Mahadeva movie review ಮಾದೇವ ಚಿತ್ರ ವಿಮರ್ಶೆ. ಕೊಲ್ಲುವವನು ಇವನೇ, ಕಾಯುವವನು ಇವನೇ Rating – 4/5

ಮಾದೇವ
ಇದೊಂತರ ನಟ ರಾಕ್ಷಸರು ಅಭಿನಯಿಸಿರುವ ಚಿತ್ರ ಅಂತ  ಹೇಳಬಹುದು. ಒಂದು ಕಡೆ ಹಿರಿಯ ನಟಿ ಶೃತಿ, ಮತ್ತೊಂದು ಕಡೆ ಮತ್ತೊಬ್ಬ ಆಕ್ಷನ್ ಕ್ವೀನ್ ಮಾಲಾಶ್ರೀ, ಚಿತ್ರದ ಕಥಾ ನಾಯಕ ವಿನೋದ್ ಪ್ರಭಾಕರ್, ಹಾಗೂ ಶ್ರೀನಗರ ಕಿಟ್ಟಿ ಎಲ್ಲಾ ಒಂದೇ ಚಿತ್ರದಲ್ಲಿ ತಮ್ಮಗಳ ಅಭಿನಯವನ್ನು ತೆರೆಯ ಮೇಲೆ ಹರಿಸಿದ್ದಾರೆ.


ಶೃತಿ ಅವರು ಈ ಸಿನಿಮಾದಲ್ಲಿ  ಎರಡು ರೀತಿಯ ಪಾತ್ರಗಳನ್ನು
ನಿಭಾಯಿಸಿದ್ದಾರೆ.
ಈ ವರೆಗೂ ಶೃತಿಯವರನ್ನು  ಯಾರು ಈ ತರದ ಪಾತ್ರದಲ್ಲಿ  ನೋಡಿರಲಿಲ್ಲ ಎನ್ನಬಹುದು.

ಮಾದೇವ ಚಿತ್ರದಲ್ಲಿ ಶೃತಿ ಅಭಿನಯದ ಕೌಶಲ್ಯನವನ್ನು ಮೆರೆದಿದ್ದಾರೆ. ಬರೀ  ಅಳಮುಂಜಿಯಾಗಿ ನೋಡಿದ್ದ ಪ್ರೇಕ್ಷಕರು ಶೃತಿಯವರ ಅಭಿನಯಾದ ಮತ್ತೊಂದು ಮುಖವನ್ನು ಇಲ್ಲಿ ನೋಡಬಹುದು. ನಿರ್ದೇಶಕರು ಈ ಪಾತ್ರದ ಬೆಳವಣಿಗೆಯನ್ನು ಹಂತ ಹಂತವಾಗಿ ಮೇಲೆತ್ತಿದ್ದಾರೆ ಕೊನೆಗೆ ಶೃತಿಯವರ ಪಾತ್ರದ ಪರಕಾಯಕ್ಕೆ ಪ್ರೇಕ್ಷಕ ಬೆಚ್ಚಿ ಬೀಳುತ್ತಾನೆ ಅಷ್ಟು ಚನ್ನಾಗಿ ಶೃತಿ ಅಭಿನಯಿಸಿದ್ದಾರೆ.
2025ರ ರಾಜ್ಯ ಪ್ರಶಸ್ತಿಯಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಖಂಡಿತ ಶೃತಿಯವರಿಗೆ ಬರುತ್ತದೆ, ಬರಲೇಬೇಕು ಹಾಗಿದೆ ಅವರ ಅಭಿನಯ.

ವಿನೋದ್ ಪ್ರಭಾಕರ್ ಈ ಸಿನಿಮಾ ಮುಖಾಂತರ ಮತ್ತೊಂದು ರೀತಿಯ ತನ್ನ ಅಭಿನಯವನ್ನು ಪ್ರೇಕ್ಷಕರ‌ ಮುಂದಿಟ್ಟಿದ್ದಾರೆ.
ಅವರ ಅಭಿಮಾನಿಗಳಿಗಂತು ಹಬ್ಬ ಅಂತ ಹೇಳಬಹುದು ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಕಮ್ಮಿ ಮಾತಾಡ್ತಾರೆ ಅವರ ಕಣ್ಣು ಮುಖ ಭಾವನೆಗಳು ಮಾತಾಡುತ್ತವೆ ಇಲ್ಲಿ ಮಾತಿಗಿಂದ ಅವರ ಅಭಿನಯ ಮಾತಾಡುತ್ತದೆ.
ಮೌನವಾಗಿ, ಒರಟು ಸ್ವಭಾವದವನಾಗಿ, ದುಷ್ಟರನ್ನು ನಿರ್ದಯವಾಗಿ ಸದೆ ಬಡೆಯುವನಾಗಿ ಅಭಿಯಿಸುವುದರ ಜೊತೆಗೆ, ನಿಧಾನವಾಗಿ ನಾಯಕಿಯ ಪ್ರೀತಿಯಿಂದ ತನ್ನಲ್ಲಾಗುವ ಪ್ರೀತಿಯ ಅನುರಾಗದ, ಮಮತೆಯ, ಮಾನವೀಯತೆಯ ಪರಿವರ್ತನೆಯ ಬದಲಾವಣೆ ಹಾಗೆ ಚಿತ್ರದ ಕೊನೆಯಲ್ಲಿ ಬದಲಾಗುವ ರಾಕ್ಷಸತನದ ಪರಮಾವಧಿಯ ಅಭಿನಯದೊಂದಿಗೆ ಪಾತ್ರದಲ್ಲಿ ಜೀವಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇಲ್ಲೂ ಕೂಡ ನಿರ್ದೇಶಕ ನವೀನ್ ರೆಡ್ಡಿ ಪಾತ್ರದ ನಿರ್ವಹಣೆಯ ಗ್ರಾಫ್ ಅನ್ನೂ ಅದರ ಏರಿಳಿತವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ವಿನೋದ್ ಬಹುತೇಕ ಕಡೆ ತಮಗೆ ಅರಿವಿಲ್ಲದೇ ಅವರ ತಂದೆ ಟೈಗರ್ ಪ್ರಭಾಕರ್ ಅವರನ್ನು ನೆನಪಿಸುತ್ತಾರೆ. ಒಂದು “ಜಿದ್ದು” ಚಿತ್ರದಲ್ಲಿನ ರಾಕ್ಷಸತನ, ಮತ್ತು ಕರುಳಿನ ಕೂಗು ಚಿತ್ರದ ಮಾನವೀಯತೆಯನ್ನು ನೆನಪಿಸುತ್ತಾರೆ.
ನಿಜಕ್ಕೂ ವಿನೋದ್ ಪ್ರೇಕ್ಷಕರ ಮನ ಗೆಲ್ತಾರೆ.
ಈ ಸಿನಿಮಾದ ಅಭಿನಯಕ್ಕೆ ಈ ವರ್ಷದ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದಂತು ನಿಜ ಎನ್ನಬಹುದು.
ವಿನೋದ್ ಚಿತ್ರ ಜೀವನದ  ಮೈಲಿಗಲ್ಲು ಅಂತ ಹೇಳಬಹುದು ಇಂಥ ಒಂದು ಚಾಲೆಂಜಿಂಗ್ ಆದ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಆ ಪಾತ್ರ ನೋಡ್ತಾ ಇದ್ದಾಗ ಪ್ರೇಕ್ಷಕರಿಗೆ ಅನ್ಸುತ್ತೆ ಇದು ವಿನೋದ್ ಪ್ರಭಾಕರ್ ಅಲ್ದೆ ಬೇರೆ ಯಾರು ಮಾಡೋಕೆ ಆಗ್ತಿರಲಿಲ್ಲ ಯಾಕೆಂದ್ರೆ ಆ ಪಾತ್ರ ಅವರಿಗೆ ಸಾಟಿ.

ಇನ್ನೂ ಮಾಲಾಶ್ರೀ ಯವರು ತೆರೆ ಮೇಲೆ ಹಾಗೆ ಬಂದ್ರೆ ಮಿಂಚು ಬಂದ ಹಾಗಿರುತ್ತದೆ. ನಾನು ಕಾಲಿಟ್ಟ ಕಡೆಲೆಲ್ಲಾ ಧೂಳು ಎಬ್ಬಿಸಿ ಬಂದಿದ್ದೀನಿ ಅನ್ನೋ‍ ಡೈಲಾಗ್ ಕೇಳಿ ಅಭಿಮಾನಿಗಳು ಶಿಳ್ಳೆ ಹೊಡಿತಾರೆ. ಪೋಲೀಸ್ ಅಧಿಕಾರಿಯಾಗಿ ತೆರೆ ಮೇಲೆ ರಾರಾಜಿಸಿದ್ದಾರೆ.


ಇನ್ನು ಮತ್ತೊಬ್ಬ ನಟ ಶ್ರೀನಗರ ಕಿಟ್ಟಿ ಕಿಟ್ಟಿ ಅಭಿನಯಕ್ಕೆ ಹಾಗೂ ಮನಸ್ಥಿತಿಗೆ ಮೆಚ್ಚಬೇಕು. ತಾನು ಒಬ್ಬ ಹೀರೋ ಆಗಿದ್ದರೂ ಖಳನಟನಾಗಿ ತೆರೆಯ ಮೇಲೆ ಅಬ್ಬರಿಸಿದ್ದಾರೆ. ಅವರು ನಾಯಕನಾಗಿರುವ ಸಂಜು ವೆಡ್ಸ್ ಗೀತ ಚಿತ್ರ2 ಮತ್ತು ಖಳ ನಟನಾಗಿರುವ ಮಾದೇವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡಿವೆ. ಅದಕ್ಕೆ ಹೇಳಿದ್ದು ಅವರ ಮನಸ್ಥಿತಿಯ ಭಾವನೆಯನ್ನು ಮೆಚ್ಚಬೇಕು ಅಂತ ಯಾವ ನಟ ಕೂಡ ನಾಯಕನಾದ ಮೇಲೆ ಅದರಲ್ಲೂ ಚಾಲ್ತಿಯಲ್ಲಿರ ಬೇಕಾದರೆ ಖಳನಟನಾಗಿ ನಟಿಸುವುದಿಲ್ಲ. ಕಿಟ್ಟಿ ಚಿತ್ರದಲ್ಲಿ ಒಬ್ಬ ಡ್ರಗ್ಸ್ ಧಂದೆಕೊರನಾಗಿ ಖಳನಟನಾಗಿ ನಟಿಸಿದ್ದಾರೆ.

ಕಥಾ ನಾಯಕಿಯಾಗಿ ಸೋನೆಲ್ ಮಾಂತೇರೋ ಮೊದಲ ಬಾರಿಗೆ ಒಬ್ಬ ಸಾಮಾನ್ಯ ಹುಡುಗಿಯಾಗಿ ತನ್ನ ತಾಯಿಗಾಗಿ ಪರಿತಪಿಸುತ್ತಾ, ಒರಟುತನದ (ಮಾದೇವ) ವ್ಯಕ್ತಿಯ ಹಿಂದೆ ಬಿದ್ದು ಅವನನ್ನು ಸರಿಪಡಿಸಿ, ಅವನಲ್ಲಿ ಪ್ರೀತಿ ಅರಳಿಸಿ, ಅವನನ್ನು ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಬದಲಾಯಿಸಿ, ಮಾದೇವನ ಪಾರ್ವತಿಯ ಪಾತ್ರದಲ್ಲಿ ಚಿತ್ರದ ಪೂರ್ತಿ ಜವಾಬ್ದಾರಿಯ ಪಾತ್ರವನ್ನು ನಿಭಾಯುಸಿದ್ದಾರೆ. ಮತ್ತು ಇಲ್ಲಿ ಮಾಡ್ರನ್ ಆಗಿರದೆ ಕಥೆಗೆ ತಕ್ಕಂತೆ  ನಾಯಕಿ ಪಾತ್ರಕ್ಕೆ ಮೆರಗು ತಂದಿದ್ದಾರೆ.

ಇನ್ನು ಚಿತ್ರದಲ್ಲಿ ಸಂಗೀತ ಅಂತು ಸಿನಿಮಾದ ಒಂದು ಕಣ್ಣು ಒಂದು ಆಧಾರ ಸ್ಥಂಭ ಎನ್ನಬಹುದು, ಚಿತ್ರದಲ್ಲಿ ಎರಡು ಹಾಡುಗಳು ತುಂಬಾ ಮೆಲೊಡಿ ಯಾಗಿದ್ದರೆ, ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಸರಿ ಸಮನಾಗಿ ಸಾಥ್ ನೀಡಿದೆ. ಸಂಗೀತ ನಿರ್ದೇಶಕ ಪ್ರದ್ಯೋತ್ತನ್‍ ಗೆ ಒಳ್ಳೆ ಭವಿಷ್ಯ ಇದೆ ಎನ್ನಬಹುದು.

ಚಿತ್ರಕ್ಕೆ ಮತ್ತೊಂದು ಕಣ್ಣು ಛಾಯಾಗ್ರಾಹಕ ಬಾಲಕೃಷ್ಣ ತೋಟ ತಮ್ಮ ಕೈಚಳಕದಿಂದ ಚನ್ನಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಎಲ್ಲೂ ನೀರಸವಾದ ದೃಶ್ಯಗಳಿಲ್ಲದಂತೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ಕಲಾವಿದರಾಗಿ ಖಳನಟನಾಗಿ ಅಕ್ರೋಚ್ ಸುಧಿ, ಮಾದೇವನ ತಂದೆಯಾಗಿ, ಜೈಲಿನ ಪೋಲಿಸ್ ಆಗಿ ಮುನಿ, ರೈಲು ಒಇಡಿಸುವ ಚಾಲಕನಾಗಿ ಅಚ್ಯುತ್ ಮುಂತಾದವರು ಕಥೆಗೆ ಪೂರಕವಾಗಿ ಅಭಿನಯಿಸಿದ್ದಾರೆ.

ನಿರ್ದೇಶಕ ನವೀನ್ ರೆಡ್ಡಿ ಕಥೆಯನ್ನು ಚನ್ನಾಗಿ ಎಣೆದಿದ್ದಾರೆ. ಎಲ್ಲೂ ಚಿತ್ರದಲ್ಲಿ ಅನಾವಶ್ಯಕ ಡೈಲಾಗ್, ಹಾಗೂ ದೃಶ್ಯಗಳನ್ನು ತುರುಕಿಲ್ಲ. ವಿನೋದ್ ಒಬ್ಬ ಆಕ್ಷನ್ ಹೀರೋ ಅವರಿಗಾಗಿ ಯಾವುದೇ ಬಿಲ್ಡಪ್ ಸೀನ್ ಗಳಿಲ್ಲ, ಬೇಕಂತಲೇ ಫೈಟ್ ಗಳಿಲ್ಲ, ಕಥೆಗೆ ಸರಿಯಾಗಿ ಇಲ್ಲಿ ನಾಯಕ ಹೊಡೆಯಬೇಕು ಅಂತ ಪ್ರೇಕ್ಷಕರಿಗೂ ಅನ್ನಿಸುತ್ತದೆ ಅಂತ ಕಡೆ ಮಾತ್ರ ಕಥೆಗೆ ಪೂರಕವಾಗಿ ಆಕ್ಷನ್ ದೃಶ್ಯಗಳನ್ನು ನೈಜವಾಗಿ ಎಣೆದಿದ್ದಾರೆ, ಕಥೆಯ ನಿರೂಪಣೆ ಚನ್ನಾಗಿ ಮಾಡಿದ್ದಾರೆ. ಕಥೆಯಲ್ಲಿ ರಕ್ತಪಾತವಿದ್ದರೂ ಅದನ್ನು ವೈಭವಿಕರಿಸಿಲ್ಲ, ಕಥೆಯಲ್ಲಿ ಎಲ್ಲವನ್ನು, ಎಲ್ಲರನ್ನೂ ಕಳೆದುಕೊಂಡ ಮಗು ಇರುತ್ತದೆ ಆ ಮಗುವಿನ ಮನಸ್ಸಿಗೆ ಮತ್ತೆ ಘಾಸಿಯಾಗದಂತೆ ಚಿತ್ರದ ಎರಡು ಪ್ರಮುಖ ದೃಶ್ಯವನ್ನು ಚಿತ್ರೀಕರಿಸಿದ್ದಾರೆ, ಅತಿಯಾದ ಡೈಲಾಗ್ ಗಳಿಲ್ಲ ಒಂದು ಒಳ್ಲಕಯ ಕಥೆಯನ್ನು ಪ್ರೇಕ್ಷಕರಿಗೆ ಕಟ್ಟಿಕೊಡುವ ಮೂಲಕ ನಿರ್ದೇಶಕ ಯಶಸ್ವಿಯಾಗಿದ್ದಾರೆ ಎನ್ನಬಹುದು.

ಇನ್ನು ಚಿತ್ರದ ನಿರ್ಮಾಪಕ ಕೇಶವ ದೇವಸಂದ್ರ ಒಂದು ಒಳ್ಳೆಯ ಚಿತ್ರಕ್ಕೆ ಹಣ ಹರಿಸಿದ್ದಾರೆ, ರೈಲು, ರೈಲ್ವೇ ಸ್ಟೇಷನ್ ಹಲವಾರು ಸೆಟ್ ಗಳಿಗೆ ಧಾರಾಕಾರವಾಗಿ ಹಣ ವ್ವಯಿಸಿದ್ದಾರೆ. ಪ್ರೇಕ್ಷಕರು ಇಂತಹ ಒಳ್ಳೆಯ ಚಿತ್ರ ಮತ್ತು ಒಳ್ಳೆಯ ನಿರ್ಮಾಕರ ಕೈ ಹಿಡಿಯಬೇಕು.

ಕಥಾಸಾರಂಶ :- ಮಾದೇವ ಒಬ್ಬ ಭಾವನೆಗಳಿಲ್ಲದ ಒರಟ, ಕರುಣೆಯಿಲ್ಲದ ಕಟುಕ, ಬದುಕಿನಲ್ಲಿ ಶಿಸ್ತಿಲ್ಲದ ಅರಸಿಕ, ಮಾತಿಲ್ಲದ ಮೌನಿ, ಸಿಡಿದೆದ್ದರೆ ರಾಕ್ಷಸ, ಇವನ ಕಾಯಕ ಜೈಲಿನಲ್ಲಿ ಕೈದಿಗಳಿಗೆ ಅಂತಿಮ ಶಿಕ್ಷೆ ಕೊಡುವುದು.
ಅವಳು ಪಾರ್ವತಿ ಅವಳಿಗೆ ತನ್ನ ತಾಯಿಯೇ ಸರ್ವಸ್ವ, ಅಮ್ಮ ಮಗಳು ಇಬ್ಬರು ಗೆಳತಿಯಂತಿರುತ್ತಾರೆ, ಅವರ ಬದುಕಿನಲ್ಲಿ ರಾವಣ ರಾಕ್ಷಸನ ಸಂತತಿಯ ಪ್ರವೇಶವಾಗುತ್ತದೆ ಅವನಿಂದ ಅವನ ಕಾಮತೃಷೆಯಿಂದ ತಪ್ಪಿಸಿಕೊಳ್ಳುವ ತವಕದಲ್ಲಿ ಒಂದು ಅವಗಡ ನಡೆದು ಹೋಗುತ್ತದೆ. ಜೈಲು ಸೇರಿದ ತಾಯಿಯನ್ನು ಬಿಡುಗಡೆಗೊಳಿಸಲು ಒದ್ದಾಡುವ ಮಗಳು.ಹೀಗಾಗಿ ಜೈಲಿನ ಮಾದೇವನಿಗೂ ಪಾರ್ವತಿಗೂ ಲಿಂಕ್ ಆಗುತ್ತದೆ. ಈ ಹುಂಬ, ಒರಟನ ಎದೆಯಲ್ಲಿ ಪ್ರೀತಿ ಅರಳಿಸಿ ಮದುವೆಯಾಗುತ್ತಾಳೆ. ಇವರ ಸುಂದರ ಬದುಕಿನಲ್ಲಿ ಮತ್ತಿಂದು ಸುಂಟರ ಬಿರುಗಾಳಿ ಬೀಸುತ್ತದೆ. ಅಲ್ಲಿಂದ ಮಾದೇವ ಮತ್ತೆ ರಾಕ್ಷಸನಾಗುತ್ತಾನೆ. ಒಂದಷ್ಟು ಸಮಾಜಘಾತುಕ ಶಕ್ತಿಗಳನ್ನು ಸದೆ ಬಡೆಯುತ್ತಾನೆ.

ಪಾರ್ವತಿಯ ತಾಯಿ ಜೈಲಿನಿಂದ ಬಿಡುಗಡೆಯಾಗುತ್ತಾರಾ, ಮಾದೇವ ಮನುಷ್ಯನಾದವನು ಮತ್ತೆ ಮೃಗವಾಗಲು ಏನು ಕಾರಣ, ಯಾರು ಕಾರಣ, ಸಮಾಜ ಘಾತುಕರು ಯಾರು, ಮಾದೇವನ ಬಾಲ್ಯದ ಬದುಕಿನಲ್ಲಿ ಏನಾಗಿರುತ್ತದೆ, ಕೊನೆಗೆ ಮಾದೇವ, ಪಾರ್ವತಿ ಏನಾಗುತ್ತಾರೆ. ಮಾದೇವ ಪಾರ್ವತಿಯರ ಮದ್ಯೆ ಇದ್ದ ಮಗು ಏನಾಗುತ್ತದೆ ಈ ಎಲ್ಲಾ ಕುತೂಹಲಕ್ಕೆ ಪ್ರೇಕ್ಷಕರು ಚಿತ್ರ ಮಂದಿರದಲ್ಲಿ ಸಿನಿಮಾ ನೋಡಬೇಕಾಗುತ್ತದೆ.
ಪ್ರೇಕ್ಷಕರು ಕೊಟ್ಟ ಹಣಕ್ಕೆ ಮೊಸ ಇಲ್ಲ 100% ಪೈಸಾ ವಸೂಲ್ ಚಿತ್ರ ಮಾದೇವ.


2025 ಹೊಸವರ್ಷ ಬಂದು ಆರು ತಿಂಗಳಾಗಿದೆ ಒಂದು ಸಿನಿಮಾ ಕೂಡ ಯಶಸ್ಸಿನ ಸಾಲಿಗೆ ಸೇರಿಲ್ಲ, ಮಾದೇವ  ಚನ್ನಾಗಿ ಮೂಡಿ ಬಂದಿದೆ ಈ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಲಿ ಎಂಬುದು ನಮ್ಮ ಆಶಯ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor