“Love U Muddu” movie Review. ಲವ್ ಯು ಮುದ್ದು ಚಿತ್ರ ವಿಮರ್ಶೆ – “ಸಿನಿ, ಪ್ರೇಮಿಗಳಿಗೆ ಪ್ರೇಮ ನೈವೇದ್ಯ”

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಚಿತ್ರ –
ನಿರ್ಮಾಪಕರು – ಕಿಶನ್ TN.
ನಿರ್ದೇಶನ –  ಕುಮಾರ್ L.
ಛಾಯಾಗ್ರಹಣ – ಕೃಷ್ಣ ದೀಪಕ್
ಸಂಗೀತ –  ಅನಿರುಧ್ ಶಾಸ್ತ್ರಿ
ಸಂಕಲನ – ದೀಪು CS.

ಕಲಾವಿದರು :-  ಸಿದ್ದು ಮೂಲಿಮನೆ, ರೇಷ್ಮ, ರಾಜೇಶ್ ನಟರಂಗ, ತಬಲ ನಾಣಿ, ಸ್ವಾತಿ ಗುರುದತ್, ಗಿರಿಶ್ ಶಿವಣ್ಣ, ಶ್ರೀವತ್ಸ ಶ್ಯಾಮ್ ಮುಂತಾದವರು.

Rating – 3.5/5

“ಲವ್ ಯು ಮುದ್ದು”
ಸಿನಿ, ಪ್ರೇಮಿಗಳಿಗೆ ಪ್ರೇಮ ನೈವೇದ್ಯ
ಹೆಸರೇ ಹೇಳುವಂತೆ ಇದೊಂದು ಪ್ರೇಮ ಕಥೆ ಎನ್ನುವುದು ಗೊತ್ತಾಗಿ ಬಿಡುತ್ತದೆ.
ಪ್ರೇಮ ಕಥೆ ಅನ್ನೋದಂತು ನಿಜ ಆದರೆ… ಇದೆಂತಹ ಪ್ರೇಮ ಕಥೆ ಅನ್ನೋದೆ ವಿಷಯ.
ಅವನ ಹೆಸರು ಕರ್ಣ (ಸಿದ್ದು ಮೂಲಿಮನೆ) ಮಹಾಭಾರತದ ಕರ್ಣ ಇಷ್ಟ ಅಂತ ಅವರಪ್ಪ ರಾಜೇಶ್ ನಟರಂಗ) ಇಟ್ಟ ಹೆಸರು.
ಹೆಸರಿಗೆ ತಕ್ಕಂತೆ ಹುಟ್ಟಿದ ಎರಡೇ ವರ್ಷಗಳಲ್ಲಿ ಅಮ್ಮನನ್ನು ಕಳೆದುಕೊಂಡ ಕರ್ಣ ಅಪ್ಪನ ಪ್ರೀತಿಯಲ್ಲಿ ಬೆಳೆದು ಅಪ್ಪನಿಗೆ ಸ್ನೇಹಿತನಾದ ಒಬ್ಬ ಸಾದಾ ಸೀದ ಪ್ರಾಮಾಣಿಕ ಸುಸಂಸ್ಕೃತ ಹುಡುಗ. ಮದುವೆ ವಯಸ್ಸು ಮೀರುತಿದ್ದರು ಒಬ್ಬ ಗರ್ಲ್ ಫ್ರೆಂಡ್ ಇಲ್ಲದ ಪ್ಯೂರ್ ಅಮೂಲ್ ಬೇಬಿ.
ಇಂತಹ ಹುಡುಗ ಪ್ರೀತಿಯಲ್ಲಿ ಬೀಳುತ್ತಾನೆ.

ಅವಳು ಅನಾಥೆ ವೃತ್ತಿಯಲ್ಲಿ ಸ್ಕೂಲ್ ಟೀಚರ್ ಇಂದಿನ ಡ್ರಗ್ಸ್, ಅಫೀಮು, ಗಾಂಜಾ ಪಾರ್ಟಿ ಮೋಜು ಮಸ್ತಿ ಅಂತ ಮೊಬೈಲ್ ನಿಂದಲೇ ದುನಿಯಾ ತೋರಿಸೋ ಕಾಲದಲ್ಲಿ ಬೇಸಿಕ್ ಸೆಟ್ ಮೊಬೈಲ್ ಇಟ್ಕೊಂಡಿರೋ ಬೇಸಿಕ್ ಸೆನ್ಸ್ ಇರೋ ಹುಡುಗಿ.
ಹೆಸರು ಸುಮತಿ (ರೇಷ್ಮಾ) ವಯಸ್ಸು ಕಥಾ ನಾಯಕನಿಗಿಂತ ಒಂದೆರಡು ವರ್ಷ ದೊಡ್ಡವಳು, ಎತ್ತರ ನಾಯಕನಿಗೆ ಮ್ಯಾಚ್ ಆಗುವಷ್ಟು, ಬಣ್ಣ ಬಾದಾಮಿ, ಗುಣ ಮದುವೆ ವಯಸ್ಸಿನ ಗಡಿ ಯಲ್ಲಿದ್ದರು ಯಾವುದೇ ಬಾಯ್ ಫ್ರೆಂಡ್ ಗಳಿಲ್ಲದ ಶೀಲವಂತೆ.
ಇವಳಿಗೆ ಅನಾಥೆ ಅನ್ನೋ ಸಿಂಪತಿಯ ಟ್ರಂಪ್ ಕಾರ್ಡ್ ಬೇಕಿಲ್ಲದ ಅಪ್ಪಟ ಗುಣವಂತೆ.

ಕರ್ಣ ಎಜುಕೇಷನ್ ಮುಗಿಸಿದ್ರು, ಫೋಟೋಗ್ರಫಿ ಹವ್ಯಾಸ ಕ್ಯಾಮರಾ ಹಿಡಿದು ಊರೂರು ಸುತ್ತೋ ಹುಡುಗ. ಅಪ್ಪ ಮದುವೆ ಮಾಡ್ಕೊ ಅಂದ್ರೆ ಅಮ್ಮನಂತವಳೇ ಬೇಕು ಆ ತರ ಹುಡುಗಿ ಇದ್ರೆ ಹೇಳು ಕಣ್ಮುಚ್ಚಿ ತಾಳಿ ಕಟ್ಟುತ್ತೀನಿ ಅಲ್ಲೀವರೆಗೂ ತಾಳಿ ಎನ್ನುತ್ತಾನೆ.
ಕರ್ಣ ಬೆಂಗಳೂರಿನಿಂದ ಕಾರ್ಕಳದ ತಮ್ಮದೇ ಮತ್ತೊಂದು ಮನೆಗೆ ಬರುತ್ತಾನೆ

ಕಾಲ ಎಷ್ಟೇ ಕೆಟ್ಟೋದ್ರು, ಜನ ಎಷ್ಟೇ ಕೆಟ್ಟು ಕೆರ ಹಿಡಿದಿದ್ರು
ಪ್ರಾಮಾಣಿಕ ಪ್ರೇಮಿಗಳಿದ್ದಾರೆ, ನಿಜವಾದ ಪ್ರೀತಿ ಇನ್ನೂ ಉಸಿರಾಡುತ್ತಿದೆ ಅನ್ನೋದಕ್ಕೆ ಸಾಕ್ಷಿ ಈ Love U ಮುದ್ದು ಚಿತ್ರ.

ಪೋಟೋ ತೆಗೆಯಲು ಕಾರ್ಕಳದ ಒಂದು ಕಾಲೇಜಿಗೆ ಹೋದ ನಾಯಕ ಕರ್ಣ ಸುಮತಿಯ ಪ್ರೇಮದ ಫ್ರೇಮಿನಲ್ಲಿ ಸಿಲುಕುತ್ತಾನೆ.

ಕರ್ಣನ ಅಮ್ಮನ ಸಮಾಧಿಯ ಮುಂದೆ  ಮೊದಲ ಪ್ರೇಮದ ತೊದಲು ನುಡಿಗಳೊಂದಿಗೆ ಶುರು ವಾಗುವ ಪ್ರೇಮ ಕಾವ್ಯ ಅಪ್ಪನಿಗೆ ಸರ್ಪ್ರೈಸ್ ಕೊಡಲು ಹೋಗಿ ಪ್ರೇಮಿಗಳಿಬ್ಬರಿಗೂ ಸಿಡಿಲು ಬಡಿದಂತಾಗುತ್ತದೆ.

ಹಕ್ಕಿಯಂತೆ ಬಾನಂಚಿನಲ್ಲಿ ಹಾರಾಡುತಿದ್ದ ಪ್ರೇಮ ಪಕ್ಷಿಗಳ ರೆಕ್ಕೆ ಕತ್ತರಿಸಿದಂತಾಗುತ್ತದೆ.
ಅದೊಂದು ಆಘಾತ, ಅದೊಂದು ಅಪಘಾತ ಏಕಕಾಲಕ್ಕೆ ಅಬ್ಬರಿಸಿದ ಪರಿಗೆ ಪ್ರೇಮಿಗಳ ಬದುಕಿನ ದಾರಿ ಬದಲಾಗುತ್ತದೆ.


ಇದೊಂದು ನಿಜವಾದ ಬದುಕಿನಲ್ಲಿ ನಡೆದ ನಿಜವಾದ ಇಬ್ಬರು ಪ್ರೇಮಿಗಳ ಬದುಕಿನ ಚಿತ್ರಣವನ್ನು ನಿರ್ದೇಶಕ ಕುಮಾರ್ ಚನ್ನಾಗಿ ಪ್ರೇಕ್ಷಕರ ಮನ ಮುಟ್ಟುವಂತೆ, ಹೃದಯ ತಟ್ಟುವಂತೆ, ಕಣ್ಣುಗಳು ಒದ್ದೆಯಾಗುವಂತೆ ಕಟ್ಟಿಕೊಟ್ಟಿದ್ದಾರೆ. ಕುಮಾರ್ ಈಗಾಗಲೇ ಸಮಾಜಮುಖಿ ಹಾಗೂ ಸಾಂಸಾರಿಕ ಗೊಂದಲಗಳ ಕಥೆಗಳನ್ನು ಹಾಸ್ಯದ ಎಲೆಯ ಮೇಲೆ ಬಡಿಸಿ ಪ್ರೇಕ್ಷಕರ ಮನ ತಣಿಸಿದ್ದರು.
ಈಗ ಮೊದಲ ಬಾರಿಗೆ ಪ್ರೇಮದ ಎಳೆ ಹಿಡಿದು ಪ್ರೇಮಿಗಳ ಮನ ತಟ್ಟುವ ಪ್ರಯತ್ನವನ್ನು ಚನ್ನಾಗಿ ಮಾಡಿದ್ದಾರೆ.

ಇದೊಂದು ಪ್ರಭುದ್ಧ ಪ್ರೇಮಕಥೆ ಅಷ್ಟೇ ಪ್ರಭುದ್ಧತೆಯಿಂದ ಎಣೆದಿದ್ದಾರೆ ನಿರ್ದೇಶಕ ಕುಮಾರ್.

ಸಿದ್ದು ಮೂಲಿಮನಿ ಈಗಾಗಲೇ ಹಲವಾರು ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ ಆದರೆ ಅವೆಲ್ಲಾ ಒಂದು ಲೆಕ್ಕವಾದರೆ ಇದೇ ಬೇರೆ ಲೆಕ್ಕ ಎನ್ನಬಹುದು.

ಸಿದ್ದು ಈ ಚಿತ್ರದಲ್ಲು ಅವರ ಅಭಿನಯದ ಮೂಲಕ ವಿಶೇಷವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಡ್ಯಾನ್ಸ್ ಆಗಲಿ, ಅಭಿನಯವಾಗಲಿ, ಬಾಡಿ ಲಾಂಗ್ವೇಜ್ ಆಗಲಿ, ಅಭಿನಯದ ಸಹಜತೆಯಲ್ಲಾಗಲಿ ಬಹಳ ಅಚ್ಚುಕಟ್ಟಾಗಿ ಪಾತ್ರದೊಳಗೆ ಕಳೆದು ಹೋಗಿದ್ದಾರೆ ಎನ್ನಬಹುದು.


ಇನ್ನೂ ನಾಯಕಿ ರೇಷ್ಮಾ ಕೂಡ ತಮ್ಮ ಪಾತ್ರದ ಪೋಷಣೆಯಲ್ಲಿ ಪಾತ್ರವಾಗಿ ಜೀವಿಸಿದ್ದಾರೆ. ಪೂರ್ಣ ಮಟ್ಟದ ಪ್ರಧಾನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ


ಇನ್ನು ಈ ಚಿತ್ರಕ್ಕೆ ಮತ್ತು ಸಂಭಾಷಣೆಗೆ ಮತ್ತೊಂದು ಪ್ರೀತಿಗೆ ಸಾಣೆ ಹಿಡಿದಿರುವುದು ಎಂದರೆ ತಬಲ ನಾಣಿ.
ಕಾಲೇಜಿನ ಗೇಟ್ ಮುಂದೆ ಸೆಕ್ಯೂರಿಟಿಯಾಗಿ ನಿಂತು ಪ್ರೇಮಿಗಳ ಪಾಲಿಗೆ ಪಾರಿವಾಳವಾಗಿ , ಕಾಲೇಜಿನ ಕಾಂಪೌಂಡ್ ಒಳಗಿನ ಪ್ರೇಮಕಥೆಗೆ ಕಾವಲುಗಾರನಾಗಿ ಪಾತ್ರ ನಿರ್ವಹಿಸಿದ್ದಾರೆ.
ಜೊತೆಗೆ ನಿರ್ದೇಶಕ ಕುಮಾರ್ ಸಿನಿ ಪಯಣದಲ್ಲಿ ತಬಲ ನಾಣಿ ಮೊದಲಿನಿಂದಲು ಜೊತೆ ನಿಂತು ಸಾಥ್ ನೀಡುತ್ತಾ ಬಂದಿದ್ದಾರೆ. ಚಿತ್ರದ ಸಂಭಾಷಣೆ ಕೆಲವು ಕಡೆ ಮನ ಮುಟ್ಟುವಂತಿದೆ.
ಅಪ್ಪ ಮಗನ ಮದ್ಯದ ಸ್ನೇಹ ಎಲ್ಲೆ ಮೀರದ ಸಿಹಿಯಾಗಿದೆ. ಕೆಲವು ಪಾತ್ರಗಳಿಗೆ ಸಂಭಾಷಣೆ ಬಹಳ ಗಮನ ಸೆಳೆಯುತ್ತದೆ.

ಇನ್ನು ಚಿತ್ರದ ಛಾಯಾಗ್ರಹಣ ಮತ್ತು ಸಂಗೀತ  ಲವ್ ಯು ಮುದ್ದು ಚಿತ್ರದ ಮುದ್ದಿಗೆ ಅತೀ ಮುಖ್ಯ ಪಾತ್ರ ವಹಿಸಿವೆ ಎನ್ನಬಹುದು.
ಕೃಷ್ಣ ದೀಪಕ್ ಪ್ರತೀಯೊಂದು ಫ್ರೇಮಿಗೂ ಜೀವ ತುಂಬಿದ್ದಾರೆ. ಸುಂದರವಾದ ಪರಿಸರಕ್ಕೆ ಗಾಳ ಹಾಕಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಹಾಗೆಯೇ ಸಂಗೀತ ನಿರ್ದೇಶಕ ಅನಿರುದ್ಧ್ ಶಾಸ್ತ್ರಿಯವರ ಸಂಗೀತ ಲಯಬದ್ಧವಾಗಿ ಚಿತ್ರದ ಓಟದ ಏರಿಳಿತಕ್ಕೆ ಜೊತೆಯಾಗಿದೆ.

ರಾಜೇಶ್ ನಟರಂಗ, ಸ್ವಾತಿ ಗುರುದತ್, ಗಿರಿಶ್ ಶಿವಣ್ಣ, ಶ್ರೀವತ್ಸ ಶ್ಯಾಮ್ ಮುಂತಾದವರು ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ನ್ಯಾಯ ಒದಗಿಸಿದ್ದಾರೆ.
ರಾಜೇಶ್ ನಟರಂಗ ನಾಯಕನ ಅಪ್ಪನಾಗಿ ಪಾತ್ರದ ಘನತೆ, ಸೌಹಾರ್ಧತೆ, ಮತ್ತು ಪ್ರಭುದ್ದತೆಯನ್ನು ಎತ್ತಿ ಹಿಡಿದಿದ್ದಾರೆ.

ಒಟ್ಟಿನಲ್ಲಿ ಒಂದು ಪ್ರಾಮಾಣಿಕ ಪ್ರೇಮ ಕಥೆಯನ್ನು ಪ್ರೇಕ್ಷಕರು ಯಾವುದೇ ಮುಲಾಜಿಲ್ಲದೇ, ಮುಜುಗರ ಪಡೆಯದೇ ನೋಡಿ ಮನಸ್ಸಿಗೆ ಇಷ್ಟವಾಗಿಸಿಕೊಳ್ಳ ಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor