ಚಿತ್ರ ವಿಮರ್ಶೆ: ವ್ಯಾಮೋಹದ ಸುಳಿಯಲ್ಲಿ ಸಿಲುಕುವ ‘ಶಬರಿ’.

ಚಿತ್ರದ ಹೆಸರು: ಶಬರಿ (Shabari)
ನಿರ್ಮಾಪಕರು – ರಮೇಶ್ ಬಿ., ಬದ್ರಿ ಮತ್ತು ವಿಷ್ಣುಕಾಂತ್
ನಿರ್ದೇಶನ –  ಒರಟ ಶ್ರೀ
ಸಂಗೀತ: ಬಿ.ಆರ್. ಹೇಮಂತ್ ಕುಮಾರ್
ಛಾಯಾಗ್ರಹಣ: ಸಾಮ್ರಾಟ್ ನಾಗರಾಜ್
ಸಂಕಲನ: ಕೆ. ಗಿರೀಶ್ ಕುಮಾರ್

Rating -3 /5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐  / 5

ಕಲಾವಿದರು – ಸಮರ್ಥ್ ರಮೇಶ್, ಕೃತಿಕಾ ಗೌಡ, ಬಾಲನಟಿ ಧನ್ವಿ, ನೀನಾಸಂ ಅಶ್ವತ್ ಮುಂತಾದವರು.

ಒಂದು ವಸ್ತುವಿನ ಮೇಲಿನ ಅತಿಯಾದ ವ್ಯಾಮೋಹ ಮನುಷ್ಯನ ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಸಂಬಂಧಗಳಿಗಿಂತ ಹಠವೇ ದೊಡ್ಡದಾದಾಗ ಕುಟುಂಬದಲ್ಲಿ ಎದುರಾಗುವ ಬಿಕ್ಕಟ್ಟುಗಳೇನು? ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಾಗುವ ಈ ಚಿತ್ರ ಭಾವನೆ, ಪಶ್ಚಾತ್ತಾಪ ಮತ್ತು ಮಾನವೀಯ ಸಂಬಂಧಗಳ ಸುತ್ತ ಕಥೆಯನ್ನು ಹೆಣೆಯಲಾಗಿದೆ.

ಬಾಲ್ಯದಲ್ಲಿ ಕಳೆದುಕೊಂಡ ಜೀಪಿನ ಮೇಲಿನ ನಾಯಕ ರಾಮನ ವ್ಯಾಮೋಹವೇ ಕಥೆಯ ಪ್ರಮುಖ ತಿರುವುಗಳಿಗೆ ಕಾರಣವಾಗುತ್ತದೆ. ಆ ಜೀಪನ್ನು ಮರಳಿ ಪಡೆಯಬೇಕೆಂಬ ಹಠ ಅವನ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಈ ಹುಚ್ಚಾಟದಲ್ಲಿ ಬೆಂಕಿ ಅಪಘಾತದಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ ಆದರೆ ಜೀಪನ್ನು ತನ್ನದಾಗಿಸಿಕೊಳ್ಳುತ್ತಾನೆ ಅದರ ವ್ಯಾಮೋಹದಲ್ಲಿ, ಜೀಪಿನ ಜೊತೆಯಲ್ಲೇ, ಕುಣಿತದ ಚಟಕ್ಕೆ ಬಲಿಯಾಗಿ ಪಶ್ಚಾತಾಪದಲ್ಲಿ ಏಕಾಂಗಿಯಾಗಿ ಊರೂರು ಅಲೆಯುತ್ತಾನೆ. ಆಕಸ್ಮಿಕವಾಗಿ ಶಬರಿ ಈ ರಾಮನ ಅತಿಥಿಯಾಗಿ ಬರುತ್ತಾಳೆ. ಈ ಶಬರಿಯ ಪ್ರವೇಶ ಕಥೆಗೆ ಹೊಸ ಆಯಾಮ ನೀಡುತ್ತದೆ.

ಈ ಕಥೆ ಕೇವಲ ಒಂದು ಜೀಪನ್ನು ಮರಳಿ ಪಡೆಯುವ ಹಠದ ಸುತ್ತ ಮಾತ್ರ ಸೀಮಿತವಾಗುವುದಿಲ್ಲ. ಮನುಷ್ಯನ ಮನಸ್ಸು, ಅವನ ನಿರ್ಧಾರಗಳು, ತಪ್ಪುಗಳ ಅರಿವು ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಯ ಕಡೆಗೂ ಗಮನ ಹರಿಸುತ್ತದೆ. ಆದರೆ ಇಂತಹ ಭಾವನಾತ್ಮಕ ಅಂಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜೋಡಿಸಿದ್ದರೆ ಕಥೆಯ ಪ್ರಭಾವ ಹೆಚ್ಚಾಗುತ್ತಿತ್ತು ಎಂಬ ಭಾವನೆ ಮೂಡುತ್ತದೆ.

ನಿರ್ದೇಶಕ ಒರಟ ಶ್ರೀ ಅವರು ಕಥೆಯೊಳಗೆ ವಿಭಿನ್ನವಾದ ಸಂಘರ್ಷವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ವಿಶೇಷವಾಗಿ ದ್ವಿತೀಯಾರ್ಧದಲ್ಲಿ ಕಥೆಯ ವೇಗ ಮತ್ತು ನಿರೂಪಣೆಯ ಹಿಡಿತ ಇನ್ನಷ್ಟು ಬಿಗಿಯಾಗಿದ್ದರೆ ಚನ್ನಾಗಿತ್ತು ಅನ್ನಿಸುತ್ತದೆ.

ಆದರೂ ನಿರ್ದೇಶಕರು ಒಂದೊಳ್ಳೆಯ ಸಾಮಾಜಿಕ ಜವಾಬ್ದಾರಿಯ ಭಾವನಾತ್ಮಕ ಚಿತ್ರವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ನಾಯಕ ಸಮರ್ಥ್ ರಮೇಶ್ ತಮ್ಮ ಪಾತ್ರದ ಮೂಲಕ, ಪಾತ್ರದ ಹಠ, ಅದರ ಪರಿಣಾಮವಾಗಿ ಎದುರಾಗುವ ಸಮಸ್ಯೆಗಳು ಹಾಗೂ ಮನಸ್ಸಿನಲ್ಲಾಗುವ ತುಮುಲಗಳನ್ನು ಅಭಿವ್ಯಕ್ತಿಸಲು ಬಹಳ ಕಷ್ಟಪಟ್ಟು ಅಭಿನಯಿಸಿದ್ದಾರೆ.

ಕೃತಿಕಾ ಗೌಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಬಾಲನಟಿ ಧನ್ವಿ ಅವರ ಪಾತ್ರ ಕಥೆಯ ಭಾವನಾತ್ಮಕ ತಿರುವಿಗೆ ಸಾಥ್ ನೀಡಿದೆ.
ಕನ್ನಡ ಭಾಷೆ ಬಾರದ ಹಿಂದಿ ಮಾತಾಡುವ ಮತ್ತು ಯಾರದೋ ಕಿಡಿಗೇಡಿಗಲಿಂದ ಅಪಹರಣಕ್ಕೆ ಒಳಗಾಗಿದ್ದ ಶಬರಿ ರಾಮನಿಗೆ ಸಿಕ್ಕುತ್ತಾಳೆ.
ಅಲ್ಲಿಂದ ರಾಮ ಶಬರಿಯ ಕಥೆ ಒಂದಷ್ಟು ಹಾಸ್ಯಸ್ಪದವಾಗಿ ಸಾಗುತ್ತದೆ.
ಇಬ್ಬರ ನಡುವೆ ಭಾಷೆಯ ಗೊಂದಲ ಕಾಡುತ್ತದೆ.
ಶಬರಿ ಪಾತ್ರದಲ್ಲಿ ಅಭಿನಯಿಸಿರುವ ಬಾಲ ನಟಿ ಧನ್ವಿ ಬಹಳ ಚೆನ್ನಾಗಿ ಭಾವನಾತ್ಮಕ ಸನ್ನಿವೇಶಗಳನ್ನ ಕಟ್ಟಿಕೊಟ್ಟಿದ್ದಾಳೆ.

ಈ ಪಾತ್ರದ ಮೂಲಕ ಬಾಲ ನಟಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ ಎನ್ನಬಹುದು.

ಪೋಷಕ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.
ತಾಂತ್ರಿಕ ವಿಭಾಗ
ಬಿ.ಆರ್. ಹೇಮಂತ್ ಕುಮಾರ್ ಅವರ ಸಂಗೀತ, ಸಾಮ್ರಾಟ್ ನಾಗರಾಜ್ ಅವರ ಛಾಯಾಗ್ರಹಣ ಮತ್ತು ಕೆ. ಗಿರೀಶ್ ಕುಮಾರ್ ಅವರ ಸಂಕಲನ ಚಿತ್ರಕ್ಕೆ ಪೂರಕವಾಗಿದೆ.

ರಾಮನನ್ನು ಕಾಡುವ ಊರಿನ ಪಟೇಲ, ಪಟೇಲನ ದ್ವೇಷಕ್ಕೆ ರಾಮನನ್ನು ಮುಗಿಸಲು ಹೊಂಚು ಹಾಕಿ ಕಾಯುವ ಪೊಲೀಸ್ ಅಧಿಕಾರಿ, ಇವರಿಬ್ಬರ ನಡುವೆ ಜೀಪಿನ ವ್ಯಾಮೋಹ,  ಕಿಡ್ನಾಪ್ ಆಗಿದ್ದ ಶಬರಿ ರಾಮನಿಂದ ಅವರ ಮನೆಗೆ ತಲುಪುವುದು ಹೇಗೆ,  ನಂತರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ವಿಭಿನ್ನವಾದ ಭಾವನಾತ್ಮಕ ತಿರುಗು ಈ ಚಿತ್ರಕ್ಕೆ ಶಕ್ತಿಯಾಗಿದೆ ಎನ್ನಬಹುದು

‘ಶಬರಿ’ಯನ್ನು ಮನುಷ್ಯನ ವ್ಯಾಮೋಹ ಮತ್ತು ಸಂಬಂಧಗಳ ನಡುವಿನ ಸಂಘರ್ಷವನ್ನು ಹೇಳಲು ಪ್ರಯತ್ನಿಸುವ ಚಿತ್ರವಾಗಿ ನೋಡಬಹುದು. 

ವಿಮರ್ಶೆ: ಮಂಜುರಾಜ್ ಸೂರ್ಯ

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor