Sarkari nyayalay Angadi movie shooting Pooja “ಸರ್ಕಾರಿ ನ್ಯಾಯಬೆಲೆ ಅಂಗಡಿ” ಚಿತ್ರದ ಮುಹೂರ್ತ
ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ಸಿನಿಪ್ರಿಯರ ಮನ-ಗಮನ ಸೆಳೆದಿದ್ದ ನಟಿ ರಾಗಿಣಿ ದ್ವಿವೇದಿ, ಈಗ ನಿಧಾನವಾಗಿ ಕಂಟೆಂಟ್ ಆಧರಿತ ಸಿನಿಮಾಗಳತ್ತ ಒಲವು ತೋರುತ್ತಿದ್ದಾರೆ. ಹೌದು, ಇತ್ತೀಚಿನ ದಿನಗಳಲ್ಲಿ ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ಬಯಸುತ್ತಿರುವ ರಾಗಿಣಿ ದ್ವಿವೇದಿ, ಈಗ ಅಂಥದ್ದೇ ಒಂದು ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ರಾಗಿಣಿ ದ್ವಿವೇದಿ ನಾಯಕಿಯಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಹೆಸರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’. ಕೆಲ ದಿನಗಳ ಹಿಂದಷ್ಟೇ ಈ ಸಿನಿಮಾದ ಧ್ವನಿಮುದ್ರಣ ಕಾರ್ಯವನ್ನು ಆರಂಭಿಸಿದ್ದ ಚಿತ್ರತಂಡ, ಇದೀಗ ಹಾಡುಗಳ ಕೆಲಸವನ್ನು ಪೂರ್ಣಗೊಳಿಸಿ, ಚಿತ್ರದ ಚಿತ್ರೀಕರಣ ಕಾರ್ಯಕ್ಕೆ ಚಾಲನೆ ನೀಡಿದೆ.

ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ, ನಟ ಕುಮಾರ್ ಬಂಗಾರಪ್ಪ, ಹಿರಿಯ ನಟ ದೊಡ್ಡಣ್ಣ ಮೊದಲಾದ ಕಲಾವಿದರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆದ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ, ಹಿರಿಯ ನಟ ಶ್ರೀನಾಥ್ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ. ಹೆಚ್. ಮುನಿಯಪ್ಪ, ಶಾಸಕ ಎಲ್. ಶಿವರಾಮೇ ಗೌಡ, ‘ಕರ್ನಾಟಕ ರಾಜ್ಯ ಸರ್ಕಾರತಿ ಪಡಿತರ ವಿತರಕರ ಒಕ್ಕೂಟ’ದ ಅಧ್ಯಕ್ಷ ಟಿ. ಕೃಷ್ಣಪ್ಪ, ನಿರ್ಮಾಪಕ ಭಾ. ಮ. ಹರೀಶ್, ಭಾ. ಮ. ಗಿರೀಶ್ ಸೇರಿದಂತೆ ಅನೇಕರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಜಯಶಂಕರ ಟಾಕೀಸ್’ ಬ್ಯಾನರಿನಲ್ಲಿ ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಿಸುತ್ತಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾಕ್ಕೆ ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ ‘ತಾಯವ್ವ’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ಸಾತ್ವಿಕ್ ಪವನ್ ಕುಮಾರ್ ಈ ಸಿನಿಮಾಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಅನಂತ ಆರ್ಯನ್ ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದು ಕಂಟೆಂಟ್ ಆಧಾರಿತ ಸಿನಿಮಾ, ಇಲ್ಲಿ ಹೇಳೋಕೆ ಹತ್ತಾರು ವಿಷಯಗಳಿವೆ…
‘ನನಗೆ ಇದೊಂದು ಹೊಸಥರದ ಪಾತ್ರ ಇಲ್ಲಿಯವರೆಗೆ ನಾನೆಂದೂ, ಈ ಥರದ ಪಾತ್ರಗಳನ್ನು ಮಾಡಿರಲಿಲ್ಲ. ಪಕ್ಕಾ ಹಳ್ಳಿಯ ಹೆಣ್ಣು ಮಗಳೊಬ್ಬಳು ತನ್ನ ಊರಿನ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ವ್ಯವಸ್ಥೆಯಲ್ಲಿ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಹೇಗೆ ಎದುರಿಸಿ, ಬಡ ಮತ್ತು ಜನಸಾಮಾನ್ಯರಿಗೆ ನ್ಯಾಯ ಒದಗಿಸುತ್ತಾಳೆ ಎಂಬುದು ನನ್ನ ಪಾತ್ರ. ನಾನು ಈ ಸಿನಿಮಾದಲ್ಲಿ ಪಾರ್ವತಿ ಎಂಬ ಹಳ್ಳಿಯ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮೊದಲ ಬಾರಿಗೆ ಕರ್ನಾಟಕದ ಅಪ್ಪಟ ಗ್ರಾಮೀಣ ಸೊಗಡಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ತುಂಬ ಎಕ್ಸೈಟ್ ಆಗಿದ್ದೇನೆ.

ಈ ಸಿನಿಮಾದ ಕಥೆ ಮತ್ತು ಪಾತ್ರ ನನಗೆ ತುಂಬ ಇಷ್ಟವಾಗಿದ್ದು, ತೆರೆಮೇಲೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಹೇಗೆ ಬರಬಹುದು ಎಂಬ ಕುತೂಹಲ ನನಗೂ ಇದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇದೊಂದು ಕಂಟೆಂಟ್ ಆಧಾರಿತ ಸಿನಿಮಾ. ಈ ಸಿನಿಮಾದಲ್ಲಿ ಹತ್ತಾರು ವಿಷಯಗಳಿವೆ. ಆ ವಿಷಯಗಳು ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತಿದೆ.’
ಈ ವೇಳೆ ಮಾತಾಡಿದ ನಟಿ ರಾಗಿಣಿ ವಿಭಿನ್ನ ಸಿನಿಮಾಗಳ ಸಾಲಿನಲ್ಲಿ ನಿಲ್ಲುವಂಥ ಸಿನಿಮಾವಾಗಲಿದೆ ಎಂಬ ವಿಶ್ವಾಸ…
‘ಸಿನಿಮಾದ ಹೆಸರೇ ಹೇಳುವಂತೆ ಇದು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯ ಸುತ್ತ ನಡೆಯುವ ಕಥೆಯನ್ನು ಹೊಂದಿದ ಸಿನಿಮಾ. ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಯಾರಿಗಾಗಿ ಇದೆ? ಯಾವ ಉದ್ದೇಶಕ್ಕಾಗಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯನ್ನು ತೆರೆಯಲಾಗಿದೆ? ಈ ವ್ಯವಸ್ಥೆ ಹೇಗಿರಬೇಕು? ಅದರಲ್ಲಿರುವ ಲೋಪಗಳೇನು? ಎಂಬುದನ್ನು ತಿಳಿಸುವುದೇ ಈ ಸಿನಿಮಾದ ಉದ್ದೇಶ.

ಇದು ಕೇವಲ ಸಿನಿಮಾ ಮಾತ್ರವಲ್ಲ. ಜನರಿಗೆ ಈ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಒಳ-ಹೊರ ವ್ಯವಸ್ಥೆಯನ್ನು ಪರಿಚಯಿಸುವ ಒಂದು ಕಾರ್ಯಕ್ರಮ. ಬಹಳ ವರ್ಷಗಳ ನಂತರ ಇಂಥದ್ದೊಂದು ಸದಭಿರುಚಿ ಸಿನಿಮಾದಲ್ಲಿ ಒಂದು ಪಾತ್ರವಾಗಿ ಅಭಿನಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ಸಿನಿಮಾದಲ್ಲಿ ಜನಸಾಮಾನ್ಯನರ ಹೋರಾಟವಿದೆ. ಹೋರಾಟದ ಮೂಲಕ ಗೆಲ್ಲಬಹುದು ಎಂದು ಹೇಳುವಂಥ ಯಶಸ್ಸಿನ ಕಥೆಯಿದೆ. ಖಂಡಿತವಾಗಿಯೂ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ಸಿನಿಮಾಗಳ ಸಾಲಿನಲ್ಲಿ ನಿಲ್ಲುವಂಥ ಸಿನಿಮಾವಾಗಲಿದೆ ಎಂಬ ವಿಶ್ವಾಸವಿದೆ ಎಂದರು ರಾಗಿಣಿ.
ನಂತರ ಮಾತಾಡಿದ ಕುಮಾರ್ ಬಂಗಾರಪ್ಪ ಮನ ಮುಟ್ಟುವ ಮಹಿಳಾ ಪ್ರಧಾನ ಕಥೆಯ ಸುತ್ತ ಸಾಗುವಂತಹ,
‘ಇದೊಂದು ಗ್ರಾಮೀಣ ಹಿನ್ನೆಲೆಯಲ್ಲಿ ಮಹಿಳಾ ಪ್ರಧಾನ ಕಥಾಹಂದರದ ಫ್ಯಾಮಿಲಿ ಡ್ರಾಮಾ. ನಮ್ಮ ನಡುವೆಯೇ ನಡೆಯುವಂಥ ಅನೇಕ ವಿಷಯಗಳನ್ನು ಈ ಸಿನಿಮಾದಲ್ಲಿ ಚರ್ಚಿಸಿದ್ದೇವೆ.

ಈ ಸಿನಿಮಾ ಪ್ರತಿಯೊಬ್ಬ ನೋಡುಗರನ್ನೂ ಯೋಚಿಸುವಂತೆ ಮಾಡುತ್ತದೆ. ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಈ ಸಿನಿಮಾ ಬಹುಬೇಗ ಮನಮುಟ್ಟುತ್ತದೆ. ಇನ್ನೊಂದು ವಿಶೇಷವೆಂದರೆ, ಇಬ್ಬರು ಮಹಿಳೆಯರೇ ಸೇರಿ ಇಂಥದ್ದೊಂದು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಮಹಿಳಾ ಕೇಂದ್ರಿತ ಕಥೆ ಮತ್ತು ಪಾತ್ರಗಳೇ ಈ ಸಿನಿಮಾದಲ್ಲಿ ಹೈಲೈಟ್ ಆಗಿರಲಿದೆ. ನಟ ಅಂಬರೀಶ್ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆ ಸುತ್ತಮುತ್ತ ಸುಮಾರು 35 ದಿನಗಳ ಕಾಲ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಮುಹೂರ್ತದ ಬಳಿಕ ಒಂದೇ ಹಂತದಲ್ಲಿ ಈ ಸಿನಿಮಾದ ಇಡೀ ಚಿತ್ರೀಕರಣ ನಡೆಯಲಿದೆ. ಇದೇ ವರ್ಷದ ಕೊನೆಯೊಳಗೆ ಈ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಿದೆ ಎಂದರು.

ನಿರ್ದೇಶಕ ಸಾತ್ವಿಕ್ ಪವನ್ ಕುಮಾರ್, ಜನ ಇಂಥ ಸಿನಿಮಾಗಳನ್ನು ಬೆಂಬಲಿಸುತ್ತಾರೆ…
”ಸರ್ಕಾರಿ ನ್ಯಾಯಬೆಲೆ ಅಂಗಡಿ’ಯ ಕಥೆ ತುಂಬ ಇಷ್ಟವಾಯಿತು. ಇದು ನಮ್ಮ ಸಮಾಜದ ನಡುವಿನ ಕಥೆಯನ್ನು ಹೇಳುವಂಥ ಸಿನಿಮಾ. ಈ ಸಿನಿಮಾ ಮನರಂಜನೆಯ ಜೊತೆಗೆ ಮಾಹಿತಿಯನ್ನೂ, ಜೊತೆಗೊಂದು ಸಂದೇಶವನ್ನೂ ಕೊಡುತ್ತದೆ. ಹಾಗಾಗಿ ಇಂಥ ಅಪರೂಪದ ಕಥೆಯನ್ನು ಸಿನಿಮಾ ಮಾಡಲು ಮುಂದಾದೆವು. ನಮ್ಮ ನಿರೀಕ್ಷೆಯಂತೆ ಈ ಸಿನಿಮಾ ನೋಡುಗರಿಗೂ ಇಷ್ಟವಾಗುತ್ತದೆ.

ಜನ ಇಂಥ ಸಿನಿಮಾಗಳನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ಆದಷ್ಟು ಬೇಗ ಸಿನಿಮಾದ ಎಲ್ಲಾ ಕೆಲಸಗಳನ್ನು ಮುಗಿಸಿ, ಈ ವರ್ಷದ ಕೊನೆಯೊಳಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತೇವೆ ಎಂದರು.
ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಚಂದ್ರಶೇಖರ್, ನಿರ್ಮಾಪಕಿಯರಾಗಿ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.