ಚಿತ್ರ ವಿಮರ್ಶ:- ಆಕಾಶ ಭೂಮಿಯ ನಡುವೆ “ದೂರ ತೀರ ಯಾನ”
ಚಿತ್ರ ವಿಮರ್ಶೆ
ಚಿತ್ರ – ದೂರ ತೀರ ಯಾನ
ಚಿತ್ರ – ದೂರ ತೀರ ಯಾನ
ನಿರ್ಮಾಪಕರು – ದೇವರಾಜ್
ನಿರ್ದೇಶನ – ಮಂಸೂರೆ
ಛಾಯಾಗ್ರಹಣ – ಶೇಖರ್ ಚಂದ್ರ
ಸಂಗೀತ – ಬಕ್ಕೇಶ್, ಕಾರ್ತಿಕ್
ಕಲಾವಿದರು – ವಿಜಯ್ ಕೃಷ್ಣ, ಪ್ರಿಯಾಂಕ ಕುಮಾರ, ಜಟ್ಟ ಗಿರಿರಾಜ್, ಶರತ್ ಲೀಹಿತಾಶ್ವ, ಹರಿಹರನ್, ಅರುಣ್ ಸಾಗರ್, ಸುಧಾ ಬೆಳವಾಡಿ, ಮುಂತಾದವರು.
ಬದುಕಿನ ಯಾನದಲ್ಲಿ ಹಲವಾರು ತಿರುವುಗಳು ಆವರಿಸಿಕೊಳ್ಳುತ್ತವೆ. ಕೆಲವು ಒಳ್ಳೆಯ ತಿರುವುಗಳಾಗಿರುತ್ತವೆ, ಮತ್ತೆ ಕೆಲವು ಕಠಿಣವಾಗಿರುತ್ತವೆ.
ಬದುಕಿನ ದೂರ ತೀರ ಯಾನದಲ್ಲಿ ಬಹಳಷ್ಟು ಪಾತ್ರಗಳು ನಮ್ಮ ಜೀವನದಲ್ಲಿ ಬಂದು ಹೋಗುತ್ತವೆ.
ಕೆಲವು ಸದ್ದಿಲ್ಲದೇ ಬಂದ ದಾರಿಗೆ ಸುಂಕವಿಲ್ಲದಂತೆ ಬಂದು ಹೋಗಿಬಿಡುತ್ತವೆ. ಇನ್ನು ಕೆಲವು ಉಸಿರು ನಿಂತು,ಮಣ್ಣಿನ ಋಣ ತೀರುವವರೆಗೂ, ಎದೆಯ ಕೊನೆಯ ಬಡಿತ ನಿಲ್ಲೊವರೆಗೂ ಕಾಡುತ್ತವೆ.
ಹೃದಯದಾಳದ ಭಾವನೆಗಳನ್ನು ಹೆಕ್ಕೆ ಹೆಕ್ಕಿ ಕುಕ್ಕುತ್ತವೆ.
ಅದರಲ್ಲಿ ಪ್ರೀತಿ, ಪ್ರೇಮ ಎನ್ನುವ ಮಾಯಾಮೃಗ ಎಲ್ಲವೂ ಸರಿಯಿದ್ದರೆ ಸರಿ. ಸರಿಯಿಲ್ಲದಿದ್ದರೆ ಅದರಷ್ಟು ನರಕ ಯಾತನೆ ಯಾರಿಗೂ ಬೇಡ ಎನಿಸುತ್ತದೆ.
ಮನುಷ್ಯ ಬದುಕಿದ್ದರೂ ಜೀವಂತ ಹೆಣದಂದೆ ಬದುಕಬೇಕುತ್ತೆ. ಈ ತರಹದ ಕಥೆಯ ಚಿತ್ತಗಳು ಲೆಕ್ಕಕ್ಕೆ ಸಿಗದಷ್ಟು ತೆರೆಕಂಡಿವೆ.
ಆದರೆ ನಿರ್ದೇಶಕ ಮಂಸೂರೆ ಇವೆಲ್ಲವನ್ನು ಬಿಟ್ಟು ಬೇರೆ ಎನನ್ನೋ ಹೇಳಲು ಹೊರಟಿದ್ದಾರೆ.
ಇಲ್ಲಿ ಇಬ್ಬರು ಪ್ರೇಮಿಗಳು. ಅವಳು ಭೂಮಿ, ಇವನು ಆಕಾಶ.
ಭೂಮಿ, ಆಕಾಶಗಳ ನಡುವೆ ಅಂತರ ಬಹಳ ಇದ್ದರೂ ಇವರಿಬ್ಬರು ಒಟ್ಟಿಗೆ ಒಂದೇ ಮನೆಯಲ್ಲಿ 5ವರ್ಷಗಳಿಂದ ಒಬ್ಬರಿಗೊಬ್ಬರು ಅಂಟಿ ಕೊಂಡಿದ್ದರೂ, ಮಾತು ಮಾತಿಗೂ ಮುತ್ತಿಡುತ್ತಾ, ಮುದ್ದಾಡುತ್ತಾರಾದರೂ, ಎರಡು ಮನಸ್ಸು ಹೃದಯ ಬೆರೆತರು
ಎಲ್ಲರಂತಲ್ಲ ಇವರು.
ಭೂಮಿಗಂತು ಭೂಮಿಗಿರುವ ತಾಳ್ಮೆ, ಶಾಂತಿ ಇಲ್ಲ.
ಇನ್ನೂ ಆಕಾಶನಿಗಂತು ಎಲ್ಲವನ್ನು ಸಹಿಸಿಕೊಳ್ಳ ತಾಳ್ಮೆ ಇಲ್ಲ.
ಇಬ್ಬರ ಅಭಿರುಚಿಗಳು, ಭಾವನೆಗಳು ಬೇರೆ ಬೇರೆ.
ಮಾತೆತ್ತಿದರೆ ಜಗಳ, ಮುನಿಸು ನಿರಂತರ ನಡೆಯುತ್ತಲೇ ಇರುತ್ತದೆ.
ಕೊನೆಗೆ ಇಬ್ಬರೂ ಒಂದು ತೀರ್ಮಾನಕ್ಕೆ ಬರುತ್ತಾರೆ ಒಂದು ವಾರ ಜೊತೆಯಾಗಿ ಹೊರಗೆ ಟ್ರಿಪ್ ಹೋಗೋಣ ನಂತರ ಇಬ್ಬರ ಮನಸ್ಸನ್ನು ಅರಿಯಲು ಪ್ರಯತ್ನ ಮಾಡೋಣ ಆಗದಿದ್ದರೆ ನಗುತ್ತಲೇ ಬೇರೆ ಬೇರೆಯಾಗೋಣ ಎನ್ನುವ ಒಡಂಬಡಿಕೆಯಿಂದ ಪ್ರಯಾಣ ಶುರು ಮಾಡುತ್ತಾರೆ. ಇದೇ ದೂರ ತೀರ ಯಾನ” ದ ಕಥಾ ಹಂದರ.
ನಿರ್ದೇಶಕ ಮಂಸೂರೆ ಈ ವರೆಗೂ ನಿರ್ದೇಶಿಸಿರುವ ಚಿತ್ರಗಳು ವಿಭಿನ್ನ ಕಥೆಗಳೊಂದಿಗೆ ಸಮಾಜ ಮುಖಿ ವಿಷಯಗಳನ್ನು ಪ್ರೇಕ್ಷಕರ ಮುಂದಿಟ್ಟು ಸೈ ಅನಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಪ್ರೇಕ್ಷಕರು ಕೂಡ ಮಂಸೂರೆಯ ಚಿತ್ರಗಳನ್ನು ಒಪ್ಪಿ ಇಷ್ಟ ಪಟ್ಟಿದ್ದಾರೆ.
ನಿರಂತರ ಅವರ ಬೆನ್ನಿಗೆ ನಿಂತಿರುವುದು ನಿರ್ಮಾಪಕ ದೇವರಾಜ್.
ದೇವರಾಜ್ ಮತ್ತು ಮಂಸೂರೆ ಸಿನಿಮಾ ಫ್ಯಾಷನ್ ಇರುವಂತವರು.
ಅದರಿಂದಾಗಿ ವಿಭಿನ್ನ ಪ್ರಯತ್ನಗಳು ಇವರಿಂದ ನಡೆಯುತ್ತಿದೆ.
ದೂರ ತೀರ ಯಾನ ಇವತ್ತಿನ ಸೋಕಾಲ್ಡ್ ಪ್ರೇಮಿಗಳ ಮನಸ್ಸಿಗೆ ಕನ್ನಡಿ ಹಿಡಿದಂತಿದೆ.
ಒಂದು ಕಾಲವಿತ್ತು ತಾವು ಒಬ್ಬರನೊಬ್ಬರು Love ಮಾಡುತ್ತಿದ್ದೇವೆ ಅಂತ ಹೇಳಿಕೊಳ್ಳಲು ವರ್ಷಗಳೇ ಬೇಕಿತ್ತು. ಪ್ರೀತಿಸಿದರೆ ಅವರನ್ನೇ ಮದುವೆಯಾಗಿ ಒಟ್ಟಿಗೆ ಜೀವಿಸಬೇಕೆಂದು ಜೀವ ತೆತ್ತವರು ಬೇಕಾದಷ್ಟು ಜನ ಇದ್ದಾರೆ. ಆ ಪ್ರೀತಿಯಲ್ಲಿ ಪ್ರಾಮಾಣಿಕತೆ ಇತ್ತು. ಅಲ್ಲೊಂದು ಅಂಜಿಕೆ, ಆತಂಕ, ನಾಚಿಕೆ, ಮುಜಗರ, ಮತ್ತು ಅರ್ಪಣಾ ಭಾವವಿತ್ತು. ಇಂದು ಹಾಗಿಲ್ಲ, ಇಂದಿನ ಪ್ರೀತಿ ಹೆಸರಿನಲ್ಲಿ ವಾಂಛೆಗಳು ಬದಲಾಗಿವೆ, ಅಭಿಲಾಷೆಗಳು ಬದಲಾಗಿವೆ,
ಬೇಕು ಬೇಡ ಎನ್ನುವುದು ಯಾವುದೇ ಮುಲಾಜಿಲ್ಲದೇ ವ್ಯಕ್ತಪಡಿಸುವ ಮನಸ್ಥಿತಿ ನಿರ್ಮಾಣವಾಗಿದೆ, ಸಂಬಂದ ಗಳು ಆಕರ್ಷಕತೆಯ ತೆವಲುಗಳಿಗೆ ಸಿಲುಕಿ, ನಲುಗಿ ಪ್ರಾಮಾಣಿಕತೆಯನ್ನು ಕಳೆದುಕೊಂಡಿವೆ. ನಿರ್ದೇಶಕ ಮಂಸೂರೆ ಈ ಪ್ರೇಮ ಕಥೆಯನ್ನು ಬಹಳ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರದಲ್ಲಿ ಹಾಡುಗಳು ಮತ್ತು, ಹಿನ್ನೆಲೆ ಸಂಗೀತ ಕಥೆಯನ್ನು ಮತ್ತಷ್ಟು ಸುಂದರಗೊಳಿಸಿದೆ.
ಇನ್ನು ಛಾಯಾಗ್ರಹಣವಂತು ಪ್ರಕೃತಿಯ ರಮಣತೆಯನ್ನು ಬಾಚಿ ಕಣ್ಣಿಗೆ ತುಂಬಿದಂತಿದೆ.
ಚಿತ್ರದ ನಾಯಕ ಆಕಾಶ್ ( ವಿಜಯ್ ಕೃಷ್ಣ) ಮತ್ತು ನಾಯಕಿ ಭೂಮಿ (ಪ್ರಿಯಾಂಕ ಕುಮಾರ್) ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ.
ಇಬ್ಬರೂ ಹೊಸಬರಾದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಈ ಇಬ್ಬರು ಪ್ರೇಮಿಗಳು ಏನಾಗುತ್ತಾರೆ, ಅವರ ಮನಸ್ಸುಗಳು ಹೇಗೆ ಪ್ರತಿಕ್ರಿಯಿಸುತ್ತವೆ, ಅವರ ಮನಸ್ಸು, ಭಾವನೆಗಳು ಹೇಗೆ ಹೊಂದಿಕೊಳ್ಳುತ್ತವೆ ಎಂದು ತಿಳಿಯಲು ಪ್ರೇಕ್ಷಕರು ಸಿನಿಮಾ ನೋಡಬೇಕು.











