“ಸಂಗ್ರಹ ರಾಮಾಯಣದ ಈ ಅನುವಾದ ಸಂಸ್ಕೃತ ಅಧ್ಯಯನಕ್ಕೆ ಬಾಗಿಲು” — ಶ್ರೀಈಶಪ್ರಿಯತೀರ್ಥರು, ಅದಮಾರು ಮಠ, ಉಡುಪಿ.
ಡಿಸೆಂಬರ್ 14, 2025ರಂದು ಭಾನುವಾರ ಸಂಜೆ ಚಾಮರಾಜಪೇಟೆಯ ಅಂಬರೀಶ್ ಆಡಿಟೋರಿಯಂನಲ್ಲಿ ಶ್ರೀವ್ಯಾಸಪ್ರಜ್ಞಾಪ್ರತಿಷ್ಠಾನವು ಪ್ರಕಾಶಿಸುತ್ತಿರುವ ಶ್ರೀವಿಜಯಸಿಂಹ ಆಚಾರ್ಯರ ಅನುವಾದಿತ ಕೃತಿಗಳು: ಶ್ರೀನಾರಾಯಣಪಂಡಿತರ ಸಂಗ್ರಹರಾಮಾಯಣ ಮತ್ತು ಮೂರು ಆಟ ಮೂರು ನೋಟ (ಕೃಷ್ಣಮಿಶ್ರರ ಪ್ರಬೋಧಚಂದ್ರೋದಯ, ವೇದಾಂತ ದೇಶಿಕರ ಸಂಕಲ್ಪಸೂರ್ಯೋದಯ, ಘನಶ್ಯಾಮರ ಪ್ರಚಂಡರಾಹೂದಯ) ಮೂರು ನಾಟಕಗಳ ಗುಚ್ಛ ಲೋಕಾರ್ಪಣೆಯಾಯಿತು.

ಕಾರ್ಯಕ್ರಮದಲ್ಲಿ ಘನ ಅಧ್ಯಕ್ಷರಾಗಿ ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀಈಶಪ್ರಿಯತೀರ್ಥರು, ಮುಖ್ಯ ಅತಿಥಿಗಳಾಗಿ ಸಾಹಿತಿಗಳು ಮತ್ತು ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಮತ್ತು ಚಲನಚಿತ್ರ ಪ್ರಚಾರಕರಾದ ಸುಧೀಂದ್ರ ವೆಂಕಟೇಶ್ ಉಪಸ್ಥಿತರಿದ್ದರು.. ಇವರೊಟ್ಟಿಗೆ ಶ್ರೀವಿಶ್ವಾಧಿಪತಿಪ್ರಿಯತೀರ್ಥರು ಹಾಗೂ ಗಂಜೀಫಾ ಕಲೆಯ ಖ್ಯಾತ ಚಿತ್ರಕಾರರಾದ ರಘುಪತಿಭಟ್ಟರು ವಿಶೇಷ ಆಹ್ವಾನದ ಮೇರೆಗೆ ಆಗಮಿಸಿದ್ದರು.
ಕಾರ್ಯಕ್ರಮವು ದೀಪಪ್ರಜ್ವಲನದ ಮತ್ತು ವೇದಘೋಷದ ಮೂಲಕ ಪ್ರರಂಭವಾಯಿತು. ಪುಸ್ತಕಗಳ ಲೋಕಾರ್ಪಣೆಯೂ ಒಂದು ವಿಭಿನ್ನ ರೀತಿಯಲ್ಲಿ ‘ದೃಶ್ಯ ಹಾಗೂ ಶ್ರವ್ಯ ನಾಟಕಗಳ ಮೂಲಕ ನಡೆದದ್ದು ಕಾರ್ಯಕ್ರಮಕ್ಕೆ ಹೆಚ್ಚು ಮೆರಗನ್ನು ತಂದುಕೊಟ್ಟಿತು.
ಸಂಗ್ರಹರಾಮಾಯಣ ಬಿಡುಗಡೆಯನ್ನು ನಾರಾಯಣಪಂಡಿತರ ಹಾಗೂ ಅವರ ಹಿರಿಯರ ಸಂವಾದ ರೂಪದಲ್ಲಿರುವ ಶ್ರವ್ಯಕಾವ್ಯದ ಮೂಲಕ ಹಾಗೂ ‘ಮೂರು ಆಟ ಮೂರು ನೋಟ’ ನಾಟಕಗಳನ್ನು ಶ್ರವ್ಯ ಹಾಗೂ ದೃಶ್ಯ ರೂಪಕಗಳ ಮೂಲಕ ಬಿಡುಗಡೆ ಮಾಡಲಾಯಿತು.
ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಕೃತಿಗಳನ್ನು ಕುರಿತು ಮಾತನಾಡುತ್ತಾ, ವಿಜಯಸಿಂಹ ಆಚಾರ್ಯರ ಈ ಶ್ರಮವು ಸಂಸ್ಕೃತ ಹಾಗೂ ಕನ್ನಡ ಭಾಷೆಗಳಿಗೆ ಸಂದ ಅಪೂರ್ವ ಕೊಡುಗೆಗಳಾಗಿದೆ. ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರಿಂದಲೇ ಪರಂಪರೆಯನ್ನು ಮುಂದುವರೆಸುವ ಶಿಷ್ಯ ಶ್ರೀವಿಜಯಸಿಂಹ ಎಂದು ಹೇಳಿಸಿಕೊಂಡ ಇವರು, ಮಾಡಬೇಕಾದ ಕಾರ್ಯಗಳು ಇನ್ನಷ್ಟಿವೆ.. ಅದರಲ್ಲಿಯೂ ಮುಖ್ಯವಾಗಿ ಭಗವದ್ಗೀತೆಯ ಮೂರುಮತಗಳ ವಿಮರ್ಶೆ ಮತ್ತು ಅನುವಾದವನ್ನು ಮಾಡಬೇಕಾಗಿ ಆಗ್ರಹಪೂರ್ವಕವಾಗಿ ವಿನಂತಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ಶ್ರೀಈಶಪ್ರಿಯತೀರ್ಥರು ಸಂಸ್ಕೃತ ಅಧ್ಯಯನ ಮಾಡುವವರಿಗೆ ಈ ಕೃತಿಯು ಬಹು ಉಪಕಾರಿಯಾಗಿದೆ. ಕಾಲದ ಆನಂತ್ಯದಲ್ಲಿ ಪ್ರಸ್ತುತವಾದ ತತ್ವಗಳನ್ನು ನಮ್ಮ ಸೀಮಿತ ಜೀವನದಲ್ಲಿ ಕಾಣುವುದಕ್ಕೆ ರಾಮಾಯಣ ಮಹಾಭಾರತಗಳಂತ ಸಾಹಿತ್ಯಗಳ ಅಧ್ಯಯನದ ಆವಶ್ಯಕತೆಯ ಬಗ್ಗೆ ತಿಳಿಸಿದರು, ನೆರೆದ ಎಲ್ಲರಿಂದ ಶ್ರೀಕೃಷ್ಣನಾಮದ ಜಪವನ್ನು ಮಾಡಿಸಿದರು.
ವಿದ್ವಾಂಸರಾದ ವಿಕ್ರಮಸಿಂಹ ಆಚಾರ್ಯರು ಮೂರು ಆಟ, ಮೂರು ನೋಟ ನಾಟಕದ ಕುರಿತು ತಮ್ಮ ಅನುಭವದ ಹಿನ್ನೆಯಲ್ಲಿ ರಂಗಪ್ರಯೋಗದ ಕುರಿತು ಮಾತನಾಡಿದರು.
ಇನ್ನು ಕೃತಿಯ ಅನುವಾದಕರಾದ ಶ್ರೀವಿಜಯಸಿಂಹ ಆಚಾರ್ಯರು ಸಂಗ್ರಹರಾಮಾಯಣವನ್ನು ಓದಿದವರು ವಾಲ್ಮೀಕಿ ರಾಮಾಯಣ ಸಮುದ್ರದಲ್ಲಿ ಈಜಬಲ್ಲರಾಗುತ್ತಾರೆ. ಅಷ್ಟೇ ಅಲ್ಲದೇ ೧೮ ಪುರಾಣಗಳಲ್ಲಿ ಬಂದ ರಾಮನ ಕಥೆಯನ್ನು ನಾರಾಯಣಪಂಡಿತರು 3 ಸಾವಿರ 5೦೦ ಶ್ಲೋಕಗಳಿಂದ ಸಂಗ್ರಹಿಸಿಕೊಟ್ಟಿದ್ದರಿಂದಲೇ ಈ ಕೃತಿಗೆ ಸರ್ಷಪೇ ಕೂಷ್ಮಾಂಡಪ್ರವೇಶಃ (ಸಾಸಿವೆಯೊಳಗೆ ಕುಂಬಳ) ಎಂಬ ಪ್ರಶಸ್ತಿ ಅನ್ವರ್ಥವಾಗಿದೆ. ಆಚಾರ್ಯರು ಅಸಮಂಜಸ, ಹನುಮಂತನ ಶಾಪ, ಲಕ್ಷ್ಮಣನ ಪಾತ್ರ ಹೀಗೆ ಸಂಗ್ರಹರಾಮಾಯಣವು ನಿರೂಪಿಸುವ ಅಂಶಗಳನ್ನು ನೆರೆದ ಎಲ್ಲರಿಗೂ ವಿವರಿಸಿದರು. ತಮ್ಮ ಬಾಲ್ಯವನ್ನು ನೆನೆಸಿಕೊಳ್ಳುತ್ತಾ, ತಂದೆಯವರ ಕೃತಿರಚನೆ ಹಾಗೂ ಅವರ ಸಾಹಿತ್ಯಪ್ರೇಮದ ಬಗೆಗೆ ಹಂಚಿಕೊಂಡರು.. ಒಟ್ಟಾರೆ ಈ ಕಾರ್ಯಕ್ರಮವು ಒಂದು ವಿಶಿಷ್ಟ ರೀತಿಯಲ್ಲಿ ರೂಪುಗೊಂಡು ಜನರ ಮನಸ್ಸನ್ನು ಸೆಳೆಯಿತು. ಆನಂತರ ಶ್ರೀ ವ್ಯಾಸಪ್ರಜ್ಞಾಪ್ರತಿಷ್ಠಾನದ ವತಿಯಿಂದ ಎಲ್ಲರಿಗೂ ಗೌರವಸಮರ್ಪಣೆಯಾಯಿತು.











