“Jungle Mangal” movie review. ಚಿತ್ರ ವಿಮರ್ಶೆ :- ಜಂಗಲ್ ಮಂಗಲ್. ಕಾಡಿನೊಳಗೊಂದು ಕೊಲೆ, ಕೊಲೆಗೆ ವಿಧಿ ಹೆಣೆದ ಬಲೆ. Rating – 3/5.
ಚಿತ್ರ ವಿಮರ್ಶೆ :- ಜಂಗಲ್ ಮಂಗಲ್
Rating – 3/5.
ನಿರ್ಮಾಣ: ಸಹ್ಯಾದ್ರಿ ಸ್ಟುಡಿಯೋಸ್
ನಿರ್ದೇಶನ: ರಕ್ಷಿತ್
ಸಂಗೀತ : ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ : ವಿಷ್ಣು ಪ್ರಸಾದ್
ಸಂಕಲನ : ಮನು ಶೇಡ್ಗಾರ್
ಕಲಾವಿದರು : ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ,
ಬಲ ರಾಜವಾಡಿ, ‘ಉಗ್ರಂ’ ಮಂಜು, ಚಂದ್ರಹಾಸ ಉಲ್ಲಾಳ, ದೀಪಕ್ ರೈ ಪಣಾಜೆ ಮುಂತಾದವರು.
ಒಂದು ಸಿನಿಮಾ ಅಂದ್ರೆ ಒಂದಷ್ಟು ತರ್ಕಕ್ಕೆ ನಿಲುಕದ ದ್ವಂದ್ವ ಸಂಭಾಷಣೆ, ಕಲ್ಪನೆಗೆ ಎಟುಕದ ಹೊಡೆದಾಟದ ದೃಶ್ಯಗಳು, ಕಥೆಯಾಚೆಗೆ ಸೃಷ್ಠಿಯಾದ ಬಿಲ್ಡಪ್ ಸೀನುಗಳು, ಹೀರೋ ಎಂಟ್ರಿಗೊಂದು ಸಾಂಗು, ಹೀರೋಯಿನ್ ಮೂಡಿಗೊಂದು ರೊಮ್ಯಾಂಟಿಕ್ ಗೊಂದು ಗೀತೆ ಇರುವುದು ಸರ್ವೇ ಸಾಮಾನ್ಯ. ಇಂಥಹ ಸಿನಿಮಾಗಳ ನಿರ್ಮಾಣದ ನಡುವೆ ಒಂದು ಸುಂದರ ಸರಳ ಕಥೆಯ ಚಿತ್ರ ಈ ವಾರ ತೆರೆ ಕಂಡಿದೆ ಅದುವೇ “ಜಂಗಲ್ ಮಂಗಲ್” ಚಿತ್ರ.
ಇಲ್ಲಿ ಯಾವುದೂ ಅತೀ ಎನಿಸೊಲ್ಲ, ಯಾವುದು ಅಸಹ್ಯವೆನಿಸೊಲ್ಲ, ಯಾರಿಗೂ ಬೇಸರವಾಗೊಲ್ಲ ಆ ರೀತಿಯಲ್ಲಿ ಚಿತ್ರ ನೋಡಿಸಿಕೊಂಡು ಹೋಗುತ್ತೆ. ಅದು ಈ ಚಿತ್ರದ ಕಥೆಗಿರುವ ತಾಕತ್ತು, ಅದನ್ನು ಸಾದಾ ಸೀದಾವಾಗಿ ನಿರೂಪಿಸಿರುವ ನಿರ್ದೇಶಕನ ಗಮ್ಮತ್ತು ಚಿತ್ರದಲ್ಲಿ ಕಾಣುತ್ತದೆ.

ಅದು 2020ರ ಕರೋನೋ ಆರ್ಭಟದ ಕರಾಳಾದಿನಗಳು, ಎಲ್ಲರೂ ಮನೆಯಿಂದ ಹೊರಗೆ ಬರಬಾರದೆಂಬ ಪೋಲೀಸರ ನಿರ್ಬಂಧ. ಅದನ್ನೂ ಮೀರಿ ನಿರ್ಬಂಧಗಳನ್ನು ಮೀರಿ ಅರಳುವ ಅನುಬಂದದ ಅನುರಾಗದ ಅಲೆಯಲ್ಲಿ, ಮನೆಯೊಳಗಿನ ಪಡಸಾಲೆಯಲ್ಲಿ ಮೊಬೈಲ್ ನಲ್ಲಿ
ಬುಸುಗುಡುವ ಪ್ರೇಮದ ಕಥೆ ಮುಂದೆ ಹೇಗೆಲ್ಲಾ ವ್ಯಥೆಯಾಗುತ್ತದೆ ಎನ್ನುವುದೇ ಜಂಗಲ್ ಮಂಗಲ್ ಕಥೆ.
ಅದೊಂದು ದಟ್ಟಡವಿ ಅದರೊಳಗಿನ ನಿಗೂಡತೆ, ಸೌಂದರ್ಯದ ಜೊತೆಗೆ ಕಾನನದ ನೀರವತೆಯ ಮೌನದಲ್ಲಿ ಇಬ್ಬರು ಪ್ರೇಮಿಗಳ ಕಲರವ ಬೆರೆತರೆ ಹೇಗಿರಬಹುದೆಂಬ ಊಹೆಗೆ ನಿರ್ದೇಶಕರು ಆಗಾಗ ಟ್ವಿಷ್ಟ್ ಗಳ ಮೇಲೆ ಟ್ವಿಷ್ಟ್ ಗಳನ್ನು ನೀಡಿದ್ದಾರೆ.
ಕಲ್ಗುಂಡಿ ಪ್ರವೀಣ (ಯಶ್ ಶೆಟ್ಟಿ) ಅವನ ಪ್ರೇಯಸಿ ಅಮ್ಮಿ (ಹರ್ಷಿತಾ ರಾಮಚಂದ್ರ) ಕೊರೋನಾದ ಅಬ್ಬರದ ನಡುವೆ ಒಬ್ಬರನೊಬ್ಬರು ಬೇಟಿಯಾಗಲು ಕಾಡಿನೊಳಗೆ ಸೇರಿಕೊಳ್ಳುತ್ತಾರೆ. ಕಾಡಿನ ಬಗುಲಿಗೆ ನಿಲ್ಲಿಸಿದ ಪ್ರವೀಣನ ಬೈಕ್ ಊರ ಜನರ ಕೆಂಗೆಣ್ಣಿಗೆ ಕಾರಣವಾಗುತ್ತದೆ.
ನಮ್ಮ ಕಾಡು ಲಾಡ್ಜ್ ಅಂದುಕೊಂಡಿದ್ದಾರೆ ಇವರಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಕಾಡಿನ ಬಾಗಿಲಲ್ಲಿದ್ದ ಬೈಕ್ ಮುಂದೆ ಜನ ಜಮಾಯಿಸುತ್ತಾರೆ.
ಅಲ್ಲಿಂದ ಮುಂದೇನಾಗುತ್ತದೆ ಎಂದು ಪ್ರೇಕ್ಷಕನ ಎದೆಯಲ್ಲಿ ಅವಲಕ್ಕಿ ಕುಟ್ಟಲಾರಂಭಿಸುತ್ತದೆ.
ಕಾಡಿನೊಳಗೆ ಕಾಡು ಹಂದಿ ಬೇಟೆಯಾಡಲು ಬಂದ ನಾಡ ಹಂದಿಗಳ ಗುಂಪೊಂದು ಠಳಾಯಿಸುತ್ತದೆ, ಹಕ್ಕಿ ಪಕ್ಷಿಗಳ ನದಿ ಝರಿಗಳ ಸದ್ದಿನೊಂದಿಗೆ ಅಮ್ಮಿ ಎಂಬ ಅಸಹಾಯಕ ಒಂಟಿ ಹೆಣ್ಣುಮಗಳ ಆಕ್ರಂದನ, ಗುಂಡಿನ ಸ್ಪೋಟಕ ಸದ್ದು, ಕಳ್ಳಭಟ್ಟಿಯ ಗಮಲನ್ನು ಮರೆಸುವ ರಕ್ತದ ಕಮಟು ವಾಸನೆ, ಕಾಡಿನ ದೇವಿಗೆ ಕೋಳಿ ಬಲಿ ಕೊಡಲು ಬಂದವರಿಗೆ ಮಾನವ ರೂಪದ ರಕ್ಕಸನ ಬಲಿ,
ಪ್ರವೀಣ ಏನಾದ, ಅಮ್ಮಿ ಯಾಕೆ ಒಂಟಿಯಾಗಿ ಹೆಣ್ಣು ಬಾಕನ ವಕ್ರ ದೃಷ್ಟಿಗೆ ಸಿಲುಕುತ್ತಾಳೆ, ಕಾಡಿನ ಹೊರಗೆ ಕಾದು ಕುಳಿತವರಿಗೆ ಏನಾಗುತ್ತದೆ, ಕೋಳಿ ಬಲಿ ಕೊಡಲು ಬಂದವರ ದ್ವೇಷದ ಹಿಂದಿನ ಅಸಾಹಯಕ ಸ್ತಿತಿ ಏನು, ಕಾಡು- ನಾಡಿಗೆ ಕಂಟಕನಾಗಿರುವ ಬಾಬಣ್ಣನ (ಉಗ್ರಂ ಮಂಜು) ಅಟ್ಟಹಾಸ ಈ ಎಲ್ಲ ವಿಷಯಗಳನ್ನು ಕಣ್ಣಾರೆ ಚಿತ್ರಮಂದಿರದಲ್ಲಿ ಕುಳಿತು ನೋಡಿದಾಗಲೆ ತಿಳಿಯುತ್ತದೆ ಜಂಗಲ್ ಮಂಗಲ್ ಕಥೆ.
ಯಶ್ ಶೆಟ್ಟಿ ಯಾವುದೇ ಪಾತ್ರಕೊಟ್ಟರು ಲೀಲಾಜಾಲವಾಗಿ ನಟಿಸುವ ನಟ. ಇಲ್ಲೂ ಕೂಡ ಒಬ್ಬ ಹತಾಶ, ಆತುರದ ಪ್ರೇಮಿಯಾಗಿ ಚನ್ನಾಗಿ ಅಭಿನಯಿಸಿದ್ದಾರೆ.
ಹಾಗೆಯೇ ಹರ್ಷಿತಾ ರಾಮಚಂದ್ರ ಕೂಡ ನೈಜ ಅಭಿನಯಕ್ಕೆ ಒಗ್ಗಿಕೊಂಡಿದ್ದಾರೆ.
ಇನ್ನು ಉಗ್ರಂ ಮಂಜು ತನ್ನ ಉಗ್ರಾವತಾರವನ್ನು ಪ್ರದರ್ಶಿಸಿ ಅಬ್ಬರಿಸಿದ್ದಾರೆ.
ನಿರ್ದೇಶಕ ರಕ್ಷಿತ್ ಬಹಳ ಚನ್ನಾಗಿ ಕಥೆಯನ್ನು ನಿರೂಪಿಸಿದ್ದಾರೆ.
ಆದರೂ ಅಲ್ಲಲ್ಲಿ ಬರುವ ಫ್ಲಾಶ್ ಬ್ಯಾಕ್ ಗಳು ಡಿಸ್ಟರ್ಬ್ ಮಾಡುತ್ತದೆ ಅನ್ನುವುದು ನಿಜ.
ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ಕಥೆಯ ಓಟಕ್ಕೆ ಸಾಥ್ ನೀಡಿದೆ.
ವಿಷ್ಟು ಪ್ರಸಾದ್ ಛಾಯಾಗ್ರಹಣದಲ್ಲಿ ಅರಳಿದ ಅರಣ್ಯದ ಸುಂದರ ದೃಶ್ಯಗಳನ್ನು ಪ್ರೇಕ್ಷಕರು ಖುಷಿಯಿಂದ ತುಂಬಿಸಿಕೊಳ್ಳಬಹುದು.











