‘ಕಂಟ್ರಿ ಮೇಡ್‍ – ಭಾಗ 2’ ಟೀಸರ್ ಬಿಡುಗಡೆ

ಅರವಿಂದ್‍ ಕೌಶಿಕ್ ನಟನೆ, ನಿರ್ದೇಶನದ ಗ್ಯಾಂಗ್‍ಸ್ಟರ್ ಚಿತ್ರ

‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದ ನಂತರ ನಟ-ನಿರ್ದೇಶಕ ಅರವಿಂದ್‍ ಕೌಶಿಕ್‍ ಸದ್ದಿಲ್ಲದೆ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಇದುವರೆಗೂ ಬೇರೆಬೇರೆ ಜಾನರ್‍ಗಳ ಚಿತ್ರ ಮಾಡಿದ್ದ ಅವರು, ಇದೇ ಮೊದಲ ಬಾರಿಗೆ ಒಂದು ಗ್ಯಾಂಗ್‍ಸ್ಟರ್ ಕಥೆಯೊಂದನ್ನು ನಿರ್ದೇಶಿಸಿದ್ದಾರೆ. ಅದೇ ‘ಕಂಟ್ರಿ ಮೇಡ್‍ – ಭಾಗ 2’. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ, ಚಿತ್ರದ ಟೀಸರ್‍ ಬಿಡುಗಡೆ ಮಾಡಿದ್ದಾರೆ ಅರವಿಂದ್‍.

‘ಕಂಟ್ರಿ ಮೇಡ್‍ – ಭಾಗ 2’ ಚಿತ್ರದ ಟೀಸರ್‍ ಬಿಡುಗಡೆ ಸೋಮವಾರ ಸಂಜೆ ಉತ್ಸವ್‍ ಲೆಗಸಿಯಲ್ಲಿ ಅದ್ದೂರಿಯಾಗಿ ನಡೆಯಿತು. ಟೀಸರ್‍ ಬಿಡುಗಡೆ ಮಾಡಿ, ಚಿತ್ರದಲ್ಲಿ ನಟಿಸಿರುವ ಹಲವು ಕಲಾವಿದರನ್ನು ಅರವಿಂದ್‍ ಪರಿಚಯಿಸಿದರು. ಎಲ್ಲರೂ ಚಿತ್ರದಲ್ಲಿ ನಟಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡ ನಂತರ, ಈ ಚಿತ್ರ ರೂಪುಗೊಂಡಿದ್ದು ಹೇಗೆ ಎಂದು ಅರವಿಂದ್‍ ವಿವರಿಸಿದರು.

‘ನನ್ನ ಹಿಂದಿನ ಸಿನಿಮಾ ಬಿಡುಗಡೆಯಾದ ಮೇಲೆ ಒಂದು ದಿನ ಪಾವಗಡದ ಕಡೆ ಹೋದೆ. ಬಾಲ್ಯದಿಂದಲೂ ನನಗೆ ಬಹಳ ಕಾಡಿದಂತಹ ಊರು ಅದು. ಅಲ್ಲೇನಾದರೂ ಶೂಟಿಂಗ್‍ ಮಾಡಬೇಕೆಂದು ಆಸೆ ಇತ್ತು. ಆ ಊರಿನಲ್ಲಿ ನಾನು ನೋಡಿದ ಒಂದಿಷ್ಟು ನಿಜ ಜೀವನದ ವ್ಯಕ್ತಿಗಳನ್ನು ಆಧರಿಸಿ ಪಾತ್ರಗಳನ್ನು ಸೃಷ್ಟಿಸಿದೆ. ಹಾಗೆ ಹುಟ್ಟಿಕೊಂಡಿದ್ದೇ ಕಾಜಲ್, ಮಿಲ್ಕಿ, ಮಜ್ಜಿಗೆ, ಬಾಂಬೆ ಬಂಟಿ, ಪಾಯ್ಸನ್ ರವಿ, ಜೋಕರ್‍ ಜಾನಿ, ಜಿಮ್ ಚೇತು, ಪುಷ್ಪ, ಆ್ಯಂಕರ್‍ ಅಂಜಲಿ, ರೀಲ್‍ ಶಾಂತಮ್ಮ, ಡೇರ್ ಡೆವಿಲ್‍ ಸರೋಜ ಮುಂತಾದ ಪಾತ್ರಗಳು. ಆ ಪಾತ್ರಗಳಿಂದ ಹುಟ್ಟಿಕೊಂಡ ಕಥೆಯೇ ‘ಕಂಟ್ರಿ ಮೇಡ್‍ – ಭಾಗ 2’’ ಎಂದರು.

‘ನಮ್ಮೂರಲ್ಲಿ ನೊಣಗಳು ಜಾಸ್ತಿ, ಏಕೆಂದರೆ ನಮ್ಮೂರಲ್ಲಿ ಹೆಣಗಳು ಜಾಸ್ತಿ …’ ಎಂಬ ಒಂದೆಳೆ ಇಟ್ಟುಕೊಂಡು ಈ ಚಿತ್ರದ ಕಥೆ ಬರೆದೆ ಎನ್ನುವ ಅರವಿಂದ್‍, ‘ದ್ವೇಷ, ರೋಷ, ಸಿಟ್ಟು, ಸೇಡಿನ ಯುದ್ಧಗಳನ್ನು ಹೆಚ್ಚಾಗಿ ಗಂಡಸರು ಮಾಡಿದರೂ, ಗಾಯಗಳಾಗೋದು ಮನೆಯಲ್ಲಿರುವ ಹೆಂಗಸರಿಗೆ. ಹೊಸಿಲು ದಾಟಿ ಗಂಡಸ್ತನ ಮೆರೆದು ಚಾಕು ಇರಿಯುವ ಗಂಡಸರಿಗೆ, ಮನೆಯಲ್ಲಿನ ಹೆಂಗಸರ ನೆನಪು ಬರುವುದಿಲ್ಲ. ಈ ಅಂಶವನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಈ ಚಿತ್ರದಲ್ಲಿ ನಾಯಕ, ನಾಯಕಿ, ಕಾಮಿಡಿಯನ್ ಯಾರೂ ಇಲ್ಲ. ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ’ ಎಂದರು.

‘ಕಂಟ್ರಿ ಮೇಡ್‍ – ಭಾಗ 2’ ಚಿತ್ರದಲ್ಲಿ ಅರವಿಂದ್‍ ಕೌಶಿಕ್‍, ಅಭಿಲಾಷ್‍ ದ್ವಾರಕೀಶ್‍, ರಾಘವ್‍ ರಾಮ್‍, ಶಿಲ್ಪಾ ಅರವಿಂದ್‍, ಪ್ರದೀಪ್‍ ರೋಶನ್‍, ಗೌರವ್‍ ಆರ್ಯನ್, ಕುಲದೀಪ್, ಅಶ್ವಿತಾ ಗೌಡ, ಸುಜಿತ್‍ ಶೆಟ್ಟಿ, ಸುಧಾ ಪ್ರಸನ್ನ, ಅಪೂರ್ವಶ್ರೀ, ವೀರೇನ್‍ ಸಾಗರ್ ಮುಂತಾದವರು ನಟಿಸಿದ್ದು, ಉಮೇಶ್‍ ಮಠಪತಿ, ಸೂರ್ಯ, ಅರವಿಂದ್‍ ಕೌಶಿಕ್‍ ಮತ್ತು ಚಂದನ್ ಗೌಡ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‍ ರಾಮು ಸಂಗೀತ, ಸೂರ್ಯ ಛಾಯಾಗ್ರಹಣ, ಅಲ್ಟಿಮೇಟ್‍ ಶಿವು ಸಾಹಸ ನಿರ್ದೇಶನವಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor