45 movie review . 45 ಚಿತ್ರದ ವಿಮರ್ಶೆ. ಎಲ್ಲಾ ಶಿವ ಮಯವೊ

ಹೊಸ ವರ್ಷಕ್ಕೊಂದು ವಿಭಿನ್ನ ಕಥೆಯ, ವಿಭಿನ್ನ ಶೈಲಿಯ, ಮನರಂಜನಾತ್ಮಕ ಆತ್ಮ, ಪರಮಾತ್ಮನ ನಡುವೆಯ ಗರುಡ ಪುರಾಣದ ಆಧುನಿಕ ತಂತ್ರಜ್ಞಾನದ ಅದ್ದೂರಿ ನಿರ್ಮಾಣದ ಚಿತ್ರ 45.

ಚಿತ್ರ –  45
ನಿರ್ಮಾಪಕರು – ರಮೇಶ್ ರೆಡ್ಡಿ
ನಿರ್ದೇಶನ –  ಅರ್ಜುನ್ ಜನ್ಯ
ಛಾಯಾಗ್ರಹಣ –  ಸತ್ಯ ಹೆಗಡೆ
ಸಂಗೀತ – ಅರ್ಜುನ್ ಜನ್ಯ
ಸಂಕಲನ – ಕೆ. ಎಂ. ಪ್ರಕಾಶ್

Rating -4/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು :- ಶಿವರಾಜ್ ಕುಮಾರ್, ಉಪೇಂದ್ರ, ಸುಧಾರಾಣಿ, ರಾಜ್ ಬಿ. ಶೆಟ್ಟಿ, ಮಾನಸಿ , ಕೌಸ್ತುಭ. ಮಣಿ, ಪ್ರಮೋದ್ ಶೆಟ್ಟಿ , ಮೊಟ್ಟೈ ರಾಜೇಂದ್ರನ್, ಪೂಜಾ ರಾಮಚಂದ್ರನ್ ಮುಂತಾದವರು.

ಮನುಷ್ಯನಿಗೆ  ಹುಟ್ಟು ಖುಷಿಯಾದರೆ ಸಾವು ಭಯ ಹುಟ್ಟಿಸುತ್ತದೆ.
ಜಗತ್ತಿನಲ್ಲಿ ಯಾವುದೇ ಜೀವಿ ಹೆದರುವುದೇ ಸಾವಿನಿಂದಾಗಿ.

ಮನುಷ್ಯ ತನ್ನ ಬದುಕಿನಲ್ಲಿ ನಡೆವ ಏರು ಪೇರಿನ ಸಮತೋಲನಕ್ಕಾಗಿ ತನಗಿಷ್ಟ ಬಂದ ದೇವತೆಗಳ ಮೊರೆ ಹೋಗುತ್ತಾನೆ. ಆದರೆ ಯಾರೂ ಕೂಡ ಯಮನನ್ನು ಪೂಜಿಸುವುದಿಲ್ಲ. ಯಮನೆಂದರೆ ಎದೆಯಲ್ಲಿ ಎಲ್ಲರಿಗೂ ನಡುಕ ಹುಟ್ಟುತ್ತದೆ. ಸಾವನ್ನೂ ಗೆದ್ದವರು ಕೆಲವೇ ಕೆಲವು ಮಹನೀಯರು.

ಯಮನಿಗೆ ಯಾವುದೇ ಕರುಣೆ ಇರುವುದಿಲ್ಲ. ಮನುಷ್ಯನ ಪಾಪ ಕರ್ಮಗಳಷ್ಟೇ ಅವನ ಲೆಕ್ಕಾಚಾರ.
ಅಂತಹದೇ ಕ್ರೂರಿ ಕೋಪಿಷ್ಟ ರಾಯಪ್ಪನ (ಉಪೇಂದ್ರ) ಕೈಗೆ ಸಿಕ್ಕಿ ಬೀಳುವುದು ಸಾಪ್ಟ್ ವೇರ್ ನೌಕರ ವಿನಯ್ ( ರಾಜ್ ಬಿ. ಶೆಟ್ಟಿ )
ಅವನೊಬ್ಬ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಸಾದಸೀದಾ ಮನುಷ್ಯ ವಿನಯ್. (ರಾಜ್ ಬಿ. ಶೆಟ್ಟಿ ) ಅವನಿಗೊಬ್ಬ ತಾಯಿ (ಮಾನಸಿ ಸುಧೀರ್ ) ಇವನಿಗೆ ಅಮ್ಮನೇ ಪ್ರಪಂಚ, ಅವಳಿಗೆ ಮಗನೇ ಎಲ್ಲಾ ಹಾಗಿರುವಾಗ ಅದೊಂದು ದಿನ ಎಂ.ಜಿ. ರಸ್ತೆಯಲ್ಲಿ ಒಂದು ಘಟನೆ ನಡೆಯುತ್ತದೆ. ಅದೇ 45 ಚಿತ್ರದ ಮೊದಲ ದೃಶ್ಯ ಹಾಗೂ ಕಥೆಗೆ ಮೊದಲ ಮುನ್ನುಡಿ.


ಆ ಒಂದು ಘಟನೆಯಿಂದಾಗಿ
ರಾಯಪ್ಪ (ಉಪೇಂದ್ರ) ಅವನು ಅದರಿಂದ ದುಃಖಿತ ನಾಗುತ್ತಾನೆ ಮತ್ತು ರೋಷಗೊಳ್ಳುತ್ತಾನೆ 45 ದಿನದೊಳಗೆ ನಿನ್ನ ಸಾಯಿಸುತ್ತೇನೆ ಎಂದು ರಾಜ್ ಬಿ. ಶೆಟ್ಟಿಗೆ ವಾರ್ನಿಂಗ್ ಮಾಡುತ್ತಾನೆ.
ಇಲ್ಲಿಂದ ಶುರುವಾಗುವುದೇ 45 ಚಿತ್ರದ ಕಥೆ.
ಸಾವಿನ ಹೆದರಿಕೆಯಿಂದ ರಾಜ್ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ , ಆದರೆ ಆತನ ರಕ್ಷಣೆಗೆ ನಿಲ್ಲುವುದೇ ಶಿವಪ್ಪ  (ಶಿವರಾಜ್ ಕುಮಾರ್ ) ಕೊಲ್ಲುವವನೊಬ್ಬ, ಕಾಯುವವನೊಬ್ಬ ಇವರಿಬ್ಬರ ಮಧ್ಯೆ ಸಾಯುವ ಭಯದಿಂದ ತತ್ತರಿಸುವ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಪ್ರೇಕ್ಷಕರ ಸಿಂಪತಿ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. 


ಚಿತ್ರದ ಮೊದಲರ್ಧ ಪಾತ್ರ ಪರಿಚಯಗಳಲ್ಲಿ ಸ್ವಲ್ಪ ಮಂದಗತಿಯಲ್ಲಿ ಸಾಗುತ್ತದೆಯಾದರೂ ಶಿವಪ್ಪನ (ಶಿವರಾಜ್ ಕುಮಾರ್ ) ಎಂಟ್ರಿಯಿಂದ ವಿಧ್ಯುತ್ ಚಾಲನೆಯಾಗುತ್ತದೆ. ಶಿವರಾಜ್ ಕುಮಾರ್ ಈ ಚಿತ್ರದ ಮೂಲ ಜೀವಾಳ ಎನ್ನಬಹುದು. ಶಿವಣ್ಣನ ಎನರ್ಜಿಗೆ ಸಾಕ್ಷಿ ಈ 45 ಚಿತ್ರ.
ಮಾರ್ಕಂಡೇಯನನ್ನು ಕಾಪಾಡಲು ಬರುವ ಶಿವನಂತೆ ಶಿವಪ್ಪನ ಪಾತ್ರಕ್ಕೆ ಬಣ್ಣ ಹಚ್ಚಿರುವ ಶಿವಣ್ಣ ಚಿತ್ರದ ಕೊನೆಯ ಕ್ಲೈಮ್ಯಾಕ್ಸ್ ನಲ್ಲಿ ಹಲವು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕನಿಂದ ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರಗಳನ್ನು ಪಡೆಯುತ್ತಾರೆ.
ಅದರಲ್ಲೂ ಹೆಣ್ಣಿನ ಗೆಟಪ್  ಶಿವಣ್ಣನ ಪಾತ್ರಗಳಲ್ಲಿ ಮತ್ತಷ್ಟು ಮೆರಗು ಕೊಡುವಂತಿದೆ.

ಶಿವಣ್ಣ ತಮ್ಮ ಪಾತ್ರದ ಏರಿಳಿತಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ.

ಇನ್ನು ಉಪ್ಪಿಗಿಂತ ರುಚಿ ಬೇರೆ ಇಲ್ಲ, ಉಪೇಂದ್ರ ಅಭಿನಯಕ್ಕೆ ಸಾಟಿಯಿಲ್ಲ ಎಂಬಂತೆ ವಿಚಿತ್ರ ಗೆಟಪ್ ಗಳಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ ರಾಯಪ್ಪನಾಗಿ ಬಹಳ ಕ್ರೂರವಾಗಿ ರಾಜ್ ಬಿ. ಶೆಟ್ಟಿಯವರನ್ನು ಕಾಡುತ್ತಾರೆ, ಸಿಕ್ಕ ಸಿಕ್ಕವರನ್ನು ನಿರ್ಧಯವಾಗಿ ಸಾಯಿಸುತ್ತಾರೆ. ಯಾರಿಗಾದರೂ ಸರಿ ಅವರು ಕೊಡುವ ಸಾವಿನ ಗಡುವು 45 ದಿನ ಮಾತ್ರ. ಏನಿದು 45ರ ಹಿಂದಿನ ರಹಸ್ಯ ಎನ್ನುವುದನ್ನು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ. ಉಪೇಂದ್ರ ಅಂದರೆ ರಾಯಪ್ಪ ಎಲ್ಲೋ ನಿಂತು ಗುರಿ ಇಟ್ಟು ಬಾಣ ಬಿಟ್ಟರೆ ಆತ ವಿಕಾರವಾಗಿ ಸಾಯುವುದು ಖಚಿತ, ಒಮ್ಮೊಮ್ಮೆ ಕುತ್ತಿಗೆಯನ್ನು ಚರಚರನೆ ಕೂಯ್ದು ಬಿಸಾಕುತ್ತಾನೆ ರಾಯಪ್ಪ.

ಉಪೇಂದ್ರ ರವರು ರಾಯಪ್ಪನಾಗಿ ಅವರ ಮ್ಯಾನರಿಸಂ, ಅಭಿನಯ, ಗೆಟಪ್‍ಗಳು, ಡೈಲಾಗ್ ಡೆಲೆವರಿಯ ಏರಿಳಿತ ಎಲ್ಲವೂ ವಿಭಿನ್ನವಾಗಿವೆ. ಮೊದಲ ಬಾರಿಗೆ ಉಪ್ಪಿ ತೆರೆಯ ಮೇಲೆ ಇಷ್ಟು ವಿಚಿತ್ರ, ವಿಭಿನ್ನ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ.

ನಟಿ ಸುಧಾರಾಣಿ ಯವರು ಚಿತ್ರದಲ್ಲಿ ಸರ್ಪ್ರೈಸ್ ಆಗಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಮತ್ತು ಸುಧಾರಾಣಿ ಯವರನ್ನು ತೆರೆಯ ಮೇಲೆ ನೋಡುವ ಪ್ರೇಕ್ಷಕರು ಇವರಿಬ್ಬರ ಜೋಡಿಯ ಆನಂದ್ ಚಿತ್ರವನ್ನು ಸ್ಮರಿಸಿಕೊಳ್ಳುತ್ತಾರೆ.

ಕೌಸ್ತುಭಾ ಮಣಿ ರಾಜ್ ಬಿ. ಶೆಟ್ಟಿಯ ಪ್ರೇಯಸಿಯಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಟ ಪ್ರಮೋದ್ ಶೆಟ್ಟಿ ರಸಲ್ ಮಾರ್ಕೆಟ್ ನ ಮಾಂಸ ಕತ್ತರಿಸುವ ಹಾಗೂ ಲೋಕಲ್ ಡಾನ್ ಆಗಿ ಗಮನ ಸೆಳೆಯುತ್ತಾರೆ.

ಅರ್ಜುನ್ ಜನ್ಯ ಸತತ ಮೂರು ವರ್ಷಗಳು ಕಂಡ ಕನಸ್ಸು ಇಂದು ತೆರೆಯ ಮೇಲೆ ರಾರಾಜಿಸಿದೆ.
ಅವರು ಕಂಡ ಕನಸ್ಸನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ‌.
ಇದು ಹೊಸ ಕಥೆ, ವಿಷಯ ಪುರಾತನವಾದರೂ ಇಂದಿನ ಆಧುನಿಕ ಜಗತ್ತಿಗೆ ಒಂದು ಫ್ಯಾಂಟಸಿ, ಆಧ್ಯಾತ್ಮಿಕ ಫಿಲಾಸಫಿ ಕಥೆಯನ್ನು ಸರಳವಾಗಿ ತಿಳಿ ಹೇಳುವ ಪ್ರಯತ್ನದಲ್ಲಿ ಇಂದಿನ ಆಧುನಿಕತೆಗೆ ಒಗ್ಗುವಂತೆ ಬಿಂಬಿಸಿದ್ದಾರೆ. ಹಾಗೂ ಕೆಲವು ಸಂಬಂಧಗಳ ಪಯಣಕ್ಕೆ ಮಾಡಲೇ ಬೇಕಾದ ಕರ್ತವ್ಯ ಮತ್ತು ಜವಾಬ್ಧಾರಿಯನ್ನು ನಗಿಸುತ್ತಾ, ಕೆಲವೊಮ್ಮೆ ಹೆದರಿಸುತ್ತಾ ಹೇಳುವ ಪ್ರಯತ್ನ ಮಾಡಿರುವುದು ಖುಷಿಯ ವಿಚಾರ. ಮೊದಲ ಬಾರಿಗೆ ಸಂಗೀತ ನಿರ್ದೆಶಕ‌ನಿಂದ ಸಿನಿಮಾಗೆ ಆಕ್ಷನ್ ಕಟ್ ಹೇಳಿ ಬಡ್ತಿ ಪಡೆದಿದ್ದಾರೆ. ಈ ವರೆಗೂ ಸಾವಿನ ವಿಷಯವನ್ನು ಯಾರೂ ಇಷ್ಟು ಆಳವಾಗಿ ತೋರಿಸಿರಲಿಲ್ಲ. ಆದರೆ ಅರ್ಜುನ್ಯ ಜನ್ಯ ಸಾವು ಎಂದರೇನು, ಸಾವಿನ ನಂತರ ಆತ್ಮ ಏನಾಗುತ್ತದೆ, ಮನುಷ್ಯ ಮಾಡಿದ ಪಾಪ ಕರ್ಮಗಳಿಂದ ಏನೆಲ್ಲಾ ಶಿಕ್ಷೆ ಆತ್ಮಕ್ಕೆ ಆಗುತ್ತದೆ ಎಂಬ ಗರುಡ ಪುರಾಣದ ಅನಾವರಣ ಮಾಡಿದ್ದಾರೆ.

ಆದರೆ ಅಷ್ಟೊಂದು ಹಿಟ್ ಗೀತೆಗಳನ್ನು ನೀಡಿರುವ ಅರ್ಜುನ್ ತಮ್ಮ ಪಾಂಚ ಜನ್ಯದಿಂದ ಒಂದೆರಡು ಹಾಡುಗಳನ್ನು ಮೊಳಗಿಸ ಬಹುದಿತ್ತು. ಯಾಕೋ ಮನಸ್ಸು ಮಾಡಿಲ್ಲ.


ಚಿತ್ರದಲ್ಲಿ VFX ಪ್ರಮುಖವಾಗಿ ಗಮನ ಸೆಳೆಯುತ್ತದೆ.. ಕ್ಲೈಮ್ಯಾಕ್ಸ್ ಗೂ ಮುಂಚೆ ಕೊನೆಯ 20 ನಿಮಿಷ VFXನ ತಾಂತ್ರಿಕತೆ ವಿಜ್ರಂಭಿಸಿದೆ. ಈ ಚಿತ್ರಕ್ಕೆ ಕೆನಡಾ ದೇಶದ ಮಾರ್ಕ್ ಸ್ಟುಡಿಯೋ CG ಕೆಲಸ ಮಾಡಿದೆ. ಈ ಕಾರ್ಯಕ್ಕೆ ಹಣ ಮತ್ತು, ಸಮಯ ತುಂಬಾ ವ್ಯಯವಾಗಿರುವುದು ಕಾಣಿಸುತ್ತದೆ.

ಚಿತ್ರದ ಕ್ಯಾಮೆರ ಕೆಲಸ ಸತ್ಯಹೆಗಡೆ ಯವರ ಕಾರ್ಯ ನಿಜಕ್ಕೂ ಮೆಚ್ಚಲೇ ಬೇಕು. ಒಂದೇ ಚಿತ್ರದಲ್ಲಿ ಮೂರು ಶೇಡ್ ಗಳಲ್ಲಿ ಫ್ರೇಮ್ ಕಟ್ಟಿಕೊಟ್ಟಿದ್ದಾರೆ. ಉಪೇಂದ್ರ ಬಂದಾಗ ಕೆಂಪು, ಶಿವಣ್ಣ ಬಂದಾಗ ಹಳದಿ, ರಾಜ್ ಬಿ. ಶೆಟ್ಟಿಯ ದೃಶ್ಯಗಳು ಮಾಮೂಲಿ ಶೇಡ್ ಗಳಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಒಳ್ಳೊಳ್ಳೆ ದೃಶ್ಯಗಳು ಕಣ್ಮನ ಸೆಳೆಯುತ್ತದೆ.

ಇನ್ನು ಈ ಚಿತ್ರದ ನಿಜವಾದ ಹೀರೋ ಅಂದ್ರೆ ಅನ್ನದಾತ ನಿರ್ಮಾಪಕ ರಮೇಶ್ ರೆಡ್ಡಿ.
ಒಂದು ಆಧ್ಯಾತ್ಮಿಕವಾದ ಫ್ಯಾಂಟಸಿ ಮತ್ತು ಆಧುನಿಕ, ತಾಂತ್ರಿಕತೆಯ ಚಿತ್ರಕ್ಕೆ ನೀರಿನಂತೆ ಹಣ ಹರಿಸಿದ್ದಾರೆ. ಹೊಂಬಾಳೆ ಸಂಸ್ಥೆಯ ನಂತರ ಇಷ್ಟು ದೊಡ್ಡ ಬಜೆಟ್ ನ ಚಿತ್ರ ಮಾಡುವಲ್ಲಿ ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ ರಮೇಶ್ ರೆಡ್ಡಿಯವರು.


ಇತ್ತೀಚಿನ ನಿರ್ಮಾಪಕರಲ್ಲಿ ತುಂಬಾ ಸಾದಾ ಸೀದಾ, ಸರಳ –  ಸಜ್ಜನ ವ್ಯಕ್ತಿತ್ವದ ವ್ಯಕ್ತಿ.
ಮಲ್ಟಿ ಸ್ಟಾರ್ ಚಿತ್ರ ಮಾಡುವುದು ಅಷ್ಟು ಸುಲಭದ ಮಾತಲ್ಲ, ಶಿವರಾಜ್ ಕುಮಾರ್, ಉಪೇಂದ್ರ, ಮತ್ತು ರಾಜ್ ಬಿ. ಶೆಟ್ಟಿ ಯಂತಹ ಮೂರು ಜನರಿಗೂ ಯಾವುದೇ ಚ್ಯುತಿ ಬಾರದಂತೆ ನಿಭಾಯಿಸಿ ಕನ್ನಡಿಗರಿಗೆ ವರ್ಷದ ಕೊನೆಗೆ ಒಂದು ಒಳ್ಳೆಯ ಚಿತ್ರವನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಒಂದು ಅದ್ದೂರಿ ನಿರ್ಮಾಣದ, ವಿಭಿನ್ನ ಶೈಲಿಯ ಮನರಂಜನೆಯ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು ಹಾಗೂ ಒಂದಷ್ಟು ಬದುಕಿನ ಪಾಠವನ್ನು ಕಲಿಯಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರೇಕ್ಷಕ ಕೊಟ್ಟ ಹಣಕ್ಕೆ ದುಪ್ಪಟ್ಟು ಮನರಂಜನೆ ಪಡೆಯಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor