Maharaja movie review. “ಮಾರುತ ಚಿತ್ರ ವಿಮರ್ಶೆ” “ಮೌನ, ಮಾತು, ಹುಡುಕಾಟಗಳ ನಡುವೆ, ಹೆಣ್ಮಕ್ಕಳ ಕಣ್ಮರೆ”
ಚಿತ್ರ – ಮಾರುತ
ನಿರ್ಮಾಪಕರು – ಕೆ.ಮಂಜು, ರಮೇಶ್ ಯಾದವ್
ನಿರ್ದೇಶನ – S. ನಾರಾಯಣ್
ಛಾಯಾಗ್ರಹಣ – P.K.H. ದಾಸ್
ಸಂಗೀತ – S. ನಾರಾಯಣ್, ನಕುಲ್, ಜೆಸ್ಸಿಗಿಫ್ಟ್
ಸಂಕಲನ – ಶಿವು ಯಾದವ್
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು :- ವಿ. ರವಿ ಚಂದ್ರನ್, ತಾರಾ ಅನುರಾಧ, ದುನಿಯಾ ವಿಜಯ್, ಶ್ರೇಯಸ್ ಮಂಜು, ರಂಗಾಯಣ ರಘು, ಸಾಧುಕೋಕಿಲ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಬೃಂದಾ ಆಚಾರ್ಯ, ನಿಶ್ವಿಕಾ ನಾಯ್ಡು, ಸುಜಯ್ ಶಾಸ್ತ್ರಿ, ಕಲ್ಯಾಣಿ ಮುಂತಾದವರು.
ಹಿರಿಯ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನದಲ್ಲಿ ಈ ವಾರ ತೆರೆಕಂಡ 51ನೇ ಚಿತ್ರ “ಮಾರುತ”
ಮಾರುತ ಅಂದ್ರೆ ಆನೆಯನ್ನು ಪಳಗಿಸಿ ತನ್ನ ಹಿಡಿತದಲ್ಲಿ ಇಟ್ಟು ಕೊಳ್ಳುವವನು ಎಂದರ್ಥ. ಇಲ್ಲಿ ಒಂದು ರೀತಿಯಲ್ಲಿ ಎಸ್. ನಾರಾಯಣ್ ರವರೇ ಚಿತ್ರದ ಮಾರುತ ಅನ್ನಿಸುವುದಂತು ನಿಜ.
ಇದು ಇಂದಿನ ಪೀಳಿಗೆಯ ಮೊಬೈಲ್, ಸೋಷಿಯಲ್ ಮೀಡಿಯಾದ ಕರ್ಮದ ಕಥೆ.

ಗೊತ್ತು ಪರಿಚಯ ಇಲ್ಲದವರ ಹೊಗಳಿಕೆಯ ಕಾಮೆಂಟ್ಸ್ ಗಳಿಗೆ ಸಿಲುಕಿ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುವ ಹೆಣ್ಣು ಮಕ್ಕಳ ಆನ್ ಲೈನ್ ಪ್ರೀತಿ, ಪ್ರೇಮಗಳಿಂದಾಗುವ ಗಂಡಾಂತರಗಳ ಬಗ್ಗೆ ನಿರ್ದೇಶಕ ಎಸ್. ನಾರಾಯಣ್ ಎಚ್ಚರಿಸುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಿದ್ದಾರೆ.
ಇದು ನಿಜಕ್ಕೂ ಗಂಬೀರವಾದ ವಿಚಾರ, ಜಾಲತಾಣಗಳ ಮೂಲಕ ಅನಾಮಧೇಯರ ಆಕರ್ಷಕ ಕಾಮೆಂಟ್ಸ್ ಗಳಿಗೆ ಸೋತ ಹೆಣ್ಣುಮಕ್ಕಳು, ನಿಗೂಡವಾಗಿ ನಾಪತ್ತೆಯಾಗುತ್ತಿರುವ ಹಾಗೂ ಮೋಸ ಹೋಗಿ ಮಾನ, ಪ್ರಾಣ ಕಳೆದುಕೊಳ್ಳುತ್ತಿರುವ ವಿಚಾರವನ್ನು ಎಸ್. ನಾರಾಯಣ್ ಸಿನಿಮಾ ಮೂಲಕ ಸಮಾಜದ ಹೆಣ್ಣುಮಕ್ಕಳನ್ನು ಹಾಗೂ ಹೆತ್ತವರನ್ನು ಎಚ್ಚರಿಸುವಂತ ಕೆಲಸ ಮಾಡಲು ಹೊರಟಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ನಿರೂಪಿಸಿದ್ದರೆ ಒಂದು ದೊಡ್ಡ ಅಲೆಯನ್ನೇ ಈ ಸಿನಿಮಾ ಎಬ್ಬರಿಸುತಿತ್ತು.
ಆದರೆ ಎಸ್. ನಾರಾಯಣ್ 51ನೇ ಚಿತ್ರವಾದರೂ ಅವರು ಅವರೇ ನೆಟ್ಟಿರುವ ಆಲದ ಮರ ಬಿಟ್ಟು ಹೊರಗೆ ಬಂದಿಲ್ಲ.
ಇಂದು ಸಿನಿಮಾ ನೋಡುಗರ, ಸಿನಿಮಾ ಮಾಡುಗರ ದುನಿಯಾ ಬದಲಾಗಿದೆ. ಅನ್ನುವುದು ಅವರ ಗಮನಕ್ಕೆ ಬಂದಿಲ್ಲ ಅನಿಸುತ್ತದೆ.
ಒಬ್ಬ ನುರಿತ, ಹಿರಿಯ ನಿರ್ದೇಶಕ ಒಂದು ಒಳ್ಳೆಯ ಕಥೆಯನ್ನು ತೆರೆಗೆ ತರುವಲ್ಲಿ ನಿರೂಪಣಾ ಹಂತದಲ್ಲಿ ಮತ್ತೊಂದಿಷ್ಟು ಗಮನ ನೀಡಬೇಕಿತ್ತು ಅನ್ನಿಸುವುದಂತು ನಿಜ.
ಒಂದೇದಿನ ಬೆಂಗಳೂರಿನಲ್ಲಿ 8 ಜನ ಹುಡುಗಿಯರು ಕಾಣೆಯಾಗುತ್ತಾರೆ. ಅವರೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೋ ಕುಳಿತವರ ಗಾಳಕ್ಕೆ ಸಿಲುಕಿ ಮಾಯವಾಗಿರುತ್ತಾರೆ.
ಈ ಸಮಸ್ಯೆಯ ನಿಗೂಡತೆಯನ್ನು ಬೇದಿಸಲು
ದುನಿಯಾ ವಿಜಯ್ ರನ್ನು ಕ್ಯಾಫ್ಟನ್ ಮಾಡಿದ್ದಾರೆ.
ವಿಜಯ್ ಒಬ್ಬ ಪೋಲೀಸ್ ಅಧಿಕಾರಿಯಾಗಿ ಸೋಷಿಯಲ್ ಮೀಡಿಯಾಗಳ ಮೂಲಕ ಟ್ರ್ಯಾಪ್ ಆಗುತ್ತಿರುವ ಹೆಣ್ಣು ಮಕ್ಕಳನ್ನು ಕಾಪಾಡುವ ಆಪರೇಷನ್ ಗೆ ಪೋಲೀಸ್ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಪೋಲೀಸ್ ಕಾಪ್ ಆಗಿ ದುನಿಯಾ ವಿಜಯ್ ಘರ್ಜಿಸಿದ್ದಾರೆ ಅನ್ನೋದಕ್ಕಿಂತ ಹಲವಾರು ಸೀನ್ ಗಳಲ್ಲಿ ಅವರು ಮಾತಾಡುವುದೇ ಇಲ್ಲ.
ಡೈಲಾಗ್ ಮರೆತವರಂತೆ, ಅಥವಾ ನಿರ್ದೇಶಕರು ಡೈಲಾಗ್ ಬರೆಯಲು ಮರೆತು ಹೋದರೆ ಅನ್ನಿಸುತ್ತದೆ.
ಅವರ ಪಾತ್ರ ತುಂಬಾ ಸಪ್ಪೆಯೆನಿಸುತ್ತದೆ. ದ್ವಿತಿಯಾರ್ಧದಲ್ಲಿ ಸ್ವಲ್ಪ ಅವರ ಅಭಿಮಾನಿಗಳಿಗೆ ಸಮಾಧಾನ ತರಲು ಪ್ರಯತ್ನಿಸಿದ್ದಾರೆ.

ನಿರ್ದೇಶಕರು ಒಬ್ಬ ಮಾಸ್ ಹೀರೋನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೇ..?
ಶ್ರೇಯಸ್ ಚಿತ್ರದ ಮತ್ತೊಬ್ಬ ಯುವ ನಟನಾಗಿ ಒನ್ ವೇ ಲವ್ವರ್ ಬಾಯ್ ಆಗಿ ಡ್ಯಾನ್ಸು, ಫೈಟು, ಒಂದಷ್ಟು ಎಡವಟ್ಟು ಅದರಿಂದಾಗಿ ಒಂದಷ್ಟು ಕಗ್ಗಂಟು ಎಲ್ಲಕ್ಕೂ ಕಾರಣಕರ್ತನಾಗಿ ಪಾತ್ರ ನಿರ್ವಹಿಸಿದ್ದಾರೆ.
ಇಂಜಿನಿಯರ್ ಓದಲು ಅಪ್ಪ ಆಸ್ತಿ ಅಡವಿಟ್ಟು ಕಷ್ಟಪಟ್ಟು ಕಾಲೇಜಿಗೆ ಕಳಿಸಿದರೆ ಈತನಿಗೆ ರವಿಚಂದ್ರನ್ ಮೇಲೆ ಅಭಿಮಾನ, ಅವರಂತೆ ನಿರ್ದೇಶಕನಾಗಬೇಕು, ಎನ್ನುವ ಕನವರಿಕೆಯಲ್ಲಿ, ರೀಲ್ಸ್, ಶಾರ್ಟ್ ಮೂವಿ ಮಾಡುವ ಹುಚ್ಚಾಟದಲ್ಲಿ ಚಿತ್ರದೊಳಗೆ ಅಮ್ಮನ ಹಣ, ಚಿತ್ರ ಮಾಡಲು ನಿರ್ಮಾಪಕರ ಹಣ ವೃಥಾ ವ್ಯಯವಾಗಿದೆ.
ಎದುರು ಮನೆಯ ಹುಡುಗಿ ಬೃಂದಾ ಆಚಾರ್ಯರನ್ನು ಪಟಾಯಿಸುತ್ತಲೇ, ಸಂಭಂದವಿಲ್ಲದಿದ್ದರೂ ಹುಡುಗಿಯೊಂದಿಗೆ ಓಡಿ ಹೋಗಿದ್ದಾನೆ ಎಂಬ ಆರೋಪದಿಂದ ಊರಿನ ಜನರ ಪಟಾಲಮ್ಮಿನ ಕೆಂಗಣ್ಣಿಗೆ ಬಲಿಯಾಗಿ, ಹುಚ್ಚು ಹುಚ್ಚಾಗಿ ಆಡುವ ಸೋಧರ ಮಾವನ ಒಂದಷ್ಟು ಎಡವಟ್ಟುಗಳಿಂದ ಏನೆಲ್ಲಾ ಅನುಭವಿಸುತ್ತಾನೆ, ತಾನು ಪ್ರೀತಿಸುವ ಹುಡುಗಿಯ ಲವ್ವರ್ ಅನ್ನು ಹುಡುಕಿ ಕೊಡಲು ನಿರಂತರವಾಗಿ ಹಾರಾಡಿ, ಹೋರಾಡಿ ಶ್ರಮಿಸುವ ಪಾತ್ರಕ್ಕೆ ಸಾಕೆನಿಸುವಷ್ಟು ಅಬ್ಬರಿಸಿದ್ದಾರೆ.
ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ನಿರ್ದೇಶಕರು ಅಭಿನಯ ತೆಗೆಸಿದ್ದಾರೆ.
ಇನ್ನು ಬೃಂದಾ ಆಚಾರ್ಯ ಕಥಾ ನಾಯಕಿ ಮತ್ತು ಸಮಸ್ಯೆಗಳ ಕೇಂದ್ರ ಬಿಂದು ಎನ್ನಬಹುದು.
ಸೋಷಿಯಲ್ ಮೀಡಿಯಾದಲ್ಲಿ ಅದ್ಯಾವನೋ ತಲೆ ಮಾಸಿದವನ ಹೊಗಳು ಮಾತುಗಳಿಗೆ ಮನ ಸೋತು ಮನೆ ಬಿಟ್ಟು ಹೋಡಿ ಹೋದ ಹೆಣ್ಣು ಮಗಳು.
ಅದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ, ಯಾರೆಲ್ಲಾ ಈಕೆಯನ್ನು ಕಾಪಾಡಲು ಶ್ರಮಿಸುತ್ತಾರೆ, ಅವಳ ಪ್ರೇಮಿಯನ್ನು ಹುಡುಕಿ ಇಬ್ಬರನ್ನು ಒಂದು ಮಾಡುತ್ತಾರಾ,
ಈ ಪಾತ್ರದಿಂದ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆಯಂತಹ ಕೃತ್ಯಗಳಿಗೆ ಪುಲ್ ಸ್ಟಾಪ್ ಇಡುತ್ತಾರಾ..? ಇದೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲು ಮಾರುತ ಚಿತ್ರವನ್ನು ಚಿತ್ರ ಮಂದಿರದಲ್ಲಿ ನೋಡ ಬೇಕಾಗುತ್ತದೆ.
ಇನ್ನು ಚಿತ್ರದುದ್ದಕ್ಕೂ ಅತಿಯೆನಿಸುವಷ್ಟು ಸಾಧುಕೋಕಿಲ ಅವರ ಹಾಸ್ಯ, ಮಾಮೂಲಿಯಂತಿದೆ.
ಸಾಧು ಕಥಾ ನಾಯಕನ ಸೋಧರ ಮಾವನ ಪಾತ್ರದಲ್ಲಿ ಈಡೀ ಸಿನಿಮಾ ಆವರಿಸಿಕೊಂಡಿದ್ದಾರೆ.
ಸಾಧು ಕಾಮಿಡಿಯಿಂದಲೇ ಸ್ವಲ್ಪ ಚಿತ್ರ ಸಾಗುತ್ತದೆ ಕೂಡ. ಆದರೆ ಸಹಿಸಿಕೊಳ್ಳದೇ ಬೇರೆ ವಿಧಿಯಿಲ್ಲ.
ಇಲ್ಲಿ ರಂಗಾಯಣ ರಘುರವರ ಪಾತ್ರವನ್ನು ತುಂಬಾ ಸಪ್ಪೆಯಾಗಿಸಿದ್ದಾರೆ. ಒಬ್ಬ ಒಳ್ಳೆಯ ನಟನನ್ನು ಕಥೆಯಲ್ಲಿ ಸರಿಯಾಗಿ ಬಳಸಿಕೊಂಡಿಲ್ಲ.
ರಂಗಾಯಣ ರಘುರವರು ಯಾವ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬಿ ಬಿಡುತ್ತಾರೆ. ಆದರೆ ಇಲ್ಲಿ ಅವರ ಪಾತ್ರವೇ ತುಂಬಾ ಗೌಣವಾಗಿದೆ ಎನ್ನುವುದು ಅವರ ಅಭಿಮಾನಿಗಳಿಗೆ ಬೇಸರದ ವಿಷಯ.
ಶರತ್ ಲೋಹಿತಾಶ್ವ ನಾಯಕನ ಅಪ್ಪನಾಗಿ, ಚಿಲ್ಲರೆ ಅಂಗಡಿಯಲ್ಲಿ ಪೊಟ್ಟಣ ಕಟ್ಟುವಂತ ಪಾತ್ರದ ಮೂಲಕ ಎಸ್. ನಾರಾಯಣ್ ರವರ ನಿರ್ದೇಶನದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ.
ತಾರಾ ಮತ್ತು ಶರತ್ ಲೋಹಿತಾಶ್ವ ರವರ ಕಾಂಬಿನೇಷನ್ ಮೊದಲ ಬಾರಿಯಾದರೂ ಹೊಸತನದಿಂದ ಕೂಡಿದೆ. ತಾರಾ ನಾಯಕನ ಅಮ್ಮನ ಪಾತ್ರಕ್ಕೆ ಕಳೆಕಟ್ಟಿದ್ದಾರೆ. ಎಲ್ಲಾ ಗಂಡು ಮಕ್ಕಳು ಹಾಳಾಗೋಕೆ ಅಮ್ಮಂದಿರ ಅತಿಯಾದ ಪ್ರೀತಿ ಎನ್ನುವುದನ್ನು ಚನ್ನಾಗಿ ಮನದಟ್ಟು ಮಾಡಿದ್ದಾರೆ.
ಇನ್ನು ಪ್ರಮೋದ್ ಶೆಟ್ಟಿ ನಾಯಕಿಯ ತಂದೆಯಾಗಿ, ಪಕ್ಕದ ಮನೆಯ ನೇಬರ್ ಆಗಿ ಕೊನೆಗೆ ಶರತ್ ಲೋಹಿತಾಶ್ವ ರವರ ಬೀಗರಾಗುವ ಪಾತ್ರಕ್ಕೆ ಜೈ ಅಂದಿದ್ದಾರೆ.
ಇನ್ನು ರವಿ ಚಂದ್ರನ್ ಅತಿಥಿಯಾಗಿ ಚಿತ್ರದಲ್ಲಿ ನಿಜ ಜೀವನದ ವೃತ್ತಿ ಬದುಕಿನ ಪಾತ್ರಕ್ಕೆ ಬಣ್ಣ ಹಚ್ಚಿ ಗ್ಲಾಮರ್ ತನವನ್ನು ಕಾಪಾಡಿಕೊಂಡಿದ್ದಾರೆ.
ಅಭಿಮಾನಿಗೆ ಮೊದಲು ನಿಮ್ಮ ತಂದೆ ತಾಯಿಯನ್ನು ಪ್ರೀತಿಸಿ ಚನ್ನಾಗಿ ಓದಿ, ಅವರ ಕಣ್ಣಲ್ಲಿ ನೀರು ತರಿಸಬೇಡಿ ನನ್ನ ಅಭಿಮಾನಿ ನನ್ನನ್ನು ಫಾಲೋ ಮಾಡೋದಾದರೆ ಹೆತ್ತವರನ್ನು ಗೌರವಿಸಿ ಎನ್ನುವ ಸಂದೇಶವನ್ನು ಅವರ ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ಹೇಳಿದ್ದಾರೆ
ನಿಶ್ವಿಕಾ ನಾಯ್ಡು ಕೂಡ ಅತಿಥಿ ನಟಿಯಾಗಿ ಹೀಗೆ ಬಂದು ಹಾಗೇ ಮಾಯವಾಗುತ್ತಾರೆ.
ಸಂಗೀತದ ಬಗ್ಗೆ ಮಾತಾಡುವುದಾದರೆ ಮೂರು ಜನ ಮನೆಯೊಂದು ಮೂರು ಬಾಗಿಲು ಎಂಬಂತೆ ಹಂಚಿಕೊಂಡಿದ್ದಾರೆ.
ಜೆಸ್ಸಿಗಿಫ್ಟ್ ಇಲ್ಲಿ ಸಂಗೀತದ ಜವಾಬ್ಧಾರಿಯನ್ನು ಎರಡು ಹಾಡುಗಳಿಗೆ ನಿರ್ವಹಿಸಿದ್ದಾರೆ.
ಇನ್ನು ಉಳಿದ ಹಾಡುಗಳಿಗೆ ಸಂಗೀತ ನೀಡಿರುವುದು ನಿರ್ದೇಶಕ ಎಸ್. ನಾರಾಯಣ್.
ಇದರಿಂದಾಗಿಯೇ ಅವರಿಗೆ ಕಥೆಯ ನಿರೂಪಣೆಗೆ ಸಮಯ ಸಾಕಾಗಲಿಲ್ಲ ಅನ್ನಿಸುತ್ತದೆ.
ಹಿನ್ನೆಲೆ ಸಂಗೀತ ನಕುಲ್ ಮಾಡಿದ್ದಾರೆ.
ಹಾಗೆಯೇ ಹಿರಿಯ ಛಾಯಾಗ್ರಾಹಕ P.K.H. ದಾಸ್ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಯುವ ಸಂಕಲನಕಾರ ಶಿವು ಯಾದವ್ ಚನ್ನಾಗಿ ದೃಶ್ಯಗಳನ್ನು ಜೋಡಿಸಿ ಚಿತ್ರವನ್ನು ಸರಾಗವಾಗಿ ನೋಡುವಂತೆ ಮಾಡಿದ್ದಾರೆ..
ನಿರ್ಮಾಪಕರಾದ ಕೆ. ಮಂಜು, ಹಾಗೂ ರಮೇಶ್ ಯಾದವ್ ಚಿತ್ರಕ್ಕೆ ಸಾಕಷ್ಟು ಹಣ ಹರಿಸಿದ್ದಾರೆ. ಈ ಇಬ್ಬರು ಒಳ್ಳೊಳ್ಳೆಯ ಸೂಪರ್ ಹಿಟ್ಟ್ ಸನಿಮಾಗಳನ್ನು ನಿರ್ಮಿಸಿದ್ದಾರೆ. ಮೊದಲ ಬಾರಿಗೆ ಇಬ್ಬರೂ ಜಂಟಿಯಾಗಿ ಕೈ ಜೋಡಿಸಿದ್ದಾರೆ.
ಒಟ್ಟಿನಲ್ಲಿ ಒಂದು ಜವಾಬ್ಧಾರಿಯುತ, ಸಾಮಾಜಿಕ ಸಂದೇಶವನ್ನು ಹೊತ್ತ ಮಾರುತ ತೆರೆ ಕಂಡಿದೆ. ಇದನ್ನು ಎಲ್ಲಾ ವರ್ಗದ ಜನರು ನೋಡಿ ಎಚ್ಚರಿಕೆಯ ಹೆಜ್ಜೆಗಳನ್ನು ಬದುಕಿನಲ್ಲಿ ಇಡಬೇಕೆಂಬ ಗಮನಾರ್ಹವಾದ ಅಂಶ ಚಿತ್ರದಲ್ಲಿದೆ..











