Vikalpa movie review. “ಕಲ್ಪನಾ ಕಾಲಕೂಪದಲ್ಲಿ ಕಾಡುವಂತ  ವಿಕಲ್ಪದ ಸಂಕಲ್ಪ”

ಚಿತ್ರ –  ವಿಕಲ್ಪ
ನಿರ್ಮಾಪಕರು – ಇಂದಿರಾ ಶಿವಸ್ವಾಮಿ
ನಿರ್ದೇಶನ –  ಪೃತ್ವಿ ರಾಜ್ ಪಾಟೀಲ್
ಛಾಯಾಗ್ರಹಣ – ಅಭಿರಾಮ್ ಗೌಡ
ಸಂಗೀತ – ಸಂವತ್ಸರ

Rating -3.5/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು :-  ನಾಗಶ್ರೀ ಹೆಬ್ಬಾರ್, ಹರಿಣಿ ಶ್ರೀಕಾಂತ್, ಸಂಧ್ಯಾ ವಿನಾಯಕ್, ವದ್ದಿನಗದ್ದೆ ಗಣಪತಿ ಹೆಗಡೆ, ಸ್ವರೂಪ್. ಮುಂತಾದವರು.

ಕಲ್ಪನಾ ಕಾಲಕೂಪದಲ್ಲಿ ಕಾಡುವಂತ  ವಿಕಲ್ಪದ ಸಂಕಲ್ಪ

ಇದು ಕಮರ್ಷಿಯಲ್ ಚಿತ್ರವಲ್ಲ ಆದರೆ ಮನಸ್ಸಿನ ಸರ್ಕಲ್ ನೊಳಗೆ ಹಲವು ವಿಷಯಗಳನ್ನು ಹುಟ್ಟುಹಾಕಿ ಗಿರಕಿ ಹೊಡೆಯುವಂತ ಚಿತ್ರ.

ವಿಕಲ್ಪ‌ ಇದೊಂದು ಭಾವನಾತ್ಮಕ ಪ್ರಪಂಚದೊಳಗಿನ ಕಲ್ಪನೆಗೂ ನಿಲುಕದ ಸುಂದರ ಪ್ರಕೃತಿಯೊಳಗಿನ ಕಲೆಯ ಸೊಬಗಿನೊಳಗೆ ನಡೆಯುವ ಕಥೆ.
ಅವನೊಬ್ಬ ಸಾಫ್ಟ್ ವೇರ್ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿರುವ, ಇನ್ನೂ ಮದುವೆಯಾಗದ 33 ಹರೆಯದ ಟೆಕ್ಕಿ. ಅವನ ಕೈ ಕೆಳಗೆ ಕೆಲಸ ಮಾಡುವವರು ಅನೇಕರಿದ್ದರೂ ಅವನಿಗೊಬ್ಬ ಒಂಟಿ ಅಮ್ಮ.
ಅಮ್ಮ ಮಗನ ಬಾಂದವ್ಯದ ಅಳಿಸಲಾಗದ ಬಾಲ್ಯದ ಒಂದಷ್ಟು ನೆನಪುಗಳು ಹಾಗೂ ಇಬ್ಬರ ಏಕಾಂಗಿ ಬದುಕು, ಅಮ್ಮನಿಗೆ ಅವನು, ಅವನಿಗೆ ಅಮ್ಮ. ಅವರ ಮಮತೆಯ ಮಧುರ  ಪ್ರಪಂಚದೊಳಗೆ ಕ್ಯಾನ್ಸರ್ ಕಾಯಿಲೆಯ ಕಾಟಕ್ಕೆ ಅಮ್ಮನ ಬಲಿ. ಅದರಿಂದ ವಿಚಲಿತನಾದ ಮಗ. ಮತ್ತದೇ ಬಾಲ್ಯದ ಭಯ, ಜೊತೆಗಿದ್ದವಳ ಪ್ರೇಮದೊಳಗೊಂದು ಪರಸಂಗದ ಪ್ರಹಸನದ ನಂಬಿಕೆ ದ್ರೋಹ. ಒಬ್ಬ ಮನುಷ್ಯನನ್ನು ಹೇಗೆ ಕಾಡಿ ಹೃದಯವನ್ನು ಹಿಂಡುತ್ತದೆ ಎನ್ನುವುದು ನಿರ್ದೇಶಕರು ಬಹಳ ಚನ್ನಾಗಿ ಮನ ಮುಟ್ಟುವಂತೆ ತೋರಿಸಿದ್ದಾರೆ.

ಲೀವಿಂಗ್ ರಿಲೇಷನ್ ಶಿಪ್ ನಲ್ಲಿ‌ ಕಳೆದು ಹೋದ ಭಾವನೆಗಳನ್ನು ಭಾವನಾತ್ಮಕ ಸಂಭಂದಗಳ ಹುಡುಕಾಟದಲ್ಲಿ ವಿಕಲ್ಪ ಹಲವು ಕಲ್ಪನೆಗಳನ್ನು ಹುಟ್ಟಿಹಾಕುತ್ತಾ ಸಾಗುವ ಆಧುನಿಕಥೆಯ ವಿಕಾರ ಮನಸ್ಥಿತಿಗಳಿಗೆ ಉತ್ತರ ಹುಡುಕುತ್ತಾ ಸಾಗುವ ಪಾತ್ರಗಳು ನಮ್ಮಲ್ಲೇ ನಡೆದಂತೆ, ನಾವೇ ಪಾತ್ರವಾದಂತೆ ಕಾಡುತ್ತದೆ.

ಶಿಸ್ತು ಸಂಯಮ ವಿಲ್ಲದ ಬದುಕು ಸಂಭಂದಗಳ ಪವಿತ್ರತೆಯನ್ನು ಅರಿಯುವ ಮುನ್ನ ನಡೆಯಬಾರದ್ದು ನಡೆದು ಹೋದ ಸಮಯಗಳು ಮರೆಯದೇ ಆಗಾಗ ಕಾಡುವಂತ ದೃಶ್ಯಗಳು

ಸೈಕಲಾಜಿಕಲ್, ಹಾರರ್, ಥ್ರಿಲ್ಲರ್ ಚಿತ್ರ ಅಂತ ಮೇಲ್ನೋಟಕ್ಕೆ ಅನಿಸಿದರು ಆದರೆ ಇದು ಅದಲ್ಲ,
ಬಾಲ್ಯದ ಕಹಿ ಘಟನೆಯ ಹೆದರಿಕೆಯೊಂದು ಜೊತೆ ಜೊತೆಗೆ ಬೆಳೆದು ಹೆಮ್ಮರವಾಗಿ ಮನಸ್ಸಿನೊಳಗೆ ಭಯದ ಭೂತ ಕಾಯುತ್ತಾ ಕಾಡುವಂತ ಕಥೆಯೊಳಗಿನ ವ್ಯಥೆಯೇ ವಿಕಲ್ಪ.


ಇದು ಪ್ರೇಕ್ಷಕನ ಕಲ್ಪನೆಗೆ ಸಿಗದೆ ಒಂದಷ್ಟು ಗೊಂದಲಗಳನ್ನು ಸೃಷ್ಠಿಸುತ್ತಾ ಬೇರೆಯದೇ ಪ್ರಪಂಚವನ್ನು ಪರಿಚಯಿಸುತ್ತಾ ಹೋಗುತ್ತದೆ.

ಪ್ರಕೃತಿಯೋಳಗಿನ ರಮಣೀಯತೆ, ರಮಣೀಯತೆಯೊಳಗಿನ ಸೌಂಧರ್ಯ, ಇಬ್ಬನಿ ತಬ್ಬಿದ ಇಳೆಯೊಳಗೆ, ದುಮ್ಮಿಕ್ಕಿ ಹರಿವ ನೀರ ಝರಿಯೊಳಗೆ, ಮಿಂದು ಬಂದಂತ ಕ್ಷಣ, ಕ್ಷಣ ಕ್ಷಣಕ್ಕೂ ಹೊಸ ಅನುಭವವನ್ನು ನೀಡುತ್ತದೆ.
ಚಿತ್ರದ ಛಾಯಾಗ್ರಾಹಕ ಅಭಿರಾಮ್ ಗೌಡ ಸುಂದರ ದೃಶ್ಯಗಳ ಚೌಕಟ್ಟಿನೊಳಗೆ ವಿಕಲ್ಪವನ್ನು ಕಟ್ಟಿಕೊಟ್ಟಿದ್ದಾರೆ.

ಚಿತ್ರಕಥೆಯ ಕಥಾನಾಯಕ ಪೃತ್ವಿಯಾದರೂ, ತಂತ್ರಜ್ಞಾನದ ಹೀರೋ ಛಾಯಾಗ್ರಾಹಕ ಅಭಿರಾಮ್ ಗೌಡ ಹಾಗೂ ಸಂಗೀತ ಸಂಯೋಜಕರು ಸಂವತ್ಸರ ಎಂದರೆ ತಪ್ಪಾಗಲಾರದು.


ಸಂವತ್ಸರ ರವರ ಸಂಗೀತದ ಮೋಡಿಯಲ್ಲಿ ಹಾಡುಗಳ ಒಳಗೆ ಕಾವ್ಯವೋ, ಕಾವ್ಯದೊಳಗೆ ಹಾಡುಗಳೋ ಎನ್ನುವಷ್ಟು ನೆಲದ ಸೊಗಡಿನ ಗೀತೆಗಳ ಔತಣವನ್ನು ಉಣ ಬಡಿಸಿದ್ದಾರೆ.

ಪೃತ್ವಿ ರಾಜ್ ಪಾಟೀಲ್ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಟನೆಯ ಜವಾಬ್ಧಾರಿಯನ್ನು ಹೆಗಲ ಮೇಲೆ ಹೊತ್ತು ಮೆರೆಸಿದ್ದಾರೆ. ಯಾವುದೇ ಬಿಲ್ಡಪ್ ದೃಶ್ಯಗಳಿಗೆ ಚಿತ್ರವನ್ನು ತಳುಕು ಹಾಕದೇ ಸಹಜ ಅಭಿನಯ ಹಾಗೂ ವಿಭಿನ್ನ ಕಥೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅಭಿನಯ ಮತ್ತು ನಿರ್ದೇಶನ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ.

ನಾಗಶ್ರೀ ಹೆಬ್ಬಾರ್ ಕಥಾ ನಾಯಕಿಯಾದರೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ, ಮೇಕಪ್ ನ ಹಂಗಿಲ್ಲದೇ ಸಹಜವಾಗಿ ಅಭಿನಯಿಸಿದ್ದಾರೆ.
ಯೌವನದ ಹರೆಯದಲ್ಲಿ ಅರಿಯದೇ ಯಾವನೋ ತಲೆ ಮಾಸಿದ ಕಾಮುಕನ ನಂಬಿ ಮನಸ್ಸು ಮೈಯನ್ನು ಮೈಲಿಗೆ ಮಾಡಿಕೊಂಡು ಆದ ತಪ್ಪಿಗೆ ಪರಿತಪಿಸಿ ಪ್ರಾಮಾಣಿಕವಾದ ಪ್ರೀತಿಗೆ ತನ್ನ ಹೃದಯವನ್ನು ಅರ್ಪಸಿಕೊಂಡು ಪರಿತಪಿಸುವ ಪಾತ್ರಕ್ಕೆ ನಾಗಶ್ರೀ ಜೀವ ತುಂಬಿದ್ದಾರೆ.
ಮತ್ತೊಂದು ಸಾಂಧರ್ಬಿಕ ಪಾತ್ರ ವದ್ದಿನ ಗದ್ದೆ ಗಣಪತಿ ಭಟ್ ರವರದ್ದು. ಚಿತ್ರದಲ್ಲಿ ಹಾಸ್ಯಕ್ಕೆಂದೇ ಬೇಕಂತ ತುರುಕಿದ ಅಪಹಾಸ್ಯದ ದೃಶ್ಯಗಳಿಲ್ಲ. ಆದರೆ ಸಾಂಧರ್ಬಿಕ ಸಹಜ ದೃಶ್ಯಗಳೇ ಪ್ರೇಕ್ಷಕನಿಗೆ ತಿಳಿಹಾಸ್ಯದ ಕಚಗುಳಿ ಇಡುತ್ತದೆ.
ಗಣಪತಿ ಭಟ್ ಅತ್ಯಂತ ಸಹಜವಾಗಿ ಪಾತ್ರದೊಳಗೆ ಜೀವಿಸಿದ್ದಾರೆ.


ಇದೊಂದು ಬೆಂಗಳೂರು ಮತ್ತು ಶಿರಸಿಯ ಪ್ರಕೃತಿಯ ಸೌಂಧರ್ಯದಲ್ಲಿ ಸಾಗುವಂತ ಕಥೆ.
ಇದು ಮೊದಲೇ ಹೇಳಿದಂತೆ ಕಮರ್ಷಿಯಲ್ ಚಿತ್ರವಲ್ಲ. ಮನಸ್ಸಿನೊಳಗೆ ಉಳಿಯುವಂತ ವಿಭಿನ್ನವಾದ ನಮ್ಮ ಮಣ್ಣಿನ ಜನಪದ ಕಲೆಯ ಸೊಗಡಿನ ಶ್ರೀಮಂತ ಕಥೆಯ ಚಿತ್ರ.

ನಿರ್ಮಾಪಕಿ ಇಂದಿರಾ ಇಂತಹ ಅರ್ಥಪೂರ್ಣ ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕಿಯ ಜವಾಬ್ಧಾರಿಯನ್ನು ಸರಿಯಾಗಿ ನಿಭಾಯಿಸಿದ್ದಾರೆ.
ಇಂತಹ ಚಿತ್ರಗಳನ್ನು ಪ್ರೇಕ್ಷಕ ಪ್ರಭುಗಳು ಕೈ ಹಿಡಿದು ಗೆಲ್ಲಿಸಬೇಕು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor