‘ನಾಗುಗೆ ವಧು ಬೇಕಾಗಿದೆ’ — ಹುಡುಗಿ ಹುಡುಕಾಟದ ಕಥೆ, ಅಕ್ಟೋಬರ್‌ನಲ್ಲಿ ತೆರೆಗೆ

‘ನಾಗುಗೆ ವಧು ಬೇಕಾಗಿದೆ’ — ಮದುವೆ ಹುಡುಕಾಟದ ಕಥೆ ಅಕ್ಟೋಬರ್‌ನಲ್ಲಿ ತೆರೆಗೆ
ಬೆಂಗಳೂರು: ಇಂದಿನ ಕಾಲದಲ್ಲಿ ಮದುವೆಗೆ ಸೂಕ್ತ ಸಂಗಾತಿ ಹುಡುಕುವುದು ಹಲವರಿಗೆ ಸವಾಲಿನ ಸಂಗತಿಯಾಗಿದೆ. ಅದರಲ್ಲೂ ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರ ಹಲವು ಕುಟುಂಬಗಳಲ್ಲಿ ಚರ್ಚೆಯ ವಿಷಯವಾಗಿದೆ. ಇದೇ ಸಾಮಾಜಿಕ ಸಮಸ್ಯೆಯನ್ನು ಕಥೆಯ ಮೂಲವಸ್ತುವನ್ನಾಗಿಸಿಕೊಂಡು ರೂಪುಗೊಂಡಿರುವ ಹೊಸ ಕನ್ನಡ ಸಿನಿಮಾ ‘ನಾಗುಗೆ ವಧು ಬೇಕಾಗಿದೆ’ ಇದೇ ಅಕ್ಟೋಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.


ಶ್ರೀಗುರು ರಾಘವೇಂದ್ರ ಕನ್ನಡ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆರ್.ಕೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನೈಜ ಜೀವನದಲ್ಲಿ ಕಂಡ ಕೆಲವು ಘಟನೆಗಳು ಹಾಗೂ ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಿಂದ ಪ್ರೇರಣೆ ಪಡೆದು ಚಿತ್ರದ ಕಥೆಯನ್ನು ರೂಪಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ನಗರ ಪ್ರದೇಶ ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಮದುವೆ ವಿಚಾರದಲ್ಲಿ ಎದುರಾಗುತ್ತಿರುವ ಹಲವು ನಿರೀಕ್ಷೆಗಳು ಮತ್ತು ಬೇಡಿಕೆಗಳನ್ನು ಸಿನಿಮಾ ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಲಿದೆ. ಸರ್ಕಾರಿ ಉದ್ಯೋಗ ಇರಬೇಕು, ಬೆಂಗಳೂರಿನಲ್ಲಿ ಮನೆ ಅಥವಾ ಸೈಟ್ ಇರಬೇಕು, ಅತ್ತೆ-ಮಾವ ಇರಬಾರದು ಸೇರಿದಂತೆ ಮದುವೆ ಸಂದರ್ಭದಲ್ಲಿ ಎದುರಾಗುವ ಹಲವು ಷರತ್ತುಗಳು ಚಿತ್ರದ ಕಥೆಯಲ್ಲಿ ಪ್ರಮುಖವಾಗಿ ಮೂಡಿಬರಲಿವೆ.


“ಹತ್ತಿರದಿಂದ ಕಂಡ ಕೆಲವು ಘಟನೆಗಳು ಹಾಗೂ ಇಂದಿನ ಸಾಮಾಜಿಕ ಪರಿಸ್ಥಿತಿಯಿಂದ ಪ್ರೇರಣೆ ಪಡೆದು ಈ ಕಥೆ ಬರೆದಿದ್ದೇನೆ. ಇದು ನೈಜಘಟನೆ ಆಧಾರಿತ ಚಿತ್ರ. ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಮದ್ದೂರು, ರಾಮನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಅಕ್ಟೋಬರ್‌ನಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ನಡೆಯುತ್ತಿದೆ” ಎಂದು ನಿರ್ದೇಶಕ ಆರ್.ಕೆ. ಹೇಳಿದ್ದಾರೆ.
ಚಿತ್ರದಲ್ಲಿ ದತ್ತು ಪೂಜಾರಿ ನಾಯಕನಾಗಿ ಅಭಿನಯಿಸಿದ್ದು, ಅವರ ಪಾತ್ರದ ಹೆಸರು ‘ನಾಗು’. ವಿಶೇಷವೆಂದರೆ ನಿಜ ಜೀವನದಲ್ಲಿ ಮದುವೆಯಾಗಿರುವ ದತ್ತು ಪೂಜಾರಿ, ಸಿನಿಮಾದಲ್ಲಿ ಮದುವೆಯಾಗದ ಯುವಕನ ಪಾತ್ರವನ್ನು ನಿರ್ವಹಿಸಿದ್ದಾರೆ.


“ನಿರ್ದೇಶಕರು ಹೇಳಿದ ಕಥೆ ನನಗೆ ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ನಾಗು ನನ್ನ ಪಾತ್ರದ ಹೆಸರು. ನನಗೆ ಮದುವೆಯಾಗಿದ್ದರೂ, ಸಿನಿಮಾದಲ್ಲಿ ಮದುವೆಯಾಗದ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ” ಎಂದು ದತ್ತು ಪೂಜಾರಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಸೋನಿಕಾ ಸೋಮಣ್ಣ, ಚಿತ್ರಾಲ್ ರಂಗಸ್ವಾಮಿ, ಅಪೂರ್ವಶ್ರೀ, ರೇಖಾದಾಸ್, ಬೌ ಬೌ ಬಿರಿಯಾನಿ ಖ್ಯಾತಿಯ ಜಯರಾಮ್, ಶರತ್, ರವಿ, ಪುನೀತ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ನಟಿಯರಾದ ಅಪೂರ್ವಶ್ರೀ, ಚಿತ್ರಾಲ್ ರಂಗಸ್ವಾಮಿ, ಸೋನಿಕಾ ಸೋಮಣ್ಣ ಸೇರಿದಂತೆ ಕಲಾವಿದರು ತಮ್ಮ ಪಾತ್ರಗಳ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಶ್ರೀಸುರೇಶ್ ಚಿತ್ರದ ಸಂಗೀತದ ಕುರಿತ ಮಾಹಿತಿಯನ್ನು ಹಂಚಿಕೊಂಡರು.
ಮದುವೆ ಎಂಬ ಸೂಕ್ಷ್ಮ ವಿಚಾರವನ್ನು ಸಾಮಾಜಿಕ ವಾಸ್ತವಗಳೊಂದಿಗೆ ಬೆರೆಸಿ ಹಾಸ್ಯ, ಭಾವನೆ ಹಾಗೂ ಸಂದೇಶದ ಮೂಲಕ ಹೇಳಲು ಹೊರಟಿರುವ ‘ನಾಗುಗೆ ವಧು ಬೇಕಾಗಿದೆ’ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಗೆ ಬಂದ ಬಳಿಕ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆಯಲಿದೆ ಎಂಬ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor