“Su From So” movie Review. ಸು ಫ್ರಮ್ ಸೋ ಚಿತ್ರ ವಿಮರ್ಶೆ
ಚಿತ್ರ ವಿಮರ್ಶೆ
ಚಿತ್ರ – ಸು ಫ್ರಮ್ ಸೋ
ನಿರ್ಮಾಪಕರು – ಲೈಟರ್ ಬುದ್ಧ ಫಿಲ್ಮ್ಸ್
ನಿರ್ದೇಶನ – ಜೆ.ಪಿ. ತುಮ್ಮಿನಾಡು
ಛಾಯಾಗ್ರಹಣ – ಚಂದ್ರಶೇಖರನ್
ಸಂಗೀತ – ಸುಮೇಧ್
Rating – 3.5/5

ಕಲಾವಿದರು – ಶನೀಲ್ ಗೌತಮ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಣಾಜೆ, ಜೆ.ಪಿ. ತುಮ್ಮಿನಾಡು, ಸಂಧ್ಯಾ ಅರಕೆರೆ, ಮೈಮ್ ರಾಮದಾಸ್, ರಾಜ್ ಬಿ ಶೆಟ್ಟಿ ಮುಂತಾದವರು.
“ಸು ಫ್ರಮ್ ಸೋ”
ಚಿತ್ರದ ಹೆಸರೇ ವಿಚಿತ್ರ ಮತ್ತು ವಿಭಿನ್ನ ಎನ್ನಬಹುದು.
ಈ ಸಿನಿಮಾದ ಮೊದಲ ಪ್ರೆಸ್ ಮೀಟ್ ಆದಾಗ ಏನಿದು ಈ ಸಿನಿಮಾದ ಹೆಸರು ಈತರ ಇದೆ ಅನ್ನಿಸಿದ್ದು ನಿಜ ಆದರೆ ಈ ಹೆಸರು ಇವತ್ತು ಕನ್ನಡ ಚಿತ್ರರಂಗದಲ್ಲಿ ಒಂದು ಸಂಚಲನ ವನ್ನೇ ಉಂಟು ಮಾಡಿದೆ ಎನ್ನಬಹುದು.

ಕಳೆದ ಆರು ತಿಂಗಳಿಂದ ಯಾವುದೇ ಚಿತ್ರಗಳು ಗೆಲ್ಲದೇ ಕನ್ನಡ ಚಿತ್ರರಂಗ ಆತಂಕದ ಸ್ಥಿತಿಯಲ್ಲಿತ್ತು. ಕಳೆದ ವಾರದಿಂದ ಸ್ವಲ್ಪ ಚೇತರಿಸಿ ಕೊಂಡಂತಾಗಿತ್ತು. ದೊಡ್ಡಮನೆಯ ನಿರ್ಮಾಣ, ರಾಜಕುಮಾರ್ನ ಮೊಮ್ಮೊಗನ ಎಕ್ಕಾ, ಮತ್ತು ದೊಡ್ಡ ಗಣಿ ಧಣಿ, ರಾಜಕರಣಿಯ ಪುತ್ರನ ಜೂನಿಯರ್ ಚಿತ್ರಗಳ ಬಿಡುಗಡೆಯಿಂದ ಮೂಡಿದ್ದ ಭರವಸೆ, ಈ ವಾರ “ಸು ಫ್ರಮ್ ಸೋ” ಚಿತ್ರದಿಂದ ಮುಂದುವರೆದಿದೆ.
ನಿಜಕ್ಕೂ ಒಂದು ಚಿತ್ರದ ನಿಜವಾದ ಗೆಲವು ಅಂದ್ರೆ ಇದು.
ಶೆಟ್ರು ಪಡೆ ಮತ್ತೊಮ್ಮೆ ಜಯಭೇರಿಯತ್ತ ಸಾಗಿದೆ ಎನ್ನಬಹುದು.
ಅದೊಂದು ಸಣ್ಣ ಗ್ರಾಮ ಅಲ್ಲೊಬ್ಬ ಅಶೋಕ (ಜೆ.ಪಿ. ತುಮ್ಮಿನಾಡು) ಅವನು ಯಮ್ಮೊ ಯಮ್ಮೊ ನೋಡಬಾರದನ್ನ ನಾ ನೋಡ್ದೆ ಅಂತ ನೋಡಬಾರದ್ದು ನೋಡಲು ಹೋಗಿ ಅಂದು ಕೊಂಡದ್ದು ಆಗದೆ ನೋಡಬೇಕಿದ್ದು ನೋಡದೆ ಏಕೆ ಹೀಗಾಯ್ತೋ ನಾನು ಕಾಣೆನು ಅಂತ ಅಶೋಕ, ಶೋಕದಲ್ಲಿ ಮುಳುಗುತ್ತಾನೆ.

ಅಲ್ಲಿಂದ ಶುರುವಾಗುವ ಅಸಲಿ ಆಟ ಪ್ರೇಕ್ಷಕರು ಬೇಡವೆಂದರು ನಗೆಯ ಕಡಲಿಗೆ ಬೀಳುತ್ತಾರೆ, ಪ್ರತೀ ದೃಶ್ಯದ ನಗೆಯ ಅಲೆಗೆ ಸಿಲುಕಿ ನಕ್ಕು ನಕ್ಕು ಹೈರಾಣಾಗುತ್ತಾನೆ.
ಅಲ್ಲಿ ಬೇಕಂತ ನಗಿಸಲು ಡಬ್ಬಲ್ ಮೀನಿಂಗ್ ಡೈಲಾಗ್ ಗಳಿಲ್ಲ, ಅದಕ್ಕಂತಲೇ ಬಿಲ್ಡಪ್ ಸೀನುಗಳಿಲ್ಲ, ಅದಕ್ಕಾಗೆ ಸಿನಿಮಾದ ಕಥೆಯಲ್ಲಿ ಮಧ್ಯೆ ಮಧ್ಯೆ ಬರುವ ಹಾಸ್ಯ ನಟರಿಲ್ಲ.
ಇಲ್ಲಿ ಸಾಧಾರಣವಾದ ಕಥೆ, ಅಲ್ಲಿನ ಪ್ರತೀಯೊಂದು ಪಾತ್ರಗಳು, ಪ್ರತೀಯೊಂದು ದೃಶ್ಯಗಳು, ಪ್ರತೀಯೊಂದು ಸಹಜ ಮಾತುಗಳು ಹಾಸ್ಯವನ್ನು ಸೃಷ್ಟಿಸಿದೆ. ಅಶೋಕನ ಮೈಮೇಲೆ ದೆವ್ವ ಆವರಿಸಿಕೊಳ್ಳುತ್ತದೆ..? ಊರಿನ ಜನ ದೆವ್ವಕ್ಕೆ ನಿನ್ನ ಹೆಸರೇನು ಎಂದು ಕೇಳುತ್ತಾರೆ. ಅದು, ಕಲ್ಪನಾ ಎನ್ನುತ್ತದೆ. ಹೆದರಿದ್ದ ಜನರ ಬಾಯಿಂದ ಬಾಯಿಗೆ ಈ ಹೆಸರು ಹೋಗಿ ಸುಲೋಚನಾ ಆಗುತ್ತದೆ.

ಹಾಗೆ ಕಾಸರಗೋಡು ಮತ್ತು ಮಂಗಳೂರಿನ ಅಂಚಿನಲ್ಲಿರುವ ಸಾವಿರಾರು ವರ್ಷಗಳ ಇತಿಹಾಸವಿರುವ, ಹಾಗೂ ಪಿತೃ ದೇವತೆಗಳ ಧಾರ್ಮಿಕ ನಂಬಿಕೆಯಿರುವ ಸೋಮೇಶ್ವರ ದೇವಾಲಯವಿರುವ, ಸೋಮೇಶ್ವರ ಎಂಬ ಊರಿನ ಹೆಸರು ಈ ದೆವ್ವಕ್ಕೆ ತಳುಕು ಹಾಕಿಕೊಳ್ಳುತ್ತದೆ. ಅದರಿಂದಾಗಿ ಸುಲೋಚನ ಫ್ರಮ್ ಸೋಮೇಶ್ವರ ಹೋಗಿ “ಸು ಫ್ರಮ್ ಸೋ” ಚಿತ್ರದ ಹೆಸರಾಗಿದೆ.
ಈ ದೆವ್ವ ಓಡಿಸುವ ಸಲುವಾಗಿ ನಡೆಯುವ ಡ್ರಾಮಗಳು, ಮೂಡ ನಂಬಿಕೆಗಳು, ಊರಿನ ಜನರ ಆತಂಕ ಪ್ರೇಕ್ಷಕರಿಗೆ ನಗೆಯ ಉಡುಗರೆಯನ್ನು ನೀಡಿದ್ದು ನಿರ್ದೇಶಕ ಜೆ.ಪಿ. ತುಮ್ಮಿನಾಡು. ನಿರ್ದೇಶನದ ಜೊತೆಗೆ ತುಮ್ಮಿನಾಡು ಅಶೋಕನ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ನಿಜಕ್ಕೂ ತುಮ್ಮಿನಾಡು ರವರ ಚಿತ್ರದ ನಿರೂಪಣೆಯನ್ನು ಎಲ್ಲೂ ಎಡವದಂತೆ ನಿರೂಪಿಸಿದ್ದಾರೆ. ನಗಿಸುತ್ತಲೇ ಸಮಾಜದ ಒಂದಷ್ಟು ತರಲೆಗಳಿಗೆ ಉತ್ತರ ನೀಡಿದ್ದಾರೆ. ಒಂದು ಹೆಣ್ಣಿಗಾಗುವ ಅವಮಾನ, ಆತಂಕ, ಏಕಾಂಗಿತನಕ್ಕೆ ಒಂದು ಒಳ್ಳೆಯ ಅಂತ್ಯವನ್ನು ನೀಡಿದ್ದಾರೆ.

ಇನ್ನು ಪ್ರೆಸ್ ಮೀಟ್ ನಲ್ಲಿ ನಾನು ಈ ಪಾತ್ರದಲ್ಲಿ ಅಭಿನಯಿಸಿಲ್ಲ ಎಂದು ಬೊಬ್ಬೆ ಹೊಡೆದ ನಟ ರಾಜ್ ಬಿ. ಶೆಟ್ಟಿ ಚಿತ್ರದಲ್ಲಿ ಅಂಡು ಸುಟ್ಟ ಬೆಕ್ಕಿನಂತೆ ಬೊಬ್ಬೆ ಹೊಡೆದಿದ್ದಾರೆ.. ದೆವ್ವ ಬಿಡಿಸುವ ಡೋಂಗಿ ಗುರೂಜಿಗಳ ಪಾತ್ರವನ್ನು ನಿಭಾಯಿಸಿದ್ದಾರೆ.
ರಾಜ್ ಬಿ. ಶೆಟ್ಟಿ ತಮ್ಮ ಅಭಿನಯದ ಮೂಲಕ ಹಾಸ್ಯವನ್ನು ದುಪ್ಪಟ್ಟು ಮಾಡಿದ್ದಾರೆ.
ಪ್ರತೀ ದೃಶ್ಯವನ್ನು ನೋಡಿಸಿಕೊಂಡು ಹೋಗಿರುವುದು ದಕ್ಷಿಣ ಕನ್ನಡದ ಪ್ರತಿಭಾವಂತ ನಟರ ದೊಡ್ಡ ದಂಡೇ ಇದೆ.
ಶನೀಲ್ ಗೌತಮ್, ಪ್ರಕಾಶ್ ತುಮ್ಮಿನಾಡು ದೀಪಕ್ ರೈ ಪಣಾಜೆ ಜೆ.ಪಿ. ತುಮ್ಮಿನಾಡು ಸೇರಿದಂತೆ ಹಲವಾರು ಪ್ರತಿಭೆಗಳು ಈ ಚಿತ್ರವನ್ನು ತಮ್ಮ ಅಭಿನಯದ ಮೂಲಕ ಚಿತ್ರವನ್ನು ಗೆಲ್ಲಿಸಿದ್ದಾರೆ.

ನಿತಿನ್ ಶೆಟ್ಟಿ ಸಂಕಲನದಲ್ಲಿ ಎಲ್ಲೂ ಏರು ಪೇರಾಗದೆ ಸರಾಗ ವಾಗಿ ನೋಡಿಸಿಕೊಂಡು ಹೋಗುತ್ತದೆ.
ಚಂದ್ರಶೇಖರನ್ ಛಾಯಾಗ್ರಹಣ ನೈಜತೆಗೆ ಒತ್ತು ನೀಡಿದೆ. ಹಾಗೆಯೇ ಸುಮೇಧ್ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿ ಪ್ರಥಮ ಚುಂಬನ ಮನ ಮೋಹಕವಾಗಿದೆ.
ಈ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟ ಸುಮೇದ್ ರವರಿಗೆ ಇನ್ನೂ ಒಳ್ಳೆಯ ಅವಕಾಶಗಳು ಸಿಗುವುದರಲ್ಲಿ ಅನುಮಾನವಿಲ್ಲ.

ಪ್ರತೀಯೊಂದು ಪಾತ್ರಗಳು ನೈಜವಾಗಿದೆ, ಪ್ರತೀಯೊಂದು ದೃಶ್ಯಗಳು ಒಳ್ಳೆಯ ದೃಶ್ಯಗಳಾಗಿವೆ, ಪ್ರತೀಯೋಂದು ಸಂಭಾಷಣೆ ಸಹಜವಾಗಿದೆ. ಹಣ ಕೊಟ್ಟು ಚಿತ್ರ ನೋಡಲು ಬರುವ ಪ್ರೇಕ್ಷಕ ಮನಸಾರೆ ನಕ್ಕು ಸಿಕ್ಕ ಸಿಕ್ಕವರಿಗೆಲ್ಲಾ ಹೇಳುತಿದ್ದಾನೆ ಈ ಸಿನಿಮಾ ನೋಡಿ ಅಂತ ಇದೇ ಅಲ್ಲವೇ ನಿಜವಾದ ಯಶಸ್ಸು.
ಕನ್ನಡದಲ್ಲಿ ಒಳ್ಳೆ ಚಿತ್ರಗಳು ಬರುವುದಿಲ್ಲ ಎಂದು ನಾಲಿಗೆ ಹರಿಬಿಡುವ ಕಿಸ್ಬಾಯಿ ದಾಸರು ಈ ಚಿತ್ರ ನೋಡಿ ಬಾಯಿಗೆ ಬೀಗ ಹಾಕಿಕೊಂಡಿರಬೇಕು.











