬಿಡುಗಡೆ ಮಾಡಲಾಯಿತು. ಕುಟುಂಬ ಸಮೇತರಾಗಿ ಚಿತ್ರವನ್ನು ವೀಕ್ಷಿಸಿ ಬೆಂಬಲಿಸುವಂತೆ ಅವರು ಮನವಿ ಮಾಡಿದರು. ಡಾ. ರಮೇಶ್ ಶೆಟ್ಟಿ (ಬೈಂದೂರು), ಪುಷ್ಪಲತಾ ಹಾಗೂ ರಕ್ಷಕ ವಿಜಯಕುಮಾರ್ ಸೂರಿ ಮೆರಾಡೇ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅನ್ನದಾನೀಶ್ವರ ಸ್ವಾಮಿಗಳ ಪಾತ್ರದಲ್ಲಿ ಅಭಿಜಿತ್
ಚಿತ್ರದ ಪ್ರಮುಖ ಆಕರ್ಷಣೆಯಾಗಿರುವುದು ಹಿರಿಯ ನಟ ಅಭಿಜಿತ್ ರಾವ್ ಅವರು ಅನ್ನದಾನೀಶ್ವರ ಸ್ವಾಮಿಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಅನ್ನದಾನೀಶ್ವರ ಶಾಖಾಮಠದ ಕುಕನೂರಿನ ಡಾ. ಮಹದೇವ ದೇವರು ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.
ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯವನ್ನು ಸಂಜಯ್ ಕುಮಾರ್ ಬೇವಿನಾಳ್ ರಚಿಸಿದ್ದಾರೆ. ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದು, ಮೈಸೂರು ಸಿದ್ದರಾಜು ಹಾಗೂ ಶಿವಶರಣ ವಿ. ಸುಗ್ನಳ್ಳಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.
60 ದಿನಗಳ ಕಾಲ ಚಿತ್ರೀಕರಣ
ನಿರ್ದೇಶಕಿ ಗೌರಿ ಎಲ್. ರಾಮೇಗೌಡ ಅವರಿಗೆ ‘ಶ್ರೀಅನ್ನದಾನೀಶ್ವರ ಮಹಾತ್ಮೆ’ ಮೊದಲ ನಿರ್ದೇಶನದ ಚಿತ್ರ. ಈ ಕುರಿತು ಮಾತನಾಡಿದ ಅವರು, ತಮ್ಮ ಹಲವು ವರ್ಷಗಳ ನಟನಾ ಅನುಭವದ ಬಳಿಕ ನಿರ್ದೇಶಕಿಯಾಗಿ ಮೊದಲ ಹೆಜ್ಜೆ ಇಟ್ಟಿರುವುದಾಗಿ ಹೇಳಿದರು.

“ನನಗೆ ದೈವದ ಬಗ್ಗೆ ಒಲವು ಜಾಸ್ತಿ. ರಾಯರ ಪರಮ ಭಕ್ತೆಯಾಗಿರುವ ನನಗೆ ಇಂತಹ ಮಹತ್ವದ ವ್ಯಕ್ತಿಯ ಜೀವನಾಧಾರಿತ ಚಿತ್ರ ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ಸಂತೋಷದ ವಿಚಾರ. ಅಭಿಜಿತ್ ಅವರು ಅನ್ನದಾನೀಶ್ವರ ಸ್ವಾಮಿಗಳ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ,” ಎಂದು ಗೌರಿ ಹೇಳಿದರು.
ಚಿತ್ರದಲ್ಲಿ 100ಕ್ಕೂ ಹೆಚ್ಚು ಸ್ವಾಮಿಗಳು ಅಭಿನಯಿಸಿರುವುದು ವಿಶೇಷ. ಅಲ್ಲದೆ ಸಿದ್ದಗಂಗಾ ಹಾಗೂ ಅನ್ನದಾನೀಶ್ವರ ಮಠದ ಸುಮಾರು 25 ಸಾವಿರ ಮಕ್ಕಳು ಚಿತ್ರದ ವಿವಿಧ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊಪ್ಪಳ, ಶಿವಯೋಗ ಮಂದಿರ, ಮುಂಡರಗಿ, ಬೆಂಗಳೂರು, ಶ್ರೀರಂಗಪಟ್ಟಣ ಸೇರಿದಂತೆ ಸಿದ್ದಗಂಗಾ ಮಠದ ಸುತ್ತಮುತ್ತ ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕಿ ತಿಳಿಸಿದರು.
‘ಈ ಪಾತ್ರ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ’ ಎಂದ ಅಭಿಜಿತ್

ಚಿತ್ರದ ನಾಯಕ ನಟ ಅಭಿಜಿತ್ ರಾವ್ ಮಾತನಾಡಿ, ಈ ಪಾತ್ರವನ್ನು ಗುರುಗಳ ಆಶೀರ್ವಾದದಿಂದಲೇ ನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು.
“ಈ ಚಿತ್ರದಲ್ಲಿ ಎಲ್ಲವನ್ನೂ ಗುರುಗಳು ನನ್ನ ಕೈಯಿಂದ ಮಾಡಿಸಿದ್ದಾರೆ. ಅದು ಅವರ ಆಶೀರ್ವಾದ ಹಾಗೂ ಇಚ್ಛೆ. ಗೌರಿ ಅವರು ನನ್ನಿಂದ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿಸಿದ್ದಾರೆ. ಇಂತಹ ಕಥೆ ಮಾಡುವಾಗ ನೇಟಿವಿಟಿ ಬಹಳ ಮುಖ್ಯ. ಛಾಯಾಗ್ರಾಹಕರಾದ ಮೈಸೂರು ಸಿದ್ದರಾಜು ಮತ್ತು ಶಿವಶರಣ ವಿ. ಸುಗ್ನಳ್ಳಿ ಚಿತ್ರವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ವಿ. ಮನೋಹರ್ ಅವರ ಸಂಗೀತವೂ ಮನಸೂರೆಗೊಳ್ಳುತ್ತದೆ. ಅನ್ನದಾನೀಶ್ವರ ಸ್ವಾಮಿಗಳ ಪಾತ್ರ ಸಿಕ್ಕಿರುವುದು ನನ್ನ ಪೂರ್ವಜನ್ಮದ ಪುಣ್ಯ,” ಎಂದು ಅಭಿಜಿತ್ ರಾವ್ ಹೇಳಿದರು.
‘ಗುರುಗಳ ಬಗ್ಗೆ ಬರೆಯುವುದು ಸೌಭಾಗ್ಯ’
ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿರುವ ಸಂಜಯ್ ಕುಮಾರ್ ಬೇವಿನಾಳ್, ಅನ್ನದಾನೀಶ್ವರ ಸ್ವಾಮಿಗಳ ಜೀವನ ಮತ್ತು ಸಾಧನೆಗಳನ್ನು ತೆರೆಯ ಮೇಲೆ ಕಟ್ಟಿಕೊಡುವ ಅವಕಾಶ ದೊರೆತಿರುವುದೇ ತಮ್ಮ ಪಾಲಿನ ಸೌಭಾಗ್ಯ ಎಂದರು.
ಅತ್ಯಂತ ಸರಳವಾಗಿ ಬದುಕುತ್ತಾ, ಪುಸ್ತಕಗಳೊಂದಿಗೆ ಜೀವನ ನಡೆಸಿ, ಅನ್ನ–ಅರಿವು–ಶಿಕ್ಷಣ ಎಂಬ ತ್ರಿವಿಧ ದಾಸೋಹದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ಮಹಾಸ್ವಾಮಿಗಳ ಕುರಿತು ಬರೆಯುವುದು ವಿಶೇಷ ಅನುಭವ ಎಂದು ಅವರು ಹೇಳಿದರು.
ಸಂಕಲನಕಾರ ಎನ್.ಎಂ. ವಿಶ್ವ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲೂ ಅನ್ನದ ಮಹತ್ವ ಅಪಾರ. ಇಂತಹ ವಿಭಿನ್ನ ಕಥಾವಸ್ತುವಿನ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಲಭಿಸುವ ನಿರೀಕ್ಷೆಯಿದೆ ಎಂದರು.
ಸಮಾರಂಭದಲ್ಲಿ ನಟರಾದ ಶಿವಕುಮಾರ್, ಆರಾಧ್ಯ, ರತ್ನಮಾಲ ಸುಂದರ್, ಜೂನಿಯರ್ ರಾಜಕುಮಾರ್, ಗಣೇಶ್ ಭಟ್ರು, ಮೂಗು ಸುರೇಶ್, ಡಿಂಗರಿ ನಾಗರಾಜ್ ಸೇರಿದಂತೆ ಚಿತ್ರದ ಹಲವು ಕಲಾವಿದರು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದರು.
ನಿರ್ಮಾಪಕಿ ಮಮತಾ ಎನ್.ಎಸ್. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು, ಕಲಾವಿದರು, ತಂತ್ರಜ್ಞರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.
ಭಕ್ತಿ, ದಾಸೋಹ, ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಕೇಂದ್ರವಾಗಿಟ್ಟುಕೊಂಡಿರುವ ‘ಶ್ರೀಅನ್ನದಾನೀಶ್ವರ ಮಹಾತ್ಮೆ’ ಇದೀಗ ಟ್ರೇಲರ್ ಮೂಲಕ ಕುತೂಹಲ ಮೂಡಿಸಿದ್ದು, ಚಿತ್ರ ಯಾವ ರೀತಿಯಲ್ಲಿ ಮೂಡಿಬಂದಿದೆ ಎಂಬುದನ್ನು ಕಾದು ನೋಡಬೇಕಿದೆ.











