“Manada Kadalu” movie review. ಮನದ ಕಡಲು ಚಿತ್ರ ವಿಮರ್ಶೆ. ಮನದೊಳಗೆ ಕಡಲ ಕೊರೆತ
ಇದು ಯೋಗರಾಜ ಭಟ್ಟರ ವಿಭಿನ್ನ ಪ್ರೇಮಕಥೆ. ಮುಂಗಾರುಮಳೆ ಚಿತ್ರವನ್ನು ನೀಡಿ ಕನ್ನಡದಲ್ಲಿ ಸಂಚಲನ ಮೂಡಿಸಿದ್ದ E ಕೃಷ್ಣಪ್ಪ ನವರ ನಿರ್ಮಾಣದಲ್ಲಿ ಯೋಗರಾಜ ಭಟ್ಟರ ನಿರ್ದೇಶನದಲ್ಲಿ, ಸುಂದರ ಪರಿಸರಗಳಲ್ಲಿ, ಸುಮಧುರ ಸಂಗೀತದ ಅಲೆಗಳಲ್ಲಿ ಮನದ ಕಡಲು ಚಿತ್ರ ಸುಂದರವಾಗಿ ಮೂಡಿಬಂದಿದೆ.
ಯೋಗರಾಜ್ ಭಟ್ಟರ ನಿರ್ದೇಶನದ ಮುಂಗಾರು ಮಳೆ, ಗಾಳಿಪಟ, ಪರಮಾತ್ಮ ಚಿತ್ರಗಳ ಛಾಯೆಯನ್ನು ಮನದ ಕಡಲು ಚಿತ್ರದಲ್ಲಿ ಕಾಣಬಹುದು. ಭಟ್ಟರ ಪಾಕದಲ್ಲಿ ಒಂದಷ್ಟು ರುಚಿಗೆ ತಕ್ಕಂತೆ ಕೆಲವು ಬೇರೆಯದ್ದೇ ವಗ್ಗರಣ್ಣೆಯ ಸವಿಯನ್ನು ಸವಿಯಬಹುದು. ಮೂರು ಜನರ ಎಡ ಬಿಡಂಗಿತನವನ್ನು ಚಿತ್ರದಲ್ಲಿ ಕಾಣಬಹುದು. ಓದಿಗೂ ಭಟ್ಠರಿಗೂ ಅಷ್ಟಕಷ್ಟೇ ಅನ್ನಿಸುತ್ತದೆ. ಓದಿ ಪಾಸಾಗಿ ಏನ್ಮಾಡಲಿ ಒಂದೇ ಸಲ ಅನ್ನುವ ಚಂಬೇಶ್ವರನನ್ನು ಮತ್ತೆ ನೆನಪಿಸುತ್ತಾರೆ ನಟ ಸುಮುಖನ ಪಾತ್ರದ ಮೂಲಕ, ಕಥಾನಾಯಕನದ್ದು ಉಡಾಫೆಯ ಪಾತ್ರ ಒಂದು ರೀತಿಯಲ್ಲಿ ಪಂಚರಂಗಿ ದಿಗಂತನ ಪಾತ್ರದಂತೆ. ಅಪ್ಪನ ಬಲವಂತಕ್ಕೆ ಮೆಡಿಕಲ್ ಸೇರುತ್ತಾನೆ ಅರ್ದಕ್ಕೆ MBBS ಬಿಟ್ಟು ಕಾಲಿ ಪೋಲಿಯಂತೆ ಕ್ರಿಕೆಟ್ ತಾರೆಯಾದ ನಾಯಕಿ ಹಿಂದೆ ಬೀಳುತ್ತಾನೆ. ಅವಳಿಗಿಷ್ಟವಿಲ್ಲದಿದ್ದರೂ ಅವಳನ್ನೇ ಹುಡುಕುತ್ತಾ, ಅಲೆಯುತ್ತಾ, ಪ್ರೀತ್ಸೆ ಅಂತ ಹಿಂದೆ ಬೀಳುತ್ತಾನೆ ಸುಖಾ ಸುಮ್ಮನೆ ಅವಳನ್ನು ಪ್ರಾಣ ಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ ಮುಂಗಾರು ಮಳೆ ಗಣೇಶನಂತೆ ಆದರೆ ಇಲ್ಲಿ ದೇವದಾಸ್ ಇಲ್ಲ ಅವನ ಜಾಗದಲ್ಲಿ ಅರ್ಥವಾಗದ ಭಾಷೆಯಲ್ಲಿ ಭಾವನೆಗಳನ್ನು ಅರಳಿಸುವ ಕಾಡು ಜನಾಂಗದ ನಾಯಕನ ಪಾತ್ರದಲ್ಲಿ ರಂಗಾಯಣ ರಘು ತೆರೆಯ ಮೇಲೆ ರಾರಾಜಿಸಿದ್ದಾರೆ.
ಒಂದು ಕೊಂಡರೆ ಒಂದು ಉಚಿತ ಎನ್ನುವಂತೆ ಎಕ್ಸ್ ಪೆರಿ ಡೇಟ್ ಮುಗಿದಿರುವ ಹುಡುಗಿಯನ್ನು ಪ್ರೀತಿಸುವ ಹಠಕ್ಕೆ ಬಿದ್ದ ನಾಯಕನಿಗೆ ಉಚಿತವಾಗಿ ಸಿಗುವುದು ಅವಳ ಗೆಳತಿ. ಅವಳು ಊರೂರು ಅಲೆಯುವ ಆರ್ಕಾಲಜಿ ವಿದ್ಯಾರ್ಥಿ. ಕಥೆಯ ಮುಖ್ಯ ಕಥಾನಾಯಕಿಗೆ ಅದೆಂತದ್ದೋ ವಿಚಿತ್ರ ಖಾಯಿಲೆ ಇಡೀ ದೇಹ ಹಂತ ಹಂತವಾಗಿ ಮರಗಟ್ಟಿ ಸಾಯುವ ಖಾಯಿಲೆಯಿಂದ ಬಳಲುವ ಈಕೆಗೆ ತನ್ನನ್ನು ಸಾಯುವಷ್ಟು ಪ್ರೀತಿಸುವ ಒಳ್ಳೆ ಹುಡುಗನನ್ನು ನೀನು ಪ್ರೀತಿಸು ಎಂದು ಗೆಳತಿಗೆ ದಂಬಾಲು ಬಿದ್ದು ಒಪ್ಪಿಸುತ್ತಾಳೆ. ಹೀಗೆ ಅವರು ಬಿಟ್ಟು ಇವರಾರು, ಇವರು ಬಿಟ್ಟು ಅವರಾರು ಎಂಬಂತೆ ಪಾತ್ರಗಳ ಮೂಲಕ ನಿರ್ದೇಶಕ ಯೋಗರಾಜ ಭಟ್ಟರು ಕಣ್ಣಾ ಮುಚ್ಚಾಲೆ ಆಡಿದ್ದಾರೆ. ಇಲ್ಲಿ ಯಾರನ್ನು ಯಾರು ಪ್ರೀತಿಸುತ್ತಾರೆ ಎನ್ನುವುದು ಮುಂಗಾರು ಮಳೆಯ ದೇವದಾಸನ ಆಣೆ ಆ ಪರಮಾತ್ಮನಿಗೂ ಗೊತ್ತಾಗದಂತೆ ಒಂದು ವಿಭಿನ್ನ ಕ್ಲೈಮ್ಯಕ್ಸ್ ನ ಮೂಲಕ ಚಿತ್ರ ಮುಗಿಸಿದ್ದಾರೆ. ಭಟ್ಠರು ಪ್ರೀತಿಯಲ್ಲಿ PHD ಪಡೆದಿದ್ದಾರೆ ಅನ್ನಬಹುದು. ಕೊನೆಯಲ್ಲಿ ಉಸಿರುಗಟ್ಟಿಸಿ ಪ್ರೀತಿಗಿಂತ ಬದುಕು ದೊಡ್ಡದು ಎನ್ನುವುದನ್ನು ಸಾಭೀತು ಮಾಡಿದ್ದಾರೆ. ಸಾವನ್ನು ಕೂಗಿ ಕರೆಯಬೇಡಿ ಬದುಕಿಗೆ ನೋವಾಗುತ್ತದೆ ಎಂಬ ತಿಯರಿಯನ್ನು ಪ್ರೇಕ್ಷಕನ ಮನಸ್ಸಿಗೆ ಬಹಳ ಅರ್ಥಪೂರ್ಣವಾಗಿ ಪಾಸ್ ಮಾಡಿದ್ದಾರೆ.
ಚಿತ್ತದ ಸಂಗೀತ ನಿರ್ದೇಶಕ ಮತ್ತು ಛಾಯಾಗ್ರಾಹಕ ಸಂತೋಷ್ ಪಾತಜೆ ಹಟಕ್ಕೆ ಬಿದ್ದಂತೆ ಕೆಲಸಮಾಡಿದ್ದಾರೆ. ಕೆಲವು ಕಡೆ ಸಂಗೀತ ಮೊದಲ, ದೃಶ್ಯ ಮೊದಲ ಎನ್ನುವಷ್ಟರ ಮಟ್ಟಿಗೆ ಕೆಲಸದಲ್ಲಿ ಪೈಪೋಟಿಗೆ ಬಿದ್ದಿದ್ದಾರೆ. ಪಾತಜೆ ತುಂಬಾ ಸುಂದರವಾದ ದೃಶ್ಯಗಳನ್ನು ಸೆರೆಹಿಡಿದು ಹೊಸ ಪರಿಸರವನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಭಟ್ಟರ ಮತ್ತು ಹರಿಕೃಷ್ಣ ರವರ ಕಾಂಬಿನೇಷನ್ ಚನ್ನಾಗಿ ವರ್ಕೌಟ್ ಆಗಿದೆ.
ದತ್ತಣ್ಣನ ಪಾತ್ರ ಚಿತ್ರದ ಕಥೆಯ ನಾಡಿ ಮಿಡಿತ ಎನ್ನಬಹುದು. ನಾಡಿ ಹಿಡಿದು ಇದು ಇಂತದ್ದೇ ಖಾಯಿಲೆ, ಇಷ್ಟೇ ದಿನ ಬದುಕುತ್ತಾರೆ ಎಂದು ಕರಾರುವಕ್ಕಾಗಿ ಹೇಳುವಂತ ಪಾರಂಪರಿಕ ವೈದ್ಯನ ಪಾತ್ರದಲ್ಲಿ ಬಹಳ ಮುಗ್ದವಾಗಿ ಅಭಿನಯಿಸಿದ್ದಾರೆ.
ಮುಂಗಾರು ಮಳೆಯಂತ ಬಹು ದೊಡ್ಡ ಹಿಟ್ ಸಿನಿಮಾ ನೀಡಿದ ನಿರ್ದೇಶಕ ಹಾಗೂ ನಿರ್ಮಾಪಕರಾದ ಈ. ಕೃಷ್ಣಪ್ಪ ಮತ್ತು ಗಂಗಾಧರ್ ಈಗ ಮತ್ತೊಂದು ಹೊಸಬರ ಚಿತ್ರವನ್ನು ಪ್ರೇಕ್ಷಕರ ಮನದೊಳಗೆ ಕಡಲ ಕೊರೆತ ವಾಗುವಷ್ಟು ವಿಭಿನ್ನ ಪ್ರೇಮ ಕಥೆಯನ್ನು ತೆರೆಗೆ ತಂದಿದ್ದಾರೆ.
ಒಟ್ಟಿನಲ್ಲಿ ಯುಗಾದಿಗೆ ಬೇವುಬೆಲ್ಲದಂತೆ ಸಿನಿಮಾ ಕೂಡ ಬಂದಿದೆ ಪ್ರೇಕ್ಷಕರು ಕೈಹಿಡಿದರೆ ಮತ್ತೊಂದು ಮುಂಗಾರು ಮಳೆಯಾಗುವುದರಲ್ಲಿ ಅನುಮಾನವಿಲ್ಲ.