ರೋಬೋಟ್ ‘JIA’ ಜೊತೆ ‘ಲಂಬೋದರ 2.0’ ಚಿತ್ರೀಕರಣ ಪೂರ್ಣಗೊಳಿಸಿದ ನಿರ್ದೇಶಕ ಸಿಂಪಲ್ ಸುನಿ

ನಿರ್ದೇಶಕ ಸಿಂಪಲ್ ಸುನಿ ಅವರ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಸೋಶಿಯಲ್ ಥ್ರಿಲ್ಲರ್ ‘ಲಂಬೋದರ 2.0’ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಪೂರ್ಣಗೊಂಡಿದೆ. ಚಿತ್ರದಲ್ಲಿ ಅನಿಲ್ ಶೆಟ್ಟಿ, ಸಾಚಿ ಬಿಂದ್ರಾ ಮತ್ತು ಕುನಾಲ್ ಕಪೂರ್ ಅವರೊಂದಿಗೆ ನೈಜ ಹ್ಯೂಮನಾಯ್ಡ್ ರೋಬೋಟ್ ‘JIA’ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ.

ಚಿತ್ರೀಕರಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿರ್ದೇಶಕ ಸುನಿ ಚಿತ್ರದ ಮೇಕಿಂಗ್ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ‘ಲಂಬೋದರ 2.0’ ಚಿತ್ರದ ವಿಭಿನ್ನ ಜಗತ್ತಿನ ಒಂದು ಝಲಕ್ ನೀಡಿದ್ದಾರೆ. “ಕೃತಕ ಬುದ್ಧಿಮತ್ತೆ (AI) ಮತ್ತು ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸಂತೋಷ ಎಂದರೇನು?” ಎಂಬ ಪ್ರಶ್ನೆಯನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಸಾಗುತ್ತದೆ. ತಂತ್ರಜ್ಞಾನ, ಅಲ್ಗಾರಿದಮ್‌ಗಳು ಹಾಗೂ ಹೆಚ್ಚುತ್ತಿರುವ ಡಿಜಿಟಲ್ ಬದುಕು, ನಾವು ಸಂತೋಷವನ್ನು ಅನುಭವಿಸುವ ಮತ್ತು ವ್ಯಾಖ್ಯಾನಿಸುವ ರೀತಿಯನ್ನು ಹೇಗೆ ಬದಲಾಯಿಸುತ್ತಿವೆ ಎಂಬುದನ್ನು ಈ ಚಿತ್ರ ಅನ್ವೇಷಿಸುತ್ತದೆ.

ಚಿತ್ರದ ಪ್ರಮುಖ ವಿಶೇಷತೆಗಳಲ್ಲಿ ಒಂದು ‘JIA’ ಎಂಬ ನೈಜ ಹ್ಯೂಮನಾಯ್ಡ್ ರೋಬೋಟ್. ಈ ರೋಬೋಟ್‌ಗೆ ಚಿತ್ರದಲ್ಲಿನ ಒಂದು ಪಾತ್ರವಾಗಿ ಅಭಿನಯಿಸಲು ತರಬೇತಿ ನೀಡಲಾಗಿದೆ. ಸಂಪೂರ್ಣವಾಗಿ CGI ಮೂಲಕ ರೋಬೋಟ್ ಪಾತ್ರವನ್ನು ಸೃಷ್ಟಿಸುವ ಬದಲು, ನೈಜ ಹ್ಯೂಮನಾಯ್ಡ್ ರೋಬೋಟ್‌ವೊಂದನ್ನು ತರಬೇತುಗೊಳಿಸಿ ಸಿನಿಮಾದ ಪಾತ್ರದಲ್ಲಿ ಅಭಿನಯಿಸಿರುವುದು ವಿಶ್ವ ಸಿನಿಮಾ ಇತಿಹಾಸದಲ್ಲೇ ಮೊದಲು ಎಂಬುದು ಚಿತ್ರತಂಡದ ಅಭಿಪ್ರಾಯ.

‘ಲಂಬೋದರ 2.0’ ಅನಿಲ್ ಶೆಟ್ಟಿ ಅವರಿಗೆ ಬರಹಗಾರ, ನಾಯಕ ನಟ ಹಾಗೂ ನಿರ್ಮಾಪಕರಾಗಿ ಚೊಚ್ಚಲ ಚಿತ್ರವಾಗಿದೆ. ಬಾಲಿವುಡ್ ನಟ ಕುನಾಲ್ ಕಪೂರ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಬಾಲಿವುಡ್ ನಟಿ ಸಾಚಿ ಬಿಂದ್ರಾ ಈ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಸಿಂಪಲ್ ಸುನಿ ಹಾಗೂ ಚಿತ್ರತಂಡ ಇದೀಗ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ವರ್ಷವೇ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

ವೈಜ್ಞಾನಿಕ ಕಲ್ಪನೆ, ಕೃತಕ ಬುದ್ಧಿಮತ್ತೆ, ಸಾಮಾಜಿಕ ಜಾಲತಾಣಗಳು ಹಾಗೂ ಮನುಷ್ಯನ ಶಾಶ್ವತ ಸಂತೋಷದ ಹುಡುಕಾಟವನ್ನು ಒಟ್ಟುಗೂಡಿಸುವ ‘ಲಂಬೋದರ 2.0’, ಇಂದಿನ ಡಿಜಿಟಲ್ ಯುಗಕ್ಕೆ ಹೊಂದುವ ಸಮಕಾಲೀನ ಕಥೆಯನ್ನು ತೆರೆಗೆ ತರಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor