Kamal Sridevi movie Review ಚಿತ್ರ ವಿಮರ್ಶೆ – ಕಮಲ್ ಶ್ರೀದೇವಿ. “ಸಪ್ತ ಕಾಮುಕರ ನಡುವೆ ಒಂದು ಹೆಣ್ಣಿನ ಮೌನ ಗೀತೆ”
ಸಪ್ತ ಕಾಮುಕರ ನಡುವೆ ಒಂದು ಹೆಣ್ಣಿನ ಮೌನ ಗೀತೆ
ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ
ಚಿತ್ರ – ಕಮಲ್ ಶ್ರೀದೇವಿ
ನಿರ್ಮಾಪಕರು – B.K. ಧನಲಕ್ಷ್ಮಿ, ರಾಜವರ್ಧನ್
ನಿರ್ದೇಶನ – ಸುನಿಲ್ ಕುಮಾರ್
ಛಾಯಾಗ್ರಹಣ – ನಾಗೇಶ್ ಆಚಾರ್ಯ
ಸಂಗೀತ – ಕೀರ್ತನಾ K.S.
Rating – 3/5
ಕಲಾವಿದರು – ಸಚ್ಚಿನ್ ಚಲುವರಾಯ ಸ್ವಾಮಿ, ಸಂಗೀತ ಭಟ್, ಕಿಶೋರ್, ಮಿತ್ರ, ರಮೇಶ್ ಇಂದಿರಾ, ರಘು ಶಿವಮೊಗ್ಗ, ಅಕ್ಷತಾ ಬೋಪಯ್ಯ, ಮುಂತಾದವರು.
ಸಪ್ತ ಕಾಮುಕರ ನಡುವೆ ಒಂದು ಹೆಣ್ಣಿನ ರಕ್ತ ಕಣ್ಣೀರು

ಒಂದು ಹೆಣ್ಣು ಹತ್ತಾರು ಜನರ ಮುಂದೆ ಬೆತ್ತಲೆಯಾಗುತ್ತಾಳೆ ಅಂದ್ರೆ ಅವಳ ಮನಸ್ಥತಿ, ಮತ್ತು ಅವಳ ಮನೆಯ ಸ್ಥಿತಿ ಹೇಗಿರಬಹುದು, ಅವಳ ಮೈ ಮನಸ್ಸನ್ನು ಹಿಂಡುವ ಕಾಮುಕರ ಅಟ್ಟಹಾಸ ಹೇಗಿರುತ್ತದೆ,
ಹಾಲು ಕುಡಿಯದ ಪೋರನಿಂದ ಹಿಡಿದು, ಹಲ್ಲುಗಳು ಉದುರಿಹೋಗಿ ನಿಲ್ಲಲು ತ್ರಾಣವಿಲ್ಲದ ಮುದುಕನ ವರೆಗೂ ಗಂಡು ಸಮಾಜದ ಕರಾಳ ಮುಖವನ್ನು ನಿರ್ದೇಶಕರು ಚನ್ನಾಗಿ ಎಣೆದಿದ್ದಾರೆ.
ಅವಳಿಗೆ 70 ಸಾವಿರ ಬೇಕು, ಅವನಿಗೆ ಅವನ ನೋವು ಹಂಚಿಕೊಳ್ಳಲು ಯಾರಾದರು ಬೇಕು.
ಅವಳು ಶ್ರೀದೇವಿ (ಸಂಗೀತ ಭಟ್) ಅಲಿಯಾಸ್ ದೇವಿಕಾ.
ಅವನು ಕಮಲ್ (ಸಚ್ಚಿನ್ ಚಲುವರಾಯ ಸ್ವಾಮಿ)
ದೇವಿಕಾಳ ದೇಹ ಸಿರಿಗೆ ದಾರಾಳವಾಗಿ ಹಣ ಕೊಟ್ಟು ಮಂಚದ ಮೇಲೆ ಮಲಗಲು ಬಂದವರು 7 ಜನ.
ಅದರಲ್ಲಿ ಕಯಾಲಿ ಇಲ್ಲದವನೊಬ್ಬ, ಕೈಲಾಗದವನೊಬ್ಬ
ಸುಕೋಮಲ ದೇಹ ರಕ್ತದ ಮಡುವಿನಲ್ಲಿ ಚಿತ್ರದ ಪ್ರಾರಂಭದ ಮೊದಲ ದೃಶ್ಯದಲ್ಲೇ ನೋಡಬಹುದು. ಸುಖ ಅನುಭವಿಸಲು ಬಂದವರು ಸುಖಾ ಸುಮ್ಮನೆ ಅವಳ ಸದ್ದಿಲ್ಲದಂತೆ ಮಾಡಿದ್ದು ಯಾರು.?

ಆ ಆಗುಂತಕ ಕೊಲೆಗಾರ ಯಾರು ಎನ್ನುವುದೇ ಚಿತ್ರದ ಕೊನೆಯವರೆಗೂ ಉಳಿದುಕೊಂಡ ನಿಗೂಡ ರಹಸ್ಯ.
ಕೆಲವು ಪಾತ್ರಗಳು ಹಾಸ್ಯಾಸ್ಪದ, ಕೆಲವು ಪಾತ್ರಗಳು ಮಾನವೀಯತೆಯ ಮಡಿಲಲ್ಲಿ ಮರಗುತ್ತವೆ.
ಸಿನಿಮಾ ಮಾಡಿ ಕೈ ಸುಟ್ಟುಕೊಂಡ ನಿರ್ದೇಶಕ ಸಾವಿಗೆ ಶರಣಾಗಲು ಒದ್ದಾಡುವಾಗ ಅವನ ಗರಡಿಯ ನಟನೊಬ್ಬನ ಕೃಪೆಯಿಂದ ಹೆಣ್ಣಿನ ದೇಹ ಸಿರಿಯ ಮುಂದೆ ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ, ಅವನ ಕಥೆಯ ಮದ್ಯೆ ಆಗಾಗ ಗಿರಾಕಿಗಳ ಕಮರ್ಷಿಯಲ್ ಕಾಲ್ ಗಳು ಬರುತ್ತಲೇ ಇರುತ್ತೆ.
ಅವಳು ಯಾರೋ ಮಾಡಿದ ಅಚಾನಕ್ ಆಕಸ್ಮಿಕ ಅಪಘಾತದಿಂದ ತನ್ನ ಕರುಳ ಕುಡಿಗೆ ಬಂದ ಆಪತ್ತಿಗಾಗಿ ಆಸ್ಪತ್ರೆಯ ಖರ್ಚಿಗಾಗಿ ಹಣದ ಕೊರತೆಯಿಂದ ಒದ್ದಾಡುವ ನಿಸ್ಸಾಹಯಕ ಮನಸ್ಸು,
ಇದರ ಮದ್ಯೆ ಮಾನವೀಯತೆ, ಕಳೆದುಕೊಂಡ ಆಸ್ಪತ್ರೆಗಳು,
ಸಹನೆ ಕಳೆದುಕೊಂಡ ಕಾಮುಕರು ಕರಾಳ ಮುಖವನ್ನು,
ಹಣಕ್ಕಾಗಿಯೇ ಬೆತ್ತಲಾಗುವ ಹೆಣ್ಣಿನ ಕರಾಳ ಕಥೆಯನ್ನು ನಿರ್ದೇಶಕ ಚನ್ನಾಗಿ ನಿರೂಪಿಸಿದ್ದಾರೆ.
ಫರ್ಸ್ಟ್ ಆಫ್ ಸ್ವಲ್ಪ ಇನ್ನೂ ಚನ್ನಾಗಿ ಮಾಡಿದ್ದರೆ ಚಿತ್ರ ಇನ್ನೂ ಚನ್ನಾಗಿರುತಿತ್ತು.
ಸಚಿನ್ ಚಲುವರಾಯ ಸ್ವಾಮಿ ಎರಡನೇ ಚಿತ್ರಕ್ಕೆ ಬಹಳ ವರ್ಷಗಳ ಅಂತರದಲ್ಲಿ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಕಥೆಯಲ್ಲಿ ಕಥೆಯೊಳಗಿನ ನಿರ್ದೇಶಕನಾಗಿ ಕನಸುಗಳಿಗೆ ಬಣ್ಣ ಹಚ್ಚುವ ಪಾತ್ರದಲ್ಲಿ ಸಹಜವಾಗಿ ಅಭಿನಯಿಸಲು ಶ್ರಮ ವಹಿಸಿದ್ದಾರೆ.
ಇನ್ನು ನಟಿ ಸಂಗೀತ ಭಟ್ ಚಿತ್ರದ ಮೂಲ ಆಧಾರ ಎಂದರೆ ತಪ್ಪಾಗಲಾರದು. ಕಥೆಯ ನಾಯಕಿಯಾಗಿ ನಾಲ್ಕು ಗೋಡೆಗಳ ಮದ್ಯೆ ತನ್ನ ಅಭಿನಯದ ಚತುರುತೆಯನ್ನು ಪ್ರೇಕ್ಷಕನಿಗೆ ಉಣ ಬಡಿಸಿದ್ದಾರೆ.
ಮಾಮೂಲಿಯಾಗಿ ಪೋಲೀಸ್ ಪಾತ್ರಗಳಲ್ಲಿ ಮುಳುಗಿಹೋಗಿ ಸಾಕೆಂದು ತೆವಳಿ ದಡ ಸೇರಿದ್ದ ನಟ ಕಿಶೋರ್ ಕುಮಾರ್ ಮತ್ತೆ ಪೋಲೀಸ್ ಅಧಿಕಾರಿಯಾಗಿ ಬೇಟೆಗಿಳಿದಿದ್ದಾರೆ, ಖಾಕಿ ಅವರು ಬಿಟ್ಟರು ಖಾಕಿ ಅವರನ್ನು ಬಿಡುತ್ತಿಲ್ಲ. ಮತ್ತೆ ಮತ್ತೆ ಪೋಲೀಸ್ ಪಾತ್ರಗಳು ಹುಡುಕಿ ಬರುತ್ತಿವೆ. ಕಿಶೋರ್ ಎಂದಿನಂತೆ ತಮ್ಮ ಪಾತ್ರಕ್ಕೆ ತನ್ಮಯತೆಯ ನ್ಯಾಯ ಒದಗಿಸಿದ್ದಾರೆ.
ಇನ್ನು ರಮೇಶ್ ಇಂದಿರ ಸಪ್ತ ಸಾಗರದ ಆಚೆ ಚಿತ್ರದ ನಂತರ ಪ್ರೇಕ್ಷಕನಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಆದರೆ ಇಲ್ಲಿ ತಲೆಗಳನ್ನು ಕ್ಯಾಚ್ ಹಿಡಿಯುವ ಮಾಮು ಆಗಿ ಅದೇ ಮಾರ್ಮಿಕ ನಗುವಿನೊಂದಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಹಿರಿಯ ನಟ ಉಮೇಶ್ ರವರು
ಎಟಿಎಮ್ ಸೆಕ್ಯುರಿಟಿಯ ಪಾತ್ರದಲ್ಲಿ ಕೈಲಾಗದ ವಯಸ್ಸಿನಲ್ಲಿ ರತಿ ಸುಖಕ್ಕೆ ಏಕೆ ಬಂದರು ಎನ್ನುವುದೇ ಸೋಜಿಗದ ಪ್ರಶ್ನೆ ನಿರ್ದೇಶಕರು ಏಕೆ ಈ ಪಾತ್ರವನ್ನು ಸೃಷ್ಟಿಸಿದರೋ ಎನ್ನಬಹುದು.
ಮಿತ್ರ ಮಾಟಗಾರನಾಗಿ ಮೋಡಿ ಮಾಡುವ ಪ್ರಯತ್ನ ಮಾಡಿದ್ದಾರೆ. ರಘು ಶಿವಮೊಗ್ಗ ಪೋಲೀಸ್ ಪಾತ್ರದಲ್ಲಿ ದರ್ಪ ತೋರಿದ್ದಾರೆ. ಅಕ್ಷತಾ ಬೋಪಯ್ಯ ಲೆಸ್ಬಿಯನ್ ಆಗಿ ತೀಟೆ ತೀರಿಸಿಕೊಳ್ಳುವ ತವಕದಲ್ಲಿ ತೀಟೆ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಗೇಶ್ ಆಚಾರ್ಯ ರವರ ಕ್ಯಾಮರದ ಕಣ್ಣು ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ.
ಬೆಂಗಳೂರಿನ ಮೆಜೆಸ್ಟಿಕ್, ಮಾರ್ಕೆಟ್, ಕಲಾಸಿಪಾಳ್ಯದ ಗಲ್ಲಿ ಗಲ್ಲಿಯನ್ನು ಚನ್ನಾಗಿ ಚಿತ್ರೀಕರಿಸಿ ಕಲರ್ ಫುಲ್ ಆಗಿ ಗುಲ್ಲೆಬ್ಬಿಸಿದ್ದಾರೆ.
ಇನ್ನು ಕೀರ್ತನ್ ರವರ ಸಂಗೀತ ಕಥೆಯ ಹಿಂದೆ ಹುಬ್ಬು ತಗ್ಗುಗಳ ಜೊತೆ ಎಡವದಂತೆ ಪಯಣಿಸಿದೆ.
ನಟ ರಾಜವರ್ಧನ್ ಸಹ ನಿರ್ಮಾಪಕನಾಗಿ ಕ್ರಿಯೇಟಿವ್ ಹೆಡ್ ಆಗಿ ಹೆಡ್ ಮಾಸ್ಟರ್ ಆಗಿ ಚಿತ್ರದ ಬೆನ್ನಿಗೆ ಹಿಂದೆ ನಿಂತು ಪ್ರಾರಂಭದ ತೆಂಗಿನಕಾಯಿ ಯಿಂದ, ಕೊನೆಯ ಕುಂಬಳ ಕಾಯಿವರೆಗೂ ಚಿತ್ರ ತಂಡಕ್ಕೆ ಸಾಥ್ ನೀಡಿದ್ದಾರೆ.
ಒಟ್ಟಿನಲ್ಲಿ “ಕಮಲ್ ಶ್ರೀದೇವಿ” ಸಿನಿಮಾದೊಳಗೊಂದು ಸಿನಿಮವಾಗುವ ಚಿತ್ರ.
ಪ್ರೇಕ್ಷಕರು ಇಲ್ಲಿ ಯಾವುದೇ ಮುಜುಗರವಿಲ್ಲದೇ ಒಂದು ಹೆಣ್ಣು ತನ್ನ ಮೈ ಮಾರಿಕೊಳ್ಳುವ ಅಸಹಾಯಕಥೆಯ ಸಂದರ್ಭಕ್ಕೆ ಸಾಕ್ಷಿಯಾಗಬಹುದು.











