ರಾಗಿಣಿ ದ್ವಿವೇದಿ ಹುಟ್ಟುಹಬ್ಬದ ದಿನ “ರಾಗಿಣಿ ಐಪಿಎಸ್ 2” ಚಿತ್ರಕ್ಕೆ ಚಾಲನೆ

ಕೆ.ಮಂಜು – ರಾಗಿಣಿ ವೆಂಚರ್ಸ್ ಜಂಟಿ ನಿರ್ಮಾಣದ ಈ ಚಿತ್ರದ ಮೂಲಕ ಗುರುರಾಜ್ ಜಗ್ಗೇಶ್ – ಯತಿರಾಜ್ ಜಗ್ಗೇಶ್ ನಿರ್ದೇಶಕರಾಗಿ ಪದಾರ್ಪಣೆ

ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟಿ ರಾಗಿಣಿ ದ್ವಿವೇದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲೇ ನೂತನ ಚಿತ್ರದ ಘೋಷಣೆ ಸಹ ಆಗಿದೆ. ಹನ್ನೆರಡು ವರ್ಷಗಳ ಹಿಂದೆ ರಾಗಿಣಿ ಅವರು ನಾಯಕಿಯಾಗಿ ನಟಿಸಿದ್ದ “ರಾಗಿಣಿ ಐಪಿಎಸ್” ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಈಗ ಈ ಚಿತ್ರದ ಮುಂದುವರಿದ ಭಾಗ “ರಾಗಿಣಿ ಐಪಿಎಸ್ ೨” ಚಿತ್ರ ಸಹ ಆರಂಭವಾಗಲಿದೆ. ನಟಿ ರಾಗಿಣಿ ದ್ವಿವೇದಿ ಹುಟ್ಟುಹಬ್ಬಕ್ಕೆ ಈ ಸಿನಿಮಾ ಘೋಷಣೆಯಾಗಿದೆ.

ಖ್ಯಾತ ನಟ ನವರಸ ನಾಯಕ ಜಗ್ಗೇಶ್ ಅವರ ಪುತ್ರರಾದ ಗುರುರಾಜ್ ಹಾಗೂ ಯತಿರಾಜ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟರಾಗಿ ಜನಪ್ರಿಯರಾಗಿದ್ದ ಗುರುರಾಜ್ ಹಾಗೂ ಯತಿರಾಜ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕೆ.ಮಂಜು ಹಾಗೂ ರಾಗಿಣಿ ವೆಂಚರ್ಸ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ರಾಗಿಣಿ ಅವರ ಹುಟ್ಟುಹಬ್ಬದ ದಿನ ಈ ಸಿನಿಮಾದ ಕುರಿತು ಹೆಚ್ಚಿನ ಮಾಹಿತಿ ನೀಡಿದರು.

“ರಾಗಿಣಿ ಐಪಿಎಸ್” ಜನಪ್ರಿಯ ಚಿತ್ರ. ರಾಗಿಣಿ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಆ ಚಿತ್ರದ ಮುಂದುವರಿದ ಭಾಗ “ರಾಗಿಣಿ ಐಪಿಎಸ್ ೨” ಚಿತ್ರವನ್ನು ಆರಂಭಿಸುತ್ತಿದ್ದೇವೆ. ನಾವಿಬ್ಬರು 2019 ರಿಂದಲೂ ನಿರ್ದೇಶನಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ‌. ‌ನಟನೆಯೇ ಬೇರೆ. ನಿರ್ದೇಶನವೇ ಬೇರೆ. ನಿರ್ದೇಶನಕ್ಕೆ ತಯಾರಿ ಅಗತ್ಯ. ರಾಗಿಣಿ ಅವರು ಈಗಾಗಲೇ ಜನಪ್ರಿಯ ನಟಿ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿಯೂ ಹೌದು. ಅವರ ಚಿತ್ರ ನಿರ್ದೇಶನ ಮಾಡುವುದು ಅಷ್ಟು ಸುಲಭವಲ್ಲ. “ರಾಗಿಣಿ ಐಪಿಎಸ್ ೨” , “ರಾಗಿಣಿ ಐಪಿಎಸ್” ಚಿತ್ರದ ಮುಂದುವರಿದ ಭಾಗ. ಕಥೆ ಕೂಡ ಆ ಚಿತ್ರದ ಕಥೆ ಎಲ್ಲಿ ಕೊನೆಯಾಗಿತ್ತೊ, ಅಲ್ಲಿಂದಲೇ ಮುಂದುವರೆಯುತ್ತದೆ.

ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕರಾದ ಗುರುರಾಜ್ ಹಾಗೂ ಯತಿರಾಜ್ ತಿಳಿಸಿದರು.

ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ಮಾಧ್ಯಮದವರು ನೀಡುತ್ತಿರುವ ಸಹಕಾರ ಅಪಾರ. ಹಾಗಾಗಿ ನನ್ನ ನೂತನ ಚಿತ್ರದ ಘೋಷಣೆಯನ್ನು ನನ್ನ ಹುಟ್ಟುಹಬ್ಬದ ದಿನ ಮಾಧ್ಯಮದವರ ಉಪಸ್ಥಿತಿಯಲ್ಲೇ ಮಾಡುತ್ತಿದ್ದೇವೆ. ಕೆ.ಮಂಜು ಅವರು ನಿರ್ಮಾಣಕ್ಕೆ ಜೊತೆಯಾಗಿರುವುದು ಹಾಗೂ ಜಗ್ಗೇಶ್ ಪುತ್ರರಾದ ಗುರುರಾಜ್ – ಯತಿರಾಜ್ ನಿರ್ದೇಶಿಸುತ್ತಿರುವುದು ಖುಷಿಯಾಗಿದೆ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದರು.

ನಾನು ನಾಯಕಿಯಾಗಿ ರಾಗಿಣಿ ಅವರು ಬಂದ ದಿನದಿಂದಲೂ ಅವರನ್ನು ಬಲ್ಲೆ. ಉತ್ತಮ ನಟಿ ಅವರು. ಇತ್ತೀಚೆಗೆ ರಾಗಿಣಿ ಅವರು ಫೋನ್ ಮಾಡಿ ನಿಮಗೆ ಕಥೆ ಹೇಳಲು ನಿರ್ದೇಶಕರು ಬರುತ್ತಿದ್ದಾರೆ ಅಂತ ಹೇಳಿದರು. ಯಾರು ಎಂದು ಹೇಳಲಿಲ್ಲ. ಆನಂತರ ನನ್ನ ಆತ್ಮೀಯ ಸ್ನೇಹಿತರಾದ ಜಗ್ಗೇಶ್ ಅವರ ಮಕ್ಕಳಾದ ಗುರುರಾಜ್ – ಯತಿರಾಜ್ ಬಂದು “ರಾಗಿಣಿ ಐಪಿಎಸ್ ೨” ಚಿತ್ರದ ಕಥೆ ಹೇಳಿದರು. ಕಂಟೆಂಟ್ ಚೆನ್ನಾಗಿದೆ. ರಾಗಿಣಿ ವೆಂಚರ್ಸ್ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ಆದಷ್ಟು ಬೇಗ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದರು ನಿರ್ಮಾಪಕ ಕೆ.ಮಂಜು. ಉದ್ಯಮಿ ಸುಬ್ರಹ್ಮಣ್ಯ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor