Shikandi movie motion poster released. ಮೋಷನ್ ಪೋಸ್ಟರ್ ನಲ್ಲೇ ಮೋಡಿ ಮಾಡಿದ “ಶಿಖಂಡಿ”

ಮೋಷನ್ ಪೋಸ್ಟರ್ ನಲ್ಲೇ ಮೋಡಿ ಮಾಡಿದ “ಶಿಖಂಡಿ”
.
ಪೋಲಾ ಪ್ರವೀಣ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಗುರುಮೂರ್ತಿ ವಿ ನಿರ್ದೇಶನ.


ಈ ಹಿಂದೆ ‘ಮಾರಕಾಸ್ತ್ರ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಗುರುಮೂರ್ತಿ ವಿ, ಈಗ ವಿಭಿನ್ನ ಕಥಾಹಂದರ ಹೊಂದಿರುವ “ಶಿಖಂಡಿ” ಚಿತ್ರವನ್ನು ನಿರ್ದೇಶಿಸಿದ್ದಾರೆ. ಪೋಲಾ ಪ್ರವೀಣ್ ಕುಮಾರ್ ಅವರು ಪೋಲಾ ಮೂವೀಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಅನಾವರಣವಾಯಿತು. ನಿರ್ಮಾಪಕ ಸಂಜಯ್ ಗೌಡ ಹಾಗೂ ನಿರ್ದೇಶಕರಾದ ಜಡೇಶ್ ಕೆ ಹಂಪಿ, ನವೀನ್ ರೆಡ್ಡಿ “ಶಿಖಂಡಿ” ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮಹಾಭಾರತದಲ್ಲಿ ಬರುವ “ಶಿಖಂಡಿ” ಪಾತ್ರವೇ ನಮ್ಮ ಚಿತ್ರದ ಕಥೆಗೆ ಸ್ಪೂರ್ತಿ ಎಂದು ಮಾತನಾಡಿದ ನಿರ್ದೇಶಕ ಗುರುಮೂರ್ತಿ, ಮಹಾಭಾರತದಲ್ಲಿ ಶಿಖಂಡಿ ಪುನರ್ಜನ್ಮ ಪಡೆದು ತನ್ನ ಸೇಡನ್ನು ತೀರಿಸಿಕೊಳ್ಳುವುದನ್ನು ನಾವೆಲ್ಲಾ ಕೇಳಿದ್ದೇವೆ. ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು “ಶಿಖಂಡಿ” ಚಿತ್ರದ ಕಥೆ ಹೆಣೆಯಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಇರುವ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಿದು. ಕಥೆ ಕೇಳಿದ ತಕ್ಷಣ ಮೆಚ್ಚಿಕೊಂಡ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಅವರು ನಿರ್ಮಾಣಕ್ಕೆ ಮುಂದಾದರು.

ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರೀಕರಣ ಮುಗಿದಿದೆ. ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೇ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಇದೆ. ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು.

ನಾನು ಬಳ್ಳಾರಿಯವನು. ಇದು ಮೊದಲ ನಿರ್ಮಾಣದ ಚಿತ್ರ. ಚಿತ್ರ ನಿರ್ಮಾಣ ಮಾಡಲು ಎರಡು ಕಾರಣ‌. ಒಂದು ಕಥೆ . ಮತ್ತೊಂದು ವಿಶೇಷ ಚೇತನರಾಗಿದ್ದರೂ ನಿರ್ದೇಶಕ ಗುರುಮೂರ್ತಿ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ. ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ತಿಳಿಸಿದರು.

ನನಗೆ ಚಿತ್ರದ ಶೀರ್ಷಿಕೆ ಹೇಳಿದ ತಕ್ಷಣ ಆಶ್ಚರ್ಯವಾಯಿತು. ಆದರೆ ಕಥೆ ಕೇಳಿ ಸಂತೋಷವಾಯಿತು. ನಾನು ಮೈಸೂರಿನವನು. ನಾಯಕನಾಗಿ ಮೊದಲ ಚಿತ್ರ. ಸೂರ್ಯ ನನ್ನ ಪಾತ್ರದ ಹೆಸರು. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕ ಯುವರಾಜ್ ಗೌಡ.

ಇದು ನನ್ನ ಚೊಚ್ಚಲ ಚಿತ್ರ ಎಂದು ನಾಯಕಿ ಖ್ಯಾತಿ ತಿಳಿಸಿದರು. ಉತ್ತಮ ಪಾತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ ಎಂದು ನಟಿ ನಿಖಿತಾಸ್ವಾಮಿ ಹೇಳಿದರು. ತಮ್ಮ ಪಾತ್ರದ ಬಗ್ಗೆ “ಬಿಗ್ ಬಾಸ್” ಖ್ಯಾತಿಯ ನೀತು ಹಾಗೂ ಬಳ್ಳಾರಿಯ ಚಾಂದಿನಿ ವಿವರಣೆ ನೀಡಿದರು.

ಹಿರಿಯ ಕಲಾವಿದರಾದ ರಘು ರಾಮನಕೊಪ್ಪ, ದೀಪಕ್ ಶೆಟ್ಟಿ, ವಿಜಯ್ ಚಂಡೂರ್ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಛಾಯಾಗ್ರಾಹಕ ಸ್ವಾಮಿ, ಸಂಗೀತ ನಿರ್ದೇಶಕ ಮಂಜುಕವಿ, ಹಾಡು ಬರೆದಿರುವ ಕಿನ್ನಾಳ್ ರಾಜ್, ಹಿನ್ನೆಲೆ ಸಂಗೀತ ನೀಡಿರುವ ಪ್ರದ್ಯೋತನ್, ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಹಾಗೂ ಚಿತ್ರಕಥೆ ಬರೆದಿರುವ ದಯಾಶಂಕರ್ ಮುಂತಾದವರು “ಶಿಖಂಡಿ” ಚಿತ್ರದ ಕುರಿತು ಮಾತನಾಡಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor