S/O Muttanna’s song in Sanchit Hegde voice. ಸಂಚಿತ್ ಹೆಗ್ಡೆ ಧ್ವನಿಯಲ್ಲಿ “S\O ಮುತ್ತಣ್ಣ”ನ ಹಾಡು .
ಸಂಚಿತ್ ಹೆಗ್ಡೆ ಧ್ವನಿಯಲ್ಲಿ “S\O ಮುತ್ತಣ್ಣ”ನ ಹಾಡು .
ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S\O ಮುತ್ತಣ್ಣ” ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ “ಒನ್ ಅಂಡ್ ಓನ್ಲಿ ಸುಖ” ಎಂಬ ಹಾಡನ್ನು ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ಗಾಯಕ ಸಂಚಿತ್ ಹೆಗ್ಡೆ ಹಾಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಂಡಿರುವ ಈ ಚಿತ್ರ ಶ್ರೀಘ್ರದಲ್ಲೇ ತೆರೆಗೆ ಬರಲಿದೆ.

ತಂದೆ – ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಕ್ತಾಯವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಜಾಕ್ ಮಂಜು ಅವರ ನೇತೃತ್ವದ ಶಾಲಿನಿ ಆರ್ಟ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡಲಿದೆ.
ಪುರಾತನ ಫಿಲಂಸ್ ನಿರ್ಮಾಣ ಮಾಡಿರುವ ಸಿನಿಮಾಗೆ ಎಸ್ ಅರ್ ಕೆ ಫಿಲಂಸ್ ಸಾಥ್ ನೀಡಿದೆ.

ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ “ದಿಯಾ” ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ, ಸಂದೀಪ ಮಂಜುನಾಥ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ.